✍🏻 ರೂಪಾ ಕಾರಂಡೆ ( ಸಂಗೋಳಿ)
ಎಷ್ಟು ಬೇಗ ಎದ್ದರೂ ಮನೆಯಿಂದ ಹೊರಡುವಾಗ ಲೇಟೇ ಆಗುತ್ತೆ. ‘ನಾಳೆ ಮೀಟಿಂಗ್ ಇದೆ ಎಲ್ಲರೂ 10ಗಂಟೆಯ ಒಳಗೆ ಆಫೀಸಲ್ಲಿ ಇರಬೇಕು’ ಎಂದು ಬಾಸ್ ಕಟ್ಟುನಿಟ್ಟಾಗಿ ಹೇಳಿದ್ದಾರೆ. ತಪ್ಪಿಸುವಂತಿಲ್ಲ… ಎಂದು ತನ್ನಲ್ಲಿಯೇ ತಾನು ಗೊಣಗುತ್ತ , ಕಲ್ಯಾಣ್ ನಿಂದ ವಿಕ್ರೋಳಿ ಗೆ ಹೋಗಲು ಸಿ.ಎಸ್.ಎಮ್.ಟಿ ಹೋಗುವ ಲೋಕಲ್ ಟ್ರೈನ್ ಹತ್ತಿದಳು ಪ್ರಿಯಾ.ಆಫೀಸ್ ತಲುಪಿ ಬಾಸ್ ಹೇಳಿದ ಸಮಯಕ್ಕಿಂತ ಹತ್ತು ನಿಮಿಷ ಬೇಗ ತಲುಪಿದೆ ಎಂದು ನೆಮ್ಮದಿಯ ಉಸಿರು ತೆಗೆದುಕೊಂಡಳು.
“ಡಿಸೆಂಬರ್ 27ಕ್ಕೆ ನಮ್ಮ ಆಫೀಸ್ ಕಡೆಯಿಂದ ಅಲಿಬಾಗ್ ಗೆ ಟ್ರಿಪ್ ಹೋಗುತ್ತಿದೆ. ಈ ಟ್ರಿಪ್ ನಲ್ಲಿ ಎಲ್ಲರೂ ಭಾಗಿ ಆಗಬೇಕು.” ಎಂದು ಮೀಟಿಂಗ್ ನ ಕೊನೆಗೆ ಘೋಷಣೆ ಮಾಡಿದರು.
ಈ ಮಾತಿಂದ ಎಲ್ಲರ ಮುಖ ಖುಷಿಯಿಂದ ಅರಳಿತು. ಆದರೆ, ಪ್ರಿಯಾಳ ಮುಖ ಮಾತ್ರ ಸಪ್ಪೆಯಾಗಿತ್ತು.
“ಯಾಕೆ?… ಪ್ರಿಯಾ …. ರಾಘವ್ ಇಲ್ಲವೆಂದು ಮುಖ ಸಪ್ಪೆ ಆಯ್ತಾ. ಇನ್ನು ಮುಂದಿನ ತಿಂಗಳು ಹೋಗುವುದಿದೆ. ಅಲ್ಲಿವರೆಗೆ ಅವನು ಬರುವನು. ಇದರಲ್ಲಿ ಟೆನ್ಶನ್ ಮಾತೇ ಇಲ್ಲ.” ಎಂದು ಅರ್ಚನಾ ನಕ್ಕಳು.
ಆಫೀಸ್ ನಲ್ಲಿ ಖುಷಿಯ ವಾತಾವರಣ ಹಬ್ಬಿತು. ಪ್ರಿಯಾಳ ಫೋನ್ ರಿಂಗಣಿಸಿತು. “ಇದೇನು ರಾಘವ್ ನ ಕಾಲ್ ” ಎಂದು ನೋಡಿಯೂ ರಿಸೀವ್ ಮಾಡಲಿಲ್ಲ..ಪದೇ ಪದೇ ಕಾಲ್ ಬರುತ್ತಿರುವ ಕಾರಣ ರಿಸೀವ್ ಮಾಡಿದಳು.
“ಹಲೋ…..” ಎಂದಳು ಪ್ರಿಯಾ.
” ಹಲೋ… ಯಾರು?… ಪ್ರಿಯಾ ಅವರಾ….?”. ಎಂದು ಎದುರಿಂದ ಸ್ವರ ಕೇಳಿ ಬಂತು.
“ಹೌದು….” ನೀವು ಯಾರು?…. ಗೊತ್ತಾಗಲಿಲ್ಲ.” ಎಂದಳು ಪ್ರಿಯಾ.
“ಹಲೋ…. ನಾನು ರಾಘವ್ ನ ತಂಗಿ ಮಾತಾಡುವುದು. ಅಣ್ಣನ ಆಕ್ಸಿಡೆಂಟ್ ಆಗಿದೆ. ಅವರಿಗೆ ನಾಗಪುರದ ‘ಗಂಗಾ ಕೇರ್’ ಆಸ್ಪತ್ರೆಯಲ್ಲಿ ಸೇರಿಸಿದ್ದೇವೆ” ಎಂದು ಹೇಳಿ ಕಾಲ್ ಕಟ್ ಮಾಡಿದಳು.
ಪ್ರಿಯಾ “ಹಲೋ… ಎನ್ನುವುದರಲ್ಲಿ” ಕಾಲ್ ಕಟ್ ಆಗಿತ್ತು.
ಅಯ್ಯೋ….. ದೇವರೇ…. ಇದೇನಿದು, ಬಾಸ್ ಹೇಳಿದ ಮಾತುಗಳೇ ಅರಗಿಸಿಕೊಳ್ಳಲು ಆಗುತ್ತಿಲ್ಲ, ಮತ್ತೊಂದು ಟೆನ್ಶನ್” ಎಂದು ಅಳು ಬಂತು.
ಆಫೀಸಲ್ಲಿ ಎಲ್ಲರೂ “ಪ್ರಿಯಾ ಏನಾಯ್ತು?… ಯಾಕೆ?… ಅಳುವುದು” ಎಂದು ಕೇಳಿದರು.
ಅಳುವ ಧ್ವನಿಯಲ್ಲಿಯೇ “ರಾಘವ್ ನ ಆಕ್ಸಿಡೆಂಟ್ ಆಗಿದೆಯಂತೆ.ಆಸ್ಪತ್ರೆಗೆ ಸೇರಿಸಿದ್ದಾರೆ. ಅವರ ತಂಗಿ ಕಾಲ್ ಮಾಡಿ ತಿಳಿಸಿದಳು” ಎಂದಳು ಪ್ರಿಯಾ.
ಈಗ ತತ್ಕಾಲ್ ಟಿಕೆಟ್ ಸಿಗಲ್ಲ. ಟ್ರಾವೆಲರ್ಸ್ ನಲ್ಲಿ ಕಾಲ್ ಮಾಡಿ ಟಿಕೆಟ್ ಅವೆಲೇಬಲ್ ಇದೆಯೇ…ವಿಚಾರಿಸಿದಳು. ಅಂತೂ ನಾಗಪುರ್ ಹೋಗಲು ಒಂದು ಟಿಕೆಟ್ ಬುಕ್ ಮಾಡಿದಳು.
ಬೆಳದಿಂಗಳ ರಾತ್ರಿಯಲ್ಲಿ ಕಿಟಕಿಯಿಂದ ಹೊರಗೆ ಆಕಾಶ, ನಕ್ಷತ್ರ, ಚಂದ್ರ ನನ್ನು ನೋಡುತ್ತಾ ಜೀವನದಲ್ಲಿ ಬಿರುಗಾಳಿ ಬಂದು ಖುಷಿ ಕೊಚ್ಚಿಕೊಂಡು ಹೋಯಿತು, ಆದರೆ ಈಗ ಬೀಸುವ ಸುಂಟರಗಾಳಿ ತನ್ನ ಸುಳಿಗೆ ಸಿಲುಕಿಸಿ ಗರಗರನೆ ಗಿರಕಿ ಹೊಡೆಯುವುದರಿಂದ ಹೇಗೆ ಪಾರಾಗಲಿ….?” ಎಂದು ಮನದಲ್ಲಿ ಚಿಂತಿಸತೊಡಗಿದಳು.
ಹುಟ್ಟುತ್ತಲೇ ಒಬ್ಬಳೇ. ಅಕ್ಕ, ತಂಗಿ, ಅಣ್ಣ, ತಮ್ಮ ಯಾರೂ ಇಲ್ಲದ ಪಾಪಿ. ಹನ್ನೆರಡು ವರ್ಷದವಳಿದ್ದಾಗ ಅಪ್ಪ ,ಅಮ್ಮ ವಿಧಿವಶರಾದರು. ಚಿಕ್ಕಮ್ಮ ,ಚಿಕ್ಕಪ್ಪರ ನೆರಳಲ್ಲಿ ಬೆಳೆದೆ. ಮುಂದೆ ಸಿಸ್ಟರ್ ಕೋರ್ಸ್ ಮುಗಿಸಿದೆ. ಮುಂಬೈಯ ಒಂದು ಕ್ಲಿನಿಕಲ್ಲಿ ಕೆಲಸಕ್ಕೆ ಸೇರಿದೆ.
ಚಿಕ್ಕಪ್ಪ ಮುಂಬೈಯಲ್ಲಿಯೇ ಒಂದು ಒಳ್ಳೆಯ ವರನನ್ನು ಹುಡುಕಿ ಮದುವೆ ಮಾಡಿದರು. ಹಾಸ್ಟೆಲ್ ನಲ್ಲಿ ಇದ್ದವಳು. ಮದುವೆಯ ನಂತರ ಮುಲುಂಡ್ ನ ಸ್ವಂತ ಮನೆಯಲ್ಲಿ ಇರುವ ಭಾಗ್ಯ ಬಂತು. ಅತ್ತೆ, ಮಾವ, ಗಂಡ ಚಿಕ್ಕ ಸಂಸಾರವಾದರೂ ಚೊಕ್ಕವಾಗಿತ್ತು. ಪತಿರಾಯ ದಾದರ್ ನ ಕೀರ್ತಿ ಕಾಲೇಜಲ್ಲಿ ಲೆಕ್ಚರಾಗಿ ಇದ್ದರು. ಮನೆಯಲ್ಲಿ ಏನೂ ಕುಂದು ಕೊರತೆ ಇಲ್ಲದೆ, ಮಹಾರಾಣಿಯ ತರ ಜೀವನ ನಡೆಸುತ್ತಿದ್ದೆ. ಎಲ್ಲರ ಪ್ರೀತಿ ವಾತ್ಸಲ್ಯದಲ್ಲಿ ಕಾಲ ಕಳೆದಿದ್ದು ಗೊತ್ತಾಗುತ್ತಿರಲಿಲ್ಲ. ಗಂಡನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದನು. 'ಸ್ವರ್ಗಕ್ಕೆ ಮೂರೇ ಗೇಣು' ಎಂಬ ಅನುಭವವಾಗುತ್ತಿತ್ತು.
ಒಮ್ಮೆ ಸ್ಟಾಫ್ ನವರೆಲ್ಲರು ಟ್ರಿಪ್ ಗೆ ಹೋಗಲು ಪ್ಲ್ಯಾನ್ ಮಾಡಿದರು. "ಪ್ರಿಯಾ... ಫ್ಯಾಮಿಲಿ ಟ್ರಿಪ್ ಗೆ ಎಲ್ಲರು ಹೋಗುತ್ತಿದ್ದೇವೆ. ನಿನ್ನ ಗಂಡನ ಜೊತೆ ನೀನೂ ಬಾ" ಎಂದು ಸೀನಿಯರ್ ಸಿಸ್ಟರ್ ಮಮತಾ ಅವರು ಹೇಳಿದರು.ಇದಕ್ಕೆ ಪತಿರಾಯರು ಖುಷಿಯಿಂದ ಒಪ್ಪಿದರು. ಅಂದಿನಿಂದ ಟ್ರಿಪ್ ಗೆ ಹೋಗುವ ದಿನಗಳು ಎಣಿಸುತ್ತಿದ್ದೆ. ನೋಡ- ನೋಡುವುದರಲ್ಲಿ ಆ ದಿನ ಬಂದೇ ಬಿಟ್ಟಿತು. ಬೇಕಾದ ವಸ್ತುಗಳೆಲ್ಲವೂ ಪ್ಯಾಕಿಂಗ್ ಮಾಡಿ ಆಯಿತು. ಕಾಲೇಜಿಂದ ಬಂದ ಪತಿರಾಯರು "ನನಗೆ ಟ್ರೈನಿಂಗ್ ಇದೆ. ಅದಕ್ಕೆ ಟ್ರಿಪ್ ಗೆ ಬರಲು ಆಗಲ್ಲ. ನೀನು ಹೋಗಿ ಬಾ. ಬೇಕಾದರೆ ಇನ್ನೊಮ್ಮೆ ಒಟ್ಟಿಗೆ ಹೋಗುವ. ಸ್ಸಾರಿ...ಬೇಬಿ... " ಎಂದಾಗ ಒಂದು ಕ್ಷಣ ಆಘಾತ. ಕೊನೆಗೆ,
“ನೀವು ಬರದಿದ್ದರೆ ನಾನು ಹೋಗಲ್ಲ” ಎಂದರೂ ಒತ್ತಾಯಪೂರ್ವಕವಾಗಿ ಕಳುಹಿಸಿಬಿಟ್ಟರು.
‘ಅಲಿಬಾಗ್ ಸುತ್ತಾಡಿ, ಎಂಜಾಯ್ ಮಾಡಿ ಹಿಂದಿರುಗಿ ಬರುವಾಗ ನಮ್ಮ ಬಸ್ಸು ಅಪಘಾತ ಕ್ಕೆ ಒಳಗಾಯಿತು. ಪಕ್ಕದ ಊರಿನವರು ನಮ್ಮೆಲ್ಲರಿಗೂ ಆಸ್ಪತ್ರೆಗೆ ದಾಖಲು ಮಾಡಿದರು. ಕಾಲಿಗೆ ಜೋರು ಪೆಟ್ಟು ಬಿದ್ದುದರಿಂದ ರಕ್ತ ಸುರಿಯುತ್ತಿತ್ತು. ಬ್ಯಾಂಡೆಜ್ ಕಟ್ಟಿ ಒಂದು ವಾರದ ನಂತರ ಬಿಡುಗಡೆ ಮಾಡಿದರು. ಮನೆಗೆ ಬಂದಾಗ ಅತಿಥಿ ಉಪಚಾರ ಶುರುವಾಯ್ತು.ಒಂದು ದಿನ ತಲೆ ಸುತ್ತುತ್ತಿದೆ ಎಂದು ಆಸ್ಪತ್ರೆ ಗೆ ಹೋಗಿ ಬಾಡಿ ಚೆಕಪ್ ಮಾಡಿಸಿದರೆ ಎಚ್.ಆಯ್.ವಿ ಪಾಜಿಟಿವ್ ರಿಪೋರ್ಟ್ ಬಂತು.] ಇದನ್ನು ತಿಳಿದ ಅತ್ತೆ ಭದ್ರಕಾಳಿಯಾಗಿ ಅವತರಿಸಿದರೇ…. ಪತಿರಾಯ ರುದ್ರಾವತಾರ ತಾಳಿದರು.
“ಈ ನಡತೆ ಗೆಟ್ಟವಳು ನಮ್ಮ ಮನೆಯಲ್ಲಿ ಇರಕೂಡದು” ಎಂದು ಖಡಕ್ಕಾಗಿ ಅತ್ತೆಯ ಉತ್ತರ ಹೊರಬಂತು.
“ನಾನು ಯಾವ ತಪ್ಪು ಮಾಡಿಲ್ಲ”. ಎಂದು ಎಷ್ಟು ಬೇಡಿಕೊಂಡರೂ ಯಾರು ಈ ಮಾತು ನಂಬಲು ತಯಾರು ಇರಲಿಲ್ಲ.
“ಇಂಥವಳ ಜೊತೆ ಜೀವನ ನಡೆಸಲು ಸಾಧ್ಯವಿಲ್ಲ, ಇವಳಿಂದ ನನಗೆ ಬಿಡುಗಡೆ ಬೇಕು”. ಎಂದು ನಿರ್ಧಾರ ಮಾಡಿದನು ಪತಿರಾಯ.
ಹೆಣ್ಣಿಗೆ ತೊಂದರೆ ಅಂತ ಬಂದರೆ ನೆನಪಾಗುವುದೇ ತವರು ಮನೆ.
ತವರು ಮನೆಗೆ ಬಂದರೆ ಚಿಕ್ಕಮ್ಮ “ಮಾನಗೆಟ್ಟವಳು, ನಾಚಿಕೆ ಇಲ್ಲದವಳು, ಯಾವ ಮುಖ ಎತ್ತಿಕೊಂಡು ಇಲ್ಲಿಗೆ ಬಂದೆ. ನಮ್ಮ ಮನೆಯಲ್ಲಿ ಇಂಥವಳಿಗೆ ಜಾಗವಿಲ್ಲ. ಇವಳು ಇಲ್ಲೇ ಇದ್ದರೆ ಇವಳ ಗುಣ ನನ್ನ ಮಕ್ಕಳಲ್ಲಿ ಬರಬಹುದು. ಗಂಡನ ಮನೆಗೂ ತವರ ಮನೆಗೂ ಮಸಿ ಬಳಿದವಳು, ನಮ್ಮ ಮನೆಯಲ್ಲಿ ಇರಕೂಡದು”. ಎಂದು ಹೊರಗೆ ಹಾಕಿದರು.
ಅಸಹಾಯಕಳಂತೆ ಚಿಕ್ಕಪ್ಪ ಈ ಮಾತಿಗೆ ದನಿಗೂಡಿಸಿದನು.
ಎದೆಗುಂದದೆ ಮತ್ತೆ ಮುಂಬೈಗೆ ಹಿಂದುರಿಗಿದೆ.
ಅದೇ ನನ್ನ ಹಾಸ್ಟೆಲ್ ಲ್ಲಿ ಜೀವನ ಮುಂದುವರಿಸಿದೆ. ಈ ರಿಪೋರ್ಟ್ ಬಗ್ಗೆ ನಿಜಾಂಶ ತಿಳಿಯಲು ಬೆನ್ನು ಹತ್ತಿದೆ. ಆಗ, ಗೊತ್ತಾದದ್ದು ಆಕ್ಸಿಡೆಂಟ್ ಆದವರಲ್ಲಿ ಒಬ್ಬರು ಎಚ್.ಆಯ್. ವಿ ರೋಗಿ ಇರುವುದರಿಂದ, ಆತನಿಗೆ ಗಾಯವಾಗಿ ಸೋರುತ್ತಿರುವ ರಕ್ತ ನನ್ನ ರಕ್ತದಲ್ಲಿ ಬೆರಕೆ ಆದುದರಿಂದ ಈ ರೋಗಕ್ಕೆ ನಾನು ತುತ್ತಾದದ್ದು ಬೆಳಕಿಗೆ ಬಂತು. ಇದರಲ್ಲಿ ನನ್ನ ತಪ್ಪು ಇರಲಿಲ್ಲ ಆದರೂ, ಜೀವನದಲ್ಲಿ ಬಿರುಗಾಳಿ ಎಬ್ಬಿಸಲು ಈ ಘಟನೆ ಸಾಕಾಗಿತ್ತು..
ಆರು ತಿಂಗಳಲ್ಲಿ ವಿಚ್ಛೇದನ ಪತ್ರ ಬಂತು.
ಪತಿರಾಯನಿಗೆ ಇದೆಲ್ಲ ನಿಜಾಂಶ ತಿಳಿಸಿದರೂ ಒಪ್ಪಿಕೊಳ್ಳದೆ ವಿಚ್ಛೇದನ ಪಡೆದುಕೊಂಡರು.
ಮುಂದೆ ನನ್ನ ಜೀವನವೇ ಶೂನ್ಯ ಎಂಬ ನಿರುತ್ಸಾಹ ಹುಟ್ಟಿಕೊಂಡಿತು. ಆದರೂ,ಎಷ್ಟು ದಿನ ಇದೇ ಚಿಂತೆಯಲ್ಲಿ ಕೊರಗುವುದು …..?ಎಂದು ಈ ವೃತ್ತಿ ಬಿಟ್ಟು ಬೇರೆ ವೃತ್ತಿ ಕಡೆ ಮುಖ ಮಾಡಿದೆ.
“ಫೋಟೋ ಶಾಪ್” ಕೋರ್ಸ್ ಕಲಿತು ಅದರಲ್ಲಿ ಮುಂದುವರೆದೆ. ವಿಕ್ರೋಲಿಯ ದೊಡ್ಡ ಕಂಪನಿಯಲ್ಲಿ ಕೆಲಸ ಸಿಕ್ಕಿದ ನಂತರ ಹಾಸ್ಟೆಲ್ ಬಿಟ್ಟು ಒಂದು ಬಾಡಿಗೆ ಮನೆ ಮಾಡಿದೆ.
ದಿನ ಕಳೆದಂತೆ ಅದನ್ನೆಲ್ಲ ಮರೆಯುತ್ತಾ ಬಂದೆ. ಆಫೀಸಲ್ಲಿ ಎಲ್ಲರ ಜೊತೆ ಬೆರೆತು ಹೊಸ ಜೀವನದತ್ತ ಪಯಣಿಸಿದೆ. ಆಫೀಸ್ ಲ್ಲಿ ಸಚಿನ್ ನೋಟ ನನ್ನ ಮೇಲೆ ಬಿತ್ತು. ಅವನಿಂದ ಎಷ್ಟು ದೂರ ಇರಲು ಪ್ರಯತ್ನಿಸಿದರೂ ತನ್ನ ಪ್ರೀತಿಯ ಸುಳಿವಿನಲ್ಲಿ ಸಿಲುಕಿಸಲು ಹಲವಾರು ಪ್ರಯತ್ನ ಪಟ್ಟನು. ಅವನ ಪ್ರೀತಿಗೆ ಬಗ್ಗದೆ ಮುಂದುವರೆದೆ. ಒಂದು ದಿನ ಆಫೀಸ್ ಪಾರ್ಟಿ ಇರುವುದರಿಂದ ಹೋಟೆಲ್ ಗೆ ಸ್ವಲ್ಪ ಬೇಗ ತಲುಪಿದೆ. ಸಚಿನ್ ಅಲ್ಲಿ ಮೊದಲೇ ತಲುಪಿದ್ದನು. ಸಚಿನ್ ನನ್ನ ಎರಡು ಕೈಗಳನ್ನು ಹಿಡಿದು “ಪ್ರಿಯಾ ನಿನ್ನನ್ನೂ ತುಂಬಾ ಪ್ರೀತಿಸುತ್ತಿದ್ದೇನೆ. ನನ್ನ ಮುಂದಿನ ಜೀವನ ನಿನ್ನನ್ನೇ ದಾರಿ ಎರೆದು ಬಿಡುವ ನಿರ್ಧಾರ ಮಾಡಿದ್ದೇನೆ.ನಿನ್ನ ಪುಟ್ಟ ಹೃದಯದಲ್ಲಿ ಒಂಚೂರು ಜಾಗ ಕೊಟ್ಟು ಈ ಬಡಪಾಯಿಯ ಕೋರಿಕೆ ಈಡೇರಿಸುವೆಯಾ… “ಎಂದು ಪ್ರಸ್ತಾಪ ಮುಂದಿಟ್ಟನು.
ಏನೂ ತೋಚದೆ ಕಂಬದ ಹಾಗೆ ನಿಂತು ಬಿಟ್ಟೆ. ನನ್ನ ಕೈ ತನ್ನ ಕೈಯಲ್ಲಿ ಹಿಡಿದು, ಒಂದು ಕೈಯಿಂದ ಕಣ್ಣೀರು ವರೆಸುತ್ತಾ “ಪ್ರಿಯಾ, ಗೆಳತಿ…. ಯಾಕೆ… ನಿಂತು ಬಿಟ್ಟೆ. ಈಗಲೇ ಒಪ್ಪಿಗೆ ಸೂಚಿಸಬೇಕು ಅಂತೇನಿಲ್ಲ, ಆರಾಮದಲ್ಲಿ ಉತ್ತರಿಸಿದರೆ ಸಾಕು”.ಎಂದನು.
ಮನೆಗೆ ಬಂದವಳಿಗೆ ಹಿಂದಿನ ಘಟನೆಗಳೆಲ್ಲ ನೆನಪಿಗೆ ಬರತೊಡಗಿದವು. “ಇಲ್ಲ, ಇಲ್ಲ ನನ್ನ ಜೀವನದಲ್ಲಿ ಖುಷಿಗೆ ಜಾಗವೇ ಇಲ್ಲ. ಸಚಿನ್ ಬಾಳಿ ಬದುಕುವವನು. ಅವನ ಜೀವನದಲ್ಲಿ ಬೆಳಕಾಗಿ ಹೋಗಲು ಹೇಗೆ ಸಾಧ್ಯ?… ನಾಳೆ ಆಫೀಸ್ ರಜೆ ಹಾಕಿ ಭೇಟಿಯಾಗಿ ನಡೆದ ಸಂಗತಿ ಹೇಳಿದರೆ ಅವನು ದೂರ ಸರಿಯಬಹುದು”. ಎಂದು ಮೊಬೈಲ್ ಎತ್ತಿಕೊಂಡು ಮೆಸೇಜ್ ಮಾಡಿದಳು.
ಮರುದಿನ ಸಚಿನ್ ರೆಡಿಯಾಗಿ ಪ್ರಿಯಾ ಹೇಳಿದ ಜಾಗಕ್ಕೆ ಸಮಯಕ್ಕಿಂತ ಮೊದಲೆ ತಲುಪಿದ.
ಇಷ್ಟು ಬೇಗ ಪ್ರಿಯಾ ಒಪ್ಪಿಕೊಳ್ಳುವವಳು ಎಂದು ಅನಿಸಿರಲಿಲ್ಲ. ಏನೇ ಆಗಲಿ ಒಪ್ಪಿದರೆ ಸಾಕು.ಅವಳಿಗೆ ಮಹಾರಾಣಿಯ ಹಾಗೆ ನೋಡಿಕೊಳ್ಳುವೇ. ಎದೆಯ ಹೂವಿನ ಹಾಸಿಗೆಯ ಮೇಲೆ ಮೆರೆದಾಡಿಸುವೇ….. ಎಂದು ಏನೇನೋ ಮನದಲ್ಲಿಯೇ ಗುಣುಗುಣಿಸಿದ.
ಅಷ್ಟರಲ್ಲಿ ಪ್ರಿಯಾ ಎದುರು ಬರುವುದು ಕಾಣಿಸಿತು.
ಎಂದಿಗಿಂತ ಸುಂದರಿಯಾಗಿ ಕಂಡಳು.
ಬಾಳೆಸುಳಿಯ ಮೈ ಕಟ್ಟು, ಶಿರಡಿ ಸುಣ್ಣದ ಬಣ್ಣ, ದುಂಡನೆಯ ಮುಖದ ಮೇಲೆ ಕಮಲದಂತಹ ಕಣ್ಣುಗಳು, ಕಾಮನ ಬಿಲ್ಲಂತಹ ಹುಬ್ಬುಗಳು, ನೆಟ್ಟನೆಯ ಮೂಗಲ್ಲಿ ಹೊಳೆಯುವ ಹರಳದ ನತ್ತು, ಹೆಸರು ಕಾಯಿ ಅಂತ ತುಟಿಗಳು, ಸಬೂಳ ಕೈಯಲ್ಲಿ ಗಾಜಿನ ಬಳೆಗಳು ತಿಳಿ ಹಸಿರು ಬಣ್ಣದ ಚೂಡಿದಾರ ಹಾಕಿ ಬರುವಾಗ ಸಚಿನ್ ನ ಕಣ್ಣಿಗೆ ಇನ್ನೂ ಚೆಲುವೆ ಯಾಗಿ ಕಾಣಿಸಿದಳು.
ಅವಳ ಅಂದದಲ್ಲಿ ಮುಳುಗಿದ ಸಚಿನ್ ಗೆ ಪ್ರಿಯಾ ಬಂದದ್ದು ಗೊತ್ತಾಗಲಿಲ್ಲ.
“ಸಚಿನ್….” ಎಂದು ಕೂಗಿದಾಗ ಹಗಲು ಕನಸ್ಸಿಂದ ಹೊರಗೆ ಬಂದನು.
ಇಬ್ಬರೂ ದಾದರ್ ನ ಶಿವಾಜಿ ಪಾರ್ಕಿನ ಒಳಗೆ ಹೋಗಿ ಬೆಂಚಿನ ಮೇಲೆ ಕೂತರು.
ಸಚಿನ್ ಮಾತು ಮುಂದುವರಿಸಿದ. “ಥ್ಯಾಂಕ್ಯೂ ಪ್ರಿಯಾ ಈ ಪ್ರೀತಿ ಸ್ವೀಕರಿಸಿದ್ದಕ್ಕೆ” ಎಂದನು.
“ಸಚಿನ್ ಇದೇನಿದು ನಾನು ಇನ್ನೂ ಉತ್ತರನೇ ಕೊಟ್ಟಿಲ್ಲ” ಎಂದಳು.
“ನನೆಗೆ ಗೊತ್ತು, ನನ್ನ ಒಳ ಮನಸ್ಸು ಹೇಳುತ್ತಿದೆ. ಒಪ್ಪಿದೆ ಅಂತ”.
“ಇಲ್ಲ, ದಯವಿಟ್ಟು ಕ್ಷಮಿಸು…ನಿನ್ನ ಪ್ರೀತಿ ಒಪ್ಪಿಗೆ ಇಲ್ಲ”. ಎಂದಳು.
ಸಚಿನ್ ಕ್ಷಣ ಹೊತ್ತು ಮೌನವಾದ.
“ಪ್ರಿಯಾ… ಇದಕ್ಕೆ ಕಾರಣ ಹೇಳಬಹುದಾ….ಇಲ್ಲಾ , ನೀನು ಯಾರನ್ನಾದರೂ ಪ್ರೀತಿಸಿದರೆ ಹೇಳು..” ಎಂದ.
“ಸಚಿನ್ ನನಗೆ ಮದುವೆ ಆಗಿತ್ತು”. ಎಂದು ಜೋರು ಕಿರುಚಿದಳು.
ಇದನ್ನು ಕೇಳಿದ ಸಚಿನ್ ಬರಸಿಡಿಲು ಬಡಿದ ಹಾಗೆ ನಿಂತ. “ಇಲ್ಲ, ಇಲ್ಲ… ಪ್ರಿಯಾ ಸುಳ್ಳು ಹೇಳುತ್ತಿದ್ದಿ? ನಂಬಲ್ಲಾ… ಇದನ್ನು ನಂಬಲ್ಲ….”. ಎಂದನು ಸಚಿನ್. ಸ್ವಲ್ಪ ಹೊತ್ತು ಇಬ್ಬರೂ ಮೌನವಾದರು. ನಂತರ ಪ್ರಿಯಾ ನಡೆದ ಎಲ್ಲಾ ಘಟನೆ ವಿವರಿಸಿದಳು.
ಇದನ್ನು ಆಲಿಸಿದ ಸಚಿನ್ ಎದ್ದು ನಿಂತು ಪ್ರಿಯಾಳ ಕೈ ತನ್ನ ಕೈಯಲ್ಲಿ ಹಿಡಿದು “ಪ್ರಿಯಾ ನಾನು ನಿನ್ನನ್ನು ಮನಸಾರೆ ಪ್ರೀತಿಸುತ್ತಿದ್ದೇನೆ. ಹಿಂದೆ ನಡೆದದ್ದು ಎಲ್ಲ ಮರೆತು ಬಿಡು. ಹೊಸ ಬಾಳಲ್ಲಿ ಬೆಳಕಾಗಿ ನನ್ನ ಬಾಳ ಬೆಳಗು” ಎಂದನು.
” ನನಗೆ ಸ್ವಲ್ಪ ಸಮಯ ಬೇಕು”. ಎಂದಳು ಪ್ರಿಯಾ. “ಆಯ್ತು, ನಿನಗೆ ಎಷ್ಟು ಸಮಯ ಬೇಕಾದರೂ ತೆಗೆದುಕೊಳ್ಳು. ನಿನಗೋಸ್ಕರ ನಾನು ಕಾಯುತ್ತಿರುತ್ತೇನೆ. ಈ ವಿಷಯ ತಂಗಿಗೆ ತಿಳಿಸಿದ್ದೇನೆ. ಊರಿಗೆ ಹೋಗಿ ಅಮ್ಮ ಅಪ್ಪನಿಗೂ ತಿಳಿಸಿ ತಯಾರಾಗಿರಿ ನಿಮ್ಮ ಭಾವೀ ಸೊಸೆಯನ್ನು ಕರೆದುಕೊಂಡು ಬರುವೆನೆಂದು ಹೇಳಿ ಬರುತ್ತೇನೆ”. ಎಂದ
ಇಬ್ಬರೂ ಹೊರಟು ಹೋದರು.
ಕಿಟಕಿಯಿಂದ ತಂಪಾದ ಗಾಳಿ ಬಂದು ಗಲ್ಲಕ್ಕೆ ಅಪ್ಪಳಿಸಿದಾಗ ಎಚ್ಚರಗೊಂಡೆ. ಆಗಲೇ ಬಸ್ಸು ನಾಗಪುರ್ ಕ್ಕೆ ತಲುಪಿತು. ಆಟೋ ಹಿಡಿದು ಆಸ್ಪತ್ರೆಗೆ ತಲುಪಿದಳು. ರಿಸೆಪ್ಶನ್ ಲ್ಲಿ ಪೇಷಂಟ್ ಡಿಟೇಲ್ಸ್ ತಿಳಿದುಕೊಂಡು ವಾರ್ಡ ಕಡೆ ಹೆಜ್ಜೆ ಹಾಕಿದಳು.
“ಸಚಿನ್ ಈಗ ಡೇಂಜರ್ ನಿಂದ ಹೊರಗೆ ಬಂದಿದ್ದಾನೆ. ತಲೆಗೆ ಸ್ವಲ್ಪ ಪೆಟ್ಟು ಬಿದ್ದಿದ್ದರಿಂದ ರಕ್ತ ತುಂಬಾ ಸುರಿದಿತ್ತು. ಅದಕ್ಕೆ ತಕ್ಕ ಟ್ರೀಟ್ಮೆಂಟ್ ಕೊಟ್ಟಿದ್ದೇವೆ. ಈಗ ಓಕೆ, ಎರಡು ದಿನದಲ್ಲಿ ಡಿಸ್ಚಾರ್ಜ್ ಮಾಡುತ್ತೇವೆ. ಇದರಲ್ಲಿ ಪ್ರಿಯಾ, ಯಾರು..? ಪ್ರಿಯಾ ಎಂದು ಬಡಬಡಿಸುತ್ತಿದ್ದಾರೆ. ಹೋಗಿ ಪೇಷಂಟ್ ನ್ನು ಭೇಟಿಯಾಗಿ. ಈ ರಿಪೋರ್ಟ್ ಬಗ್ಗೆ ಚರ್ಚಿಸಬೇಕೆಂದು ಡಾಕ್ಟರ್ ಅವರ ರಿಲೇಟಿವ್ಸ್ ಗೆ ಬರಲು ಹೇಳಿದ್ದಾರೆ ಓ.ಪಿ.ಡಿಯಲ್ಲಿ ನೀವಾ….ಬನ್ನಿ “. ಎಂದು ಹೇಳಿ ಸಿಸ್ಟರ್ ಹೊರಟಳು.
“ಐ ಲವ್ ಯು.. ಸಚಿನ್” ಎಂದು ಬೆಡ್ ಮೇಲೆ ಮಲಗಿದ ಸಚಿನ್ ನನ್ನು ಅಪ್ಪಿಕೊಂಡಳು. ಎಚ್ಚರ ಗೊಂಡ ಸಚಿನ್ ಪ್ರಿಯಾಳನ್ನು ನೋಡಿ
“ಐ ಲವ್ ಯು ಟೂ… ಚಿನ್ನ…..”. ಎಂದು ಹಣೆಗೆ ಮುತ್ತಿಟ್ಟನು.
ಬಾಗಿಲಲ್ಲಿ ನಿಂತಿದ್ದ ತಂದೆ ತಾಯಿ ಈ ದೃಶ್ಯ ನೋಡಿ ಒಬ್ಬರಿಗೊಬ್ಬರು ಮುಗುಳು ನಕ್ಕರು.




















































































