
ಸಚಿತ್ರ ಸುದ್ದಿ • ಪಿ.ಆರ್.ರವಿಶಂಕರ್
ಬೊಯಿಸರ್ : ತಾ.30.11.2024
ವರ್ಷದುದ್ದಕ್ಕೂ ವಿವಿಧ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಪಾಲ್ಘರ್ ಜಿಲ್ಲೆಯ ತುಳು ಕನ್ನಡಿಗರ ಸಾಂಸ್ಕೃತಿಕ ಶೃದ್ಧಾಕೇಂದ್ರವೆನಿಸಿದ ಬೊಯಿಸರ್ ಪಶ್ಚಿಮದಲ್ಲಿನ ಪ್ರಸಿದ್ಧ ಶ್ರೀ ನಿತ್ಯಾನಂದ ಸ್ವಾಮಿ ಮಂದಿರದಲ್ಲಿ ಆಶ್ಲೇಷಾ ಪೂಜೆ , ಶ್ರೀ ದುರ್ಗಾ ಪೂಜೆ ಹಾಗೂ ಶನಿ ಪೂಜೆಯು ಇದೇ ನವೆಂಬರ್ ತಾ.29 ಹಾಗೂ 30 ರಂದು ವಿದ್ಯುಕ್ತವಾಗಿ ಜರಗಿತು.

ಮಂದಿರದ ಆವರಣದಲ್ಲಿ ಜರಗಿದ ಈ ಭವ್ಯ ಸಾರ್ವಜನಿಕ ಕಾರ್ಯಕ್ರಮದಲ್ಲಿ ಸ್ಥಳೀಯರೂ ಸೇರಿದಂತೆ ವಿವಿಧ ಜಾತಿ ಬಾಂಧವರನ್ನೊಳಗೊಂಡ ನೂರಾರು ಶೃದ್ಧಾಳುಗಳು ಪೂಜೆಯಲ್ಲಿ ಭಾಗವಹಿಸಿದ್ದರು. ಪೂಜೆಯ ಧಾರ್ಮಿಕ ವಿಧಿ ವಿಧಾನಗಳನ್ನು ಪುರೋಹಿತ ಹರೀಶ್ ಶಾಂತಿ ಪುತ್ತೂರು , ಹರೀಶ್ ಶಾಂತಿ ಬಂಟ್ವಾಳ ಮತ್ತು ಪುರೋಹಿತ ರಾಜೇಶ್ ಶಾಂತಿ ನೆರವೇರಿಸಿದರು. ವಿವಿಧ ಸರ್ಪದುರಿತ ದೋಷ , ನರನಾಡಿ ಬಾಧಿಸುವ ಚರ್ಮವ್ಯಾಧಿ , ಜಾತಕಾರಿಷ್ಟ ಹಾಗೂ ರಾಹು ಕೇತು ದಶಾದೋಷ ಪರಿಹಾರಾರ್ಥ ಜರಗಿಸುವ ಈ ಪವಿತ್ರ ಕಾರ್ಯಕ್ರಮದಲ್ಲಿಭಾಗವಹಿಸಿದ ಎಲ್ಲರ ಆಯುಷ್ಯ ಆರೋಗ್ಯ ಪ್ರಾಪ್ತಿಗೋಸ್ಕರ ಸಾಮೂಹಿಕ ಪ್ರಾಥನೆ ಸಲ್ಲಿಸಲಾಯಿತು.
ಸಂಧ್ಯಾಕಾಲದಲ್ಲಿ ಜರಗಿದ ಶ್ರೀ ದುರ್ಗಾ ನಮಸ್ಕಾರ ಪೂಜೆಯನ್ನು ಶ್ರೀಮತಿ ಉಷಾ ರೈ ಹಾಗೂ ರಘುರಾಮ್ ಎಮ್. ರೈ ನೆರವೇರಿಸಿದರು.
ಶನಿವಾರ ಸಂಜೆ ಜರಗಿದ ಶನಿಪೂಜೆಯನ್ನು ಶ್ರೀಮತಿ ಪದ್ಮಾವತೀ ಮತ್ತು ಸತ್ಯಾ ಕೋಟ್ಯಾನ್ ನೆರವೇರಿಸಿದರು.
ಉದ್ಯಮಿಗಳಾದ ಕೆ.ಭುಜಂಗ ಶೆಟ್ಟಿ , ರಘುರಾಮ್ ಎಮ್.ರೈ , ಭಾಸ್ಕರ್ ಶೆಟ್ಟಿ , ಪ್ರವೀಣ್ ಶೆಟ್ಟಿ ಸೇರಿದಂತೆ ಸ್ಥಳೀಯ ಉದ್ಯಮಿಗಳು , ಶ್ರೀ ನಿತ್ಯಾನಂದ ಸ್ವಾಮಿ ಭಕ್ತವೃಂದದ ಸದಸ್ಯರು , ನಿತ್ಯಾನಂದ ಸೇವಾ ಟ್ರಸ್ಟ್ ನ ವಿಶ್ವಸ್ಥರು ಹಾಗೂ ಅಸಂಖ್ಯ ತುಳುಕನ್ನಡಿಗರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಬಳಿಕ ಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆ ಜರಗಿತು.
ಸುದ್ದಿ ವಿವರ : ಪಿ.ಆರ್.ರವಿಶಂಕರ್
8483980035