
ಚಿತ್ರ ವರದಿ : ಪಿ.ಆರ್.ರವಿಶಂಕರ್
ಡೊಂಬಿವಿಲಿಯಲ್ಲಿ ಯಕ್ಷ ವೈಭವ ಮಕ್ಕಳ ಯಕ್ಷಗಾನ ಮೇಳ ಎಳ್ಳಾರೆ ( ಮುಂಬೈ) ಇವರಿಂದ ಯಕ್ಷಕಲಾ ಪ್ರದರ್ಶನ.
“ಕರ್ನಾಟಕ ಕರಾವಳಿಯ ಯಕ್ಷಗಾನವು ಒಂದು ಶ್ರೇಷ್ಟ , ಪವಿತ್ರ ಆರಾಧನಾ ಕಲೆಯಾಗಿದೆ . ಇದನ್ನು ಉಳಿಸಿ ಬೆಳೆಸಿಕೊಂಡು ಹೋಗುವಲ್ಲಿ ನಾವೆಲ್ಲರೂ ಸದಾ ತನು ಮನ ಧನಗಳಿಂದ ಸಂಪೂರ್ಣ ಸಹಕಾರ ನೀಡಬೇಕು. ಶಂಕರ್ ನಾಯಕ್ ರಂತಹ ಕಲಾರಾಧಕರಿಗೆ ನಾವು ಇನ್ನು ಮುಂದೆಯೂ ಪ್ರದರ್ಶನಗಳನ್ನು ಏರ್ಪಡಿಸಿ ಸಹಕರಿಸೋಣ ” ಹೀಗೆಂದು ದೊಂಬಿವಿಲಿಯ ಶ್ರೀ ವರದ ಸಿದ್ಧಿವಿನಾಯಕ ಸೇವಾ ಮಂಡಲದ ಅಧ್ಯಕ್ಷ ಶ್ರೀ ಮಾಧವ್.ಪಿ.ನಾಯ್ಕ್ ನುಡಿದರು. ಸಭಾಂಗಣದಲ್ಲಿ ಜರಗಿದ ಯಕ್ಷಗಾನ ದ ನಡುವೆ ಜರಗಿದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಅವರು ಮಾತನಾಡುತ್ತಿದ್ದರು.
ಆಹ್ವಾನಿತ ಅತಿಥಿಗಳಾಗಿ ಆಗಮಿಸಿದ್ದ ಮುಂಬೈ ಪತ್ರಕರ್ತ , ಬರಹಗಾರ ಶ್ರೀ ಪಿ.ಆರ್.ರವಿಶಂಕರ್ ಡಹಾಣೂ ಇವರು ಯಕ್ಷಗಾನದ ಚಾರಿತ್ರಿಕ ಹಿನ್ನೆಲೆ ಹಾಗೂ ವಿವಿಧ ಕಾಲಘಟ್ಟಗಳಲ್ಲಿ ಯಕ್ಷಕಲೆಯು ಬೆಳೆದು ಬಂದ ಬಗೆಯ ಕುರಿತು ಸಂಕ್ಷಿಪ್ತವಾಗಿ ವಿಚಾರ ಮಂಡಣೆಯನ್ನು ಮಾಡಿದರು.
ದೀಪ ಪ್ರಜ್ವಲನೆಯೊಂದಿಗೆ ಆರಂಭಿಸಿ , ಆನಂತರ 7 ಜನರ ಸುಹಾಸಿನಿಯರ ಪೂಜಾ ಕಾರ್ಯಕ್ರಮ ಜರಗಿತು. ಪುರೋಹಿತ ಶುಭಾಕರ್ ಭಟ್ ಶುಭಾಸಂಶನೆ ಪ್ರಾರ್ಥನೆಗೈದರು.
ವೇದಿಕೆಯಲ್ಲಿ ಬಾಲ ಪ್ರತಿಭೆ ಯಕ್ಷ ಕಲಾವಿದ ಆಶಿಷ್ ಪ್ರಭು ಹಾಗೂ ಡಾ| ಶ್ರೇಯಾ ಪಾಟ್ಕರ್ ಇವರನ್ನು ಸಮ್ಮಾನಿಸಲಾಯಿತು.ಶ್ರೀಮತಿ ಮನಿಶಾ ಹಾಗೂ ಉದಯ ಸಾಲ್ವಣ್ ಕರ್ ದಂಪತಿ ಮತ್ತು ಶ್ರೀಮತಿ ವಿಜಯಲಕ್ಷ್ಮೀ ಹಾಗೂ ಸದಾಶಿವ ನಾಯಕ್ ದಂಪತಿ ಇವರಿಗೆ ದಂಪತಿ ಸನ್ಮಾನ ಮಾಡಲಾಯಿತು.
ಬಹುಮುಖ ಪ್ರತಿಭೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ವಿಜೇತ ಶ್ರೀ ತೋನ್ಸೆ ವಿಜಯಕುಮಾರ್ ಶೆಟ್ಟಿಯವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.
ವೇದಿಕೆಯಲ್ಲಿ ಶ್ರೀಮತಿ ವರ್ಷಾ ನಾಯಕ್ , ಶ್ರೀಮತಿ ಉಮಾಲಕ್ಷ್ಮೀ ಶಂಕರ್ ನಾಯಕ್ , ಕಲಾವಿದ ಕಡ್ತಲ ಕೃಷ್ಣ ನಾಯಕ್ , ರವೀಂದ್ರ ಕರ್ಕೆರಾ , ಶ್ರೀ ನಾರಾಯಣ್ ಪೂಜಾರಿ ಪಡು, ಕಲಾರಾಧಕ ರಮೇಶ್ ಬಿರ್ತಿ ಇವರು ಉಪಸ್ಥಿತರಿದ್ದರು. ಶ್ರೀ ಸುಕುಮಾರ್ ಪ್ರಭು ಸನ್ಮಾನ ಪತ್ರ ವಾಚನ ಹಾಗೂ ಯಕ್ಷವೈಭವ ಮಕ್ಕಳ ಮೇಳದ ಸ್ಥಾಪಕ ಅಧ್ಯಕ್ಷ – ಭಾಗವತರಾದ ಶಂಕರ್ ನಾಯಕ್ ಎಳ್ಳಾರೆ ಧನ್ಯವಾದ ಅರ್ಪಿಸಿದರು.
ಆ ಬಳಿಕ ಊರಿನಿಂದ ವಿವಿಧೆಡೆಯಿಂದ ಆಗಮಿಸಿದ ನುರಿತ ಕಲಾವಿದರಿಂದ ಪೌರಾಣಿಕ ಪ್ರಸಂಗ “ಹನುಮದ್ ವಿಲಾಸ” ಯಶಸ್ವಿಯಾಗಿ ಜರಗಿ ಮುಂಬೈ ಕಲಾರಸಿಕ ಪ್ರೇಕ್ಷಕರ ಮನಸೂರೆಗೊಡಿತು.
ಅತ್ಯಲ್ಪ ಅವಧಿಯಲ್ಲಿಯೇ ಹೆಜ್ಜೆ ಅಭ್ಯಾಸ ಕಲಿತುಕೊಂಡ , ಬಾಲ ಪ್ರತಿಭೆಗಳಾದ ಕುಮಾರಿ ಆದ್ಯ ಪಾಟ್ಕರ್ ಮತ್ತು ಕುಮಾರಿ ಸಾನ್ವಿ ವಾಗ್ಳೆ ಬಾಲ ಗೋಪಾಲರಾಗಿ, ಹಾಗೂ ಕುಮಾರಿ ಅಪೂರ್ವ ಮತ್ತು ಕುಮಾರಿ ಶ್ರೇಯಾ ಪೀಠಿಕಾ ಸ್ತ್ರೀವೇಷಗಳು ಸಮರ್ಪಕ ಹೆಜ್ಜೆ , ಸುಂದರ ಭಾವಾಭಿನಯದೊಂದಿಗೆ ಪ್ರಸ್ತುತಿ ಪಡಿಸಿದ್ದು ಪ್ರೇಕ್ಷಕರ ಮನ ಗೆದ್ದರು.
ಯಕ್ಷಗಾನ ಕಾರ್ಯಕ್ರಮದಲ್ಲಿ ಬಲರಾಮನ ಪಾತ್ರದಲ್ಲಿ ಉಲ್ಲಾಸ್ ನಾಯ್ಕ್ ಗೋಳಿಗರಡಿ ಮೇಳ., ಕೃಷ್ಣ ದೇವರ ಪಾತ್ರದಲ್ಲಿ ವಿಠ್ಠಲ್ ಪ್ರಭು ಕುಕ್ಕೆ ಹಳ್ಳಿ , ನಾಗೇಶ್ ಕುಳಿಮನೆ ನಾರದನಾಗಿ, ಶೇಖರ್ ಶೆಟ್ಟಿಯವರ ವಿಜಯ (ಹಾಸ್ಯ) ಸತ್ಯಭಾಮೆಯಾಗಿ ಸೌರವ್ ಕೊಕ್ಕರ್ಣೆ , ಉಮೇಶ್ ಶಂಕರನಾರಾಯಣ ರುಕ್ಮಿಣಿ ಮತ್ತು ಸಖಿಯಾಗಿ , ಗಣಪತಿ ಭಟ್ ಗುಂಡಿ ಬೈಲ್ ಹನುಮಂತನ ಪಾತ್ರದಲ್ಲಿ.ಅದ್ಭುತ ಪ್ರದರ್ಶನ ನೀಡಿದ್ದಾರೆ. ಹಿಮ್ಮೇಳ ದಲ್ಲಿ ಭಾಗವತರಾಗಿ ಶಿವ ಶಂಕರ್ ಭಟ್, ಮದ್ದಳೆ ಆನಂದ್ ಭಟ್ ಪೆರ್ಡೂರು, ಚಂಡೆವಾದಕರಾಗಿ ಮಂಜುನಾಥ ನಾವುಡರು ಭಾಗವಹಿಸಿದರು.
ದೊಂಬಿವಿಲಿಯಲ್ಲಿನ ಈ ಸುಂದರ ಯಕ್ಷ ಸಂಜೆ ಕಾರ್ಯಕ್ರಮ ಆಯೋಜಿಸಿದ ಯಕ್ಷಗುರು ಶಂಕರ್ ನಾಯಕ್ ಎಳ್ಳಾರೆ , ಧರ್ಮಪತ್ನಿ ಶ್ರೀಮತಿ ಉಮಾಲಕ್ಷ್ಮೀ ನಾಯಕ್ ಮತ್ತು ಮಕ್ಕಳಾದ ಶಿವಾನಂದ್ ನಾಯಕ್ ಮತ್ತು ಪೂರ್ಣನಂದ್ ನಾಯಕ್ ಅವರ ಜೊತೆಗೆ ಗೋಪಾಲ ಕೃಷ್ಣ ನಾಯಕ್ ಮತ್ತು ಶ್ರೀಮತಿ ಲತಾ ನಾಯಕ್ ಸಹಕರಿಸಿದರು.
ಚಿತ್ರ ವರದಿ : ಪಿ. ಆರ್.ರವಿಶಂಕರ್ ಡಹಾಣೂ
848398035