
ಲೇಖನ : ಪೇತ್ರಿ
ಹೌದು ಅದೊಂದು ಅಪೂರ್ವ ಕ್ಷಣ. ಸಮಾಜದಲ್ಲಿ ಅತ್ಯುನ್ನತ ಸೇವೆ ಸಲ್ಲಿಸಿದ ಸಜ್ಜನ ಮಹೋದಯರುಗಳನ್ನು ಗುರುತಿಸಿ ಕಲ್ಕೂರ ಪ್ರತಿಷ್ಠಾನ ಕೊಡಮಾಡುವ ಪ್ರಶಸ್ತಿ. ಪೇಜಾವರ ಶ್ರೀ ವಿಶ್ವೇಶತೀರ್ಥ ಜೀವಮಾನ ಪ್ರಶಸ್ತಿ ಈ ಪ್ರಶಸ್ತಿ ನಮ್ಮ ನೆಚ್ಚಿನ ರಂಗನಟ ಸಹೃದಯಿ ಸಮಾಜ ಸೇವಕ ಭಾಸ್ಕರ ಸುವರ್ಣ ಸಸುಹಿತ್ಲು ಅವರನ್ನು ಅರಸಿಕೊಂಡು ಅವರ ಕೊರಳ ಶೃಂಗರಿಸಿದೆ ಎನ್ನಲು ಮಹಾದಾನಂದವಾಗುತ್ತಿದೆ.
ವಿಶ್ವೇಶ್ವರ ತೀರ್ಥರು ನಾಡು ಕಂಡ ಓರ್ವ ಮಹಾನ್ ಸಂತ.ಅವರು ಹರಿಪಾದ ಸೇರಿ ನಾಲ್ಕು ವರ್ಷದ ಪುಣ್ಯ ಸ್ಮರಣೆಯ ನಿಮಿತ್ತ ಆ ಪುಣ್ಯಾತ್ಮರ ಹೆಸರಲ್ಲಿ ಕೊಡಮಾಡುವ ಪ್ರಶಸ್ತಿ ಅದಕ್ಕೊಂದು ವಿಷೇಶವಾದ ತೂಕವಿದೆ. ಹಾಗಂತ ಸಿಕ್ಕ ಸಿಕ್ಕವರಿಗೆ, ಪ್ರಚಾರ-ಪ್ರಶಸ್ತಿಯನ್ನು ಅರಸಿಕೊಂಡು ಹೋಗುವವರಿಗೆ ಈ ಪ್ರಶಸ್ಥಿ ನಿಷಿದ್ಧ. ಇಂತಹ ಪ್ರತಿಷ್ಠಿತ ಪ್ರಶಸ್ತಿಗೆ ತೂಕದ ವ್ಯಕ್ತಿತ್ವವೂ ಅತ್ಯಗತ್ಯ.ಅಂತಹ ಘನಸ್ತಿಗೆ ಸುವರ್ಣರವರಲ್ಲಿ ಇದೆ ಎನ್ನುವುದನ್ನು ಅರಿತ ಕಲ್ಕೂರ ಪ್ರತಿಷ್ಠಾನ ಉಡುಪಿಯ ಪೇಜಾವರ ಸ್ವಾಮಿಯವರ ಅಮೃತ ಹಸ್ತದಿಂದ ಪ್ರಶಸ್ತಿಯನ್ನು ಈ ಶುಭ ಅವಸರದಲ್ಲಿ ಭಾಸ್ಕರ ಸುವರ್ಣ ಸಸಿಹಿತ್ಲು ಅವರಿಗೆ ಶ್ರೀಕೃಷ್ಣ ಪರಮಾತ್ಮನ ಆಶೀರ್ವಾದದೊಂದಿಗೆ ಹಸ್ತಾಂತರಿಸಿದ್ದಾರೆ.
ಸುವರ್ಣರವರು ಒಂದಷ್ಟು ವರ್ಷಗಳಿಂದ ಮುಂಬಯಿಯಲ್ಲಿ ಸಮಾಜಮುಖಿ ಕಾಯಕದೊಂದಿಗೆ ಗುರುತಿಸಿಕೊಂಡವರು.ಹತ್ತು ಹಲವಾರು ಸಂಘಟೆನೆಗಳೊಂದಿಗೆ ತನ್ನನ್ನು ತೊಡಗಿಸಿಕೊಂಡು ನಾಡು -ನುಡಿ ಸೇವೆಗೆ ತನ್ನನ್ನು ಅರ್ಪಿಸಿಕೊಂಡು ಬಂದವರು.
ಕಾಲಲ್ಲಿ ಬಲವಿಲ್ಲದಿದ್ದರೇನು, ಮನಸ್ಸಿನಲ್ಲಿರುವ ಛಲಕ್ಕೆ ಬಲವಿದೆ.
ಎಂಬ ತುಂಬು ವಿಶ್ವಾಸದೊಂದಿಗೆ ಸಮಾಜ ಸೇವೆಗೆ ಇಳಿದು ಇತರರಿಗೆ ನನ್ನ ನೋಡಿ ಕಲಿಯಿರಿ ಎಂದು ದೀಪ ಹಿಡಿದವರಿವರು.
ಬಣ್ಣದ ಮಾತು ಅರಿಯದವ.ಅವರದ್ದೇನಿದ್ದರೂ
ನೇರ ನಡೆ ನೇರ ನುಡಿ,
ಸಮಾಜ-ದೇಶ ಭಾಷೆ ಸಂಸ್ಕ್ರತಿಗೆ ಮೊದಲ ಮನ್ನಣೆ.ತನ್ನಷ್ಟಕ್ಕೆ-ತನ್ನಿಷ್ಟಕ್ಕೆ ಎಂಬಂತೆ ಸಮಾಜ ಸೇವೆಗೆ ಇಳಿದವರು.
ಈ ಮಾಯಾನಗರಿಗೆ ಬಂದ ಹೊಸತರಲ್ಲಿ ತನ್ನ ತುತ್ತಿಗೂ ಕಷ್ಟವಾಗಿದ್ದರೂ ಕಲಿಯುವ ಮಕ್ಕಳಿಗೆ ಯಾವುದೇ ಪಲಾಪೇಕ್ಷೆ ಇಲ್ಲದೆ ಅಕ್ಷರ ಕಲಿಸಿದ ಗುರು ಈತ.ರಂಗವೇರಿ ಕಲೆಯ ರಂಗೇರಿಸಿದವನೀತ.ದೇಹಿ ಎಂದವರಿಗೆ ಆಗಾಗ ಆಪದ್ಭಾಂದವನಾದವ.ತನ್ನ ನೋವನ್ನು ಮರೆತು ಇನ್ನೊಬ್ಬರ ಮುಖದ ಖುಷಿ ಕಂಡು ಮಂದಸ್ಮಿತನಾಗುವ ಮಹಾನುಭಾವ.ಒಟ್ಟಾರೆ ಇವರ ಸಮಾಜ ಮುಖಿ ಕಾಯಕಗಳಿಗೆ ಅಕ್ಷರಗಳ ಜೋಡಿಸ ಹೋದಲ್ಲಿ ಮೂಡಣದಿ ಮೂಡುವ ದೇವರು ಪಡುವಣದಿ ಮನೆ ಸೇರುವಷ್ಟು ಬೇಕಾದಿತು.
ಅಂದ ಹಾಗೆ ಇಂದು ಈ ಪ್ರಶಸ್ತಿ ವಿತರಣೆಯ ಸಂಧರ್ಭದಲ್ಲಿ ವೇದಿಕೆಯಲ್ಲಿ ವಿರಾಜಮಾನರಾಗಿದ್ದವರು ಶ್ರೀ ಪೇಜಾವರ ಶ್ರೀಗಳು,ಶಿರೂರು ಮಠದ ಶ್ರೀಗಳು, ನಾಡಿನ ಶ್ರೇಷ್ಠ ಸಂಘಟಕ ಡಾ. ಎಂ ಮೋಹನ ಆಳ್ವ,
ಮಂಗಳೂರಿನ ನೆಚ್ಚಿನ ಶಾಸಕರಾದ ವೇದವ್ಯಾಸ ಕಾಮತ್,ಮಂಗಳೂರು ನಗರದ ಮಹಾ ಪೌರ ಶ್ರೀ ಸುಧೀರ ಶೆಟ್ಟಿ ಕಣ್ಣೂರು, ಮೊನ್ನೆ ತಾನೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಲಕ್ಮೀಶ ತೋಳ್ಪಾಡಿ,ಕಲ್ಕೂರ ಪ್ರತಿಷ್ಠಾನದ ಮುಖ್ಯಸ್ಥ ಪ್ರದೀಪ ಕುಮಾರ್ ಕಲ್ಕೂರ….ಹೀಗೆ ಹಲವಾರು ಜನ ಗೌರವಾನ್ವಿತರು ವೇದಿಕೆಯ ಚೆಂದ ಹೆಚ್ಚಿಸಿದವರು.
ಇರಲಿ ಇಂತಹ ಹತ್ತು ಹಲವಾರು ಪ್ರಶಸ್ತಿ ಸಮ್ಮಾನಗಳು
ಅರಸಿಕೊಂಡು ಬರಲಿ.ತಾಯಿ ಭಗವತಿ ಅವರಿಗೆ ಆರೋಗ್ಯ ಭಾಗ್ಯ ಕರುಣಿಸಲಿ.ಅವರಿಚ್ಚೆಯ ಬದುಕು ಅವರಿಗೊಲಿದು ಬರಲಿ ಎಂಬ ಮಹದಾಸೆಯೊಂದಿಗೆ ಅಣ್ಣಾ ನೀಮಗೆ ಕೋಟಿ ಕೋಟಿ ಅಭಿನಂದನೆಗಳು.