ಸುದ್ದಿ : ಪಿ.ಆರ್.ರವಿಶಂಕರ್
ಡಹಾಣೂ : 25.09.2024 ಮಹಾರಾಷ್ಟ್ರದ ಪಶ್ಚಿಮ ಕರಾವಳಿಯಲ್ಲಿನ ತಾಲೂಕು ಕೇಂದ್ರವಾದ ಡಹಾಣೂವಿನಲ್ಲಿಯ ಹೋಟೆಲ್ ಉದ್ಯಮಿ ( ಹೋಟೆಲ್ ಸರೋವರ್) ಹಾಗೂ ಸಮಾಜಸೇವಕರೂ ಆಗಿರುವ ಅಶೋಕ್ ಎಸ್.ಶೆಟ್ಟಿ ಉಳೆಪಾಡಿ ಇವರನ್ನು ಇತ್ತೀಚೆಗೆ ಡಹಾಣೂ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಮಾನನೀಯ ಶ್ರೀ ಕಾಮ್ರೇಡ್ ವಿನೋದ್ ಭಿವಾ ನಿಕೋಲೆ ಇವರು ಸ್ವಗೃಹದಲ್ಲಿ ಸಮ್ಮಾನಿಸಿ ಅಭಿನಂದಿಸಿದರು.
” ಮಾನ್ಯ ಅಶೋಕ್ ಶೆಟ್ಟಿಯವರು ಹೋಟೆಲ್ ಉದ್ಯಮದ ವ್ಯಸ್ತ ಜೀವನದ ನಡುವೆಯೂ ಸಾಮಾಜಿಕ ಕಾರ್ಯಕ್ಷೇತ್ರದಲ್ಲಿ ಕೈಗೊಳ್ಳುವ ತೆರೆಯ ಮರೆಯಲ್ಲಿನ ಸಮಾಜಮುಖೀ ಸೇವೆಯನ್ನು ನಾವು ಗಮನಿಸುತ್ತಾ ಬಂದಿರುತ್ತೇವೆ. ತುರ್ತು ವೈದ್ಯಕೀಯ ಸಹಾಯದ ಅಗತ್ಯವಿದ್ದಾಗ ಮಾನವೀಯ ನೆಲೆಯಲ್ಲಿ ಸ್ಪಂದಿಸುವ ಅಶೋಕ್ ಶೆಟ್ಟಿಯವರ ಸಾಮಾಜಿಕ ಕಳಕಳಿ ಮೆಚ್ಚುವಂಥದ್ದು. ನಾವು ಆಚರಿಸಿದ್ದ ಜಾಗತಿಕ ಆದಿವಾಸಿ ದಿನದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ನಮ್ಮಿಂದ ಆಮಂತ್ರಿಸಲ್ಪಟ್ಟು , ಅನಿವಾರ್ಯ ಕಾರಣಗಳಿಂದ ಆ ಕಾರ್ಯಕ್ರಮದಲ್ಲಿ ಅವರ ಅನುಪಸ್ಥಿತಿಯ ಸಂದರ್ಭದಲ್ಲಿ ಅವರನ್ನು ಸ್ವಗೃಹದಲ್ಲಿ ಅಭಿನಂದಿಸಲು ಸಂತೋಷ ಪಡುತ್ತೇವೆ. ಇವರ ಸಮಾಜ ಸೇವೆ ಮುಂದೆಯೂ ನಿರಂತರವಾಗಲಿ ” ಎಂದು ಹಾರೈಸಿದರು.
ಮಾನ್ಯ ಶಾಸಕರು ಅಶೋಕ್ ಶೆಟ್ಟಿಯವರನ್ನು ಶಾಲು ಹೊದೆಸಿ ಫಲವಸ್ತು ಹಾಗೂ ಸ್ಮರಣಿಕೆಗಳನ್ನು ಇತ್ತು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಶ್ರೀಮತಿ ಸರಿತಾ ಅಶೋಕ್ ಶೆಟ್ಟಿ ಹಾಗೂ ಸ್ಥಳೀಯ ಕಾರ್ಯಕರ್ತರು ಉಪಸ್ಥಿತರಿದ್ದರು.
ಚಿತ್ರ ಹಾಗೂ ಸುದ್ಧಿ :
ಪಿ.ಆರ್.ರವಿಶಂಕರ್
8483980035