ಇತಿಹಾಸ ಪ್ರಸಿದ್ಧ ಕಾಪು ಹಳೆ ಶ್ರೀ ಮಾರಿಯಮ್ಮ ದೇವಸ್ಥಾನ, ಹೊಸ ಶ್ರೀ ಮಾರಿಗುಡಿ ದೇವಸ್ಥಾನ, ಮೂರನೇ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಕಲಾವಧಿ ಜಾರ್ದೆ ಮಾರಿ ಪೂಜೆ ನವಂಬರ್ 26 ಮತ್ತು 27 ರಂದು ನಡೆಯಲಿದೆ.
ಮಂಗಳವಾರ ರಾತ್ರಿ ಹಳೇ ಶ್ರೀ ಮಾರಿಗುಡಿಗೆ ಶ್ರೀ ವೆಂಕಟ್ರಮಣ ದೇವಸ್ಥಾನ ಹಾಗೂ ಹೊಸ ಶ್ರೀ ಮಾರಿಗುಡಿ ಮತ್ತು ಮೂರನೇ ಶ್ರೀ ಮಾರಿಗುಡಿಗೆ ಶ್ರೀ ಲಕ್ಷ್ಮಿ ಜನಾರ್ದನ ದೇವಸ್ಥಾನದಿಂದ ದೇವರ ಆಭರಣಗಳನ್ನು ಮೆರವಣಿಗೆ ಮೂಲಕ ತಂದು ಬಳಿಕ ಮಾರಿ ಪೂಜೆಯ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುತ್ತದೆ.
ಬುಧವಾರ ಸಂಜೆವರೆಗೆ ಮಾರಿ ಪೂಜೆಯ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ ನಾಲ್ಕು ಗಂಟೆಗೆ ಮಾರಿಯಮ್ಮ ದೇವಿಯ ದರ್ಶನದ ಬಳಿಕ ವಿಸರ್ಜನೆ ನಡೆಯಲಿದೆ.
ತುಳುನಾಡಿನ ಸಪ್ತ ಜಾತ್ರೆಗಳಲ್ಲಿ ಒಂದೇ ಎಂಬ ಹೆಗ್ಗಳಿಕೆ ಗಳಿಸಿರುವ ಕಾಪುವಿನ ಮೂರು ಮಾರಿಗುಡಿಯಲ್ಲಿ ನಡೆಯುವ ಮಾರಿ ಪೂಜೆಗೆ ಊರ – ಪರವೂರ ಭಕ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಹರಕೆ ರೂಪದಲ್ಲಿ ಹೂವಿನ ಪೂಜೆ ಸಹಿತ ನಾನಾ ಸೇವೆಗಳನ್ನು ನಡೆಸುತ್ತಾರೆ.
