ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂತೆಕಟ್ಟೆ ಅಂಡರ್ ಪಾಸ್ ಅವ್ಯವಸ್ಥೆ, ಕಾಪು ಕ್ಷೇತ್ರದ ಉಚ್ಚಿಲ ಪೇಟೆಯಲ್ಲಿ ನಿರಂತರ ಅಪಘಾತ, ವಿಪರೀತ ಸಾವು – ನೋವುಗಳ ಬಗ್ಗೆ ನಿರಂತರವಾಗಿ ಹೆದ್ದಾರಿ ಪ್ರಾಧಿಕಾರದ ಗಮನ ಸೆಳೆಯುತ್ತಿದ್ದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅಧಿಕಾರಿಗಳ ವಿಳಂಬ ನೀತಿ ವಿರೋಧಿಸಿ ಬೆಂಗಳೂರಿನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರಾದೇಶಿಕ ಅಧಿಕಾರಿಯ ಕಚೇರಿ ಎದುರು ಧರಣಿ ನಡೆಸುವುದಾಗಿ ಬರೆದ ಪತ್ರಕ್ಕೆ ಪ್ರತಿಕ್ರಿಯಿಸಿದ ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರಿದ ಅಧಿಕಾರಿಗಳು ಇಂದು ಬೆಳಿಗ್ಗೆ ಉಡುಪಿಗೆ ಬಂದು ಸಂಸದ ಕೋಟ ಮತ್ತು ಜಿಲ್ಲಾಡಳಿತದ ಜೊತೆ ಸ್ಥಳದಲ್ಲಿ ಸಮಗ್ರ ಚರ್ಚೆ ನಡೆಸಿದರು.
ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿಗಳ ತಂಡ ಕಲ್ಯಾಣ್ ಪುರ, ಸಂತೆಕಟ್ಟೆಯ ಅಂಡರ್ ಪಾಸ್ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ, ಉಡುಪಿಯಿಂದ ಕುಂದಾಪುರಕ್ಕೆ ಹೋಗುವ ಎಡ ಮತ್ತು ಕುಂದಾಪುರದಿಂದ ಉಡುಪಿ ಕಡೆ ಬರುವ ಬಲ ಮೇಲ್ಸೇತುವೆಯ ರಸ್ತೆಗಳನ್ನು ತುರ್ತು ಡಾಮರಿಕರಣ ಮಾಡುವುದಾಗಿ ಒಪ್ಪಿದರು. ತಳಭಾಗದ ಮುಖ್ಯ ರಸ್ತೆಯನ್ನು ಎರಡು ದಿನಗಳ ಒಳಗೆ ಡಾಮರಿಕರಣ ಪೂರ್ಣ ಮಾಡುವುದಾಗಿ ಭರವಸೆ ನೀಡಿದರು.
ಸಾರ್ವಜನಿಕರ ರಸ್ತೆಯನ್ನು ತುತ್ತಾಗಿ ಜನರ ಓಡಾಟಕ್ಕೆ ಸಮರ್ಪಕಗೊಳಿಸಿದರೆ ತನ್ನ ಅಭ್ಯಂತರ ಇಲ್ಲ ಎಂದು ಸಂಸದರು ತಿಳಿಸಿ ವಾಹನ ಸಂಚಾರದ ವ್ಯವಸ್ಥೆ ಸರಿಪಡಿಸಲು ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ತಂಡ ಕಾಪವಿನ ಬಳಿ ಉಚ್ಚಿಲ ಬಸ್ ನಿಲ್ದಾಣದ ಕ್ರಾಸಿಂಗ್ ನಲ್ಲಿ ಅವ್ಯವಸ್ಥೆ, ಮೂಳೂರು ಶಾಲೆ ಬಳಿ ಅವೈಜ್ಞಾನಿಕ ಯು ಟರ್ನ್, ರಾಷ್ಟ್ರೀಯ ಹೆದ್ದಾರಿಯ ದಾರಿದೀಪದ ಸಮಸ್ಯೆ, ಸರ್ವಿಸ್ ರೋಡಲ್ಲಿ ಹಂಪ್ ಗಳ ನಿರ್ಮಾಣ, ರಸ್ತೆ ಬಳಿಯ ಒಳಚರಂಡಿ ಅವ್ಯವಸ್ಥೆ, ಮಹಾಲಕ್ಷ್ಮಿ ದೇವಸ್ಥಾನದ ಬಳಿ ಶಾಲಾ ವಲಯದಲ್ಲಿ ಅಂಡರ್ ಪಾಸ್ ಬೇಡಿಕೆ ಬಗ್ಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಅಧಿಕಾರಿಗಳಿಗೆ ಮನವರಿಕೆ ಮಾಡಿ ತುರ್ತಾಗಿ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಆಗ್ರಹಿಸಿದರು.