
ಸಮಾಜದ ಹಿತಕ್ಕಾಗಿ ಸಂಘಟನೆಯನ್ನು ಬಲಪಡಿಸುವುದು ನಮ್ಮೆಲ್ಲರ ಕರ್ತವ್ಯ- ಜಯಂತಿ ವಿ.ಉಳ್ಳಾಲ್
ಚಿತ್ರ, ವರದಿ: ಉಮೇಶ್ ಕೆ. ಅಂಚನ್.
ಮುಂಬಯಿ, ಬಿಲ್ಲವರ ಎಸೋಸಿಯೇಷನ್ ಮುಂಬಯಿ 93 ವರ್ಷದ ಇತಿಹಾಸವನ್ನು ಹೊಂದಿದ್ದು ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದಡಿಯಲ್ಲಿ ನಡೆಯುತ್ತಿದೆ. ಸಂಸ್ಥೆಯ ವತಿಯಿಂದ ಹಲವಾರು ಸಮಾಜಪರ ಕಾರ್ಯಗಳು ನಡೆಯುತ್ತಿವೆ. ಕುಟುಂಬದಲ್ಲಿ, ಸಮಾಜದಲ್ಲಿ ಭಿನ್ನಾಭಿಪ್ರಾಯ ಏಳುವುದು ಸಹಜ. ನಾವೆಲ್ಲರು ಒಟ್ಟು ಸೇರಿ ಸಮಾಜದ ಹಿತಕ್ಕಾಗಿ ಸಂಘಟನೆಯನ್ನು ಬಲಪಡಿಸಬೇಕೇ ವಿನಹ ಸಮಾಜವನ್ನು ವಿಭಜಿಸುವ ಕೆಲಸವನ್ನು ಮಾಡಬಾರದು.ಸಮಾಜ ನಮಗೇನು ಕೊಟ್ಟಿದೆ ಎನ್ನುವ ಬದಲು ಸಮಾಜಕ್ಕೆ ನಾವೇನು ಕೊಡಲು ಸಾಧ್ಯ ಎಂದು ಯೋಚಿಸಬೇಕು. ಪರೋಪಕಾರದಿಂದ ಸಮಾಜವನ್ನು ಜಾತಿ ಮತ ಬೇದವಿಲ್ಲದೆ ನಡೆಯುವ. ಉತ್ತಮ ಕೆಲಸ ಮಾಡಿದವರ ಹೆಸರು ಎಂದೂ ಯಾರೂ ಮರೆಯುವುದಿಲ್ಲ. ನಮ್ಮ ಹಿರಿಯರು ಸ್ಥಾಪಿಸಿದ ಭಾರತ್ ಬ್ಯಾಂಕು ಎಷ್ಟೋ ಕುಟುಂಬಕ್ಕೆ ಆಸರೆ ನೀಡಿದೆ. ಪ್ರಸ್ತುತ ಅದ್ಯಕ್ಷರ ಉನ್ನತ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಕನಸನ್ನು ನನಸು ಮಾಡುವಲ್ಲಿ ನಾವೆಲ್ಲ ಸಹಕರಿಸುವ. ಹಳದಿ ಕುಂಕುಮ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ತಮಗೆಲ್ಲರಿಗೂ ಅಭಿನಂದನೆಗಳು ಎಂದು ಬಿಲ್ಲವರ ಅಸೋಸಿಯೇಷನ್ ಮುಂಬಯಿ ಇದರ ಉಪಾದ್ಯಕ್ಷೆ ಜಯಂತಿ ವರದ್ ಉಳ್ಳಾಲ್ ಹೇಳಿದರು

ಅವರು ಜ. 30ರಂದು ಬಿಲ್ಲವರ ಅಸೋಸಿಯೇಷನಿನ ಭಾಯಂದರ್ ಸ್ಥಳೀಯ ಕಚೇರಿಯ ವತಿಯಿಂದ ನಡೆದ ಹಳದಿ ಕುಂಕುಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಅತಿಥಿಯಾಗಿ ಆಗಮಿಸಿದ್ದ ಲೇಖಕಿ ಲತಾ ಸಂತೋಷ್ ಶೆಟ್ಟಿ ಮುದ್ದುಮನೆ ಕಾರ್ಯಕ್ರಮದ ಆಯೋಜನೆಗೆ ಸಂತೋಷ ವ್ಯಕ್ತ ಪಡಿಸಿ ಇಂತಹ ಕಾರ್ಯಕ್ರಮ ಮಾಡುವುದರಿಂದ ನಮ್ಮ ಮಕ್ಕಳು ನಮ್ಮ ಸಂಪ್ರದಾಯಗಳನ್ನು ಅನುಸರಿಸುತ್ತಾರೆ. ಹಳದಿಯು ರೋಗ ನಿರೋಧಕ ಶಕ್ತಿ ಹೊಂದಿದ್ದು ಕುಂಕುಮವು ಶಕ್ತಿಯ ಪ್ರತೀಕವಾಗಿದೆ . ನಾರಾಯಣ ಗುರುಗಳ ತತ್ವದಂತೆ ಬದುಕಿನಲ್ಲಿ ಅಹಂಕಾರ ತ್ಯಜಿಸಿ ಮನುಷ್ಯರ ,ಪ್ರಾಣಿಪಕ್ಷಿ ಹಾಗೂ ಜೀವಾಣುಗಳ ಹಸಿವನ್ನು ನೀಗಿಸುವ ಅನ್ನದಂತೆ ಬಾಳಬೇಕು. ಸಮಾಜದಲ್ಲಿ ನಮ್ಮ ತಪ್ಪುಗಳ ಇರುವನ್ನು ಸರಿಪಡಿಸಿ ಕೆಟ್ಟವರ ಸಹವಾಸ ಬಿಟ್ಟು ಸಾದ್ಯವಾದಲ್ಲಿ ಅವರನ್ನು ತಿದ್ದುವ ಕಾರ್ಯ ಮಾಡಬೇಕು ಎಂದು ಹೇಳಿದರು.
ಅತಿಥಿ ಡಿವೈನ್ ಪಾರ್ಕ್ ಕಾರ್ಯಕರ್ತೆ, ನಿವೃತ್ತ ಶಿಕ್ಷಕಿ ಜಲಜಾಕ್ಷಿ ಜಿ. ಕುಂಬ್ಳೆ ಹಳದಿಕುಂಕುಮದ ವಿಶೇಷತೆ ಹಾಗೂ ಗುರುಮಹತ್ವದ ಬಗ್ಗೆ ಮಾತನಾಡಿದರು. ಮುತ್ತೖದೆಯರನ್ನು ಒಟ್ಟು ಸೇರಿಸುವಂತಹ ಸಮಾರಂಭದಲ್ಲಿ ಭಾಗಿಯಾಗಲು ಅವಕಾಶ ಕೊಟ್ಟ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಂಬಯಿ ಜೆ. ಜೆ. ಆಸ್ಪತ್ರೆ ಯಲ್ಲಿ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ಭಾಯಂದರ್ ನಿವಾಸಿ ಮಮತಾ ಪೂಜಾರಿಯವರ ಮಗಳು ಭಾಗ್ಯಲಕ್ಷ್ಮಿ ರತ್ನರಾಜ್ ಅವರ ಪತಿಯವರಿಗೆ ಭಾಯಂದರ್ ಸ್ಥಳೀಯ ಕಚೇರಿಯ ವತಿಯಿಂದ ವೈದ್ಯಕೀಯ ನೆರವು ನೀಡಲಾಯಿತು.
ವೇದಿಕೆಯಲ್ಲಿ ಬಿಲ್ಲವರ ಅಸೋಸಿಯೇಷನಿನ ಮಹಿಳಾ ವಿಭಾಗದ ಜೊತೆ ಕಾರ್ಯದರ್ಶಿ ಲಕ್ಷ್ಮೀ ಪೂಜಾರಿ, ಕಾರ್ಯಕಾರೀ ಸಮಿತಿಯ ಸದಸ್ಯೆ ಭಾರತಿ ಅಂಚನ್, ಸಮಾಜಸೇವಕಿ ಸುಮಿತ್ರಾ ಕರ್ಕೇರ, ಮಾಲತಿ ರಘುನಾಥ್ ಹಳೆಂಗಡಿ, ಹಾಗೂ ಸರೋಜಿನಿ ಅಪ್ಪಣ್ಣ ಪೂಜಾರಿ ಉಪಸ್ಥಿತರಿದ್ದರು.
ಅತಿಥಿಗಳನ್ನು ಸಂಸ್ಥೆಯ ಪದಾಧಿಕಾರಿಗಳು ಗೌರವಿಸಿದರು. ಪರಿಸರದ ಸಂಘಸಂಸ್ಥೆಗಳ ಪದಾಧಿಕಾರಿಗಳನ್ನು ಸತ್ಕರಿಸಲಾಯಿತು. ವೈವಾಹಿಕ ಜೀವನದಲ್ಲಿ 53 ವರ್ಷಗಳನ್ನು ಪೂರೈಸಿದ ಸರೋಜಿನಿ ಮಾಧವ ಸುವರ್ಣರವರನ್ನು ಸತ್ಕರಿಸಿ ಅಭಿನಂದಿಸಲಾಯಿತು.ಸ್ಥಳೀಯ ಕಚೇರಿಯ ಕಾರ್ಯದರ್ಶಿ ಜ್ಯೋತಿ ರತ್ನಾಕರ ಪೂಜಾರಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಅಂಚನ್ ವಂದಿಸಿದರು.
ಆರಂಭದಲ್ಲಿ ಸ್ಥಳೀಯ ಕಚೇರಿಯ ಸದಸ್ಯರಿಂದ ಹಾಗೂ ಮೀರಾರೋಡ್ ಲಕ್ಷ್ಮೀ ನಾರಾಯಣ ಭಜನಾ ಮಂಡಳಿಯ ಮಹಿಳಾ ಸದಸ್ಯೆಯರಿಂದ ಭಜನೆ ನಡೆಯಿತು. ಗುರುಪೂಜೆ, ಮಹಾಆರತಿ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಹಾಗೂ ಹಳದಿಕುಂಕುಮ ಕಾರ್ಯಕ್ರಮ ನಡೆಯಿತು.
ಸ್ಥಳೀಯ ಸಮಿತಿಯ ಕಾರ್ಯಾದ್ಯಕ್ಷರಾದ ಶೇಖರ ರಾಮ ಪೂಜಾರಿ, ಉಪಾದ್ಯಕ್ಷರುಗಳಾದ ಸುಧಾಕರ ಪೂಜಾರಿ ಮತ್ತು ಸತೀಶ್ ಪೂಜಾರಿ,ಮುಖ್ಯ ಸಲಹೆಗಾರ ಚಿತ್ರಾಪು ಕೆ. ಎಮ್. ಕೋಟ್ಯಾನ್, ಜೊತೆ ಕಾರ್ಯದರ್ಶಿ ಜಯಶ್ರೀ ಸಂತೋಷ್ ಕರ್ಕೇರ, ಕೋಶಾಧಿಕಾರಿ ಹರೀಶ್ ಪಲಿಮಾರು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾದ ದೀಪಕ್ ಕರ್ಕೇರ, ಅಶೋಕ್ ಟಿ. ಪೂಜಾರಿ, ರವೀಂದ್ರ ಸುವರ್ಣ, ವಿಜಯ ಅಂಚನ್, ಸದಾನಂದ ಪೂಜಾರಿ, ಮೀರಾ ಆರ್. ಅಮೀನ್, ಅಮಿತಾ ಆರ್. ಸುವರ್ಣ, ವಿಜಯಲಕ್ಷ್ಮೀ ಬಿ. ಸುವರ್ಣ, ಶಕುಂತಳಾ ಎಸ್ ಪೂಜಾರಿ, ಸುಮಿತ್ರ ಎಚ್. ಫಲಿಮಾರ್, ಕುಸುಮ ಪೂಜಾರಿ, ಹರಿಣಾ ಪೂಜಾರಿ ಬುವಾಜಿಗಳಾದ ರಾಕೇಶ್ ಅಮೀನ್, ಬಾಲಕೃಷ್ಣ ಸುವರ್ಣ ಹಾಗೂ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದ್ದರು.ಅಪಾರ ಸಂಖ್ಯೆಯಲ್ಲಿ ಮುತ್ತೖದೆಯರು ಉಪಸ್ಥಿತರಿದ್ದರು.




