
ಕಳೆದ ಎಂಟು ದಶಕಗಳಿಗೂ ಹೆಚ್ಚುಕಾಲದಿಂದ ನಾಡು ನುಡಿಯ ಸೇವೆಯಲ್ಲಿ ನಿರತವಾಗಿದ್ದು ಮುಂಬಯಿ ಕನ್ನಡಿಗರ ಗೌರವಾದರಗಳಿಗೆ ಪಾತ್ರವಾಗಿರುವ ಮಾಟುಂಗಾ ಪೂರ್ವದ ಮುಂಬಯಿ ಕನ್ನಡ ಸಂಘದ ವತಿಯಿಂದ ಎರಡು ದತ್ತಿ ಉಪನ್ಯಾಸಗಳ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶನಿವಾರ ಡಿಸೆಂಬರ್ 23 ರಂದು ಸಂಜೆ ಗಂಟೆ 5:30ಕ್ಕೆ ಮಾಟುಂಗಾದ ಮೈಸೂರು ಅಸೋಶಿಯೇಶನ್‌ನ ತಳ ಮಹಡಿಯಲ್ಲಿ ಏರ್ಪಡಿಸಲಾಗಿದ್ದ ಈ ಕಾರ್ಯಕ್ರಮಕ್ಕೆ ಚಿತ್ರಾಪು ಕೆ.ಎಮ್.ಕೋಟ್ಯಾನರು ಮುಖ್ಯ ಅತಿಥಿಯಾಗಿ ಆಗಮಿಸಿದ್ದು ಮುಂಬಯಿ ಕನ್ನಡ ಸಂಘದ ಅಧ್ಯಕ್ಷರಾದ ಗುರುರಾಜ್ ಎಸ್. ನಾಯಕ್ ಅಧ್ಯಕ್ಷತೆ ವಹಿಸಿದ್ದರು.
ಎಸ್.ಕೆ ಪದ್ಮನಾಭರಿಂದ ಪ್ರಾರ್ಥನೆಯಾದ ಬಳಿಕ ಗುರುರಾಜ ಎಸ್.ನಾಯಕರು ನೆರೆದವರೆಲ್ಲರಿಗೂ ಸ್ವಾಗತ ಬಯಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸಂಘದ ಕಾರ್ಯಚಟುವಟಿಕೆಗಳ ಸ್ಥೂಲ ಪರಿಚಯ ನೀಡಿ ಸಂಘವು ಶತಮಾನೋತ್ಸವದತ್ತ ಹೆಜ್ಜೆ ಇರಿಸುತ್ತಿದೆ ಎಂದರು.
ಸಂಘದ ಗೌರವ ಜೊತೆ ಕಾರ್ಯದರ್ಶಿ ಮಲ್ಲಿಕಾರ್ಜುನ ಬಡಿಗೇರರು ಮುಖ್ಯ ಅತಿಥಿ ಚಿತ್ರಾಪು ಕೆ.ಎಮ್.ಕೋಟ್ಯಾನರ ಪರಿಚಯ ಮಾಡಿಕೊಟ್ಟರು. ಗುರುಜಾಜ ಎಸ್.ನಾಯಕ್ ರು ಶಾಲು, ಸ್ಮರಣಕೆ ಹಾಗೂ ಪುಷ್ಪಗುಚ್ಛ ನೀಡಿ ಕೋಟ್ಯಾನರನ್ನು ಗೌರವಿಸಿದರು.




ಉಪನ್ಯಾಸಕರಾದ ಶ್ರೀಮತಿ ಲಕ್ಷ್ಮೀ ರಾಜೀವ ಹೇರೂರರ ಪರಿಚಯವನ್ನು ಶಿಕ್ಷಕಿ ಅರ್ಚನಾ ಪೂಜಾರಿಯವರು ಮಾಡಿಕೊಟ್ಟರು. ಅವರನ್ನು ಸಂಘದ ಮಹಿಳಾ ವಿಭಾಗದ ಕಾರ್ಯದರ್ಶಿ ಪ್ರಭಾ ಸುವರ್ಣರು ಸನ್ಮಾನಿಸಿದರು. ಇನ್ನೋರ್ವ ಉಪನ್ಯಾಸಕರಾದ ಶ್ರೀಮತಿ ಪದ್ಮಜಾ ಮಣ್ಣೂರ ಇವರನ್ನು ಶಾರದಾ ಅಂಬೇಸಂಗೆಯವರು ಪರಿಚಯಿಸಿ ಅವರನ್ನು ಅರ್ಚನಾ ಪೂಜಾರಿಯವರು ಸನ್ಮಾನಿಸಿದರು,






ಆ ಬಳಿಕ ಖಾಲ್ಸಾ ಕಾಲೇಜು ಕನ್ನಡ ಪ್ರೇಮಿ ಮಂಡಳಿ ದತ್ತಿ ನಿಧಿಯ ಉಪನ್ಯಾಸಕರಾಗಿ ಲೇಖಕಿ, ಕವಯಿತ್ರಿ ಲಕ್ಷ್ಮೀ ರಾಜೀವ ಹೇರೂರರು ‘ಪುರಾಣ ಕಾಲದ ನ ಹೆಣ್ಣು ಸಾಗಿ ಬಂದ ಪರಂಪರೆ’ ಎಂಬ ವಿಷಯದ ಮೇಲೆ ತಮ್ಮ ಉಪನ್ಯಾಸದಲ್ಲಿ ಪುರಾಣ ಕಾಲದಲ್ಲಿನ ಶಾಕುಂತಲೆ, ಅನುಸೂಯ, ಸೀತೆ, ದ್ರೌಪದಿಯವರಂತಹ ದಿಟ್ಟ ಮಹಿಳೆಯರನ್ನು ನೆನಪಿಸಿ ಅವರು ಪಟ್ಟ ಭವಣೆಯನ್ನು ಸವಿಸ್ತಾರವಾಗಿ ತಿಳಿಸಿದರು . ಈ ಅಸಮಾನ್ಯ ಮಹಿಳೆಯರು ತಮ್ಮ ಪತಿಯಂದಿರಿಗೆ ನೆರಳಾಗಿ ಅವರ ಸಾಹಸದಲ್ಲಿ ಅವರಿಗೆ ಸಹಕರಿಸುತ್ತಿದ್ದರು ಎಂದರು. ನಂತರ ದಿ. ಜಿ.ವಿ.ರಂಗಸ್ವಾಮಿ ದತ್ತಿ ನಿಧಿಯ ಉಪನ್ಯಾಸಕರಾಗಿ ಲೇಖಕಿ, ‘ಸೃಜನಾ’ ಬಳಗದ ಸಂಚಾಲಕಿ ಶ್ರೀಮತಿ ಪದ್ಮಜಾ ಮಣ್ಣೂರ ‘ಮಾತೃಭಾಷೆಯ ಪರಿಕಲ್ಪನೆ ‘ ಎಂಬ ವಿಷಯದ ಮೇಲೆ ಮಾತನಾಡುತ್ತಾ ಮಕ್ಕಳಿಗೆ ಆರಂಭದಲ್ಲಿ ತಮ್ಮ ಮಾತೃಭಾಷೆಯಲ್ಲೇ ಶಿಕ್ಷಣ ನೀಡಬೇಕು ಎಂದರಲ್ಲದೆ ಇಂದು ನಮ್ಮ ದೇಶದಲ್ಲಿ ಇಂಗ್ಲಿಷ್ ಭಾಷೆಯ ಮೇಲಿನ ವ್ಯಾಮೋಹವು ಮಿತಿ ಮೀರಿ ಹೆಚ್ಚುತ್ತಿರುವ ಕಾರಣ ಅನೇಕ ಭಾರತೀಯ ಭಾಷೆಗಳು ಅಳಿವಿನಂಚಿಗೆ ತಲುಪಿರುವ ಬಗ್ಗೆ ವಿಶಾದ ವ್ಯಕ್ತ ಪಡಿಸಿದರು. ಅವರು ಮಹಾತ್ಮಾ ಗಾಂಧಿ, ಕುವೆಂಪುರಂಥವರು ಮಾತೃಭಾಷೆಯ ಮಹತ್ವವನ್ನು ಪ್ರತಿಪಾದಿಸುತ್ತಿದ್ದರು ಎಂದರು.




ಮುಖ್ಯ ಅತಿಥಿ ಚಿತ್ರಾಪು ಕೆ.ಎಂ.ಕೋಟ್ಯಾನರು ತಮ್ಮ ಭಾಷಣದಲ್ಲಿ ಮಕ್ಕಳಿಗೆ ನಮ್ಮ ಭವ್ಯ ಪರಂಪರೆಯ ಬಗ್ಗೆ ತಿಳಿಯ ಹೇಳುವುದು ಹೆತ್ತವರ ಕರ್ತವ್ಯವಾಗಿದೆ . ಇಂದಿನ ಮಕ್ಕಳಿಗೆ ರಾಮಾಯಣ, ಮಹಾಭಾರತ, ಗೀತೆಯ ಬಗ್ಗೆ ಹೆಚ್ಚಿನ ತಿಳುವಳಿಕೆ ಇಲ್ಲ. ಇದು ಅತ್ಯಂತ ಬೇಸರದ ಸಂಗತಿ ಎಂದರು. ಮಾತೃಭಾಷೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಮಕ್ಕಳಿಗೆ ಮನೆಯ ಹೊರಗೆ ಬೇರೆ ಬೇರೆ ಭಾಷೆಗಳನ್ನು ಕಲಿಯವ ಅವಕಾಶವಿದ್ದರೂ ಅವರಿಗೆ ಮನೆಯಲ್ಲಿ ಮಾತೃಭಾಷೆಯನ್ನು ಕಲಿಸಿಕೊಡಬೇಕು ಮಾತ್ರವಲ್ಲದೆ ಅವರಿಗೆ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲೆ ನೀಡಬೇಕೆಂದರು.
ಕಾರ್ಯಕಾರಿ ಸಮಿತಿಯ ಸದಸ್ಯ ಸುಧಾಕರ ಸಿ. ಪೂಜಾರಿ ವಂದನಾರ್ಪಣೆಗೈದರು. ಸಂಘದ ಪ್ರಧಾನ ಕಾರ್ಯದರ್ಶಿ ಸೋಮನಾಥ ಎಸ್. ಕರ್ಕೇರರು ಕಾರ್ಯಕ್ರಮನ್ನು ನಿರ್ವಹಿಸಿದರು . ಎಸ್.ಕೆ.ಪದ್ಮನಾಭ್, ನಾರಾಯಣ ರಾವ್, ರಾಮಚಂದ್ರ ಭಟ್ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕೊನೆಯಲ್ಲಿ ಉಘು ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.