ದೆಹಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಬರೋಬ್ಬರಿ 11 ದಿನಗಳ ನಂತರ ದೆಹಲಿ ಮುಖ್ಯಮಂತ್ರಿಯ ಘೋಷಣೆ ಆಗಿದೆ. ದೆಹಲಿಯಲ್ಲಿ ಬಿಜೆಪಿ ಬರೋಬ್ಬರಿ 27 ವರ್ಷಗಳ ನಂತರ ಅಧಿಕಾರಕ್ಕೆ ಬಂದಿದೆ. ದೆಹಲಿಯಲ್ಲಿ ಅಧಿಕಾರಕ್ಕೆ ಬರುವುದಕ್ಕೆ ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿಕೊಂಡಿತ್ತು. ಅಲ್ಲದೆ ಹ್ಯಾಟ್ರಿಕ್ ಸಾಧನೆ ಮಾಡುವ ಕನಸಿನಲ್ಲಿದ್ದ ಆಮ್ ಆದ್ಮಿ ಪಾರ್ಟಿಗೆ ಮಣ್ಣು ಮುಕ್ಕಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಸೇರಿದಂತೆ ವಿದೇಶಿ ಪ್ರವಾಸದಲ್ಲಿದ್ದ ಕಾರಣ ದೆಹಲಿ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಮುಕ್ತಾಯವಾಗಿರಿಲಿಲ್ಲ. ಇದೀಗ ದೆಹಲಿ ಮುಖ್ಯಮಂತ್ರಿ ಘೋಷಣೆ ಮಾಡಲಾಗಿದೆ.
ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಅವರನ್ನು ಘೋಷಣೆ ಮಾಡಲಾಗಿದೆ. ದೆಹಲಿಯಲ್ಲಿ ಬಿಜೆಪಿ ಈ ಬಾರಿ ಅಚ್ಚರಿಯ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿದೆ. ಸಾಮಾನ್ಯವಾಗಿ ಬಿಜೆಪಿ ಚುನಾವಣೆಗೂ ಮುಂಚೆ ಯಾವುದೇ ರಾಜ್ಯದ ಮುಖ್ಯಮಂತ್ರಿಯ ಹೆಸರನ್ನು ಘೋಷಣೆ ಮಾಡುವುದಿಲ್ಲ. ಇದೇ ಮಾದರಿಯನ್ನು ಕೇಂದ್ರಾಡಳಿತ ಹಾಗೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಇದೇ ಮಾದರಿಯನ್ನು ಅನುಸರಿಸಲಾಗಿತ್ತು.
ದೆಹಲಿವಿಧಾನಸಭೆಯಲ್ಲಿ ಒಟ್ಟು 70 ಸ್ಥಾನಗಳಿದ್ದು. 2025ನೇ ಸಾಲಿನ ಫೆಬ್ರವರಿಯಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು 48 ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ದೆಹಲಿ ವಿಧಾನಸಭೆಯ ಮ್ಯಾಜಿಕ್ ಸಂಖ್ಯೆ 36 ಆಗಿದೆ.
ಇನ್ನು ದೆಹಲಿಯ ನೂತನ ಮುಖ್ಯಮಂತ್ರಿ ಹಾಗೂ ಸಚಿವರು ಫೆಬ್ರವರಿ 20ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಬಿಜೆಪಿ ಹೈಕಮಾಂಡ್ ಹೇಳಿದೆ. ಫೆಬ್ರವರಿ 20ಕ್ಕೆ ಅಂದರೆ ಗುರುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ದೆಹಲಿ ನೂತನ ಮುಖ್ಯಮಂತ್ರಿ ಹಾಗೂ ಸಚಿವರ ಪ್ರಮಾಣವಚನ ಸಮಾರಂಭ ನಡೆಯಲಿದೆ. ಈಗಾಗಲೇ ಇದಕ್ಕೆ ಬೇಕಾದ ಎಲ್ಲಾ ಭರ್ಜರಿ ಸಿದ್ಧತೆಗಳನ್ನು ಸಹ ಮಾಡಿಕೊಳ್ಳಲಾಗಿದೆ.
ಇನ್ನು ದೆಹಲಿಯಲ್ಲಿ ಈ ಹಿಂದೆ ಬಿಜೆಪಿಯ ಮಹಿಳಾ ಮುಖ್ಯಮಂತ್ರಿ ಇದ್ದರು. ಹೌದು ದೆಹಲಿಯಲ್ಲಿ 1998ರಲ್ಲಿ ಸುಷ್ಮಾ ಸ್ವರಾಜ್ ಅವರು ದೆಹಲಿಯ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿದ್ದರು. ಈ ಮೂಲಕ ಇತಿಹಾಸ ಸೃಷ್ಟಿಯಾಗಿತ್ತು. ಆದರೆ, ದೆಹಲಿಯಲ್ಲಿ ಅವರು ಅಧಿಕಾರ ನಡೆಸಿದ್ದು ಕೇವಲ 52 ದಿನಗಳು ಮಾತ್ರ. ದೆಹಲಿಯಲ್ಲಿ ಮಹಿಳಾ ಮುಖ್ಯಮಂತ್ರಿಗೆ ದೊಡ್ಡ ಇತಿಹಾಸವೇ ಇದೆ. ಕಾಂಗ್ರೆಸ್‌ನ ಶೀಲಾ ದೀಕ್ಷಿತ್ ಅವರು ದೆಹಲಿ ಮುಖ್ಯಮಂತ್ರಿಯಾಗಿ ಬರೋಬ್ಬರಿ ಮೂರು ಅವಧಿಯಲ್ಲೂ ಅಂದರೆ 15 ವರ್ಷಗಳ ಕಾಲ ಆಡಳಿತ ನಡೆಸಿದೆ.