
ಚಿತ್ರ ಹಾಗೂ ಸುದ್ಧಿ : ಪಿ.ಆರ್.ರವಿಶಂಕರ್ 8483980035
ಬೊಯಿಸರ್ : 05.02.2025
ಬೊಯಿಸರ್ ಪಶ್ಚಿಮದಲ್ಲಿನ ಪ್ರತಿಷ್ಟಿತ ಸ್ವಾಮಿ ನಿತ್ಯಾನಂದ ಮಂದಿರದ ಆವರಣದಲ್ಲಿ ಭಕ್ತಾದಿಗಳು ಶ್ರೀ ದೇವೀ ಜಪಪಾರಾಯಣದ 6 ನೆಯ ವರ್ಷದ ಅನುಷ್ಟಾನವನ್ನು ಇದೇ ಜನೆವರಿ ತಾ.23 ಗುರುವಾರದಂದು ಆರಂಭಿಸಿದ್ದು , ಫೆಬ್ರುವರಿ ತಾ .04 ರಂದು ಸಂಪನ್ನಗೊಂಡಿದೆ.
ಇದರಲ್ಲಿ ಭಾಗವಹಿಸಿದ ಪಾಲ್ಘರ್ ತಾಲೂಕು ಹೋಟೆಲ್ ಓನರ್ಸ್ ಅಸೋಸಿಯೇಶನ್ ಅಧ್ಯಕ್ಷರಾದ ರಘುರಾಮ್ ಎಮ್.ರೈ ಮಾತನಾಡಿ ” ನಾವು ನಮ್ಮೊಳಗೇ ಇರುವ ಅಸುರೀ ಶಕ್ತಿಗಳಾದ ಆಲಸ್ಯ , ಅಸೂಯೆ , ಅಹಂಕಾರ , ಸಿಟ್ಟು ಇತ್ಯಾದಿಗಳನ್ನು ತೊಡೆದು ಹಾಕಿ ಸಂಸ್ಕಾರಯುತ ಜೀವನ ನಡೆಸುವುದೇ ಆದಿಶಕ್ತಿಯ ಪೂಜೆಯಲ್ಲಿನ ನಿಜ ಅರ್ಥವೆನಿಸಿದೆ ” ಎಂದು ಅಭಿಪ್ರಾಯ ಪಟ್ಟರು.
ಶ್ರೀ ರಾಮಮಂದಿರದಲ್ಲಿ ದೀಪಪ್ರಜ್ವಲನೆಯೊಂದಿಗೆ ಆರಂಭವಾಗಿ , ಬಳಿಕ ಸ್ವಾಮಿ ನಿತ್ಯಾನಂದ ಮಂದಿರದಲ್ಲಿ ಕಳಶ ಪೂಜೆಯನ್ನು ಶ್ರೀಮತಿ ಪದ್ಮಾವತಿ ಹಾಗೂ ಸತ್ಯಾ ಕೋಟ್ಯಾನ್ ನೆರವೇರಿಸಿದರು. ಸರ್ವಭಕ್ತಾದಿಗಳ ಪಾಲ್ಗೊಳ್ಳುವಿಕೆಯಲ್ಲಿ ದೀಪಾರಾಧನೆ , ಷೋಡಶ ಪೂಜೆ , ದುರ್ಗಾ ಅಷ್ಟೋತ್ತರ ನಾಮಾರ್ಚನೆಯೊಂದಿಗೆ ಸಂಪನ್ನ ಜಪ ಜರಗಿತು.
ಮಹಿಳಾ ಭಜನಾ ಮಂಡಲಿಯ ವತಿಯಿಂದ ದೇವೀ ಭಜನಾ ಕಾರ್ಯಕ್ರಮವಿತ್ತು.
ಮಾರನೆಯ ದಿನ ಪ್ರಾತಃ ಕಾಲದಲ್ಲಿ ಜರಗಿದ ಪಂಚದುರ್ಗಾ ಹವನವನ್ನು ಶ್ರೀನಿವಾಸ್ ಕೋಟ್ಯಾನ್ ದಂಪತಿ ನೆರವೇರಿಸಿದರು. ಪೂರ್ಣಾಹುತಿಯ ಬಳಿಕ ಪಕ್ಕದಲ್ಲಿರುವ ಮಹದೇಶ್ವರ ಮಂದಿರದಲ್ಲಿ ರುದ್ರಾಭಿಷೇಕದೊಂದಿಗೆ ಕಳಶ ವಿಸರ್ಜನೆ ಕಾರ್ಯಕ್ರಮ ನಡೆಯಿತು.
ಜಾತಿ ಭಾಷಾ ಭೇದವಿಲ್ಲದೆಯೇ ಸರ್ವಭಕ್ತಾಭಿಮಾನಿಗಳ ಸಹಕಾರದಿಂದ ಜರಗಿದ ಈ ಕಾರ್ಯಕ್ರಮದಲ್ಲಿ
ವಿಶ್ವಸ್ಥ ಮಂಡಲಿಯ ಶ್ರೀಮತಿ ಸುಹಾಸಿನಿ ದಾಮೋದರ್ ನಾಯ್ಕ್ , ಸತ್ಯಾ ಕೋಟ್ಯಾನ್ , ಪಾಲ್ಘರ್ ತಾಲೂಕು ಹೋಟೆಲ್ ಅಸೋಸಿಯೇಶನ್ ಅಧ್ಯಕ್ಷ ರಘುರಾಮ್ ಎಮ್. ರೈ , ಸ್ವಾಮಿ ನಿತ್ಯಾನಂದ ಭಕ್ತವೃಂದ ಹಾಗೂ ಸದ್ಗುರು ನಿತ್ಯಾನಂದ ಭಜನಾ ಮಂಡಲಿಯ ಸರ್ವ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮ ವ್ಯವಸ್ಥಾಪನೆಯ ಉಸ್ತುವಾರಿಯಲ್ಲಿ ರಮಾನಂದ ಪೂಜಾರಿ ಸಹಕರಿಸಿದರು.
ಸುದ್ದಿ ವಿವರ : ಪಿ.ಆರ್.ರವಿಶಂಕರ್ 8483980035