
ಮನಃಪೂರ್ವಕವಾಗಿ ರಕ್ತದಾನ ಮಾಡಿ : ದಿನಕರ್ ಮೆಂಡ
ರಕ್ತದಾನಕ್ಕೆ ಜೀವ ಉಳಿಸುವ ಶಕ್ತಿ ಇದೆ. ರಕ್ತದಾನ ಮನಃಪೂರ್ವಕವಾಗಿ ಮಾಡಬೇಕು. ಬಡವ, ಶ್ರೀಮಂತ ಎಲ್ಲರಿಗೂ ಹೊಂದಾಣಿಕೆಯಾಗುವ ವಸ್ತು ಎಂದರೆ ರಕ್ತ ಮಾತ್ರ ಎಂದು ಪ್ರಾಧ್ಯಾಪಕ ದಿನಕರ್ ಮೆಂಡ ಹೇಳಿದರು.
ಅವರು ಗುರುಪುರ ಬಂಟರ ಮಾತೃ ಸಂಘದ ಯುವ ವಿಭಾಗದ ವತಿಯಿಂದ ಎ.ಜೆ. ಆಸ್ಪತ್ರೆ ಆ್ಯಂಡ್ ರಿಸರ್ಚ್ ಸೆಂಟರ್, ಮಂಗಳೂರು ಇದರ ಸಹಯೋಗದೊಂದಿಗೆ ಗುರುಪುರ ಕುಕ್ಕುದಕಟ್ಟೆ ಶ್ರೀ ವೈದ್ಯನಾಥ ಕಲ್ಯಾಣ ಸಮುದಾಯ ಭವನದಲ್ಲಿ ಜರಗಿದ ಬೃಹತ್ ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಉದ್ಯಮಿ ಶ್ರೀಮತಿ ಉಮಾವತಿ ಎಂ. ಶೆಟ್ಟಿ ನಾಡಾಜೆಗುತ್ತು ಶಿಬಿರವನ್ನು ಉದ್ಘಾಟಿಸಿದರು. ಎ.ಜೆ.ಆಸ್ಪತ್ರೆ ಬ್ಲಡ್ ಬ್ಯಾಂಕ್‌ನ ಮ್ಯಾನೇಜರ್ ಗೋಪಾಲಕೃಷ್ಣ ಅವರು ಮಾತನಾಡಿ, ರಕ್ತದ ಅವಶ್ಯಕತೆ ಸಾಕಷ್ಟು ಇದೆ. ದ.ಕ. ಜಿಲ್ಲೆಗೆ 8 ಜಿಲ್ಲೆಗಳಿಂದ ಜನರು ಇಲ್ಲಿನ ಆಸ್ಪತ್ರೆಗಳಿಗೆ ಬರುತ್ತಿದ್ದಾರೆ. ರಕ್ತದಾನದಿಂದ ಹಲವಾರು ಪ್ರಯೋಜನಗಳಿವೆ. ಇದು ಹಲವಾರು ರೋಗಗಳನ್ನು ತಡೆಯುತ್ತದೆ. ಇದನ್ನು ಎಲ್ಲರೂ ಅರಿಯಬೇಕೆಂದು ಹೇಳಿದರು.

ಗುರುಪುರ ಬಂಟರ ಮಾತೃ ಸಂಘದ ಮಾಜಿ ಅಧ್ಯಕ್ಷರಾದ ರಾಜ್‌ಕುಮಾರ್ ಶೆಟ್ಟಿ ಮಾತನಾಡಿ, ರಕ್ತದಾನ ಶಿಬಿರ ಎಲ್ಲರ ಆರೋಗ್ಯಕ್ಕೆ ಪ್ರಯೋಜನವಾಗಲಿದೆ. ಸಂಘವು ಎಲ್ಲಾ ಕ್ಷೇತ್ರದಲ್ಲಿ ಒಳ್ಳೆಯ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬರುತ್ತಿದೆ ಎಂದು ಹೇಳಿದರು.
ಗುರುಪುರ ಬಂಟರ ಮಾತೃ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿಯವರು ಅಧ್ಯಕ್ಷತೆ ವಹಿಸಿ, ಮಾತನಾಡಿ, ಸಂಘ ಒಗ್ಗಟ್ಟಾಗಿಸುವ ಕಾರ್ಯ ಬಂಟರ ಭವನ ನಿರ್ಮಾಣಕ್ಕೆ ಪೂರಕವಾಗಿದೆ. ಹೊರಗಿನವರು ನಮ್ಮ ಸಂಘವನ್ನು ಗುರುತಿಸುವಂತಾಗಿದೆ ಎಂದರು. ತಾಲೂಕು ಪಂಚಾಯತ್ ಮಾಜಿ ಸದಸ್ಯ ಸಚಿನ್ ಅಡಪ ಬಡಕರೆಗುತ್ತು, ಗುರುಪುರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಯಶವಂತ್ ಶೆಟ್ಟಿ ಬೆಳ್ಳೂರುಗುತ್ತು, ಗುರುಪುರ ಬಂಟರ ಮಾತೃ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಇಂದಿರಾಕ್ಷಿ ಪಿ. ಶೆಟ್ಟಿ, ಸಂಘದ ಕಾರ್ಯದರ್ಶಿ ಹರೀಶ್ ಶೆಟ್ಟಿ ಉಪ್ಪುಗೂಡು, ಕೋಶಾಧಿಕಾರಿ ಜಯರಾಮ್ ಶೆಟ್ಟಿ ‘ವಿಜೇತ’, ಸುದರ್ಶನ್ ಶೆಟ್ಟಿ ಪೆರ್ಮಂಕಿ, ಜಯರಾಮ್ ರೈ ಉಳಾಯಿಬೆಟ್ಟುಗುತ್ತು ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶಿಬಿರದಲ್ಲಿ ನೂರಕ್ಕಿಂತಲೂ ಅಧಿಕ ಮಂದಿ ರಕ್ತದಾನ ಮಾಡಿದರು.
ಗುರುಪುರ ಬಂಟರ ಮಾತೃ ಸಂಘದ ಯುವ ವಿಭಾಗದ ಅಧ್ಯಕ್ಷ ದೀಪಕ್ ಶೆಟ್ಟಿ ಲಿಂಗಮಾರುಗುತ್ತು ಸ್ವಾಗತಿಸಿದರು. ಕಾರ್ಯದರ್ಶಿ ಪ್ರಖ್ಯಾತ್ ಶೆಟ್ಟಿ ಮೂಡುಶೆಡ್ಡೆ ವಂದಿಸಿದರು. ಮನೋಜ್ ರೈ ನಿರೂಪಿಸಿದರು. ಯಶ್ ಆಳ್ವ ಸಹಕರಿಸಿದರು.

ಗುರುಪುರ ಬಂಟರ ಮಾತೃ ಸಂಘದ ಕಾರ್ಯ ಶ್ಲಾಘನೀಯ
ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆ ಪಿ.ಆರ್.ಒ. ಹೇಮಂತ್ ಶೆಟ್ಟಿ ನಾರಳ ಮಾತನಾಡಿ, ರಕ್ತದಾನಕ್ಕೆ ಹೆಚ್ಚು ಮಹತ್ವ ಇದೆ. ಜೀವಿತಾವಧಿಯಲ್ಲಿ ಖರ್ಚಿಲ್ಲದ ದಾನ ಇದಾಗಿದೆ. ರಕ್ತವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ನೀಡಿ ಸಮಾಜಕ್ಕೆ ನೆರವಾಗಬೇಕು. ಗುರುಪುರ ಬಂಟರ ಮಾತೃ ಸಂಘ ಇಂತಹ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಜಿಲ್ಲೆಯಲ್ಲಿ 8 ಮೆಡಿಕಲ್ ಕಾಲೇಜು ಇದೆ. ರಕ್ತದ ಕೊರತೆ ಹೊರಗಿನ ಜಿಲ್ಲೆಯವರಿಗೆ ಬರುತ್ತದೆ. ಇದಕ್ಕೆ ಇಲ್ಲಿನ ಪರಿಸರದ ಶಿಬಿರದಿಂದ ಮಾತ್ರ ಪ್ರಯೋಜನವಾಗಲಿದೆ ಎಂದು ಹೇಳಿದರು.