ಮುಂಬಯಿ, ಸೆ. 22: ಸಾಹಿತ್ಯ, ಪ್ರಕಾಶನ ಮತ್ತು ಸೃಜನಶೀಲ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸುತ್ತಿರುವ ಪ್ರಸಿದ್ಧ ಲೇಖಕಿ ಹಾಗೂ ಉದ್ಯಮಿ, ‘ಕಾಶ್ಮೀರ ಪುರವಾಸಿನಿ ಪಬ್ಲಿಕೇಷನ್ಸ್’ನ ಸಿಇಒ ಕ್ಷಮಾ ರಾವ್ ಅವರಿಗೆ ಪ್ರತಿಷ್ಠಿತ ‘ದಿ ಶಾರದಾ ವಿಷನರಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಆ. 8, 2026ರಂದು ಅಂಧೇರಿಯ ಹಾಲಿಡೇ ಇನ್ ಹೋಟೆಲ್ ಸಭಾಂಗಣದಲ್ಲಿ ‘ಇನ್‌ಸೈಟ್ಸ್ ಸಕ್ಸಸ್ ಮೀಡಿಯಾ ಗ್ರೂಪ್’ ಆಯೋಜಿಸಿದ್ದ ಪ್ರತಿಷ್ಠಿತ ‘ಪ್ರೆಸ್ಟಿಜ್ ಗಾಲಾ’ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಪ್ರಭಾವಿ ವ್ಯಕ್ತಿಗಳು, ಆವಿಷ್ಕಾರಕರು ಹಾಗೂ ಸಮಾಜದಲ್ಲಿ ಬದಲಾವಣೆ ತರುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು.
ಸಮಾರಂಭದ ಪ್ರಮುಖ ಆಕರ್ಷಣೆಯಾಗಿದ್ದ ಕ್ಷಣದಲ್ಲಿ ಕ್ಷಮಾ ರಾವ್ ಅವರಿಗೆ ‘ದಿ ಶಾರದಾ ವಿಷನರಿ ಪ್ರಶಸ್ತಿ’ಯನ್ನು ಅಧಿಕೃತವಾಗಿ ಪ್ರದಾನ ಮಾಡಲಾಯಿತು.
ಸಾಹಿತ್ಯ ಕ್ಷೇತ್ರಕ್ಕೆ ಕ್ಷಮಾ ರಾವ್ ಅವರು ಸಲ್ಲಿಸುತ್ತಿರುವ ನಿರಂತರ ಕೊಡುಗೆ ಹಾಗೂ ಸೃಜನಶೀಲತೆಗೆ ನೀಡುತ್ತಿರುವ ಪ್ರೋತ್ಸಾಹವನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಹಲವು ಕೃತಿಗಳನ್ನು ರಚಿಸಿರುವ ಅವರು, ತಮ್ಮ ಬರಹಗಳ ಮೂಲಕ ಓದುಗರಿಗೆ ಆಳವಾದ ಹಾಗೂ ಚಿಂತನಶೀಲ ದೃಷ್ಟಿಕೋನಗಳನ್ನು ಪರಿಚಯಿಸಿದ್ದಾರೆ.
ಹೊಸ ಬರಹಗಾರರು ಹಾಗೂ ಸೃಜನಶೀಲ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಅವರು ‘ಕಾಶ್ಮೀರ ಪುರವಾಸಿನಿ ಪಬ್ಲಿಕೇಷನ್ಸ್’ ಎಂಬ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಈ ಮೂಲಕ ಹೊಸ ಧ್ವನಿಗಳಿಗೆ ಸ್ವತಂತ್ರ ವೇದಿಕೆ ಒದಗಿಸಿ, ಉತ್ತಮ ಹಾಗೂ ಪ್ರಭಾವಶಾಲಿ ಕಥನಗಳು ಹೆಚ್ಚಿನ ಸಂಖ್ಯೆಯ ಓದುಗರನ್ನು ತಲುಪುವಂತೆ ಅವರು ಶ್ರಮಿಸುತ್ತಿದ್ದಾರೆ. ಈ ಕಾರ್ಯದಲ್ಲಿ ಅವರ ಪತಿ ಸುರೇಶ್ ರಾವ್ ಅವರು ಸಹಕರಿಸುತ್ತಿದ್ದಾರೆ.
ನಟಿ ಪದ್ಮಿನಿ ಕೊಲ್ಹಾಪುರೆ ಅವರಿಂದ ಪ್ರಶಸ್ತಿ ಪ್ರದಾನ
ಸಮಾರಂಭದಲ್ಲಿ ಬಾಲಿವುಡ್‌ನ ಖ್ಯಾತ ನಟಿ ಹಾಗೂ ಗಾಯಕಿ ಪದ್ಮಿನಿ ಕೊಲ್ಹಾಪುರೆ ಅವರು ವೇದಿಕೆಗೆ ಆಗಮಿಸಿ ಕ್ಷಮಾ ರಾವ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಹಾಲಿಡೇ ಇನ್‌ನಲ್ಲಿ ನಡೆದ ಈ ಗೌರವ ಸಮಾರಂಭವು ಕ್ಷಮಾ ರಾವ್ ಅವರ ಸಾಹಿತ್ಯ ಹಾಗೂ ಸೃಜನಶೀಲ ಕ್ಷೇತ್ರದ ಸಾಧನೆಗೆ ಮತ್ತೊಂದು ಮಹತ್ವದ ಮೈಲಿಗಲ್ಲಾಯಿತು.
ಕ್ಷಮಾ ರಾವ್ ಅವರು ಸಯಾನ್ ಕೋಳಿವಾಡದ ಬಳಿಯ ಗೋಕುಲ ದೇವಸ್ಥಾನದ ಉಪಾಧ್ಯಕ್ಷರಾದ ರಾಜಾರಾಮ್ ಆಚಾರ್ಯ ಅವರ ಸಹೋದರನ ಮಗಳು. ಅವರ ಈ ಸಾಧನೆ ಹಾಗೂ ಪ್ರತಿಷ್ಠಿತ ಪ್ರಶಸ್ತಿ ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ.
ಸಾಹಿತ್ಯ ಮತ್ತು ಸೃಜನಶೀಲ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡುವಂತಾಗಲಿ ಎಂದು ಹಾರೈಸುತ್ತಾ ಕ್ಷಮಾ ರಾವ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಸಲ್ಲಿಸಲಾಗಿದೆ.
— ಜಯ ಸಿ. ಪೂಜಾರಿ, ಕೆಳಾರ್ಕಳ ಬೆಟ್ಟು



