
ಚಿತ್ರ: ಧನಂಜಯ ಪೂಜಾರಿ, ವರದಿ: ಇನ್ನಂಜೆ ಜಯರಾಮ್
ಡೊಂಬಿವಲಿ: ಸ್ಥಳೀಯ ನ್ಯೂ ದೇವೀಚಪಾಡಾ, ಜಗದಂಬಾ ರೋಡ್, ಗೋಪಿನಾಥ ಚೌಕ್ನಲ್ಲಿ ನೆಲೆನಿಂತಿರುವ ಪಾವನ ಕ್ಷೇತ್ರ ಶ್ರೀ ಜಗದಂಬಾ ಮಂದಿರದಲ್ಲಿ ಯಕ್ಷಕಲಾ ಸಂಸ್ಥೆಯ (ರಿ.) ಸಂಚಾಲಕತ್ವದಲ್ಲಿ ಆಯೋಜಿಸಲಾಗಿದ್ದ 12ನೇ ವರ್ಷದ ಶರನ್ನವರಾತ್ರಿ ಹಾಗೂ ವಿಜಯದಶಮಿ ಮಹೋತ್ಸವವು ಅತ್ಯಂತ ಶ್ರದ್ಧಾ-ಭಕ್ತಿ ಹಾಗೂ ಸಡಗರ-ಸಂಭ್ರಮದಿಂದ ಸಂಪನ್ನಗೊಂಡಿತು.

ಅಕ್ಟೋಬರ್ 11 ರಿಂದ 21ರವರೆಗೆ ನಡೆದ ಧಾರ್ಮಿಕ ಮಹೋತ್ಸವವು ಶ್ರೀಕ್ಷೇತ್ರ ತಂತ್ರಿಯವರ ಶುಭ ಆಶೀರ್ವಾದದೊಂದಿಗೆ, ಪ್ರಧಾನ ಅರ್ಚಕರಾದ ಶ್ರೀ ಸುಬ್ರಮಣ್ಯ ಭಟ್ (ಮೀರಾ ರೋಡ್) ಹಾಗೂ ಶ್ರೀ ಜಗದೀಶ ಭಟ್ ಅವರ ನೇತೃತ್ವದಲ್ಲಿ ಶಾಸ್ತ್ರೋಕ್ತ ವಿಧಿ-ವಿಧಾನಗಳೊಂದಿಗೆ ಸಾಂಗವಾಗಿ ನೆರವೇರಿತು.

ಉತ್ಸವದ ಪ್ರತಿ ದಿನವೂ ಕ್ಷೇತ್ರದಲ್ಲಿ ದುರ್ಗಾ ನಮಸ್ಕಾರ ಪೂಜೆ, ವಿಶೇಷ ರಂಗಪೂಜೆ, ಮಹಾ ಮಂಗಳಾರತಿ, ಪಲ್ಲ ಪೂಜೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಸೇವೆಗಳು ಜರುಗಿದವು. ಅಕ್ಟೋಬರ್ 19ರ ಸೋಮವಾರ ಮುಂಜಾನೆ ಪವಿತ್ರ ಚಂಡಿಕಾ ಹೋಮ ನೆರವೇರಿತು. ಬಳಿಕ ಮಧ್ಯಾಹ್ನ ಮಹಾಮಂಗಳಾರತಿ, ಪಲ್ಲ ಪೂಜೆ, ಅನ್ನಸಂತರ್ಪಣೆ ಹಾಗೂ ಸಂಜೆ ದುರ್ಗಾ ನಮಸ್ಕಾರ ಪೂಜೆ, ರಾತ್ರಿ ಮಹಾಮಂಗಳಾರತಿ ಮತ್ತು ಅನ್ನಸಂತರ್ಪಣೆಗಳು ಭಕ್ತಿಪೂರ್ವಕವಾಗಿ ನಡೆದವು.

ವಿಜಯದಶಮಿಯ ಪರ್ವದಿನವಾದ ಅಕ್ಟೋಬರ್ 21ರ ಬುಧವಾರ ಮಧ್ಯಾಹ್ನ ಮಹಾಮಂಗಳಾರತಿ, ಪಲ್ಲ ಪೂಜೆ ಮತ್ತು ಮಹಾ ಅನ್ನಸಂತರ್ಪಣೆಯೊಂದಿಗೆ ಮಹೋತ್ಸವಕ್ಕೆ ತೆರೆಬಿದ್ದಿತು. ಉತ್ಸವದ ಅಂಗವಾಗಿ ವಿವಿಧ ಸಂಸ್ಥೆಗಳಿಂದ ಹಸಿರು ಹೊರೆಕಾಣಿಕೆಗಳನ್ನು ವೈಭವದ ಮೆರವಣಿಗೆಯ ಮೂಲಕ ತಾಯಿಯ ಸನ್ನಿಧಾನಕ್ಕೆ ಸಮರ್ಪಿಸಲಾಯಿತು. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಆಮಂತ್ರಿತ ಭಜನಾ ಮಂಡಳಿಗಳಿಂದ ಭಕ್ತಿ-ಭಾವದ ಭಜನಾಮೃತ ಸೇವೆ ನಡೆಯಿತು.

ಅಕ್ಟೋಬರ್ 18ರ ಭಾನುವಾರ ಸಂಜೆ ಪುಣೆಯ ಶ್ರೀ ಪ್ರವೀಣ್ ಶೆಟ್ಟಿ ಪುತ್ತೂರು ಮತ್ತು ಪರಿವಾರದವರ ಪ್ರಾಯೋಜಕತ್ವದಲ್ಲಿ, ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಪುಣೆ ಕಲಾವಿದರಿಂದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡು ಭಕ್ತರ ಮೆಚ್ಚುಗೆಗೆ ಪಾತ್ರವಾಯಿತು.

ಒಗ್ಗಟ್ಟಿನ ಸೇವೆ: ಮಹೋತ್ಸವದ ಯಶಸ್ಸಿಗೆ ಶ್ರೀ ಜಗದಂಬಾ ಮಂದಿರ ಟ್ರಸ್ಟ್ನ ಗೌರವಾಧ್ಯಕ್ಷರು, ಅಧ್ಯಕ್ಷರಾದ ಶ್ರೀ ದಿವಾಕರ್ ರೈ, ಉಪಾಧ್ಯಕ್ಷರಾದ ಶ್ರೀ ರವೀಂದ್ರ ವೈ. ಶೆಟ್ಟಿ ಹಾಗೂ ಶ್ರೀ ದಿನೇಶ್ ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ರಾಜೇಶ್ ಕೋಟ್ಯಾನ್, ಮಾಜಿ ಗೌರವಾನ್ವಿತ ಅಧ್ಯಕ್ಷ ಶ್ರೀ ಹರೀಶ್ ಡಿ. ಶೆಟ್ಟಿ, ಕೋಶಾಧಿಕಾರಿ ಶ್ರೀ ಹರೀಶ್ ಕೋಟ್ಯಾನ್, ಗೌರವ ಕಾರ್ಯದರ್ಶಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಅವಿರತವಾಗಿ ಶ್ರಮಿಸಿದ್ದಾರೆ. ಇವರೊಂದಿಗೆ ಮಂದಿರದ ಶನಿಪೂಜಾ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಸರ್ವ ಸದಸ್ಯರು ಶ್ರದ್ಧೆಯಿಂದ ಕೈಜೋಡಿಸಿದ್ದರು.

ಡೊಂಬಿವಲಿ ಮತ್ತು ಕಲ್ಯಾಣ್ ಪರಿಸರದ ಸಾವಿರಾರು ಭಕ್ತಾದಿಗಳು ಆಗಮಿಸಿ ತಾಯಿಯ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು. ಭಕ್ತಿ, ಸಾಂಸ್ಕೃತಿಕ ವೈಭವ ಮತ್ತು ಅನ್ನದಾನದ ತ್ರಿವೇಣಿ ಸಂಗಮವಾಗಿ ಜರುಗಿದ ಈ ಮಹೋತ್ಸವವು ಭಕ್ತವೃಂದದಲ್ಲಿ ಧನ್ಯತಾ ಭಾವವನ್ನು ಮೂಡಿಸಿತು.



