ಸ್ಥಾಪನೆಯಾದ ಒಂದು ವರ್ಷದಲ್ಲೇ ಮುಂಬಯಿ ಕನ್ನಡಿಗರ ಗಮನ ಸೆಳೆದ ಸಯನ್ ಕನ್ನಡ ಸಂಘವು ಸಯನ್, ಧಾರಾವಿ, ಚುನ್ನಾಭಟ್ಟಿ, ಬಾಂದ್ರಾ, ದಾದರ್, ವಡಾಲ ಈ ಪರಿಸರದಲ್ಲಿರುವ ಕನ್ನಡಿಗರ ಅಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಹುಟ್ಟಿಕೊಂಡ ಕನ್ನಡಿಗರ ಈ ಸಂಸ್ಥೆ. ಅಲ್ಪಾವಧಿಯಲ್ಲ್ಲೇ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಈ ಪರಿಸರದ ಕನ್ನಡ ಪ್ರೇಮಿಗಳ ಮನ ಗೆದ್ದಿದೆ ಎನ್ನುವುದಂತೂ ಸತ್ಯಕ್ಕೆ ದೂರವಾಗಿಲ್ಲ.
ಇದೀಗ ತಾ. 08/02/ 2025 ರಂದು ಕನ್ನಡ ಸಂಘ ಸಯನ್ ನ ವತಿಯಿಂದ ಬೃಹತ್ ಉಚಿತ ವೈದ್ಯಕೀಯ ಶಿಬಿರವನ್ನು ಬೆಳಿಗ್ಗೆ 9.00 ಗಂಟೆಯಿಂದ ಸಂಜೆ 4.00 ರ ತನಕ ಸಯನ್ ನ ಸ್ವಾಮಿ ನಿತ್ಯಾನಂದ ಸಭಾಗೃಹದಲ್ಲಿ ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ 9.00 ಗಂಟೆಗೆ ಗಣ್ಯರ ಹಸ್ತದಿಂದ ಶಿಬಿರವನ್ನು ಉದ್ಘಾಟಿಸಲಾಗುವುದು.
ಅಂದು ಹಿರಿಯ ಸಾಹಿತಿ, ಸಂಶೋಧಕಿ ಡಾ. ಸುನೀತಾ ಶೆಟ್ಟಿ, ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ, ಬಂಟರ ಸಂಘದ ಉಪಾಧ್ಯಕ್ಷರಾದ ಮಹೇಶ್ ಶೆಟ್ಟಿ ( ಬಾಬಾ ಗ್ರೂಪ್ ), ಪ್ರಸಿದ್ಧ ಉದ್ಯೋಗ ಪತಿ, ಪರೋಪಕಾರಿ ಬಿ.ಆರ್.ಶೆಟ್ಟಿ( ತಿರುಮಲೈಯ ಮಾಲಕ), ಜಯಕೃಷ್ಣ ಪರಿಸರ ಪ್ರೇಮಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಶೆಟ್ಟಿ, ಬಿಲ್ಲವರ ಅಸೋಸಿಯೇಷನ್ ನ ಅಧ್ಯಕ್ಷರಾದ ಹರೀಶ್ ಅಮೀನ್, ಮಾಜಿ ಎಸಿಪಿ ಸುರೇಶ್ ವಾಲಿ ಶೆಟ್ಟಿ , ಮಾತೃಭೂಮಿಯ ಕಾರ್ಯಧ್ಯಕ್ಷ ಊಲ್ತುರು ಮೋಹನ್ ದಾಸ್ ಶೆಟ್ಟಿ , ಎಸ್ ಎಂ ಹೈಸ್ಕೂಲ್ ಪೊವೈ, ಇದರ ಕಾರ್ಯಧ್ಯಕ್ಷ ಎಸ್.ಎಂ. ಶೆಟ್ಟಿ, ಹೋಟೆಲ್ ಉದ್ಯಮಿ , ಮಾಲ್ವನ್ ತಡ್ಕದ ಆದರ್ಶ್ ಶೆಟ್ಟಿ, ಉದ್ಯೋಗಪತಿ ಶ್ರೀ ಆರ್.ಕೆ.ಶೆಟ್ಟಿ, ಭಾರತ್ ಕೋ.ಆಪ್ ಬ್ಯಾಂಕ್ ನ ಕಾರ್ಯಧ್ಯಕ್ಷ ಸೂರ್ಯಕಾಂತ್ ಸುವರ್ಣ,
ಎನ್ ಕೆ ಇ ಎಸ್ ಹೈಸ್ಕೂಲ್ ನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ದೀಪಕ್ ಶೆಟ್ಟಿ, ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಚಿತ್ರಾ ಶೆಟ್ಟಿ, ಕರ್ನಾಟಕ ಮಲ್ಲದ ಸಂಪಾದಕರಾದ ಚಂದ್ರಶೇಖರ ಪಾಲೆತ್ತಾಡಿ, ಮೊದಲಾದ ಗಣ್ಯರು ಆಗಮಿಸಲಿದ್ದಾರೆ.
ಈ ಶಿಬಿರವು ಸಂಘದ ಮಹಾ ಪೋಷಕ, ಹಿರಿಯ ಸಲಹೆಗಾರರಾದ ಅಂತರಾಷ್ಟ್ರೀಯ ಖ್ಯಾತಿಯ ಹೃದ್ರೋಗ ತಜ್ಞ ಡಾ. ಸದಾನಂದ ಶೆಟ್ಟಿ ಅವರ ಮುಂದಾಳತ್ವದಲ್ಲಿ ನಡೆಯಲಿದೆ. ಶಿಬಿರದ ಪ್ರಯೋಜನವು ಸಾಮಾನ್ಯ ಜನತೆಗೆ ಬಹು ರೀತಿಯಲ್ಲಿ ತಲುಪಬೇಕೆಂಬುದೇ ಡಾ.ಸದಾನಂದ ಶೆಟ್ಟಿ ಅವರ ಆಶಯವಾಗಿದೆ.
ಈ ಬಹುದೊಡ್ಡ ವೈದ್ಯಕೀಯ ಶಿಬಿರದಲ್ಲಿ ವಿಶೇಷವಾಗಿ ಕಣ್ಣುಗಳ ತಪಾಸಣೆ ( ಕ್ಯಾ ಟ್ರ್ಯಾಕ್/ ಕಣ್ಣಿನ ಪೊರೆ ಪತ್ತೆಹಚ್ಚುವಿಕೆ, ) , ಆರೋಗ್ಯ ತಪಾಸಣೆ( CBC, Cholesterol, Sugar ) ಹಲ್ಲುಗಳ ತಪಾಸಣೆ ಹಾಗೂ CPR ಪ್ರಾತ್ಯಕ್ಷಿಕೆ ನಡೆಯಲಿದ್ದು ಕನ್ನಡಿಗರು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತಾಗಬೇಕು.
ಕಣ್ಣಿಗೆ ಸಂಬಂಧಪಟ್ಟಂತೆ ಕ್ಯಾ ಟ್ರ್ಯಾಕ್ ಸರ್ಜರಿ ಅಗತ್ಯವೆಂದು ಕಂಡುಬಂದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ನಗರದ ಪ್ರತಿಷ್ಠಿತ ಆಸ್ಪತ್ರೆಯಾದ ಗುಣಮಟ್ಟದ ಚಿಕಿತ್ಸೆಗೆ, ಅತ್ಯುತ್ತಮ ಆರೈಕೆಗೆ ಪ್ರಸಿದ್ಧಿ ಪಡೆದಿರುವ, ಆಧುನಿಕ ಸವಲತ್ತುಗಳನ್ನು ಹೊಂದಿರುವ H. N. Reliance Foundation ನ ವತಿಯಿಂದ ಉಚಿತವಾಗಿ ಸರ್ಜರಿಯನ್ನು ಮಾಡಲಾಗುವುದು.
ಆರೋಗ್ಯ ತಪಾಸಣೆ ನಡೆಸಿದ ಬಳಿಕ ಆರ್ಥಿಕವಾಗಿ ಹಿಂದುಳಿದಿರುವ ಅರ್ಹ ರೋಗಿಗಳಿಗೆ ಉಚಿತ ಔಷಧಗಳನ್ನು ಪೂರೈಸಲಾಗುವುದು.
ಶಿಬಿರದಲ್ಲಿ ದಂತ ತಪಾಸಣೆಯೂ ನಡೆಯಲಿದ್ದು ಅಗತ್ಯವಿದ್ದವರಿಗೆ ರಿಯಾಯಿತಿ ದರದಲ್ಲಿ
ದಂತ ಚಿಕಿತ್ಸೆ ನಡೆಸಲಾಗುವುದು.
ಅಲ್ಲದೆ ಈ ಶಿಬಿರದಲ್ಲಿ CPR ಪ್ರಾತ್ಯಕ್ಷಿಕೆ ನಡೆಸಲಾಗುವುದು. ಹೃದಯ ಶ್ವಾಸಕೋಶದ ಪುನರುಜ್ಜೀವನ ಅಂದರೆ ಪಾರ್ಶ್ವವಾಯು ಅಥವಾ ಇತರ ಗಂಭೀರ ಸ್ಥಿತಿಯ ಕಾರಣದಿಂದಾಗಿ ವ್ಯಕ್ತಿಯ ಹೃದಯ ಬಡಿತವು ಹಠಾತ್ತನೆ ನಿಂತು ಹೋದರೆ ನಡೆಸಲಾಗುವ ಪ್ರಥಮ ಚಿಕಿತ್ಸೆಯಿದು. ಈ ಚಿಕಿತ್ಸೆಯ ಪ್ರಾತ್ಯಕ್ಷಿಕೆಯ ಲಾಭವನ್ನು ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಪಡೆಯಬಹುದಾಗಿದೆ.
ವಿಶೇಷವಾಗಿ ಪೋಲಿಸರು, ಶಿಕ್ಷಕರು, ಗಾರ್ಡ್ಸ್ ಇವರುಗಳು ಈ ಪ್ರಾತ್ಯಕ್ಷಿಕೆ ಗೆ ಆಗಮಿಸಲಿದ್ದಾರೆ.
ಈ ಬೃಹತ್ ಶಿಬಿರದ ಲಾಭವನ್ನು ಹೆಚ್ಚಿನ ಕನ್ನಡಿಗರು ಪಡೆದುಕೊಳ್ಳಬೇಕೆಂದು ಡಾ. ಸದಾನಂದ ಶೆಟ್ಟಿ ಹಾಗೂ ಕನ್ನಡ ಸಂಘ ಸಯನ್ ಇದರ ಎಲ್ಲಾ ಪದಾಧಿಕಾರಿಗಳು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ.
ಈ ಸಂಘದ ಹುಟ್ಟಿಗೆ ಕಾರಣೀಭೂತರಾದ ಶ್ರೀ ಹ್ಯಾರಿ ಸಿಕ್ವೇರಾ, ಶ್ರೀ ದಯಾನಂದ ಮೂಲ್ಯ, ಶ್ರೀ ಜಯಶೀಲ ಮೂಲ್ಯ, ಶ್ರೀ ಉಮೇಶ್ ಶೆಟ್ಟಿ, ಕುಕ್ಕೂಂದೂರು ಮೊದಲಾದವರು ಸೇರಿ ಡಾ.ಸದಾನಂದ ಶೆಟ್ಟಿ, ಅಜಂತಾ ಕಾಟರರ್ಸ್ ನ ಮಾಲಕ, ಉದ್ಯೋಗಪತಿ ಶ್ರೀ ಜಯರಾಮ ಶೆಟ್ಟಿ, ಅಂತರಾಷ್ಟ್ರೀಯ ಖ್ಯಾತಿಯ ಪುರೋಹಿತರಾದ ಶ್ರೀ ಎಂ.ಜೆ ಪ್ರವೀಣ್ ಭಟ್ , ಲಕ್ಷೀಕಾಟರರ್ಸ್ ನ ಶ್ರೀ ಸತೀಶ್ ಶೆಟ್ಟಿ, ರಾಜಕೀಯ ಮುಂದಾಳುಗಳಾದ ಸದಾಶಿವ ಬಿ.ಎನ್. ಶೆಟ್ಟಿ ಹಾಗೂ ಭಾಸ್ಕರ ಶೆಟ್ಟಿ , ಪ್ರಸಿದ್ಧ ಹೋಟೆಲ್ ಉದ್ಯಮಿ ಶ್ರೀ ದಿನೇಶ್ ಶೆಟ್ಟಿ , ಸದಾನಂದ ಶೆಟ್ಟಿ ಕಮಾನಿ ಮೊದಲಾದ ಅನೇಕ ಗಣ್ಯರನ್ನು ಒಗ್ಗೂಡಿಸಿ ಸಂಘದ ಸ್ಥಾಪನೆಗೆ ಶ್ರಮಿಸಿದ ಫಲವಾಗಿ ಅಕ್ಟೋಬರ್ 2023 ರಲ್ಲಿ ಸಯನ್ ನಲ್ಲಿ ಕನ್ನಡ ಸಂಘದ ಉದಯವಾಯಿತು. ಶ್ರೀ ಎಂ ಜೆ ಪ್ರವೀಣ್ ಭಟ್ ಅವರು ಅಧ್ಯಕ್ಷರಾಗಿ ಸಂಘದ
ಚುಕ್ಕಾಣಿಯನ್ನು ಹಿಡಿದರು. ಎಲ್ಲರೂ ಜೊತೆಗೂಡಿ ಸಂಘದ ಬಲವರ್ಧನೆಗಾಗಿ ಶ್ರಮಿಸುತ್ತಿದ್ದು ಕಳೆದ ಅಕ್ಟೋಬರ್ ನಲ್ಲಿ ಸಂಘವು ಪ್ರಥಮ ವಾರ್ಷಿಕೋತ್ಸವವನ್ನು ಬಂಟರ ಭವನದಲ್ಲಿ ಅದ್ದೂರಿಯಾಗಿ ಆಚರಿಸಿತು.
ಅಧ್ಯಕ್ಷರ ಮುಂದಾಳತ್ವದಲ್ಲಿ 27/10/2024 ರಂದು
ಪ್ರಥಮ ಬಾರಿಗೆ ದುಬೈಯ ನಾಟಕ ತಂಡ ಮುಂಬಯಿಗೆ ಆಗಮಿಸಿ ಬಂಟರ ಭವನದಲ್ಲಿ ನಡೆದ ಪ್ರಥಮ ವಾರ್ಷಿಕೋತ್ಸವಕ್ಕೆ ರಂಗೇರಿಸಿತು. ಈ ಕಾರ್ಯಕ್ರಮವು ಅಪಾರ
ಜನಮೆಚ್ಚುಗೆಯನ್ನು ಗಳಿಸಿತು.
ಕಳೆದ ಒಂದು ವರ್ಷದಲ್ಲಿ ಭಜನಾ ಕಾರ್ಯಕ್ರಮ, ತಾಳಮದ್ದಳೆ, ಅರಿಶಿನ ಕುಂಕುಮ, ಆಟಿಡೊಂಜಿ ದಿನ, ಕರ್ನಾಟಕ ರಾಜ್ಯೋತ್ಸವ ದಿನಾಚರಣೆ…. ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಸಂಘವು ಸಂಘದ ಗಣ್ಯರ ಸಹಕಾರದಿಂದ ನಡೆಸಿಕೊಂಡು ಬಂದಿದೆ.
ಸಾಮಾಜಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳನ್ನು ಉತ್ತೇಜಿಸವುದು, ವೈದ್ಯಕೀಯ ನೆರವು ನೀಡುವುದು, ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸುವುದು, ಸದಸ್ಯರ ನಡುವೆ ಸಾರ್ವತ್ರಿಕ ಸಹೋದರತ್ವವನ್ನು, ಒಗ್ಗಟ್ಟನ್ನು ಹಾಗೂ ಸಹಕಾರವನ್ನು ಪ್ರೋತ್ಸಾಹಿಸುವುದು, ಜನಹಿತ ಕಾರ್ಯಗಳನ್ನು ರಚನಾತ್ಮಕವಾಗಿ ನಡೆಸುವ ಸದುದ್ದೇಶಗಳನ್ನು ಹೊಂದಿರುವ ಕನ್ನಡ ಸಂಘ ಸಯನ್ ಮುಂಬರುವ ದಿನಗಳಲ್ಲಿ ಉತ್ತರೋತ್ತರ ಅಭಿವೃದ್ಧಿಯನ್ನು ಹೊಂದಲೆಂದು ಹಾರೈಸೋಣ.