
ಡೊಂಬಿವಲಿ: ಕಳೆದ 24 ವರ್ಷಗಳಿಂದ ನಿರಂತರ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ‘ಸಿರಿನಾಡ ವೆಲ್ಫೇರ್ ಅಸೋಸಿಯೇಷನ್’ ತನ್ನ 25ನೇ ವರ್ಷದ ಸಂಸ್ಥಾಪನಾ ದಿನವನ್ನು ಅನಾಥಾಶ್ರಮದ ಮಕ್ಕಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಿತು.
ಸಂಘದ ಯುವ ವಿಭಾಗದ ಆಯೋಜನೆಯಲ್ಲಿ ಹಾಗೂ ಸದಸ್ಯರ ಸಹಕಾರದೊಂದಿಗೆ ಅಕ್ಟೋಬರ್ 2ರಂದು ಡೊಂಬಿವಲಿ ಪಶ್ಚಿಮದ ಜುನ ಡೊಂಬಿವಲಿ ರಸ್ತೆಯ ತುಳಸಿರಾಮ್ ಬಂಗಲೆ ಸಮೀಪವಿರುವ ‘ಚಿಲ್ಡ್ರನ್ಸ್ ಹೋಮ್’ ಅನಾಥಾಶ್ರಮಕ್ಕೆ ಭೇಟಿ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಆರ್. ಕೆ. ಸುವರ್ಣ, “ಸಂಘದ ರಜತ ಮಹೋತ್ಸವದ ಅಂಗವಾಗಿ ಹಲವು ಸಮಾಜಮುಖಿ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿವೆ. ಆದರೆ 25ನೇ ಸಂಸ್ಥಾಪನಾ ದಿನವನ್ನು ಅನಾಥ ಮಕ್ಕಳೊಂದಿಗೆ ಆಚರಿಸಿರುವುದು ಅತೀವ ತೃಪ್ತಿ ಹಾಗೂ ಧನ್ಯತೆ ತಂದಿದೆ. ಮುಂದೆಯೂ ಇಂತಹ ಜನಪರ, ಸೇವಾ ಕಾರ್ಯಗಳ ಮೂಲಕವೇ ಸಂಸ್ಥೆಯನ್ನು ಮುನ್ನಡೆಸಲಾಗುವುದು,” ಎಂದು ತಿಳಿಸಿದರು.
ಅನಾಥಾಶ್ರಮದ ಸಂಚಾಲಕ ಸುಜಿತ್ ನಾಡಾರ್ ಮಾತನಾಡಿ, “ಕೊರೊನಾ ಸಾಂಕ್ರಾಮಿಕದ ನಂತರ ಈ ಅನಾಥಾಶ್ರಮವನ್ನು ಪ್ರಾರಂಭಿಸಲಾಯಿತು. ಸಮಾಜಪರ ಸಂಘಟನೆಗಳ ಸಹಕಾರದಿಂದ ಮಕ್ಕಳ ಪಾಲನೆ-ಪೋಷಣೆ ಸಾಧ್ಯವಾಗುತ್ತಿದ್ದು, ಈ ಪುಣ್ಯದ ಕಾಯಕದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು,” ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಉಪಾಧ್ಯಕ್ಷ ಅಶೋಕ್ ಅಮೀನ್, ಗೌರವ ಪ್ರಧಾನ ಕಾರ್ಯದರ್ಶಿ ಅಜೆಕಾರು ಜಯ ಶೆಟ್ಟಿ, ಕೋಶಾಧಿಕಾರಿ ಸದಾಶಿವ ಸಾಲ್ಯಾನ್, ಜೊತೆ ಕೋಶಾಧಿಕಾರಿ ಕೆ. ಕೆ. ಸಾಲ್ಯಾನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉದಯ ಜೆ. ಶೆಟ್ಟಿ ಹಾಗೂ ಯುವ ವಿಭಾಗದ ಕಾರ್ಯಾಧ್ಯಕ್ಷ ಸಚಿನ್ ಕೋಟ್ಯಾನ್ ಸಂದರ್ಭೋಚಿತವಾಗಿ ಮಾತನಾಡಿ, ಸಂಸ್ಥೆಯ 25ನೇ ಸಂಸ್ಥಾಪನಾ ದಿನಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಂಗವಾಗಿ ಅನಾಥಾಶ್ರಮದ ಮಕ್ಕಳಿಗೆ ಮಧ್ಯಾಹ್ನದ ಊಟ, ಹೊಸ ಬಟ್ಟೆಗಳು, ಶಾಲೆಗೆ ತೆರಳುವ ಮಕ್ಕಳಿಗೆ ಶಾಲಾ ಪರಿಕರಗಳು ಹಾಗೂ ದಿನಸಿ (ಧವಸ-ಧಾನ್ಯ) ಸಾಮಗ್ರಿಗಳನ್ನು ವಿತರಿಸಲಾಯಿತು. ಮಕ್ಕಳ ಸಮ್ಮುಖದಲ್ಲೇ ಕೇಕ್ ಕತ್ತರಿಸಿ ಸಂಭ್ರಮ ಹಂಚಿಕೊಳ್ಳಲಾಯಿತು. ಮಕ್ಕಳಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಮಕ್ಕಳು ಪ್ರಸ್ತುತಪಡಿಸಿದ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳು ಸಭಿಕರ ಮೆಚ್ಚುಗೆಗೆ ಪಾತ್ರವಾದವು.
ಯುವ ವಿಭಾಗದ ಕಾರ್ಯದರ್ಶಿ ಸುಮ ವಿ. ಕರ್ಕೇರ ಕಾರ್ಯಕ್ರಮ ನಿರೂಪಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಅಜೆಕಾರು ಜಯ ಶೆಟ್ಟಿ ವಂದಿಸಿದರು. ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.



