ಮುಂಬಯಿ: ವಿಚಾರಗೋಷ್ಠಿ, ಕಥಾ ಕಮ್ಮಟ, ದತ್ತಿ ಉಪನ್ಯಾಸ, ಕನ್ನಡೇತರರಿಗಾಗಿ ಕನ್ನಡ ತರಗತಿಗಳನ್ನು ನಡೆಸುವುದರ ಜೊತೆಗೆ ಗಣೇಶೋತ್ಸವ, ಶಾರದಾ ಪೂಜೆ, ಶ್ರೀ ಪುರಂದರ ದಾಸರ ಆರಾಧನೆ ಮೊದಲಾದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಕಳೆದ 90ಕ್ಕೂ ಅಧಿಕ ವರ್ಷಗಳಿಂದ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಪರಿಚಾರಿಕೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಮುಂಬಯಿ ಕನ್ನಡಿಗರ ಮನ್ನಣೆಗೆ ಪಾತ್ರವಾಗಿರುವ ಮಾಟುಂಗಾ (ಪೂರ್ವ)ದ ಮುಂಬಯಿ ಕನ್ನಡ ಸಂಘವು ತನ್ನ 90ನೇ ವಾರ್ಷಿಕೋತ್ಸವವನ್ನು ನವೆಂಬರ್ 14ರಂದು ಸಂಭ್ರಮದಿಂದ ಆಚರಿಸಲಿದೆ.
ಅಂದು ಸಂಜೆ 6 ಗಂಟೆಗೆ ಮೈಸೂರು ಅಸೋಸಿಯೇಶನ್ ಸಭಾಗೃಹದಲ್ಲಿ ನಡೆಯಲಿರುವ ವಾರ್ಷಿಕೋತ್ಸವ ಸಮಾರಂಭಕ್ಕೆ ಮೈಸೂರು ಅಸೋಸಿಯೇಶನ್ನ ಅಧ್ಯಕ್ಷೆ ಕಮಲಾ ಕಾಂತರಾಜ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಲೇಖಕಿ ಹಾಗೂ ಸಾಫ್ಟ್ವೇರ್ ತಂತ್ರಜ್ಞೆ ವಿದ್ಯಾ ರಾಮಕೃಷ್ಣ ಅವರು ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರಲಿದ್ದಾರೆ. ಮುಂಬಯಿ ಕನ್ನಡ ಸಂಘದ ಅಧ್ಯಕ್ಷ ಗುರುರಾಜ್ ಎಸ್. ನಾಯಕ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಘದ ಉಪಾಧ್ಯಕ್ಷರು ಹಾಗೂ ಸೋಮೈಯಾ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಡಾ. ಎಸ್.ಕೆ. ಭವಾನಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ಮುಂಬಯಿಯ ಕವಯತ್ರಿ ಹಾಗೂ ಶಿಕ್ಷಕಿ ಸರೋಜಾ ಶ್ರೀಕಾಂತ್ ಅಮಾತಿ ಅವರು ಕಾರ್ಯಕ್ರಮವನ್ನು ನಿರ್ವಹಿಸಲಿದ್ದಾರೆ.
ವಾರ್ಷಿಕೋತ್ಸವದ ಅಂಗವಾಗಿ ಮನರಂಜನಾ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ. ಮೊದಲಿಗೆ ಶ್ರೀಮತಿ ಮಧು ವಸ್ತ್ರದ ಅವರು ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಡಾ. ಹರಿರಾಮ್ ಆಚಾರ್ಯ ಹಾಗೂ ಆರ್.ಎನ್. ಜಯಗೋಪಾಲ್ ಅವರ ರಚನೆಗಳೊಂದಿಗೆ ತಮ್ಮ ಸ್ವರಚಿತ ಜಾನಪದ ಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ. ಬಳಿಕ ಮುಂಬಯಿ ಆಕಾಶವಾಣಿ ಕಲಾವಿದರಾದ ವಿದ್ವಾನ್ ಟಿ.ಎನ್. ಅಶೋಕ್ ಮತ್ತು ಪಂಡಿತ್ ಚಂದ್ರಶೇಖರ ವಜೆ ಅವರಿಂದ ಕರ್ನಾಟಕ ಹಾಗೂ ಹಿಂದೂಸ್ತಾನಿ ಸಂಗೀತದ ಅಪರೂಪದ ಜುಗಲ್ಬಂದಿ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಮಧ್ಯದಲ್ಲಿ ಆಗಮಿಸುವ ಅತಿಥಿಗಳು ಹಾಗೂ ಕನ್ನಡಾಭಿಮಾನಿಗಳಿಗೆ ಲಘು ಉಪಾಹಾರದ ವ್ಯವಸ್ಥೆ ಮಾಡಲಾಗಿದ್ದು, ಸಮಾರಂಭದ ಕೊನೆಯಲ್ಲಿ ಪ್ರೀತಿಭೋಜನ ಏರ್ಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಘದ ಅಧ್ಯಕ್ಷರನ್ನು 9819816380 ದೂರವಾಣಿ ಸಂಖ್ಯೆಯಲ್ಲಿ ಸಂಪರ್ಕಿಸಬಹುದು. ಕನ್ನಡ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಸೇವೆಯಲ್ಲಿ ಒಂಬತ್ತು ದಶಕಗಳಿಗೂ ಮಿಗಿಲಾದ ಮಹತ್ವದ ಕೊಡುಗೆ ನೀಡಿರುವ ಮುಂಬಯಿ ಕನ್ನಡ ಸಂಘದ ಈ ಐತಿಹಾಸಿಕ ವಾರ್ಷಿಕೋತ್ಸವದಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಬೇಕೆಂದು ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸೋಮನಾಥ ಎಸ್. ಕರ್ಕೇರ ಅವರು ವಿನಂತಿಸಿಕೊಂಡಿದ್ದಾರೆ.
,
.
.




















































































