
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ದಶಂಬರ 20ರಿಂದ 26ರ ತನಕ ಶ್ರೀ ದತ್ತ ಜಯಂತಿ ಮಹೋತ್ಸವ-ಶ್ರೀ ದತ್ತ ಮಹಾಯಾಗ ಸಪ್ತಾಹವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು. ಈ ಸುಸಂದರ್ಭ ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಇವರಿಂದ ಶ್ರೀಮದ್ಭಾಗವತ ಪ್ರವಚನ ಸಪ್ತಾಹ ಹಾಗೂ ಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ ಸಪ್ತಾಹವು ನಡೆಯಲಿದೆ. ದಶಂಬರ 20ರಂದು ಬೆಳಗ್ಗೆ ಘಂಟೆ 9.00ರಿಂದ ಶ್ರೀ ಗಣಪತಿ ಹವನ, ನಾಗತಂಬಿಲ, ಶ್ರೀ ದತ್ತ ಮಹಾಯಾಗ ಸಪ್ತಾಹ ಆರಂಭ, ಘಂಟೆ 9.30ರಿಂದ ಪೂಜ್ಯ ಶ್ರೀಗಳವರ ದಿವ್ಯೋಪಸ್ಥಿತಿಯಲ್ಲಿ ಶ್ರೀ ದತ್ತಮಾಲಾಧಾರಣೆ. ಘಂಟೆ 10.30ಕ್ಕೆ ಶ್ರೀಮದ್ಭಾಗವತ ಪ್ರವಚನ ಸಪ್ತಾಹ ಉದ್ಘಾಟನೆ. ಮಧ್ಯಾಹ್ನ ಘಂಟೆ 12.30ರಿಂದ ಮಹಾಪೂಜೆ, ಮಹಾಸಂತರ್ಪಣೆ.
ಅಪರಾಹ್ಣ 2.00ಘಂಟೆಗೆ ‘ಆದಿನಾರಾಯಣ ದರ್ಶನ’ ಯಕ್ಷಗಾನ ತಾಳಮದ್ದಳೆ, ಸಂಜೆ ಘಂಟೆ 6.00ರಿಂದ ಶ್ರೀ ದತ್ತಾಂಜನೇಯ ದೇವರ ಪಲ್ಲಕ್ಕಿ ಉತ್ಸವ, ರಂಗಪೂಜೆ, ವಿಶೇಷ ಬೆಳ್ಳಿರಥೋತ್ಸವ. ಸಂಜೆ ಗಂಟೆ 6.30ರಿಂದ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ ಇವರಿಂದ ರಾಜಾಂಗಣದ ಮುಂಭಾಗ ‘ಭಾರತ ಜನನಿ’ ಯಕ್ಷಗಾನ ಬಯಲಾಟವಿದೆ.
ದಶಂಬರ 20ರಿಂದ 26ರ ತನಕ ಪ್ರತಿದಿನ ಬೆಳಿಗ್ಗೆ ವೇದ-ಗುರುಚರಿತ್ರೆ ಪಾರಾಯಣ. ಘಂಟೆ 10.30ರಿಂದ ಶ್ರೀಮದ್ಭಾಗವತ ಪ್ರವಚನ, ಮಧ್ಯಾಹ್ನ ಘಂಟೆ 12.30ಕ್ಕೆ ಮಹಾಪೂಜೆ, ಮಹಾಸಂತರ್ಪಣೆ, ಅಪರಾಹ್ಣ ಘಂಟೆ 2.00ರಿಂದ ಯಕ್ಷಗಾನ ತಾಳಮದ್ದಳೆ ರಾತ್ರಿ ಘಂಟೆ 7.00ರಿಂದ ರಂಗಪೂಜೆ, ವಿಶೇಷ ಬೆಳ್ಳಿರಥೋತ್ಸವ ಸೇವೆ ಜರಗಲಿದೆ.