
ಮುಂಬಯಿ ಪೆ13. ಕಳೆದ ೧೫ ವರ್ಷಗಳಿಂದ ಸಾಹಿತ್ಯ, ಜಾನಪದ, ಧಾರ್ಮಿಕ, ಸಾಮಾಜಿಕ ಕಾರ್ಯಗಳನ್ನು ತನ್ನ ಇತಿ-ಮಿತಿಯೊಳಗೆ ನಡೆಸುತ್ತ ಬಂದಿರುವ ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನವು ಸಾಮಾಜಿಕ ಕಳ-ಕಳಿಯ ಕಾರ್ಯವಾದ ಅವೈಜ್ಞಾನಿಕ ವಿದ್ಯುತ್ ತಂತಿ ಎಳೆಯುವುದರಿಂದ ಆಗುವ ಜೀವಹಾನಿ ಹಾಗೆ ವನ್ಯಜೀವಿಗಳ ಸಾವಿನ ಕುರಿತು ಜನಜಾಗೃತಿ ಅಭಿಯಾನದಡಿಯಲ್ಲಿ ಸಂಬಂಧಿಸಿದ ಇಲಾಖೆಗೆ ಆಧಾರ ಸಹಿತ ಮಾಹಿತಿ ನೀಡಿರುವುದಲ್ಲದೆ ಜನಪ್ರತಿನಿಧಿಗಳಿಗೂ ದಾಖಲೆ ಸಮೇತ ಮಾಹಿತಿ ನೀಡಿ ಕ್ರಮ ಕೈಗೊಳ್ಳಲು ವಿನಂತಿಸಿರುವುದಲ್ಲದೆ ಪತ್ರಿಕಾಗೋಷ್ಠಿ, ಸಹಿ ಅಭಿಯಾನದಂತಹ ಕಾರ್ಯವನ್ನು ಕೈಗತ್ತಿಕೊಂಡಿರುವೆವು.
ಅಡುಗೂಲಜ್ಜಿಯ ಕಥಾ ಕಮ್ಮಟ, ಒಗಟುಗಳು ಹಾಗೂ ಜಾನಪದ ವೈಭವ, ವೇದದಲ್ಲಿ ರಾಷ್ಟ್ರೀಯತೆ, ಗಾದೆಗಳ ವೈಭವ, ಋಷಿ ಪರಂಪರೆ ಹಾಗೂ ಸನಾತನ ಧರ್ಮ, ತವರು ಮನೆಯ ಬಾಂಧವ್ಯ, ಮದುವೆ ಹಾಗೂ ಸಾಮಾಜಿಕ ಜವಾಬ್ದಾರಿ . ಅಲ್ಲದೆ ಪೌರಾಣಿಕ, ಜಾನಪದ, ಸಾಮಾಜಿಕ ವಿಷಯಗಳ ಮಂಥನಕ್ಕೆ ಸಂಬಂಧಿಸಿದ ವಿಚಾರಗೋಷ್ಠಿ, ನಾಟಕ, ಯಕ್ಷಗಾನ ಕಾರ್ಯಕ್ರಮಗಳನ್ನು ನಿರಂತರ ನಡೆಸುತ್ತ ಬಂದಿರುವೆವು.
ಸಾಹಿತ್ಯಿಕವಾಗಿ ಅಪರೂಪದ ಐತಿಹಾಸಿಕ ಜಾನಪದ, ಪೌರಾಣಿಕ, ಸಾಮಾಜಿಕ ಚಿಂತನೆಯ ಕೃತಿಗಳನ್ನು ಪ್ರಕಟಿಸಿ ಓದುಗರಿಗೆ ಹಾಗೆ ಸಾಹಿತ್ಯ ಲೋಕಕ್ಕೆ ತಲುಪಿಸಿರುವೆವು. ಹಾಗೆ ಸಾಮಾಜಿಕ ಕ್ಷೇತ್ರದ ಸಾಧಕರಿಗೆ ಪ್ರತಿ ವರ್ಷ” ಚಕ್ರಧಾರಿ” ಪ್ರಶಸ್ತಿ, ಕೃಷಿ ಸಾಧಕರಿಗೆ” ಕೃಷಿ ಬಂಧು” ಪುರಸ್ಕಾರ ನೀಡಿ ಗೌರವಿಸುವುದಲ್ಲದೆ, ೫೪ ವರ್ಷ ರಾಜ್ಯವಾಳಿ ವಿಶ್ವದಲ್ಲೇ ದಾಖಲೆ ನಿರ್ಮಿಸಿದ ಕರಿಮೆಣಸಿನ ರಾಣಿ ಚೆನ್ನಭೈರಾದೇವಿ ಹೆಸರಿನಲ್ಲಿ ಪ್ರತಿ ವರ್ಷ ಕಾರ್ಯಕ್ರಮ ಹಮ್ಮಿಕೊಳ್ಳುವುದರೊಂದಿಗೆ ಚೆನ್ನಭೈರಾದೇವಿ ಹೆಸರಿನಲ್ಲಿ ಪ್ರಶಸ್ತಿಯನ್ನು ಸಾಧಕ ಮಹಿಳೆ ಯಾ ಸಾಮಾಜಿಕ ಸಂಸ್ಥೆಗೆ ನೀಡುತ್ತ ಬಂದಿರುವೆವು. ಕಳೆದ ೧೫ ವರ್ಷಗಳಿಂದ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನವು ೧೫ನೆಯ ವಾರ್ಷಿಕ ಸಮಾವೇಶವನ್ನು ಇದೇ ದಿನಾಂಕ ೧೬.೦೨.೨೫ರ ರವಿವಾರ ಇಳಿಹೊತ್ತು 03/.30ರಿಂದ ಮೆಹತಾ ಕಾಲೇಜ್, ಸೆಕ್ಟರ್- ೧೯, ಐರೋಲಿ ಇಲ್ಲಿ ಹಮ್ಮಿಕೊಂಡಿದೆ.
ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಸುರೇಶ ಭಂಡಾರಿ ಕಡಂದಲೆ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ವೇದಮೂರ್ತಿ ಹರಿದಾಸ ಭಟ್ ವಿದ್ಯಾವಿಹಾರ, ಸಂತೋಷ ಜಿ. ಶೆಟ್ಟಿ ಪನ್ವೇಲ್, ಟಿ. ಆರ್. ಮಧುಸೂದನ, ಅಮಿತಾ ಭಾಗವತ್, ವಿ.ಎನ್.ಹೆಗಡೆ ಭಾಗವಹಿಸಲಿದ್ದಾರೆ. ವಿವಿಧ ನೃತ್ಯ ತಂಡದವರಿಂದ ನೃತ್ಯ ವೈಭವ, ಮಾತೃಭಾಷಾಪ್ರೇಮ ಹಾಗೂ ಸಂಘಟನೆ ಕುರಿತಾದ ಅನುಭವಿ ಲೇಖಕರ ಬರಹದಿಂದ ಕೂಡಿದ “ಹೊರನಾಡಿನಲ್ಲಿ ತುಳುವರು” ಕೃತಿ ಲೋಕಾರ್ಪಣೆ ಅಲ್ಲದೆ ವಿಷ್ಣು ಭಟ್ ಹೊಸ್ಮನೆ ಕಥೆ ಆಧಾರಿತ ಯುದ್ಧಭೂಮಿಯ ನೈಜ ಚಿತ್ರಣದ ಅನಾವನಣ ಹಾಗೂ ಹುತಾತ್ಮ ಯೋದನ ಪತ್ನಿಯ ರೋಧನ, ಮುಂದೆ ಆಕೆ ಸಂಬಂಧಿಸಿದವರಲ್ಲಿ ಪ್ರಶ್ನಿಸುವ ಎದೆಗಾರಿಕೆಯನ್ನೊಳಗೊಂಡ ಪೌರಾಣೆಕ ನಾಟಕ ಸೂರ್ಯಪ್ರಭೆ” ಪ್ರದರ್ಶನಗೊಳ್ಳಲಿದೆ. ನಾಟಕ ರಚನೆ : ವಿಶ್ವನಾಥ ದೊಡ್ಮನೆ, ನಿರ್ದೇಶನ ಅಶೋಕ ಕುಮಾರ ಕೊಡ್ಯಡ್ಕ ಪ್ರಸ್ತುತಿ ಕೋಡ್ಯಡ್ಕ ಕ್ರಿಯೇಷನ್.
ಈ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ಉಪಸ್ಥಿತರಿರಬೇಕಾಗಿ ಪ್ರತಿಷ್ಠಾನದ ಉಪಾಧ್ಯಕ್ಷ ರಾಜೇಶ್ ಗೌಡ, ಗೌರವ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ದೊಡ್ಮನೆ ಮತ್ತು ಪದಾಧಿಕಾರಿಗಳು ವಿನಂತಿಸಿದ್ದಾರೆ.
“ಚಕ್ರಧಾರಿ ಪ್ರಶಸ್ತಿ” ಪುರಸ್ಕೃತ ಡಾ| ಸುರೇಂದ್ರ ಕುಮಾರ ಹೆಗ್ಡೆ : ಜನನ ಹಾಗೂ ಆರು ವರ್ಷದೊಳಗಣ ಆಡೊಂಬಲ ದೇವಭೂಮಿ ಪ್ರಯಾಗರಾಜ್ ನಲ್ಲಾಯಿತು. ಮುಂದೆ ಪರಮಹಂಸರಂತ ಪುಣ್ಯಪುರುಷರು ನಡೆದಾಡಿದ ಕೊಲ್ಕೊತ್ತಾ ನಂತರ ನಮ್ಮದೇ ವಿಶ್ವ ಪ್ರಸಿದ್ಧ ಮೂಡಬಿದ್ರೆಯಲ್ಲಿ ಮುಂದಿನ ಬಾಲ್ಯದ ಆಡೊಂಬಲ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ. ಅಂದಿನ ದಿನಗಳೇ ಹಾಗೆ ಮನೆ ತುಂಬ ಮಕ್ಕಳು. `ಉಡಲಿಕ್ಕಿದ್ದರೆ ಉಣ್ಣಲಿಕ್ಕಿಲ್ಲ ಉಣ್ಣಲ್ಲಿಕ್ಕಿದ್ದರೆ ಉಡಲಿಕ್ಕಿಲ್ಲ ಎರಡೂ ಇದ್ದರೆ ಹೊದೆಯೋಕಿಲ್ಲದ’ ಆ ದಿನಗಳಲ್ಲಿ ಹೆತ್ತೊಡಲ ಪ್ರೀತಿಯ ಒರತೆಗೆ ಕಡಿಮೆ ಇರಲಿಲ್ಲ. ಆ ದಿನಗಳನ್ನು ನೆನಪಿಸಿಕೊಂಡರೆ ಅದು ವಿದ್ಯಾರ್ಥಿಗಳ (ಮಕ್ಕಳ) ಪಾಲಿನ “ಸುವರ್ಣಯುಗ”. ಅಂತಹ ಸುವರ್ಣಯುಗದಲ್ಲಿ ಬಾಲ್ಯ ಕಳೆದ ಡಾ. ಸುರೇಂದ್ರ ಕುಮಾರ ಹೆಗ್ಡೆ ಪ್ರಾರಂಭದಿಂದಲೂ ಆಟೋಟಗಳಲ್ಲಿ ಶಾಲೆಗೆ, ಊರಿಗೆ ಕೀರ್ತಿ ತಂದವರು. ಪಠ್ಯೇತರ ಚಟುವಟಿಕೆಗಳನ್ನು ಜೀವನದುದ್ದಕ್ಕೂ ಮುಂದುವರೆಸಿಕೊಂಡು ಬಂದಿರುವ ಕಲೆ ಹಾಗು ಸಂಘಟನಾ ಕ್ಷೇತ್ರದ ದೊಡ್ಡ ಪ್ರತಿಭೆ, ಭಾಷಣ, ನಿರೂಪಣೆ, ನಾಟಕ, ಯಕ್ಷಗಾನ, ಯೋಗ, ಕೃಷಿ, ಕರಾಟೆ, ಉದ್ದಿಮೆ, ಸಂಘಟನೆ.ಹೀಗೆ ವಿವಿಧ ಕ್ಷೇತ್ರದಲ್ಲಿ ಬಾಲ್ಯದ ಉತ್ಸಾಹವನ್ನು ಇಂದಿಗೂ ಉಳಿಸಿಕೊಂಡಿರುವ ಅವರಿಗೆ ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ೨೦೨೫ ನೇ ಸಾಲಿನ “ಚಕ್ರಧಾರಿ” ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಐರೋಳಿಯ ಜ್ಞಾನವಿಕಾಸ ಮಂಡಳ ಹಾಗೂ ತುಳುಕೂಟ ಅಸಲ್ಪ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರಬೇಕಾಗಿ ಪ್ರತಿಷ್ಠಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
“ಕೃಷಿ ಬಂಧು” ಪುರಸ್ಕಾರ ಭಾಜನರು ಶ್ರೀ ಉಮಾಮಹೇಶ್ವರ ಹೆಗಡೆ :
ಹೊನ್ನಾವರ ತಾಲೂಕಿನ ಸಾಲ್ಕೋಡ ಗ್ರಾಮದ ಕಲ್ಲರೆಮನೆ ಶಿವರಾಮ ಹೆಗಡೆಯವರದ್ದು ೧೬ ಜನ ಮಕ್ಕಳ ತುಂಬು ಸಂಸಾರ. ಮಕ್ಕಳ ಭವಿಷ್ಯಕ್ಕಾಗಿ ಮರುಭೂಮಿಯಂತಹ ಪ್ರದೇಶವನ್ನೆ ಹಸನಾಗಿಸಿ ತನ್ನ ಕರುಳ ಕುಡಿಗಳಿಗೆ ದಾರಿತೋರಿಸಿದ ಕರ್ಮಯೋಗಿ ಶಿವರಾಮ ಹೆಗಡೆ. ನಮ್ಮ ಈ ವರ್ಷದ “ಕೃಷಿ ಬಂಧು” ಪುರಸ್ಕಾರಕ್ಕೆ ಶಿವರಾಮ ಹೆಗಡೆಯವರ ಹದಿಮೂರನೆ ಮಗನಾಗಿರುವ ಉಮಾಮಹೇಶ್ವರ ಹೆಗಡೆ ಅವರನ್ನು ಆಯ್ಕೆ ಮಾಡಲಾಗಿದೆ. ತನ್ನ ಬಾಲ್ಯ ಹಾಗೂ ಶಿಕ್ಷಣವನ್ನು ಹುಟ್ಟೂರಿನಲ್ಲಿ ಕೃಷಿ ಜೀವನದೊಂದಿಗೆ ಪೂರೈಸಿದರು. ಪದವಿ ನಂತರ ಮುಂಬೈಗೆ ಬಂದ ಇವರು ಮೂರುವರೆ ದಶಕಗಳ ಕಾಲ ಲೆಕ್ಕಪರಿಶೋಧಕರಾಗಿ ಕಾರ್ಯನಿರ್ವಹಿಸಿ ನಿವೃತಿಯ ನಂತರ ಮತ್ತೆ ಕೃಷಿಗೆ ಮರಳಿದರು. ಅವರ ಕೃಷಿ ಚಟುವಟಿಕೆಗಳನ್ನು ಗಮನಿಸಿ ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ೨೦೨೫ ನೇ ಸಾಲಿನ “ಕೃಷಿ ಬಂಧು” ಪುರಸ್ಕಾರ ನೀಡಿ ಗೌರವಿಸುತ್ತಿದೆ.
ಎಂ.ಎಸ್. ಭೂಮ ರೆಡ್ಡಿ :
ತಮ್ಮ ಬಾಲ್ಯವನ್ನು ಅಕ್ಷರಕಾಶಿ ಗದಗದಲ್ಲಿ ಕಳೆದ , ಉನ್ನತ ಶಿಕ್ಷಣವನ್ನು ಹುಬ್ಬಳ್ಳಿ-ಧಾರವಾಡದಲ್ಲಿ ಪೂರೈಸಿ ಮುಂಬೈ ಸನಿಹದ ಥಾಣಾವನ್ನು ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡ ೧೯೭೪ರಲ್ಲಿ ಜ್ಞಾನವಿಕಾಸ ಮಂಡಳ (ಶಿಕ್ಷಣಸಂಸ್ಥೆ) ಗೆ ನಾಂದಿ ಹಾಡಿ ನಿರಂತರ ೫೦ ವರ್ಷಗಳಿಂದ ಅದರ ಏಳಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು. ಚೆಂಬೂರಿನ ಬಸವೇಶ್ವರ ಫಿಲಾಸಫಿಕಲ್ ಕಲ್ಬರಲ್ ಸೊಸಾಯ್ಟಿ ಟ್ರಸ್ಟಿಯಾಗಿ, ೧೯೭೩ರಲ್ಲಿ ಸ್ಥಾಪಿತವಾದ ವೀರಶೈವ ಕೊ. ಅ. ಬ್ಯಾಂಕ್‌ನ ಚೇರ್‌ಮೆನ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಕಳೆದ ೫ ದಶಕದಿಂದ ನಾಡು-ನುಡಿಯ ಸೇವೆ ಸಲ್ಲಿಸುತ್ತಿದ್ದಾರೆ. ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ತನ್ನ ೧೫ ನೇ ವಾರ್ಷಿಕೋತ್ಸವದ ಶುಭವಸರದಲ್ಲಿ ಇವರನ್ನು ಗೌರವಿಸುತ್ತಿದೆ.
——-