
ಇತರರು ಗುರುತಿಸುವಂತಹ ಕಾರ್ಯ ಬಂಟರ ಸಂಘದಿಂದ ನಡೆಯುತ್ತಾ ಇರಲಿ – ಗೋಪಾಲ ಸಿ. ಶೆಟ್ಟಿ
ಮುಂಬಯಿ : ಪರಿಶ್ರಮದಿಂದ ಯಾವುದೇ ಸಮಾಜಪರ ಕಾರ್ಯ ನಡೆಸಿದಲ್ಲಿ ಅದರಿಂದ ಯಶಸ್ವಿ ಸಾಧ್ಯ. ಬಂಟರ ಸಂಘ ಮುಂಬಯಿ ಮಹಾನಗರದಲ್ಲಿ ಒಂದು ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿದ್ದು ಇದಕ್ಕೆ ಸಂಘದ ಪ್ರತಿಯೊಬ್ಬರ ಪರಿಶ್ರಮವಿದೆ. ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಪ್ರತಿಯೊಬ್ಬರ ಪರಿಶ್ರಮದಿಂದ ರಕ್ತ ದಾನದ ಮೂಲಕ ಜೀವ ಉಳಿಸುವ ಕಾರ್ಯ ನಡೆಯುತ್ತಿದ್ದು ಬಂಟರ ಸಂಘದ ಪ್ರತಿಯೊಂದು ಕಾರ್ಯವು ಕೇವಲ ಸಮಾಜ ಬಾಂಧವರಿಗೆ ಮಾತ್ರವಲ್ಲದೆ ಇತರ ಸಮುದಾಯದವರಿಗೂ ತಿಳಿಯುವಂತಾಗಲಿ ಎಂದು ಉತ್ತರ ಮುಂಬಯಿಯ ಮಾಜಿ ಸಂಸದ, ಸಮಾಜ ಸೇವಕ ಗೋಪಾಲ ಸಿ. ಶೆಟ್ಟಿ ಯವರು ನುಡಿದರು.


ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಸಮಿತಿಯಿಂದ ಫೆ. 2 ರಂದು ಕಾಂದಿವಲಿ ಪಶ್ಚಿಮ ಪೊಯಿಸರ್ ಜಿಮ್ಖಾನದಲ್ಲಿ ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಪ್ರವೀಣ್ ಬೋಜ ಶೆಟ್ಟಿ, ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರೇಮನಾಥ ಶೆಟ್ಟಿ ಕೊಂಡಾಡಿ ಹಾಗೂ ಬಂಟರ ಸಂಘ ಮುಂಬಯಿಯ ಬಂಟ್ಸ್ ಹೆಲ್ತ್ ಕೇರ್ ಸಮಿತಿಯ ಕಾರ್ಯಾಧ್ಯಕ್ಷ ಡಾ. ಸ್ವರೂಪ್ ಹೆಗ್ಡೆ, ಇವರ ನೇತೃತ್ವದಲ್ಲಿ, ಬಂಟ್ಸ್ ವೃತ್ತಿನಿರತ ವೈದ್ಯರ ಸಂಘ, ಮುಂಬಯಿ ಇದರ ಅಧ್ಯಕ್ಷರಾದ ಡಾ. ಸತ್ಯಪ್ರಕಾಶ್ ಶೆಟ್ಟಿ, ಇವರ ಮಾರ್ಗದರ್ಶನದಲ್ಲಿ ಮತ್ತು ಲೈಫ್ ಬ್ಲಡ್ ಕೌನ್ಸಿಲ್ ಮುಂಬಯಿ ಇವರ ಸಹಯೋಗದೊಂದಿಗೆ ಆಯೋಜಿಸಲಾದ ರಕ್ತದಾನ ಶಿಭಿರದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು, ನಾಯಕತ್ವವು ಬಲಿಷ್ಠವಾದಲ್ಲಿ ಎಲ್ಲವೂ ಸುಸಾಂಗವಾಗಿ ನಡೆಯುತ್ತದೆ, ಇಂತಹ ಬಲಿಷ್ಠ ನಾಯಕತ್ವವು ನಮ್ಮ ಅಧ್ಯಕ್ಷರಲ್ಲಿದೆ. ಪಕ್ಷದಲ್ಲಿ ನಾನು ರಕ್ತದಾನ ಶಿಭಿರವನ್ನು ಏರ್ಪಡಿಸಿ ನಿರೀಕ್ಷೆಗೂ ಮೀರಿ ರಕ್ತ ಸಂಗ್ರಹಿಸಿದ್ದೇವೆ ಎಂದು ವಿವರಿಸುತ್ತಾ ಸಂಘದ ಪ್ರಾದೇಶಿಕ ಸಮಿತಿಯಿಂದ ಇಂತಹ ಕಾರ್ಯಕ್ರಮ ಇನ್ನೂ ಹೆಚ್ಚಾಗಿ ನಡೆಯುತ್ತಾ ಎಲ್ಲರೂ ಬಂಟರ ಸಂಘವನ್ನು ಗುರುತಿಸುವಂತಾಗಲಿ ಎಂದು ಶುಭ ಹಾರೈಸಿದರು.

ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರೇಮನಾಥ ಶೆಟ್ಟಿ ಕೊಂಡಾಡಿ ಎಲ್ಲರನ್ನೂ ಸ್ವಾಗತಿಸುತ್ತಾ ನಮ್ಮ ಸಮಿತಿಯ ಮೂಲಕ ವಿವಿದ ಸಮಾಜಪರ ಕಾರ್ಯಕ್ರಮಗಳನ್ನು ತಪ್ಪದೇ ಮಾಡುತ್ತಿದ್ದು ಅದರೊಂದಿಗೆ ಸದಸ್ಯರ ಆರೋಗ್ಯದ ಕಡೆ ಗಮನ ನೀಡುತ್ತಿದ್ದೇವೆ. ಮನುಷ್ಯನ ಜೀವ ಉಳಿಸಲು ಸಹಕಾರಿಯಾಗುವಂತಹ ರಕ್ತದಾನ ಶಿಭಿರದಲ್ಲಿ ರಕ್ತದಾನ ಮಾಡಿದ ಹಾಗೂ ಸಹಕರಿಸಿದರ ಎಲ್ಲರಿಗೂ ಅಭಾರಿಯಾಗಿದ್ದೇನೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಪ್ರವೀಣ್ ಬೋಜ ಶೆಟ್ಟಿ, ಯವರು ಮಾತನಾಡುತ್ತಾ ರಕ್ತ ದಾನವು ಎಲ್ಲಾ ದಾನಕ್ಕಿಂತ ಶ್ರೇಷ್ಠವಾಗಿದ್ದು ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯಿಂದ ಪ್ರೇಮನಾಥ ಶೆಟ್ಟಿ ಕೊಂಡಾಡಿ, ವೈದ್ಯಕೀಯ ಮತ್ತು ಆರೋಗ್ಯ ರಕ್ಷಣಾ ಸಮಿತಿಯ ಕಾರ್ಯಾಧ್ಯಕ್ಷ ರಾಜಶೇಖರ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುನಿತಾ ಎನ್. ಹೆಗ್ಡೆ ಮೊದಲಾದವರ ನೇತೃತ್ವದಲ್ಲಿ ನಡೆಯುತ್ತಿರುವ ಇಂತಹ ಉತ್ತಮ ಕಾರ್ಯಕ್ರಮ ನಡೆಯುತ್ತಿರುವುದು ಅಭಿನಂದನೀಯ. ಬಂಟರ ಸಂಘ ಮುಂಬಯಿ ನೂರನೇ ವರ್ಷವನ್ನು ಸಮೀಪಿಸುತ್ತಿದ್ದು ಸಂಘದಲ್ಲಿ ನೂರು ಕಾರ್ಯಕ್ರಮಗಳು ನಡೆಯುವಂತಾಗಲಿ ಹಾಗೂ ನೂರು ಕೋಟಿ ಸಂಗ್ರಹವಾಗಲಿ ಎಂದು ಹಾರೈಸಿದರು.






ರಕ್ತದಾನ ಶಿಭಿರವನ್ನು ಬೆಳಿಗ್ಗೆ ಬಂಟರ ಸಂಘ ಮುಂಬಯಿ ಯ ಮಾಜಿ ಅಧ್ಯಕ್ಷ ಡಾ. ಪಿ. ವಿ. ಶೆಟ್ಟಿಯವರು ಉದ್ಘಾಟಿಸಿ ಶುಭ ಹಾರೈಸಿದರು. ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಪ್ರೇಮನಾಥ ಶೆಟ್ಟಿ ಕೊಂಡಾಡಿ ಇವರ ಮಕ್ಕಳಾದ ನಿಸ್ಚಲ್ ಮತ್ತು ನಿಸ್ಮಿತಾ ಇವರು ಹಾಗೂ ಸಮಿತಿಯ ಇತರ ಸದಸ್ಯರ ಮಕ್ಕಳು ಪ್ರಾರಂಭದಲ್ಲಿ ರಕ್ತದಾನ ಮಾಡಿ ಶಿಭಿರಕ್ಕೆ ಚಾಲನೆಯಿತ್ತರು. ೧೫೩ ಮಂದಿ ಶಿಭಿರದಲ್ಲಿ ಬಾಗವಹಿಸಿದ್ದು ೧೨೮ ಬಾಟಲಿ ರಕ್ತ ಸಂಗ್ರಹಿಸಲಾಯಿತು.
ವೈದ್ಯಕೀಯ ಸೆಮಿನಾರ್ ನಲ್ಲಿ ಮಾತನಾಡಿದ ಬಂಟ್ಸ್ ವೃತ್ತಿನಿರತ ವೈದ್ಯರ ಸಂಘ, ಮುಂಬಯಿ ಇದರ ಅಧ್ಯಕ್ಷರಾದ ಡಾ. ಸತ್ಯಪ್ರಕಾಶ್ ಶೆಟ್ಟಿ ಯವರು ಒಂದು ಯುನಿಟ್ ರಕ್ತವು ಮೂರು ಜೀವವನ್ನು ಉಳಿಸಬಹುದು. ಮುಂಬಯಿಯಲ್ಲಿ 2500 ಮಕ್ಕಳು ಕ್ಯಾನ್ಸರ್ ನಿಂದ ಬಳಳುತ್ತಿದ್ದಾರೆ. ರಕ್ತದಲ್ಲಿನ ಫ್ಯಾಟ್ ನ ಅವಶ್ಯಕತೆಯಿದೆ. ಸಮೀಕ್ಷೆಯ ಪ್ರಕಾರ ಮುಂಬಯಿ ಪರಿಸರದಲ್ಲಿ ಬಂಟ ಸಮಾಜದ ಸುಮಾರು ಒಂದು ಸಾವಿರ ಡಾಕ್ಟರುಗಳು ಇದ್ದಾರೆ. ಇದರಲ್ಲಿ ಈವರೆಗೆ ಕೇವಲ 700 ಮಂದಿ ಮಾತ್ರ ಬಂಟ್ಸ್ ವೃತ್ತಿನಿರತ ವೈದ್ಯರ ಸಂಘದಲ್ಲಿ ಸದಸ್ಯರಾಗಿದ್ದಾರೆ. ಮಿಕ್ಕರವರನ್ನು ಸದಸ್ಯರನ್ನಾಗಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಹೊಸದಾಗಿ ಹುಟ್ಟುಹಾಕಲಾದ ಈ ಸಂಘಟನೆಯನ್ನು ಹತ್ತು ವಲಯಗಳಲ್ಲಿ ವಿಂಗಡಿಸಲಾಗಿದ್ದು, ಈ ಎಲ್ಲಾ ವಲಯಗಳ ಮುಖ್ಯಸ್ಥ ವೈದ್ಯರು ಅವರ ವಲಯಗಳ ವ್ಯಾಪ್ತಯಲ್ಲಿರುವ ಬಂಟರ ಸಂಘದ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರೊಂದಿಗೆ ಸೇರಿ ಸಮಾಜ ಬಾಂಧವರ ಆರೋಗ್ಯದ ಬಗ್ಗೆ ಸೇವಾ ನಿರತರಾಗಿದ್ದಾರೆ. ಮುಖ್ಯವಾಗಿ ಸಮಾಜದ ಹಿರಿಯ ನಾಗರಿಕರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುವುದು, ಸರಕಾರದ ಸವಲತ್ತುಗಳನ್ನು ಪಡೆದುಕೊಳ್ಳುವಂತೆ ಜನಸಾಮಾನ್ಯರಿಗೆ ಮನವರಿಕೆ ಮಾಡುವುದು ಹಾಗೂ ಸ್ವಾಸ್ಥ ಸಮಾಜದ ನಿರ್ಮಾಣವೇ ನಮ್ಮ ಸಂಸ್ಥೆಯ ಧ್ಯೇಯ ಎಂದರು.
ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಸಂಚಾಲಕ ನಿಟ್ಟೆ ಮುದ್ದಣ್ಣ ಜಿ. ಶೆಟ್ಟಿ, ಉಪಕಾರ್ಯಾಧ್ಯಕ್ಷ ಗಂಗಾಧರ ಎ. ಶೆಟ್ಟಿ, ಕಾರ್ಯದರ್ಶಿ ರಮೇಶ್ ಎಂ. ಶೆಟ್ಟಿ, ಕೋಶಾಧಿಕಾರಿ ಅವಿನಾಶ್ ಎಂ. ಶೆಟ್ಟಿ, ಜೊತೆ ಕಾರ್ಯದರ್ಶಿ ಜಯ ಶೆಟ್ಟಿ, ಜೊತೆ ಕೋಶಾಧಿಕಾರಿ ರಮೇಶ್ ಎಚ್. ಶೆಟ್ಟಿ, ಬಂಟರ ಸಂಘ ಮುಂಬಯಿ ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸವಿನ್ ಶೆಟ್ಟಿ, ಪೊಯಿಸರ್ ಜಿಮ್ಖಾನದ ಕರುಣಾಕರ ಶೆಟ್ಟಿ, ಲೈಫ್ ಬ್ಲಡ್ ಕೌನ್ಸಿಲ್ ನ ಮುಂಬಯಿ ವಿನಯ ಶೆಟ್ಟಿ, ಬಂಟರ ಸಂಘದ ಧನಸಂಗ್ರಹ ಸಮಿತಿಯ ಕಾರ್ಯಾಧ್ಯಕ್ಷರೂ ಹಾಗೂ ಪ್ರಾದೇಶಿಕ ಸಮಿತಿಯ ಮುಖ್ಯ ಸಲಹೆಗಾರರೂ ಆದ ಮುಂಡಪ್ಪ ಎಸ್ ಪಯ್ಯಡೆ, ಸಂಘದ ಪಶ್ಚಿಮ ವಲಯದ ಪ್ರಾದೇಶಿಕ ಸಮಿತಿಗಳ ಸಮನ್ವಯಕರಾದ ಖಾಂದೇಶ್ ಭಾಸ್ಕರ ಶೆಟ್ಟಿ , ಮುಖ್ಯ ಸಲಹೆಗಾರರಾದ ಮನೋಹರ ಎನ್. ಶೆಟ್ಟಿ, ನಿತ್ಯಾನಂದ ಹೆಗ್ಡೆ, ವಿಜಯ ಆರ್. ಭಂಡಾರಿ ರವೀಂದ್ರ ಎಸ್. ಶೆಟ್ಟಿ ಎರ್ಮಾಳು ಹರೀಶ್ ಶೆಟ್ಟಿ , ಯುವ ವಿಭಾಗದ ಕಾರ್ಯಾಧ್ಯಕ್ಷ ಅಕ್ಷಜ್ ಆರ್. ಶೆಟ್ಟಿ, ಮಹಿಳಾ ಉಪ ಕಾರ್ಯಾಧ್ಯಕ್ಷೆ ರೇಖಾ ವೈ ಶೆಟ್ಟಿ, ಕಾರ್ಯದರ್ಶಿ ಸರಿತಾ ಎಂ ಶೆಟ್ಟಿ, ಕೋಶಾಧಿಕಾರಿ ಶುಭಾಂಗಿ ಎಸ್. ಶೆಟ್ಟಿ, ಜೊತೆ ಕಾರ್ಯದರ್ಶಿ ಯೋಗಿನಿ ಎಸ್ ಶೆಟ್ಟಿ, ಜೊತೆ ಕೋಶಾಧಿಕಾರಿ ಪ್ರಭಾವತಿ ಎಚ್ ಶೆಟ್ಟಿ ಯುವ ವಿಭಾಗದ ಕಾರ್ಯದರ್ಶಿ ಸಮೀಕ್ಷಾ ಶೆಟ್ಟಿ, ಕೋಶಾಧಿಕಾರಿ ವಿಭಾ ಎಸ್ ಶೆಟ್ಟಿ, ಜೊತೆ ಕಾರ್ಯದರ್ಶಿ ಕಾರ್ತಿಕ್ ಶೆಟ್ಟಿ, ಜೊತೆ ಕೋಶಾಧಿಕಾರಿ ವಿಶ್ವತ್ ಶೆಟ್ಟಿ ಮತ್ತು ಸದಸ್ಯರು, ಸಲಹಾ ಸಮಿತಿಯ ಎಲ್ಲಾ ಸದಸ್ಯರು, ಕಾರ್ಯಾಕಾರಿ ಸಮಿತಿ, ಉಪಸಮಿತಿ, ಮಹಿಳಾ ವಿಭಾಗ ಮತ್ತು ಯುವ ವಿಭಾಗದ ಸದಸ್ಯರು ಸಹರಿಸಿದರು. ಲೈಫ್ ಬ್ಲಡ್ ಕೌನ್ಸಿಲ್ ನ ಮುಂಬಯಿ ವಿನಯ ಶೆಟ್ಟಿಯವರನ್ನು ಹಾಗೂ ಎಜಿಎಮ್ ಬ್ಲಡ್ ಬ್ಯಾಂಕಿನ ಡಾಕ್ಟರುಗಳನ್ನು ಪ್ರಾದೇಶಿಕ ಸಮಿತಿಯಿಂದ ಹಾಗೂ ಪೊಯಿಸರ್ ಜಿಮ್ಖಾನದ ವತಿಯಿಂದ ಗೌರವಿಸಲಾಯಿತು.
ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಸಂಚಾಲಕಿ ಶೈಲಜಾ ಎ. ಶೆಟ್ಟಿ ಯವರು ಪ್ರಾರ್ಥನೆ ಯೊಂದಿಗೆ ಸಭಾಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ರಘುನಾಥ್ ಎನ್. ಶೆಟ್ಟಿಯವರು ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮವನ್ನು ನಿರ್ವಹಿಸಿದರು. ರಾಜಶೇಖರ ಶೆಟ್ಟಿಯವರು ವಂದನಾರ್ಪಣೆಗೈದರು .