ಬೆಂಗಳೂರು/ಮುಂಬಯಿ: ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇವರು ಜನವರಿಯಿಂದ ಡಿಸೆಂಬರ್ 2024 ರ ಅಂತ್ಯದವರೆಗೆ ಪ್ರಕಟವಾದ ಒಟ್ಟು 54 ಪ್ರಕಾರದ ದತ್ತಿಗಳ 58 ಪ್ರಶಸ್ತಿಗಳಿಗೆ ಕೃತಿಗಳನ್ನು ಬರಹಗಾರರಿಂದ ಆಹ್ವಾನಿಸಿದ್ದು ಫಲಿತಾಂಶ ಪ್ರಕಟವಾಗಿದೆ.
ಇದರಲ್ಲಿ ಮುಂಬಯಿಯ ಸಾಹಿತಿ ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರ ಬೆಂಗಳೂರಿನ ಸಾಹಿತ್ಯ ಸುಗ್ಗಿ ಪ್ರಕಾಶನ ಪ್ರಕಟಿಸಿದ ‘ಅದೆಲ್ಲಾ ಬಿಟ್ಟು’ ಕತಾಸಂಕಲನವು ಕೆ. ವಾಸುದೇವಾಚಾರ್ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿರುತ್ತದೆ.
ರಾಜ್ಯ, ದೇಶ ಮತ್ತು ವಿದೇಶಗಳಿಂದ ಸುಮಾರು 900 ಕೃತಿಗಳು ಸ್ಪರ್ಧೆಗೆ ಬಂದಿದ್ದು, ಡಾ. ಕೆ. ಮರುಳಸಿದ್ದಪ್ಪ ಅವರ ಅಧ್ಯಕ್ಷತೆಯಲ್ಲಿ 19 ಜನ ಪರಿಣಿತ ಸದಸ್ಯರನ್ನೊಳಗೊಂಡ ಸಮಿತಿಯಲ್ಲಿ ಆಯಾ ಪ್ರಕಾರಗಳಲ್ಲಿ ವಿದ್ವತ್ ಹೊಂದಿದ ಸದಸ್ಯರುಗಳ 5 ತಂಡಗಳನ್ನು ರಚಿಸಿ ಪುಸ್ತಕಗಳನ್ನು ಆಯ್ಕೆ ಮಾಡಲಾಯಿತು ಎಂದು ಆಡಳಿತಾಧಿಕಾರಿ ಕೆ ಎಂ ಗಾಯಿತ್ರಿ ತಿಳಿಸಿದ್ದಾರೆ. ‘ಅದೆಲ್ಲಾ ಬಿಟ್ಟು ‘ ಕತಾಸಂಕಲನಕ್ಕೆ ಕನ್ನಡದ ಪ್ರಸಿದ್ಧ ಪತ್ರಿಕೆಗಳಾದ ಪ್ರಜಾವಾಣಿ, ಕನ್ನಡಪ್ರಭ, ತುಷಾರ…. ಮೊದಲಾದ ಪತ್ರಿಕೆಗಳಲ್ಲಿ ಉತ್ತಮ ವಿಮರ್ಶೆಗಳೂ ಬಂದಿರುವುದನ್ನು ಇಲ್ಲಿ ಗಮನಿಸಬಹುದು.

ಶ್ರೀನಿವಾಸ ಜೋಕಟ್ಟೆ:
ಪತ್ರಕರ್ತ ಸಾಹಿತಿ ಜೋಕಟ್ಟೆಯವರು ಈಗಾಗಲೇ 46 ಕೃತಿಗಳನ್ನು ಪ್ರಕಟಿಸಿದ್ದು ಅವರ ಏಳು ಕೃತಿಗಳಿಗೆ ಈ ತನಕ ವಿವಿಧ ಪ್ರಶಸ್ತಿಗಳು ದೊರೆತಿವೆ. ಮಂಗಳೂರು ವಿಶ್ವವಿದ್ಯಾಲಯ ಪ್ರಸಾರಾಂಗದ ದ್ವಿತೀಯ ಬಿಕಾಂ ಪಠ್ಯದಲ್ಲೂ ಇವರ ಕತೆ ‘ಬಂಗ್ಲೆ ಮನೆಯ ಪ್ರಭು’ ಆಯ್ಕೆಯಾಗಿ ಪ್ರಕಟವಾಗಿದೆ.
ಇವರ ‘ಮಾವೋವಾದಿಗಳ ಹಿಂದೂ ರಾಷ್ಟ್ರ ನೇಪಾಳ’ ಪ್ರವಾಸ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2012 ರ ಪುಸ್ತಕ ಪ್ರಶಸ್ತಿ, ‘ಕ್ಷಮಿಸಿ ಈ ಚಿತ್ರಕ್ಕೆ ಹೆಸರಿಲ್ಲ’ ಕವನ ಸಂಕಲನಕ್ಕೆ 1999ರ ವರ್ಧಮಾನ ಸಾಹಿತ್ಯ ಪ್ರಶಸ್ತಿ, ‘ಮಾಯಾಲೋಕದ ಒಳಗುಟ್ಟುಗಳು’ ಲೇಖನಗಳ ಕೃತಿಗೆ 2011 ರಲ್ಲಿ ಬೆಂಗಳೂರಿನ ‘ಸಾಹಿತ್ಯಸೇತು’ ಪ್ರಶಸ್ತಿ, ‘ಮುಂಬಯಿ ಅಂಡರ್ವರ್ಲ್ಡ್’ ಕೃತಿಗೆ 2013 ರ ‘ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ’, ‘ಮುಂಬಯಿ ಮಿಂಚು’ ಕೃತಿಗೆ 2022 ರ ‘ವಿಕಾಸ ಪುಸ್ತಕ ಬಹುಮಾನ’, ‘ಕೊನೆಯ ಸದ್ದು’ ಕತಾಸಂಕಲನಕ್ಕೆ 2006 ರ ‘ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಸಾಹಿತ್ಯ ಪ್ರಶಸ್ತಿ’ , ಮತ್ತು ಇದೀಗ ‘ಅದೆಲ್ಲಾ ಬಿಟ್ಟು’ ಕತಾಸಂಕಲನಕ್ಕೆ ಕ.ಸಾ.ಪರಿಷತ್ ನ 2024 ರ ‘ಕೆ .ವಾಸುದೇವಾಚಾರ್ ದತ್ತಿಪ್ರಶಸ್ತಿ’ ಇವರ ಕೃತಿಗಳಿಗೆ ಲಭಿಸಿರುತ್ತದೆ.
ಅಲ್ಲದೆ ಅಗ್ನಿ ಶಿಖಾಮಂಚ್ ಪ್ರಶಸ್ತಿ, ಹೂಗಾರ ಸ್ಮಾರಕ ಮಾಧ್ಯಮ ಪ್ರಶಸ್ತಿ, ಕರ್ನಾಟಕ ಸರಕಾರದ ಗಡಿನಾಡ ಅಭಿವೃದ್ಧಿ ಪ್ರಾಧಿಕಾರದ ಮಾಧ್ಯಮ ಪ್ರಶಸ್ತಿ, ಪತ್ರಕಾರ್ ರತ್ನ ಪ್ರಶಸ್ತಿ, ಪತ್ರಕಾರ್ ಸಾಮ್ರಾಟ್ ಪ್ರಶಸ್ತಿ, ಕಾಸರಗೋಡು ಪತ್ರಕರ್ತರ ಎಡನೀರು ಶ್ರೀಗಳ ಪ್ರಶಸ್ತಿ…ತುಳುನಾಡ ಪ್ರಶಸ್ತಿ…ಇತ್ಯಾದಿ ಪ್ರಶಸ್ತಿಗಳನ್ನು ವೈಯಕ್ತಿಕ ಸ್ತರದಲ್ಲೂ ಇವರು ಪಡೆದಿರುತ್ತಾರೆ. ‘ತರಂಗ’ ವಾರಪತ್ರಿಕೆಯ ತಿಂಗಳ ಬಹುಮಾನಿತ ಕತೆ, ತುಷಾರ ಮಾಸಿಕದ ಶ್ರಾವಣ ವಿಶೇಷಾಂಕದ ‘ಮಾಸದ ಕತೆ’ , ಉತ್ಥಾನ ಕತಾಸ್ಪರ್ಧೆಯಲ್ಲಿ ಬಹುಮಾನ… ಇತ್ಯಾದಿಗಳನ್ನು ಪಡೆದಿರುವರು.
ಅವಿಭಜಿತ ದ.ಕ.ಜಿಲ್ಲಾ ಕ.ಸಾ.ಪರಿಷತ್ ನ ಸಮ್ಮೇಳನದಲ್ಲಿ ಜರಗಿದ್ದ ಕಥಾ ಮತ್ತು ಕವಿತಾ ಎರಡೂ ಸ್ಪರ್ಧೆಗಳಲ್ಲಿ (1988) ಇವರು ಪ್ರಥಮ ಬಹುಮಾನ ಪಡೆದಿದ್ದು ಇಂದಿಗೂ ಎರಡೂ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ಪಡೆದ ದಾಖಲೆ ಇವರದ್ದೇ ಆಗಿದೆ.
1988 ರಲ್ಲಿ ಬೆಂಗಳೂರಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಳ್ಳಾರಿಯಲ್ಲಿ ಒಂದು ವಾರಗಳ ಕಾಲ ಹಮ್ಮಿಕೊಂಡಿದ್ದ ಕಥಾಕಮ್ಮಟದಲ್ಲಿ ಮುಂಬಯಿ ಅಭ್ಯರ್ಥಿಯಾಗಿ ಆಯ್ಕೆಗೊಂಡು ಭಾಗವಹಿಸಿದ್ದರು.




