
ಉಡುಪಿ ಜಿಲ್ಲೆಯ ಅದಾನಿ ಕಂಪನಿಯ ಉಷ್ಣ ವಿದ್ಯುತ್ ಸ್ಥಾವರದಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ದಿನದ 24 ಗಂಟೆ ವಿದ್ಯುತ್ ಪೂರೈಸುವಂತೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯು ಕರ್ನಾಟಕ ಸರಕಾರವನ್ನು ಒತ್ತಾಯಿಸಿದೆ.
ಸಮಿತಿಯು ಮಾರ್ಚ್ 15ರಂದು ಈ ಬಗ್ಗೆ ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾ ಗೋಷ್ಠಿ ಯನ್ನು ಆಯೋಜಿಸಿದ್ದು, ಸಂಸ್ಥೆಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಶೆಟ್ಟಿ ಅವರು ಪತ್ರಕರ್ತರನುದ್ದೇಶಿಸಿ ಮಾತನಾಡುತ್ತಾ ” ಉಡುಪಿಯ ಪಡುಬಿದ್ರಿಯಲ್ಲಿ 2010 ರಿಂದ ಕಾರ್ಯಾಚರಿಸುತ್ತಿರುವ ಉಷ್ಣ ವಿದ್ಯುತ್ ಸ್ಥಾವರವು ಪ್ರಸ್ತುತ 1,300 ಮೆಗವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದೆ. ಅಂದರೆ ಸುಮಾರು 100 ಕೋಟಿ ಟ್ಯೂಬ್ ಲೈಟ್ ಗಳು ಉರಿಯುವಷ್ಟು ವಿದ್ಯುತ್ ಇಲ್ಲಿ ಉತ್ಪಾದನೆ ಆಗುತ್ತಿದೆ. ಇಲ್ಲಿಂದ ರಾಜ್ಯ ರಾಜಧಾನಿ ಬೆಂಗಳೂರಿಗೆ ಶೇಕಡ 45ರಷ್ಟು ವಿದ್ಯುತ್ ಸರಬರಾಜು ಮಾಡಲಾಗುತ್ತಿದ್ದು, ಇದಕ್ಕೆ ತಮ್ಮದೇನು ವಿರೋಧ ಇಲ್ಲ ಆದರೆ ದುಃಖದ ಸಂಗತಿ ಎಂದರೆ ಈ ಸ್ಥಾವರದಿಂದ ಅಸ್ತಿತ್ವದಲ್ಲಿರುವ ಅವಳಿ ಜಿಲ್ಲೆಗಳಿಗೆ ನಿರಂತರ ವಿದ್ಯುತ್ ಪೂರೈಕೆಯಾಗುತ್ತಿಲ್ಲ, ಅದಕ್ಕೆ ಮಾತ್ರ ತಮ್ಮ ವಿರೋಧವಿದೆ, ಮೊದಲು ಈ ಅವಳಿ ಜಿಲ್ಲೆಗಳಿಗೆ ಅಗತ್ಯವಿರುವ ವಿದ್ಯುತ್ ಪೂರೈಕೆ ಮಾಡಬೇಕು ಇದಕ್ಕಾಗಿ ರಾಜ್ಯದ ಇಂಧನ ಸಚಿವರಾದ ಕೆ ಜೆ ಜಾರ್ಜ್ ಅವರನ್ನು ತಮ್ಮ ಸಮಿತಿ ಒತ್ತಾಯಿಸಲಿದೆ ಎಂದು ನುಡಿದರು.
ಅವಿಭಜಿತ ಜಿಲ್ಲೆಗಳ ಅಭಿವೃದ್ಧಿಗಾಗಿ ನಾಗಾರ್ಜುನ ವಿದ್ಯುತ್ ಸ್ಥಾವರ ಪಡುಬಿದ್ರೆಯಲ್ಲಿ ಅಸ್ತಿತ್ವಕ್ಕೆ ಬರಲು ಸರಕಾರೇತರ ಸಂಸ್ಥೆಯಾದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸುಮಾರು ಆರು ವರ್ಷಗಳ ಕಾಲ ತೀವ್ರ ಹೋರಾಟ ನಡೆಸಿದೆ, ಇದು ಜಿಲ್ಲೆಯ ಎಲ್ಲ ರಾಜಕಾರಣಿಗಳಿಗೆ, ಸಮಾಜ ಸೇವಕರಿಗೆ, ಧಾರ್ಮಿಕ ಮುಖಂಡರಿಗೆ, ಜಿಲ್ಲೆಯ ಜನತೆಗೆ ಗೊತ್ತಿರುವ ಸಂಗತಿ. ಅವಳಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ವಿದ್ಯುತ್ ಸ್ಥಾವರ ಅತಿ ಅಗತ್ಯ ಎಂಬ ಮಾತನ್ನು ಜಿಲ್ಲೆಯ ಜನತೆಗೆ ಮನವರಿಕೆ ಮಾಡುವಲ್ಲಿ ಕೂಡ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯು ಯಶಸ್ವಿಯನ್ನು ಕಂಡಿದೆ.
ಯೋಜನೆ ಜಾರಿಗೆ ಬಂದ ಮೇಲೆ ಅಂದಿನ ಸರಕಾರದ ಇಂಧನ ಸಚಿವ ಕೆ ಎಸ್ ಈಶ್ವರಪ್ಪ ಅವರನ್ನು ನಾವು ಭೇಟಿಯಾಗಿ ಅವಳಿ ಜಿಲ್ಲೆಗಳಿಗೆ ನಿರಂತರ ಪ್ರತಿದಿನ 24 ಗಂಟೆ ವಿದ್ಯುತ್ ಪೂರೈಕೆ ಮಾಡುವಂತೆ ಮನವಿ ಮಾಡಿದ್ದೆವು ಈಶ್ವರಪ್ಪನವರು ಈ ಬಗ್ಗೆ ಭರವಸೆಯನ್ನು ನೀಡಿದ್ದರು. ಆದರೆ ಅಂದಿನ ಸರಕಾರದ ಸೂಚನೆ ಇನ್ನೂ ಜಾರಿಗೆ ಬಂದಿಲ್ಲ. ನಮ್ಮ ಅವಿಭಜಿತ ಜಿಲ್ಲೆಯವರಿಗೆ ನಿರಂತರ ವಿದ್ಯುತ್ ಸರಬರಾಜು ಆಗದಿರುವ ವೇದನೆ ನಮ್ಮ ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಕೋಟ್ಯಾನ್ ಮತ್ತು ಸಮಿತಿಯ ಎಲ್ಲಾ ಪದಾಧಿಕಾರಿಗಳಿಗೆ ಇದೆ ಆದರೆ ಯಾವುದೇ ರಾಜಕಾರಣಿಗಳು ಈ ಬಗ್ಗೆ ಮಾತನಾಡುತ್ತಿಲ್ಲ.
ಇಂದು ಎರಡು ಜಿಲ್ಲೆಗಳಲ್ಲೂ ವಿದ್ಯುತ್ ಸಮಸ್ಯೆ ಇದೆ, ಇದರಿಂದ ಕೃಷಿಕರು, ಉದ್ಯಮಿಗಳು, ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ.ಆದ್ದರಿಂದ ರಾಜ್ಯ ಸರ್ಕಾರ ತಕ್ಷಣ ಈ ಎರಡು ಜಿಲ್ಲೆಗಳಿಗೆ ವಾರದ ಎಲ್ಲಾ ದಿನಗಳಲ್ಲಿ 24 ಗಂಟೆಯೂ ವಿದ್ಯುತ್ ಪೂರೈಕೆ ಮಾಡಬೇಕು, ಈ ಬಗ್ಗೆ ಈಗಾಗಲೇ ಈಗಿನ ಇಂಧನ ಸಚಿವ ಕೆ ಜೆ ಜಾರ್ಜ್ ಅವರಿಗೆ ಸಮಿತಿಯ ವತಿಯಿಂದ ಪತ್ರ ಬರೆಯಲಾಗಿದ್ದು, ಈ ತಿಂಗಳೊಳಗೆ ಅವರನ್ನು ಭೇಟಿಯಾಗಿ ಚರ್ಚಿಸಲಿದೆ ಎಂದು ಜಯಕೃಷ್ಣರ ಶೆಟ್ಟಿ ತಿಳಿಸಿದರು.
ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಡಿ ಕೋಟ್ಯಾನ್, ಉಪಾಧ್ಯಕ್ಷರಾದ ಕೆ ಪಿ ಜಗದೀಶ್ ಅಧಿಕಾರಿ, ಜಿಲ್ಲಾ ಉಪಾಧ್ಯಕ್ಷರಾದ ಪ್ರೊಫೆಸರ್ ಶಂಕರ್, ಜಿಲ್ಲಾ ಕಾರ್ಯದರ್ಶಿ ಸುರೇಂದ್ರ ಮೆಂಡನ್, ಜೊತೆ ಕಾರ್ಯದರ್ಶಿ ಶೇಖರ್ ಗುಜ್ಜರಬೆಟ್ಟು ಹಾಗೂ ಸದಸ್ಯರಾದ ಅರುಣ್ ಸನಿಲ್ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.