25 C
Karnataka
April 5, 2025
ಮುಂಬಯಿ

ಬಂಟ್ಸ್ ಫೋರಮ್ ಮೀರಾ-ಭಾಯಂದರ್; ಭಕ್ತಿ ಸಡಗರದಿಂದ ಸಂಪನ್ನಗೊಂಡ ಭಜನಾ ಮಂಗಳೋತ್ಸವ.



ಸಂಸ್ಥೆಯ ಪ್ರಗತಿಗೆ ಹಿರಿಯರ ಮಾರ್ಗದರ್ಶನ ಅಗತ್ಯ….: ಉದಯ ಎಮ್.ಶೆಟ್ಟಿ ಮಲಾರ್ ಬೀಡು


ಚಿತ್ರ, ವರದಿ: ಉಮೇಶ್ ಕೆ.ಅಂಚನ್.


ಮುಂಬಯಿ, ಜ 16,: ಕಳೆದ ಹಲವು ವರ್ಷಗಳಿಂದ ಸಂಸ್ಥೆಯ ಮಹಿಳಾ ವಿಭಾಗದ ವತಿಯಿಂದ ತಿಂಗಳ ಪ್ರತೀ ಸಂಕ್ರಮಣದಂದು ಕಚೇರಿ ಅಥವಾ ಸದಸ್ಯರ ಮನೆಗಳಲ್ಲಿ ಭಜನಾ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದೆ. ಸಂಸ್ಥೆಯ ಸದಸ್ಯರು ಪ್ರತಿಯೊಂದು ಕಾರ್ಯಕ್ರಮಕ್ಕೂ ಒಗ್ಗಟ್ಟಿನ ಪ್ರೋತ್ಸಾಹ ನೀಡುತ್ತಿದ್ದಾರೆ. ಸದಸ್ಯರ ಒಮ್ಮತದಿಂದ ಪ್ರಸ್ತುತ ವರ್ಷದಲ್ಲಿ ನನ್ನನ್ನು ಅಧ್ಯಕ್ಷ ಸ್ಥಾನಕ್ಕೆ ಆರಿಸಿದ್ದಾರೆ.ಸಂಸ್ಥೆಗೆ ಚ್ಯುತಿ ಬಾರದಂತೆ ಕಾರ್ಯವನ್ನು ನಿಭಾಯಿಸಿ ಮುನ್ನೆಡೆಸುವ ನಿರ್ಧಾರದಿಂದ ಕೊಟ್ಟ ಸ್ಥಾನವನ್ನು ಸಂತೋಷದಿಂದ ಸ್ವೀಕರಿಸಿದ್ದೇನೆ. ಇಂದಿನ ತನ್ನ ಅದ್ಯಕ್ಷತೆಯಲ್ಲಿ ನಡೆದ ಪ್ರಥಮ ಕಾರ್ಯಕ್ರಮವು ಸರ್ವ ಸದಸ್ಯರ ಸಹಕಾರದಿಂದ ವಿಜ್ರಂಭಣೆಯಿಂದ ಜರಗಿದೆ. ಕಾರ್ಯಕ್ರಮದ ಯಶಸ್ಸಿಗೆ ಹಾಗೂ ಸಂಸ್ಥೆಯ ಪ್ರಗತಿಗೆ ಹಿರಿಯರ ಮಾರ್ಗದರ್ಶನ ಅಗತ್ಯ ಎಂದು ಬಂಟ್ಸ್ ಫೋರಮ್ ನ ನೂತನ ಅಧ್ಯಕ್ಷ ಉದಯ ಎಮ್. ಶೆಟ್ಟಿ ಮಲಾರ್ ಬೀಡು ನುಡಿದರು.
ಅವರು ಜ.14 ರಂದು ಮೀರಾಭಾಯಂದರ್ ರಸ್ತೆಯಲ್ಲಿರುವ ಗೋಲ್ಡನ್ ನೆಸ್ಟ್ ಸರ್ಕಲ್ ಸಮೀಪದ ಅಶ್ವಿನಿ (ಕ್ರೌನ್ ಹೋಟೆಲ್ಸ್) ಸಭಾಗ್ರಹದಲ್ಲಿ ಬಂಟ್ಸ್ ಫೋರಮ್ ಮೀರಾಭಾಯಂದರ್ ಆಯೋಜಿಸಿದ್ದ ವಾರ್ಷಿಕ ಭಜನಾ ಮಂಗಳೋತ್ಸವ ಕಾರ್ಯಕ್ರಮದ ನಡುವೆ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡುತ್ತಿದ್ದರು.


ಕಾಶಿ ಮೀರಾ ಮಹಾಲಿಂಗೇಶ್ವರ ಮಂದಿರದ ಪ್ರಧಾನ ಅರ್ಚಕರಾದ ಸಾಣೂರು ಸಾತಿಂಜ ಜನಾರ್ಧನ ಭಟ್ ಆಶೀರ್ವಚನ ನೀಡಿ ಸಂಸ್ಥೆಯ ಕಾರ್ಯಕಲಾಪಗಳಿಗೆ ಶುಭ ಕೋರಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮನೋರಮಾ ಎನ್.ಬಿ.ಶೆಟ್ಟಿಯವರು ಸಂಸ್ಥೆಯ ಬಾಲಪ್ರತಿಭೆಗಳ ,ಸದಸ್ಯರ ಮತ್ತು ಸದಸ್ಯೆಯರ ಕುಣಿತ ಭಜನೆಯ ಸೊಬಗಿಗೆ ಸಂತೋಷ ವ್ಯಕ್ತಪಡಿಸಿದರು. ಇಂದಿನ ಮಹಿಳೆಯರು ಕೇವಲ ಮನೆಯ ಕೆಲಸದಲ್ಲಿ ಸೀಮಿತವಾಗಿರದೆ ತುಳುನಾಡಿನ ಸಂಸ್ಕೃತಿಯನ್ನು ಉಳಿಸುವಲ್ಲಿ ಶ್ರಮಿಸುತ್ತಿದ್ದಾರೆ ಎಂಬುದಕ್ಕೆ ಇಂದಿನ ಭಜನಾ ಕಾರ್ಯಕ್ರಮವೇ ಸಾಕ್ಷಿ ಎಂದರಲ್ಲದೆ ಇಂತಹ ಕಾರ್ಯಕ್ರಮಗಳು ಸದಾ ನಡೆಯುತ್ತಿರಲಿ ಎಂದು ಶುಭಕೋರಿದರು.


ಅತಿಥಿಯಾಗಿ ಆಗಮಿಸಿದ್ದ ಲೇಖಕಿ ಲತಾ ಸಂತೋಷ್ ಶೆಟ್ಟಿ ಮುದ್ದು ಮನೆ ಅರಸಿನ ಕುಂಕುಮದ ಮಹತ್ವದ ಬಗ್ಗೆ ಮಾತನಾಡಿ ಸಮಾರಂಭದಲ್ಲಿ ಭಜನೆ ಹಾಗೂ ಕುಣಿತ ಭಜನೆಯಲ್ಲಿ ಭಾಗವಹಿಸಿದ ಎಲ್ಲಾ ಹಿರಿಯ ಕಿರಿಯ ಸದಸ್ಯರನ್ನು ಅಭಿನಂದಿಸಿದರು.ಬ್ರಹ್ಮದೇವರು ಭೂಲೋಕವನ್ನು ಸೃಷ್ಟಿಸಲು ನಿರ್ಣಯ ತೆಗೆದುಕೊಂಡ, ಶ್ರೀರಾಮನು ಲಂಕೆಯಿಂದ ಸೀತೆಯನ್ನು ಬಿಡಿಸಿ ತಂದ, ಶ್ರೀಕೃಷ್ಣನು ಕಂಸನನ್ನು ವದಿಸಿ ತನ್ನ ಮಾತಾಪಿತರನ್ನು ಕಾರಾಗೃಹದಿಂದ ಬಿಡಿಸಿದ, ಭಗೀರಥ ಮಹರ್ಷಿಗಳು ಗಂಗೆಯನ್ನು ಭೂಲೋಕಕ್ಕೆ ಕರೆತಂದ ದಿನ ಎಂದು ಉಲ್ಲೇಖವಿರುವ ಹಾಗೂ ಜಗತ್ತಿಗೆ ಬೆಳಕನ್ನು ನೀಡುತ್ತಿರುವ ಸೂರ್ಯ ದೇವರು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಶುಭದಿನದಂದು ಹುಟ್ಟುಹಾಕಿದ ಭಜನಾ ಸಮಿತಿಯು ಉತ್ತಮ ಗುರುಗಳ ಮಾರ್ಗದರ್ಶನದಿಂದ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ ಎಂದು ಹೇಳಲು ಸಂತೋಷ ಪಡುತ್ತೇನೆ ಎಂದು ಹೇಳಿ ಭಜನೆಯ ಮಹತ್ವವನ್ನು ತಿಳಿಸಿದರು.
ಈ ಸಂಧರ್ಭದಲ್ಲಿ ಮಾಜಿ ಅಧ್ಯಕ್ಷರಾದ ಇನ್ನ ಚಂದ್ರಹಾಸ್ ಕೆ.ಶೆಟ್ಟಿ ಹಾಗೂ ಮಾಜಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಮತಿ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಸ್ಥಾಪಕ ಸದಸ್ಯ,ಮಾಜಿ ಗೌರವಾಧ್ಯಕ್ಷ ಸಂತೋಷ್ ರೈ ಬೆಳ್ಳಿಪಾಡಿ ಹಾಗೂ ಮಾಜಿ ಅಧ್ಯಕ್ಷ ಜಯಪ್ರಕಾಶ್ ಆರ್.ಭಂಡಾರಿಯವರನ್ನು ಅಭಿನಂದಿಸಲಾಯಿತು. ಪರಿಸರದ ಸಂಘಸಂಸ್ಥೆಗಳ ಪದಾಧಿಕಾರಿಗಳನ್ನು,ಗಣ್ಯರನ್ನು,ಆಮಂತ್ರಿತ ಅತಿಥಿಗಳನ್ನು ಸತ್ಕರಿಸಲಾಯಿತು.


ವೇದಿಕೆಯಲ್ಲಿ ಅತಿಥಿಗಳಾದ ಡಾ.ಪ್ರಾರ್ಥಸ್ವಿನಿ ಗೌರೀಶ್ ಶೆಟ್ಟಿ, ಸ್ವರ್ಣಲತಾ ಅರುಣೋದಯ ರೈ, ಸಂಸ್ಥೆಯ ಉಪಾಧ್ಯಕ್ಷರುಗಳಾದ ಹರ್ಷಕುಮಾರ್ ಡಿ.ಶೆಟ್ಟಿ ಪಾಂಗಾಳ , ದಿವಾಕರ್ ಎಮ್.ಶೆಟ್ಟಿ ಶಿರ್ಲಾಲ್,ಗೌರವ ಕಾರ್ಯದರ್ಶಿ ಸತೀಶ್ ಶೆಟ್ಟಿ ಮುಂಡ್ಕೂರು, ಕೋಶಾಧಿಕಾರಿ ಹರೀಶ್ ಶೆಟ್ಟಿ ಕಾಪು, ಜತೆ ಕಾರ್ಯದರ್ಶಿ ಶರ್ಮಿಳಾ ಕೆ.ಶೆಟ್ಟಿ, ಜತೆ ಕೋಶಾಧಿಕಾರಿ ಮಧುಕರ್ ಎಸ್.ಶೆಟ್ಟಿ ಅಜೆಕಾರು, ಸಂಚಾಲಕ ಅನಿಲ್ ಆರ್ ಶೆಟ್ಟಿ ಎಲ್ಲೂರು ಒಡಿಪರಗುತ್ತು, ಯುವ ವಿಭಾಗದ ಕಾರ್ಯಾಧ್ಯಕ್ಷ ನಟರಾಜ್ ಡಿ.ಶೆಟ್ಟಿ ಉಪಸ್ಥಿತರಿದ್ದರು.
ಭಜನಾ ಸಮಿತಿಯ ಕಾರ್ಯಾಧ್ಯಕ್ಷೆ ನವೀನಾ ಜೆ.ಭಂಡಾರಿ ಮಾತನಾಡಿ 13 ವರ್ಷಗಳ ಹಿಂದೆ ಮಕರ ಸಂಕ್ರಾಂತಿಯ ಶುಭದಿನದಂದು ಮೀರಾರೋಡ್ ಬ್ರಹ್ಮ ಮಂದಿರದಲ್ಲಿ ಭಜನಾ ಸಮಿತಿಯು ಉದ್ಘಾಟನೆ ಗೊಂಡಿದ್ದು ಇದೀಗ ಅಚ್ಚುಕಟ್ಟಾಗಿ ಬೆಳೆದು ಪರಿಸರದಲ್ಲಿ ಉತ್ತಮ ಭಜನಾ ತಂಡದೊಂದಿಗೆ ಹೆಗ್ಗಳಿಕೆಗೆ ಪಾತ್ರವಾಗಿದೆ. ಪರಿಸರದ ಸಂಘಸಂಸ್ಥೆಗಳ ಭಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹಾಗೂ ಹಲವಾರು ಭಜನೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದೆ ಎಂದು ಸಮಿತಿಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನೂ ಸ್ವಾಗತಿಸಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತಾಳಿಪಾಡಿಗುತ್ತು ಸುಕವಾಣಿ ಡಿ.ಶೆಟ್ಟಿ ವಂದಿಸಿದರು. ಬಾಬಾ ಪ್ರಸಾದ್ ಅರಸ ಕುತ್ಯಾರು ಕಾರ್ಯಕ್ರಮ ನಿರೂಪಿಸಿದರು.
ಆರಂಭದಲ್ಲಿ ಅತಿಥಿಗಳು ಮತ್ತು ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶರ್ಮಿಳಾ ಕೆ. ಶೆಟ್ಟಿ, ಸುಕವಾಣಿ ಡಿ. ಶೆಟ್ಟಿ,ಪ್ರತಿಭಾ ರವಿ ಶೆಟ್ಟಿ ಪ್ರಾರ್ಥನೆ ಗೈದರು.ಸಾಂತಿಂಜ ಜನಾರ್ಧನ ಭಟ್ ರವರ ಪೌರೋಹಿತ್ಯದಲ್ಲಿ ಸತ್ಯನಾರಾಯಣ ಮಹಾಪೂಜೆ ನಡೆಯಿತು.ಪೂಜಾಕಾರ್ಯದಲ್ಲಿ ಜಯಪ್ರಕಾಶ್ ಆರ್ ಭಂಡಾರಿ ದಂಪತಿ ಮತ್ತು ಉದಯ ಎಮ್.ಶೆಟ್ಟಿ ದಂಪತಿಗಳು ಭಾಗವಹಿಸಿದ್ದರು.ಸದಸ್ಯ ಸದಸ್ಯೆಯರಿಂದ ಭಜನೆ, ಕುಣಿತ ಭಜನೆ, ವಿಜಯ ಶೆಟ್ಟಿ ಮೂಡುಬೆಳ್ಳೆ ತಂಡದವರಿಂದ ಭಕ್ತಿ ಮಯ ಸಂಗೀತ ಕಾರ್ಯಕ್ರಮ , ಹಳದಿ ಕುಂಕುಮ ಕೊನೆಯಲ್ಲಿ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ,ಭಜನಾ ಸಮಿತಿಯ ಸದಸ್ಯರು, ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದರು

Related posts

ಶ್ರೀಮದ್ಭಾರತ ಮಂಡಳಿಯ ೧೪೬ ನೇ ಮಂಗಳೋತ್ಸವ

Mumbai News Desk

ಬಿಲ್ಲವರ ಅಸೋಸಿಯೇಶನ್, ಮುಂಬಯಿ ವತಿಯಿಂದ ಡಾ. ಹರಿಶ್ಚಂದ್ರ ಸಾಲ್ಯಾನರಿಗೆ ಗೌರವಾರ್ಪಣೆ.

Mumbai News Desk

ಉಡುಪಿಯ ಶಾಲಾ ಬಸ್ ಚಾಲಕನಿಗೆ ಹೃದಯಾಘಾತ, ಸಮಯ ಪ್ರಜ್ಞೆ ಮೆರೆದ ಚಾಲಕ.

Mumbai News Desk

ವರ್ಲಿ  ಶ್ರೀ ಸಿದ್ಧೇಶ್ವರ ಅನ್ನದಾತ ಅಪ್ಪಾಜಿ ಬೀಡು ಪೌಂಡೇಶನ್ ನಲ್ಲಿ ಭಕ್ತಿ ಸಂಭ್ರಮದ ಮಹಾ ಶಿವರಾತ್ರಿ ಆಚರಣೆ

Mumbai News Desk

ಪತಾರ್ಲಿ ದುರ್ಗಾ ಪರಮೇಶ್ವರಿ ದೇವಿಯ ನವರಾತ್ರಿ ಪೂಜೆ.

Mumbai News Desk

ಅ  29   ಗೋರೆಗಾಂವ್ ಪಶ್ಚಿಮದಲ್ಲಿ ಕಡಬ ಸಂಸ್ಕರಣಾ ಸಮಿತಿಯ ವಾರ್ಷಿಕೋತ್ಸವ –

Mumbai News Desk