
ಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ್ ರಾವ್ ಶುಕ್ರವಾರ ಹೃದಯಘಾತದಿಂದ ನಿಧನ ಹೊಂದಿದರು. ಅವರಿಗೆ 76 ವರ್ಷ ವಯಸಾಗಿತ್ತು.
1948ರ ಜುಲೈ 23ರಂದು ಕಾಸರಗೋಡು ಜಿಲ್ಲೆಯ ನಾಯ್ಕಪುವಿನಲ್ಲಿ ಜನಿಸಿದ ಅವರು, 1962ರಲ್ಲಿ ಕಲ್ಲಾಡಿ ಕೊರಗ ಶೆಟ್ಟರ ಯಜಮಾನಿಕೆಯ ಕುಂಡಾವು ಮೇಳಕ್ಕೆ ಬಾಲ ಕಲಾವಿದರಾಗಿ ಯಕ್ಷ ರಂಗ ಸೇರಿದ್ದರು.
ಬಳಿಕ ಕೂಡ್ಲು, ಮೂಲ್ಕಿ, ಕರ್ನಾಟಕ ಮತ್ತು ಧರ್ಮಸ್ಥಳ ಮೇಳಗಳಲ್ಲಿ ಒಟ್ಟು 60 ವರ್ಷಗಳ ಕಲಾ ಸೇವೆಗೈದಿರುವರು.
ಕುಂಬ್ಳೆ ಅವರು ತೆಂಕುತಿಟ್ಟಿನ ಅಪ್ರತಿಮ ಸ್ತ್ರಿ ವೇಷದಾರಿಯಾಗಿ ಗಮನಸೆಳೆದಿದ್ದರು. ಅವರ ದಮಯಂತಿ, ದಾಕ್ಷಯಯಣಿ, ಲಕ್ಷ್ಮೀ, ಸುಭದ್ರೆ, ಸತ್ಯಭಾಮ, ಪ್ರಮೀಳಾ, ಶಶಿಪ್ರಭೆ ಅವರಿಗೆ ದೊಡ್ಡ ಮಟ್ಟದ ಹೆಸರು ಮಾಡಿತ್ತು. ಅವರ ಅಂಬಾ ರೂಪ ರೇಖಾ ಪ್ರಸಂಗದ ರಂಬೆಯ ಪಾತ್ರದ ಅಭಿನಯವನ್ನು ಯಕ್ಷ ಪ್ರೇಮಿಗಳು ಈಗಲೂ ನೆನಪಿಸುತ್ತಾರೆ.
ಪುರುಷ ವೇಷದಲ್ಲಿ ಈಶ್ವರ, ಲಕ್ಷ್ಮಣ, ಮತ್ತು ವಿಷ್ಣು ಪಾತ್ರಗಳೂ ಅವರಿಗೆ ಖ್ಯಾತಿ ತಂದುಕೊಟ್ಟಿತ್ತು.