30.5 C
Mumbai
June 8, 2026
Mumbai News Kannada
ಪ್ರಕಟಣೆ

ಜನವರಿ 2 ರಿಂದ 12 ರವರೆಗೆ ರಂಗ್ ದ ರಾಜೆ ಸುಂದರ್ ರೈ ಮಂದಾರ ಸಾರಥ್ಯದ ‘ಅಮ್ಮ ಕಲಾವಿದೆರ್ ಕುಡ್ಲ’ ತಂಡದಿಂದ ‘ಆನ್ ಮಗೆ’ ನಾಟಕದ ಮುಂಬೈ, ಪುಣೆ ಪ್ರದರ್ಶನ





​ಮುಂಬೈ ಮತ್ತು ಪುಣೆ ಮಹಾನಗರಗಳು ಕೇವಲ ವಾಣಿಜ್ಯ ಮತ್ತು ಸಂಪತ್ತಿನ ಕೇಂದ್ರಗಳಾಗಿರದೆ, ಕಲೆ ಮತ್ತು ಕಲಾವಿದರಿಗೆ ಸದಾ ಆಶ್ರಯತಾಣಗಳಾಗಿವೆ. ಯಕ್ಷಗಾನ, ನಾಟಕಗಳಂತಹ ಕಲಾಪ್ರಸ್ತುತಿಗೆ ಅವಕಾಶ ನೀಡಿ, ಕಲಾವಿದರನ್ನು ಸದಾ ಪ್ರೋತ್ಸಾಹಿಸುವ ಕಲಾಭಿಮಾನಿಗಳು ಈ ಮಹಾನಗರಗಳಲ್ಲಿದ್ದಾರೆ. ಕಲಾಕಾರರಿಗೆ ಮುಂಬೈ ಪ್ರವಾಸವೆಂದರೆ ಒಂದು ಉಲ್ಲಾಸ. ಸದಾ ಒತ್ತಡದ ಬದುಕಿನಲ್ಲಿರುವ ಮುಂಬೈ ಕಲಾಭಿಮಾನಿಗಳಿಗೆ ತಮ್ಮ ತಾಯ್ನೆಲದ ಸಂಸ್ಕೃತಿ, ಕಲಾ ಪ್ರೌಢಿಮೆ ಮತ್ತು ಹಾಸ್ಯದೊಂದಿಗೆ ಮನಸ್ಸು ಹಗುರಗೊಳಿಸಲು ನಾಟಕಗಳು ಉತ್ತಮ ಮಾಧ್ಯಮ.

​ಸಂಘಟಕರಾದ ತ್ರಿರಂಗ ಸಂಗಮದ ಕರ್ನೂರು ಮೋಹನ್ ರೈಯವರು ಊರಿನ ಯಕ್ಷಗಾನ ಮೇಳಗಳನ್ನು ಮತ್ತು ತುಳು ನಾಟಕ ತಂಡಗಳನ್ನು ಮುಂಬೈಗೆ ಕರೆಸಿ ವಿವಿಧ ಕಡೆಗಳಲ್ಲಿ ಪ್ರದರ್ಶನ ಏರ್ಪಡಿಸುವ ಮೂಲಕ ಊರಿನ ಕಲಾನೈಪುಣ್ಯತೆಯನ್ನು ಮುಂಬೈ ಜನತೆಗೆ ಪರಿಚಯಿಸುತ್ತಿದ್ದಾರೆ. ಅವರ ಸಂಚಾಲಕತ್ವದಲ್ಲಿ ಈ ಬಾರಿಯೂ ಮಂಗಳೂರಿನ ಮತ್ತೊಂದು ಪ್ರಸಿದ್ಧ ಮತ್ತು ಬಹುಬೇಡಿಕೆಯ ನಾಟಕ ತಂಡವಾದ ಅಮ್ಮ ಕಲಾವಿದೆರ್ ಕುಡ್ಲ ಮುಂಬೈ ಮತ್ತು ಪುಣೆ ನಗರಗಳಿಗೆ ಆಗಮಿಸಲಿದೆ.

​ ಅಮ್ಮ ಕಲಾವಿದೆರ್ ಕುಡ್ಲ ತಂಡದ ಹಿನ್ನೆಲೆ

​ಅಮ್ಮ ಕಲಾವಿದೆರ್ ಕುಡ್ಲ ತಂಡವು ಹಲವು ವರ್ಷಗಳಿಂದ ಪ್ರತಿಭಾವಂತ ಕಲಾವಿದರ ಸಂಗಮದಿಂದ ಪ್ರತಿ ವರ್ಷ ಹೊಸ ಕಥಾವಸ್ತುವಿನೊಂದಿಗೆ ಕಾಸರಗೋಡು, ದಕ್ಷಿಣ ಕನ್ನಡ, ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲೂ ನಾಟಕ ಪ್ರದರ್ಶನಗಳ ಮೂಲಕ ಹೆಸರುವಾಸಿಯಾಗಿದೆ. ಈ ತಂಡದ “ಮದಿಮೆದ ದುಂಬುನಾನಿ”, “ಪರಕೆ ಪೂವಕ್ಕೆ”, “ಅಲೇ ಬುಡಿಯೆರ್ಗೆ”, “ಗಿರಿಗಿಟ್ ಗಿರಿಧರೆ”, “ಜಗತ್ತೇ ಶೂನ್ಯ ಸ್ವಾಮಿ”, “ಅಮ್ಮೆರ್” ಮುಂತಾದ ನಾಟಕಗಳು ನೂರಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿವೆ. ಅದರಲ್ಲಿ “ಅಮ್ಮೆರ್” ನಾಟಕವು ಕಳೆದ ವರ್ಷ ಮುಂಬೈ ಮತ್ತು ಪುಣೆ ನಗರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿತ್ತು.

​ ‘ಆನ್ ಮಗೆ’ ನಾಟಕದ ಪ್ರದರ್ಶನ ವಿವರ

​ತ್ರಿರಂಗ ಸಂಗಮದ ಕರ್ನೂರು ಮೋಹನ್ ರೈಯವರ ಸಂಚಾಲಕತ್ವದಲ್ಲಿ, ಶಿವಾನಂದ ಶೆಟ್ಟಿ ಮಂಗಲ್ಪಾಡಿಯವರ ಯಜಮಾನಿಕೆಯ ಅಮ್ಮ ಕಲಾವಿದೆರ್ ಕುಡ್ಲ ತಂಡವು, ಜನವರಿ 2 ರಿಂದ 12 ರವರೆಗೆ ಮುಂಬೈ ಮತ್ತು ಪುಣೆ ನಗರಗಳಲ್ಲಿ ಪ್ರದರ್ಶನ ನೀಡಲಿದೆ.

ರಂಗ್ ದ ರಾಜೆ ಸುಂದರ್ ರೈ ಮಂದಾರ ಅವರ ಸಾರಥ್ಯದಲ್ಲಿ ಮತ್ತು ರವಿ ಎಮ್.ಎಸ್. ವರ್ಕಾಡಿಯವರ ಸಮಗ್ರ ನಿರ್ವಹಣೆಯೊಂದಿಗೆ ಈಗಾಗಲೇ ಊರಿನಾದ್ಯಂತ ಯಶಸ್ವಿ ಪ್ರದರ್ಶನ ಕಂಡಿರುವ ಹಾಸ್ಯಮಯ ನಾಟಕ “ಆನ್ ಮಗೆ” ಈ ಬಾರಿ ಮಹಾನಗರಗಳ ರಂಗವೇರಲಿದೆ.

​ಕಾಸರಗೋಡು ಜಿಲ್ಲೆಯ ಮಂಜೇಶ್ವರ ಸಮೀಪದ ವರ್ಕಾಡಿಯಲ್ಲಿ ನಡೆದ ನಿಜ ಘಟನೆಯನ್ನಾಧರಿಸಿ ಸೋಮನಾಥ ಶೆಟ್ಟಿ ಮಂಗಲ್ಪಾಡಿಯವರು ಈ ನಾಟಕವನ್ನು ರಚಿಸಿದ್ದಾರೆ. ಈ ಬಾರಿಯ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ರಂಗ್ ದ ರಾಜೆ ಸುಂದರ್ ರೈ ಮಂದಾರರವರು ನಿರ್ದೇಶನದ ಜೊತೆಗೆ ಮೂರು ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸುತ್ತಿರುವುದು ನಾಟಕದ ಮತ್ತೊಂದು ವಿಶೇಷ. ತಂದೆ, ತಾಯಿ ಹಾಗೂ ಮಗನ ಪಾತ್ರದಲ್ಲಿ ಕೇವಲ ಎರಡು ನಿಮಿಷದ ಅವಧಿಯಲ್ಲಿ ಮಂದಾರರವರು ರಂಗದಲ್ಲಿ ಮಿಂಚುವ ದೃಶ್ಯ ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿಸುತ್ತದೆ.

​ಸಾಮಾಜಿಕ ಪಿಡುಗಿನಿಂದ ದಾರಿ ತಪ್ಪುವ ಯುವ ಜನಾಂಗದಿಂದ ಕುಟುಂಬದ ಮೇಲೆ ಆಗುವ ದುಷ್ಪರಿಣಾಮವನ್ನು ‘ಆನ್ ಮಗೆ’ ನಾಟಕವು ಬಹಳ ಮಾರ್ಮಿಕವಾಗಿ ತೋರಿಸುತ್ತದೆ. ಪ್ರಸ್ತುತ ಕಾಲಘಟ್ಟಕ್ಕೆ ಅನುಗುಣವಾಗಿ ಹೆಣೆಯಲಾದ ಕಥಾವಸ್ತುವಿಗೆ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ದೊರಕಿದೆ.

​ ತಾಂತ್ರಿಕ ಮತ್ತು ಕಲಾವಿದರ ಬಳಗ

  • ಸಂಗೀತ: ರವಿ ಸುಂಕದಕಟ್ಟೆ
  • ಧ್ವನಿ ಮತ್ತು ಬೆಳಕು: ದೇವದಾಸ್ ಕಜೆಕಾರ್ ಹಾಗೂ ಅಶ್ರಫ್ ಸುಂಕದಕಟ್ಟೆ
  • ರಂಗಾಲಂಕಾರ: ಮಹೇಶ್ ಚೇವಾರು ಹಾಗೂ ಪ್ರವೀಣ್ ನೆಲ್ಯಾಡಿ
  • ವರ್ಣಾಲಂಕಾರ: ಪ್ರಸಾದ್ ಕೊಯಿಲ
  • ಹಾಡಿನ ಸಾಹಿತ್ಯ: ನಿತಿನ್ ಹೊಸಂಗಡಿ ಹಾಗೂ ಸುರೇಶ್ ಸರಪಾಡಿ
  • ಹಿನ್ನೆಲೆ ಗಾಯನ: ಖ್ಯಾತ ಹಿನ್ನೆಲೆ ಗಾಯಕಿ ಉಜ್ವಲಾ ಆಚಾರ್ಯ, ಶಮೀರ್ ಮುಡಿಪು, ಸೋಮನಾಥ ಶೆಟ್ಟಿ ಮಂಗಲ್ಪಾಡಿ

ಪಾತ್ರವರ್ಗದಲ್ಲಿ: ಕುಸಲ್ದ ಮುತ್ತು ಅರುಣ್ ಚಂದ್ರ ಬಿಸಿ ರೋಡು, ಚಂದ್ರಹಾಸ್ ಶೆಟ್ಟಿ ಮಾಣಿ, ಜಗನ್ನಿವಾಸ ಶೆಟ್ಟಿ ಮಂಗಲ್ಪಾಡಿ, ರವಿ ಎಂ.ಎಸ್. ವರ್ಕಾಡಿ, ಸೋಮನಾಥ ಶೆಟ್ಟಿ ಮಂಗಲ್ಪಾಡಿ, ನಿತಿನ್ ಹೊಸಂಗಡಿ, ರಂಜನ್ ಬೋಳೂರು, ಜೂನಿಯರ್ ಬೋಳಾರ್ ನೇಮಿರಾಜ್, ಸುರೇಶ್ ಸರಪಾಡಿ, ಕಾಮಿಡಿ ಕಿಲಾಡಿ ಖ್ಯಾತಿಯ ಪಿಂಕಿರಾಣಿ, ಕವಿತಾ ಮಂಗಳೂರು ಇವರು ಅಭಿನಯಿಸಲಿದ್ದಾರೆ.

​ಮುಂಬೈ ಹಾಗೂ ಪುಣೆ ನಗರಗಳಲ್ಲಿ ನಾಟಕ ಪ್ರದರ್ಶನಗಳು ಜರುಗಲಿದ್ದು, ನಾಟಕವನ್ನು ಪ್ರಾಯೋಜಿಸಲು ಬಯಸುವವರು ತಂಡವನ್ನು ಸಂಪರ್ಕಿಸಬಹುದು.

ಸಂಪರ್ಕ:

  • ಸುಂದರ್ ರೈ ಮಂದಾರ: 9980202308
  • ಕರ್ನೂರು ಮೋಹನ್ ರೈ: 8356982715

ಬರಹ: ಸೋಮನಾಥ್ ಮಂಗಲ್ಪಾಡಿ



Related posts

ನೈನ್ ಹ್ಯಾಂಡ್ಸ್ ಫೌಂಡೇಶನ್ ಮುಂಬಯಿ: ಜು. 13ಕ್ಕೆ ಮಕ್ಕಳ ವಾರ್ಷಿಕ ಶಾಲಾ ಶುಲ್ಕ ವಿತರಣಾ ಕಾರ್ಯಕ್ರಮ

Mumbai News Desk

ಮೀರಾಗಾಂವ್: ಜ.1ರಂದು ಸಾರ್ವಜನಿಕ ಶ್ರೀ ಸತ್ಯನಾರಾಯಣ ಮಹಾಪೂಜೆ

Mumbai News Desk

ಜ.13ಕ್ಕೆ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯ 63ನೇ ವಾರ್ಷಿಕ ದಿನಾಚರಣೆ

Mumbai News Desk

ಮೊಗವೀರ ಮಹಾಜನ ಸೇವಾ ಸಂಘ, ಬಗ್ವಾಡಿ ಹೋಬಳಿ :ಫೆಬ್ರವರಿ 18 ರಂದು ಡೊಂಬಿವಲಿ ಸ್ಥಳೀಯ ಸಮಿತಿವತಿಯಿಂದ ಮಹಿಳಾ ಸದಸ್ಯರಿಗಾಗಿ ಹೂವಿನ ರಂಗೋಲಿ ಸ್ಪರ್ಧೆ :

Mumbai News Desk

ಹವ್ಯಕ ವೆಲ್ಫೇರ್ ಟ್ರಸ್ಟ್ ನ ಸಂಯೋಜನೆಯಲ್ಲಿ ಜು. 28ಕ್ಕೆ ಯಕ್ಷಗಾನ ಪ್ರದರ್ಶನ

Mumbai News Desk

ಸೆ. 22 ರಿಂದ ಗೋರೆಗಾಂವ್‌ನ ಶ್ರೀ ಶಾಂತಾ ದುರ್ಗಾದೇವಿ ಮಂದಿರದಲ್ಲಿ ನವರಾತ್ರಿ ಮಹೋತ್ಸವ

Mumbai News Desk