
ಬೆಂಗಳೂರು ಬಸವನಗುಡಿ ಗೋವರ್ಧನ ಕ್ಷೇತ್ರದಲ್ಲಿ ‘ಶ್ರೀ ಪುತ್ತಿಗೆ ವಿದ್ಯಾಪೀಠ’ ಉದ್ಘಾಟನೆ
ಬೆಂಗಳೂರು: “ಇಂದಿನ ಜನತೆಯು ಹಿಂದೆಂದಿಗಿಂತಲೂ ಬಹಿರ್ಮುಖವಾಗುತ್ತಿದ್ದು, ಆಂತರಿಕವಾಗಿ ಕುಂಠಿತವಾಗಿ ಕುಬ್ಜವಾಗುತ್ತಿದೆ. ಜೀವನದ ಪರಿಪೂರ್ಣತೆಗೆ ಆಧ್ಯಾತ್ಮಿಕತೆಯೇ ಪೂರ್ಣಕುಂಭವೆನಿಸಿದೆ. ಈ ನಿಟ್ಟಿನಲ್ಲಿ ಸಮಾಜದಲ್ಲಿ ಆಧ್ಯಾತ್ಮಿಕತೆಗೆ ಹೆಚ್ಚಿನ ಒತ್ತು ನೀಡಲು ಈ ವಿದ್ಯಾಪೀಠಗಳು ಅತ್ಯಂತ ಅವಶ್ಯಕವೆನಿಸಿವೆ,” ಎಂದು ಉಡುಪಿ ಶ್ರೀ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದಂಗಳವರು ಅಭಿಪ್ರಾಯಪಟ್ಟರು.
ಬೆಂಗಳೂರಿನ ಬಸವನಗುಡಿಯ ಶ್ರೀ ಗೋವರ್ಧನ ಕ್ಷೇತ್ರ (ಉಡುಪಿ ಶ್ರೀ ಪುತ್ತಿಗೆ ಮಠದ ಶಾಖೆ) ಯಲ್ಲಿ ಪರಮಪೂಜ್ಯ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ತ್ರಿಮತಸ್ಥ ವಿಪ್ರ ಸಮುದಾಯದ ಮಕ್ಕಳಿಗಾಗಿ “ಶ್ರೀ ಪುತ್ತಿಗೆ ಸುಗುಣ ಸ್ಕೂಲ್”, ಮಹಿಳೆಯರಿಗಾಗಿ “ಶ್ರೀ ಪುತ್ತಿಗೆ ಮಹಿಳಾ ವಿದ್ಯಾಪೀಠ” ಹಾಗೂ ಪುರುಷರಿಗಾಗಿ “ಶ್ರೀ ಪುತ್ತಿಗೆ ಸಂಧ್ಯಾ ವಿದ್ಯಾಪೀಠ”ಗಳನ್ನು ಉದ್ಘಾಟಿಸಿ ಅವರು ಆಧ್ಯಾತ್ಮಿಕ ವಿದ್ಯೆಯ ಆಧಿಕ್ಯವನ್ನು ಪ್ರತಿಪಾದಿಸಿದರು. ಶ್ರೀ ಪುತ್ತಿಗೆ ವಿದ್ಯಾಪೀಠಗಳು ಚೆನ್ನೈ, ಕೋಲ್ಕತ್ತಾ, ಉಡುಪಿ ಮೊದಲಾದೆಡೆ ಈಗಾಗಲೇ ಅತ್ಯುತ್ತಮ ಸೇವೆ ಸಲ್ಲಿಸುತ್ತಾ ಪ್ರಸಿದ್ಧವಾಗಿವೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಭಂಡಾರಕೇರಿ ಮಠದ ಪರಮಪೂಜ್ಯ ಶ್ರೀ ಶ್ರೀ ವಿದ್ಯೇಶತೀರ್ಥ ಶ್ರೀಪಾದಂಗಳವರು ಮಾತನಾಡಿ, “ರಾಷ್ಟ್ರ ನಿರ್ಮಾಣದ ಮಹತ್ಕಾರ್ಯವಾಗಬೇಕಾದರೆ ಸನಾತನ ಧರ್ಮದ ರೀತಿಯಲ್ಲಿ ಕುಟುಂಬ ನಿರ್ವಹಣೆ ಅತ್ಯಗತ್ಯ. ಈ ಕಾರ್ಯದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು. ಶ್ರೀ ಪುತ್ತಿಗೆ ಮಹಿಳಾ ವಿದ್ಯಾಪೀಠದ ಸ್ಥಾಪನೆ ಒಂದು ಕ್ರಾಂತಿಕಾರಿ ಚಿಂತನೆಯಾಗಿದೆ” ಎಂದು ಶ್ಲಾಘಿಸಿದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಅಹಲ್ಯಾ ಶರ್ಮಾ ಅವರು ಮಾತನಾಡಿ, “ಒಂದು ಅಂದಾಜಿನ ಪ್ರಕಾರ ಭವಿಷ್ಯದಲ್ಲಿ ಶೇಕಡಾ 40ರಷ್ಟು ಜನರು ವಿವಾಹ ವಿಮುಖರಾಗುವ ಆತಂಕ ತಲೆದೋರಿದ್ದು, ಈ ನಿಟ್ಟಿನಲ್ಲಿ ಸಮಾಜವು ಎಚ್ಚೆತ್ತು ಈಗಿನಿಂದಲೇ ಕಾರ್ಯಪ್ರವೃತ್ತರಾಗಬೇಕಿದೆ” ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಅಸಗೋಡು ಜಯಸಿಂಹ ಹಾಗೂ ಡಾ. ಕೆ.ಪಿ. ಪುತ್ತೂರಾಯರು ಶ್ರೀ ಪುತ್ತಿಗೆ ಶ್ರೀಗಳ ಸಾಮಾಜಿಕ ಕಳಕಳಿಯನ್ನು ಪ್ರಶಂಸಿಸಿದರು.
ಮಾಹಿತಿಗಾಗಿ ಸಂಪರ್ಕಿಸಿ:
ಶ್ರೀ ಪುತ್ತಿಗೆ ವಿದ್ಯಾಪೀಠಕ್ಕೆ ಸೇರಬಯಸುವವರು ಬೆಂಗಳೂರು ಬಸವನಗುಡಿ ಗೋವರ್ಧನದ ಕಾರ್ಯಾಲಯವನ್ನು ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ: +91 9880491323, +91 97432 92161, +91 99451 00948.




