
ಭಾರತದ ಪುರಾತನವಾದ ಭಾಷೆಗಳಲ್ಲಿ ಕನ್ನಡ ಭಾಷೆಯು ಒಂದು. ಈ ಭಾಷೆಯು ಸರಳ, ಸುಲಲಿತ ಹಾಗೂ ಸುಮಧುರವಾಗಿದೆ, ಇಬ್ಬರ ವ್ಯಕ್ತಿಗಳ ನಡುವೆ ಭಾಷೆಯು ಸ್ನೇಹ ಹಾಗೂ ಸೌಹಾರ್ದತೆಯನ್ನು ಮೂಡಿಸಿ ವ್ಯಕ್ತಿಗಳಲ್ಲಿ ಬಾಂಧವ್ಯವನ್ನು ಬೆಳೆಸುವುದಾಗಿದೆ ಎಂದು ಮುಂಬೈನ ಬಿಜೆಪಿ ಘಟಕದ ಅಧ್ಯಕ್ಷರಾದ ಶ್ರೀ ಆಶಿಶ್ ಶೇಲಾರ್ ಅವರು ನುಡಿದರು.
ಶ್ರೀ ಆಶಿಶ್ ಶೇಲಾರ್ ಅವರು ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವದ ಶುಭ ಸಂದರ್ಭದ ಅಂಗವಾಗಿ ದಿನಾಂಕ 22-01-2024ರಂದು ಮಾತುಂಗಾದ ಮೈಸೂರು ಅಸೋಸಿಯೇಷನ್ ಸಭಾಂಗಣದಲ್ಲಿ ಆಯೋಜಿಸಿದ್ದ ಮೈಸೂರು ಅಸೋಸಿಯೇಷನ್ ಹಾಗೂ ಜೀವನ್ ಗಾಣಿ, ಮುಂಬೈ ಇವರ ಸಹಯೋಗದೊಂದಿಗೆ ಶ್ರೀರಾಮ ಪೂಜೆ ಮತ್ತು ಕನ್ನಡ ಗೀತ ರಾಮಾಯಣ ಕಾರ್ಯಕ್ರಮದಲ್ಲಿ ಅತಿಥಿ ಸ್ಥಾನ ವಹಿಸಿ ಸಭಿಕರನ್ನು ಉದ್ದೇಶಿಸಿ ನುಡಿದರು. ಇನ್ನೋರ್ವ ಅತಿಥಿ ಶ್ರೀ ನರೇಶ್ ಬಡೋದಿಯಾ (Chief Commissioner of Income Tax) ಅವರು ಮಾತನಾಡುತ್ತಾ ‘ನಾನು ಸಂಗೀತದಲ್ಲಿ ಅಭಿರುಚಿಯನ್ನು ಹೊಂದಿದ್ದು ಪಂಡಿತ್ ಉಪೇಂದ್ರ ಭಟ್ ರವರ ಸಂಗೀತ ಸುಧೆಯನ್ನು ಆಲಿಸಲು ಇಲ್ಲಿಯವರೆಗೆ ಬಂದಿದ್ದು ಅವರು ಹಾಡುವ ಶೈಲಿಗೆ ಮನಸೋತಿದ್ದೇನೆ ಹಾಗೂ ಮೈಸೂರು ಅಸೋಷಿಯೇಷನ್ ಅವರು ಇಂತಹ ಉತ್ತಮವಾದ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯ. ಇಂತಹ ಕಾರ್ಯಕ್ರಮಗಳು ಇನ್ನಷ್ಟು ಮೂಡಿ ಬರಲಿ ಹಾಗೂ ಈ ಮೈಸೂರು ಅಸೋಸಿಯೇಷನ್ ಸಂಸ್ಥೆಯ ಶತಮಾನೋತ್ಸವವು ಅತ್ಯಂತ ವಿಜೃಂಭಣೆಯಿಂದ ಜರುಗಲಿ’ ಎಂದು ಹಾರೈಸಿದರು.

ಮೈಸೂರು ಅಸೋಸಿಯೇಷನ್ ಅಧ್ಯಕ್ಷರಾದ ಕೆ ಕಮಲ ಅವರು ನಡೆದ ಸಭಿಕರನ್ನು ಉದ್ದೇಶಿಸಿ ಮಾತನಾಡುತ್ತಾ ‘ನಮ್ಮ ಈ ಅಸೋಸಿಯೇಷನ್ 97 ವರ್ಷ ಪೂರೈಸಿದೆ. ಇದುವರೆಗೆ ನಾವು ಅಸೋಸಿಯೇಷನ್ನಲ್ಲಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ, ಕಲೆ ಹಾಗೂ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದ್ದೇವೆ. ಅಲ್ಲದೆ ಮರಾಠಿ, ಹಿಂದಿ, ಕನ್ನಡ, ತುಳು ಭಾಷಾಭಿಮಾನಿಗಳಿಗೆ ಇದೊಂದು ಮುಖ್ಯ ವೇದಿಕೆಯಾಗಿದೆ’ ಎಂದು ನುಡಿದರು. ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಪಾರ್ಥಸಾರಥಿ ನಾಯಕರವರು ಅತಿಥಿಗಳಾದ ಶ್ರೀ. ಬರೋಡಿಯ ಅವರನ್ನು ಮತ್ತು ಮೈಸೂರು ಅಸೋಸಿಯೇಷನ್ ಪದಾಧಿಕಾರಿಗಳು ವೇದಿಕೆ ಮೇಲಿನ ಸಂಗೀತಗಾರರನ್ನು ಸನ್ಮಾನಿಸಿ ಗೌರವಿಸಿದರು. ವೇದಿಕೆ ಮೇಲೆ ಮೈಸೂರು ಅಸೋಸಿಯೇಷನ್ ಅಧ್ಯಕ್ಷರಾದ ಕೆ ಕಮಲ, ಶ್ರೀ ಶಶಿಕಾಂತ್ ಜೋಶಿ, ಮುಂಬೈನ ಬಿಜೆಪಿ ಘಟಕದ ಅಧ್ಯಕ್ಷರಾದ ಶ್ರೀ ಆಶಿಶ್ ಶೇಲಾರ್, ಶ್ರೀ ಎನ್ ಜಿ ನವಿಲೇಕರ್ ಇವರುಗಳು ಉಪಸ್ಥಿತರಿದ್ದರು. ಕಮಲಾ ಅವರು ಮುಖ್ಯ ಅತಿಥಿಗಳಾದ ಶ್ರೀ. ಆಶಿಶ್ ಶೇಲಾರ್ ಅವರನ್ನು ಶಾಲು ಹೊದಿಸಿ, ಫಲ-ಪುಷ್ಪಕೊಟ್ಟು ಗೌರವಿಸಿದರು.. ಶ್ರೀ. ಆಶಿಶ್ ಶೇಲಾರ್ ಅವರು ಗಾಯಕ ಪಂಡಿತ್ ಉಪೇಂದ್ರ ಭಟ್ ಅವರನ್ನು ಶಾಲು ಹೊದಿಸಿ ಫಲ-ಪುಷ್ಪಕೊಟ್ಟು ಗೌರವಿಸಿದರು.
ಭಾರತ ರತ್ನ ಪಂಡಿತ್ ಭೀಮ್ ಸೇನ್ ಜೋಶಿ ಅವರ ಪಟ್ಟಶಿಷ್ಯರಾದ ಪಂಡಿತ್ ಉಪೇಂದ್ರ ಭಟ್ ಇವರು ಕನ್ನಡದಲ್ಲಿ ಗೀತ ರಾಮಾಯಣ ಹಾಗೂ ವಚನಗಳನ್ನು ಸುಮಧುರ ಕಂಠದಿಂದ ಸುಶ್ರಾವ್ಯವಾಗಿ ಹಾಡಿ ನೆರೆದಿದ್ದ ಸಭಿಕರಿಗೆ ರಸದೌತಣವನ್ನು ನೀಡಿದರು. ಈ ಸಂದರ್ಭದಲ್ಲಿ ಶ್ರೀ. ಬಿ.ಎಸ್ ಸುರೇಶ್, ಕು. ಭವಾನಿ ಭಾರ್ಗವ, ಶ್ರೀಮತಿ ಪದ್ಮಜಾ ಬನವಾಸಿ, ಶ್ರೀಮತಿ ಸರೋಜಾ ರಾವ್ ಹಾಗೂ ಡಿಗ್ರಿ ಕಾಲೇಜಿನ ಪ್ರಾಚಾರ್ಯರಾದ ಡಾಕ್ಟರ್ ವೀಣಾ ಪ್ರಸಾದ್, ಜೂನಿಯರ್ ಕಾಲೇಜಿನ ಉಪನ್ಯಾಸಕ ವರ್ಗ ಹಾಗೂ ಪ್ರೌಢಶಾಲಾ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕ ಶಿಕ್ಷಕೇತರ ವರ್ಗದವರು ಉಪಸ್ಥಿತರಿದ್ದರು ಅಲ್ಲದೆ ಕನ್ನಡ ಮರಾಠಿ ಅಭಿಮಾನಿಗಳು ಉಪಸ್ಥಿತರಿದ್ದು ಸಂಗೀತದ ಕಲಾಸ್ವಾದವನ್ನು ಅನುಭವಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ. ಶೇಖರ್ ಪಾಟಣ್ಕರ್ ನಿರೂಪಿಸಿದರು. ಎಲ್ಲರೂ ಕೂಡಿಕೊಂಡು ಅದ್ದೂರಿಯಾಗಿ ಕಾರ್ಯಕ್ರಮ ಜರುಗಲು ಕಾರಣರಾದರು. ನಂತರ ಮೈಸೂರು ಅಸೋಸಿಯೇಷನ್ ಉಪಾಧ್ಯಕ್ಷರಾದ ಶ್ರೀ ಉಮೇಶ್ ಮಾಸ್ಕೇರಿ ಇವರು ವಂದಿಸಿದರು. ಕೊನೆಯಲ್ಲಿ ಪ್ರೀತಿ ಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.