April 2, 2025
ಸುದ್ದಿ

ಭಾಸ್ಕರ ರೈ ಕುಕ್ಕುವಳ್ಳಿ ಅವರಿಗೆ ಹುಟ್ಟೂರ ಸಮ್ಮಾನ – ತಾಳಮದ್ದಳೆ 

 

ಶಿಕ್ಷಣ, ಸಾಹಿತ್ಯ, ಸಾಂಸ್ಕೃತಿಕ ರಂಗಗಳ ಸಾಧಕ ಕುಕ್ಕುವಳ್ಳಿ’ : ಡಾ. ಪ್ರಭಾಕರ ಜೋಶಿ

 —————————-

ಮಂಗಳೂರು: ‘ವ್ಯಕ್ತಿಯೊಬ್ಬ ದೊಡ್ಡ ಶಕ್ತಿಯಾಗುವುದು ತನ್ನ ಸಾಧನೆಯ ಬಲದಿಂದ. ಭಾಸ್ಕರ ರೈ ಕುಕ್ಕುವಳ್ಳಿ ಯವರು ಕೇವಲ ಯಕ್ಷಗಾನಕ್ಕಾಗಿ ಸೀಮಿತರಾದವರಲ್ಲ ಅವರು ಶಿಕ್ಷಣ ಸಂಪನ್ಮೂಲ ವ್ಯಕ್ತಿಯಾಗಿ, ಕವಿ – ಸಾಹಿತಿಯಾಗಿ, ಸಾಂಸ್ಕೃತಿಕ ಸಂಘಟಕರಾಗಿ ವಿಶೇಷ ಸಾಧನೆ ಮಾಡಿದ ಸಾಹಸಿ. ಕನ್ನಡ ಮತ್ತು ತುಳು ಭಾಷೆಗಳಲ್ಲಿ ಸುಮಾರು 30 ಕೃತಿಗಳನ್ನು ಹೊರ ತಂದ ಪ್ರಬುದ್ಧ ಲೇಖಕ’ ಎಂದು ಹಿರಿಯ ಯಕ್ಷಗಾನ ಅರ್ಥಧಾರಿ ಮತ್ತು ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಹೇಳಿದ್ದಾರೆ.

         ವಿಶ್ರಾಂತ ಪ್ರಾಧ್ಯಾಪಕ, ಸಾಹಿತಿ ಮತ್ತು ಅರ್ಥಧಾರಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರಿಗೆ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ‘ಬಿಲ್ವಶ್ರೀ’ ಸಭಾಂಗಣದಲ್ಲಿ ಕ್ಷೇತ್ರದ ಪತ್ತನಾಜೆ ಉತ್ಸವ ಸಂದರ್ಭ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಸಂಘವು ಏರ್ಪಡಿಸಿದ ಹುಟ್ಟೂರ ಸಮ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ದೇಶ ವಿದೇಶಗಳ ಪ್ರಮುಖ ಕಾರ್ಯಕ್ರಮಗಳಲ್ಲಿ ಕರಾವಳಿಯ ಸಾಂಸ್ಕೃತಿಕ ಹರಿಕಾರರಾಗಿ ಭಾಗವಹಿಸಿ ಹಲವು ಪ್ರಶಸ್ತಿಗಳಿಗೆ ಭಾಜನರಾದ ಭಾಸ್ಕರ ರೈ ಅವರು ನಿರಂತರ ಕ್ರಿಯಾಶೀಲರಾಗಿರುವ ವಿಶಿಷ್ಟ ಪ್ರತಿಭಾವಂತ. ವಿವಿಧ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಧೀಮಂತ’ ಎಂದವರು ಶ್ಲಾಘಿಸಿದರು.

        ಅಭಿನಂದನಾ ಭಾಷಣ ಮಾಡಿದ ಹಿರಿಯ ಯಕ್ಷಗಾನ ಕಲಾವಿದ, ನಿವೃತ್ತ ಶಿಕ್ಷಕ ಎನ್. ಸಂಜೀವ ರೈ ಅವರು ಮಾತನಾಡಿ ‘ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಸಂಘದ ಸ್ಥಾಪಕ ಕಾರ್ಯದರ್ಶಿಯಾಗಿ ಭದ್ರ ಅಡಿಪಾಯ ಹಾಕಿಕೊಟ್ಟಿರುವ ಭಾಸ್ಕರ ರೈಯವರು ಪ್ರತಿಷ್ಠಿತ ಬಾಲ್ಯೊಟ್ಟು ಗುತ್ತು ಮನೆತನದಲ್ಲಿ ಜನಿಸಿದವರು. ಆರಂಭದಲ್ಲಿ ಕೃಷಿಕನಾಗಿ, ಸ್ಥಳೀಯ ಸಂಸ್ಥೆಗಳಲ್ಲಿ ದುಡಿದು ಮುಂದೆ ಮಂಗಳೂರು ಸೇರಿ ಅಂಚೆ ಇಲಾಖೆ ಮತ್ತು ಶಿಕ್ಷಣ ಇಲಾಖೆಗಳಲ್ಲಿ ಸರಕಾರಿ ಸೇವೆಯನ್ನು ಮಾಡುವುದರೊಂದಿಗೆ ಯಕ್ಷಗಾನದ ಪ್ರಸಿದ್ಧ ಅರ್ಥಧಾರಿಯಾಗಿ ಮತ್ತು ಬರಹಗಾರರಾಗಿ ಬೆಳೆದು ಹುಟ್ಟೂರಿಗೆ ಕೀರ್ತಿ ತಂದಿದ್ದಾರೆ’ ಎಂದರು. 

ಸನ್ಮಾನ ಸಮಾರಂಭ:

     ಪೂರ್ವಾಹ್ನ  ಪುತ್ತೂರು ಶಿವ ಬ್ರಾಹ್ಮಣ ಸ.ಸೇ. ಸಂಘದ ನಿರ್ದೇಶಕ ಬೆಟ್ಟಂಪಾಡಿ ಅಶೋಕ ಕುಮಾರ ಸಮಾರಂಭವನ್ನು ಉದ್ಘಾಟಿಸಿದರು. ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಪರ್ಲಡ್ಕದ ಎಸ್.ಡಿ.ಪಿ.ರೆಮಿಡೀಸ್ ಆಂಡ್ ರೀಸರ್ಚ್ ಸೆಂಟರ್ ನಿರ್ದೇಶಕ ಡಾ. ಹರಿಕೃಷ್ಣ ಪಾಣಾಜೆ ಭಾಸ್ಕರ ರೈ ಕುಕ್ಕುವಳ್ಳಿಯವರನ್ನು ಸನ್ಮಾನಿಸಿದರು.

      ಬೆಟ್ಟಂಪಾಡಿ ನವೋದಯ ವಿದ್ಯಾ ಸಮಿತಿ ಅಧ್ಯಕ್ಷ ಡಿ.ಎಂ .ಬಾಲಕೃಷ್ಣ ಭಟ್ ಘಾಟೆ ಮತ್ತು ಪ್ರಗತಿಪರ ಕೃಷಿಕ ಎಂ. ಮುತ್ತಣ್ಣ ಶೆಟ್ಟಿ ಚೆಲ್ಯಡ್ಕ ಮುಖ್ಯ ಅತಿಥಿಗಳಾಗಿದ್ದರು. ಇದೇ ಸಂದರ್ಭದಲ್ಲಿ ನಿವೃತ್ತ ಅಧ್ಯಾಪಕ ನಾರಾಯಣ ಭಟ್ ಕುಂಚಿನಡ್ಕ ಮತ್ತು ಕಲಾಪೋಷಕ ಜನಾರ್ಧನ ರಾವ್ ಬೆಟ್ಟಂಪಾಡಿ ಅವರನ್ನು ಸಪತ್ನಿಕರಾಗಿ ಗೌರವಿಸಲಾಯಿತು. ಸಂಘದ ಗೌರವಾಧ್ಯಕ್ಷ ಎಂ.ಸುಂದರ ಶೆಟ್ಟಿ ಬೆಟ್ಟಂಪಾಡಿ ಮತ್ತು ಹಿರಿಯ ಸದಸ್ಯ ಬಿ.ವಿಷ್ಣು ರಾವ್ ಸನ್ಮಾನ ಪತ್ರ ಓದಿದರು. ಶ್ರೀಕ್ಷೇತ್ರ ಬೆಟ್ಟಂಪಾಡಿಯ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ಬೀಡು, ಮೊಕ್ತೇಸರ ವಿನೋದ್ ಕುಮಾರ್ ರೈ ಗುತ್ತು, ಸಂಘದ ಹಿರಿಯ ಸದಸ್ಯ ಬಿ.‌ವೆಂಕಟ್ರಾವ್, ಕೋಶಾಧಿಕಾರಿ ಶ್ಯಾಂಪ್ರಸಾದ ಎಂ. ಉಪಸ್ಥಿತರಿದ್ದರು.

          ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಐ.ಗೋಪಾಲಕೃಷ್ಣ ರಾವ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಕಾರ್ಯದರ್ಶಿ ಪ್ರದೀಪ್ ರೈ ಕೇಕನಾಜೆ ವರದಿ ಮಂಡಿಸಿದರು. ಪತ್ರಕರ್ತ ಉಮೇಶ್ ಮಿತ್ತಡ್ಕ ವಂದಿಸಿದರು. ಕೃಷ್ಣಪ್ರಸಾದ್ ಬೆಟ್ಟಂಪಾಡಿ ನಿರೂಪಿಸಿದರು.

ತಾಳಮದ್ದಳೆ – ಸಂವಾದ:

     ಸಮಾರಂಭಕ್ಕೂ ಮುನ್ನ ‘ಗುರು ಶಿಷ್ಯ ಸಂವಾದ’ ಯಕ್ಷಗಾನ ತಾಳಮದ್ದಳೆ ಜರಗಿತು. ಡಾ.ಎಂ.ಪ್ರಭಾಕರ ಜೋಶಿ (ಪರಶುರಾಮ) ಮತ್ತು ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ (ಭೀಷ್ಮ ) ಅರ್ಥಧಾರಿಗಳಾಗಿದ್ದರು. ಪ್ರಶಾಂತ ರೈ ಪುತ್ತೂರು  ಅವರ ಭಾಗವತಿಕೆಗೆ ಸಂಘದ ಕಲಾವಿದರು ಹಿಮ್ಮೇಳದಲ್ಲಿ ಸಹಕರಿಸಿದರು.

‘ಮಹಾಶೂರ ಭೌಮಾಸುರ’ ಬಯಲಾಟ: 

    ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಸಂಘದ 44 ನೇ ವಾರ್ಷಿಕೋತ್ಸವ ಪ್ರಯುಕ್ತ ಅಪರಾಹ್ಣ ಗಂಟೆ 2 ರಿಂದ ಸಂಘದ ಕಲಾವಿದರು ಮತ್ತು ಅತಿಥಿ ಕಲಾವಿದರ ಸಂಯೋಜನೆಯಲ್ಲಿ ‘ಮಹಾಶೂರ ಭೌಮಾಸುರ’ ಯಕ್ಷಗಾನ ಬಯಲಾಟ ಜರಗಿತು.

Related posts

ಬೆಂಗಳೂರು : ದಕ್ಷಿಣ ಕನ್ನಡಿಗರ ಸಂಘದ ಸಂಭ್ರಮಾಚರಣೆ, ಸಾಧಕರಿಗೆ ಪ್ರಶಸ್ತಿ, ಕರ್ನಿರೆ ವಿಶ್ವನಾಥ ಶೆಟ್ಟಿಯವರಿಗೆ ‘ಕರಾವಳಿ ರತ್ನ’ ಪ್ರಶಸ್ತಿ ಪ್ರದಾನ,

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ (ರಿ) ಮಂಗಳೂರು ಹಾಗೂ ಮುತ್ತೂಟ್ ಫೈನಾನ್ಸ್ ಲಿಮಿಟೆಡ್ ಇದರ ಜಂಟಿ ಆಶ್ರಯದಲ್ಲಿ ಸ್ಥನ್ಯಪಾನ ಶಿಬಿರಕ್ಕೆ ಚಾಲನೆ.

Mumbai News Desk

ಚುನಾವಣಾ ಹಿನ್ನಲೆಯಲ್ಲಿ ಮುಂಬಯಿಯಲ್ಲಿ ಐಎನ್ ಡಿಐ ಪತ್ರಿಕಾಗೋಷ್ಠಿ

Mumbai News Desk

ರಾಷ್ಟ್ರೀಯ ನಾಟಕ ಸ್ಪರ್ಧೆ – ಉಡುಪಿಯ ನವಸುಮ ರಂಗಮಂಚ ಕೊಡವೂರು ತಂಡ ಪ್ರಥಮ.

Mumbai News Desk

ಪೂರ್ವ ಆಫ್ರಿಕಾದಲ್ಲಿ ಬಂಟ ಸಂಭ್ರಮ -2೦23 ಕಾರ್ಯಕ್ರಮ

Mumbai News Desk

ಮೂಡುಬಿದಿರೆ – ಸ್ವಾಮೀಸ್ ಸ್ಟ್ರೆಂಥ್ ಟ್ರೈನಿಂಗ್ ಮತ್ತು ಎಂ.ಜೆ. ಸ್ಟೆಪ್ ಅಪ್ ಡ್ಯಾನ್ಸ್ ಸ್ಟುಡಿಯೊದ ಆಯೋಜನೆಯಲ್ಲಿ ಮಿಸ್ಟರ್ ಆ್ಯಂಡ್ ಮಿಸ್ ಕರಾವಳಿ ಸ್ಪರ್ಧೆ : ಮಿಸ್ ಕ್ವೀನ್ ಕರಾವಳಿ 2025 ಆಗಿ ಪೂರ್ವಿ ಇ ಕುಲಾಲ್ ಆಯ್ಕೆ

Mumbai News Desk