
ಒಳ್ಳೆಯ ಉದ್ದೇಶವನ್ನಿಟ್ಟುಕೊಂಡು ಸಮಾಜಪರ ಕಾರ್ಯಗಳನ್ನು ಮಾಡೋಣ-ಸೂರ್ಯಕಾಂತ್ ಜಯ ಸುವರ್ಣ
ಮಾರ್ಚ್ ಒಂದರಂದು ಕಲೀನಾ ಕ್ಯಾಂಪಸ್‍ನ ಜೆ. ಪಿ. ನಾಯಕ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಂಶೋಧನ ವಿದ್ಯಾರ್ಥಿಗಳಿಗೆ ಜಯಲೀಲಾ ಟ್ರಸ್ಟ್ ನ ಸೂರ್ಯಕಾಂತ್ ಜಯ ಸುವರ್ಣರ ಉಪಸ್ಥಿತಿಯಲ್ಲಿ ಗೌರವ ಧನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸೂರ್ಯಕಾಂತ್ ಸುವರ್ಣ ಅವರು, “ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗವು ಈ ಸೇವೆ ಮಾಡುವ ಅವಕಾಶವನ್ನು ಒದಗಿಸಿಕೊಟ್ಟಿದೆ. ಜಯ ಸುವರ್ಣರು ತಮ್ಮ ಜೀವನದ ಬಹುಪಾಲು ಸಮಯವನ್ನು ಸಮಾಜಕ್ಕಾಗಿ ವಿನಿಯೋಗಿಸಿದ್ದಾರೆ. ಇದೇ ಕಾರಣದಿಂದ ಅವರು ಇಡೀ ಸಮಾಜ ಬಾಂಧವರ ಪ್ರೀತಿಯನ್ನು ಗಳಿಸಿದ್ದಾರೆ. ಅವರ ಸಲುವಾಗಿ ಇಂದು ನಾವೂ ಸಮಾಜದಲ್ಲಿ ಹೆಮ್ಮೆಯಿಂದ ಬಾಳುವಂತಾಗಿದೆ. ಅವರ ಜೊತೆಗಿದ್ದಷ್ಟು ಸಮಯದಲ್ಲಿ ನಾನು ಅವರಿಂದ ಸಾಕಷ್ಟು ತಿಳಿದುಕೊಂಡಿದ್ದೇನೆ. ನಾವು ಯಾವುದೇ ಕೆಲಸವನ್ನು ಮಾಡಬೇಕಾದರೂ ನಮ್ಮಲ್ಲಿ ಒಳ್ಳೆಯ ಉದ್ದೇಶವಿರಬೇಕು ಸಮರ್ಪಣೆ, ಬದ್ಧತೆ ಮತ್ತು ತ್ಯಾಗದ ಮನೋಭಾವವಿರಬೇಕು. ಜಯ ಸುವರ್ಣರೊಂದಿಗಿದ್ದು ಸಮಾಜ ಸೇವೆಯಲ್ಲಿ ಕೈಗೂಡಿಸಿದ ಎಲ್ಲರನ್ನೂ ಧನ್ಯತೆಯಿಂದ ಸ್ಮರಿಸುತ್ತೇನೆ. ಎಂದು ನುಡಿದರು.

ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಜಿ. ಎನ್. ಉಪಾಧ್ಯ ಅವರು ತಮ್ಮ ಮಾತಿನಲ್ಲಿ, ಒಂದು ಖಾಸಗಿ ಸಂಸ್ಥೆಯು ಮುಂಬಯಿ ವಿಶ್ವವಿದ್ಯಾಲಯದ ಸಂಶೋಧನ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿರುವುದು ಅಭಿಮಾನದ ಸಂಗತಿ ಎಂದರು.
ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ, (ವಿಶ್ರಾಂತ ಕುಲಪತಿಗಳು, ಕರ್ನಾಟಕ ಸಂಸ್ಕøತ ವಿಶ್ವವಿದ್ಯಾಲಯ ಬೆಂಗಳೂರು), ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಪ್ರೊ. ಎಚ್. ಟಿ. ಪೋತೆ(ನಿರ್ದೇಶಕರು ಕನ್ನಡ ಅಧ್ಯಯನ ಸಂಸ್ಥೆ ಗುಲ್ಬರ್ಗ ವಿಶ್ವವಿದ್ಯಾಲಯ), ಡಾ. ವಿಶ್ವನಾಥ ಕಾರ್ನಾಡ್ (ಸಂಸ್ಥಾಪಕರು, ಕಾರ್ನಾಡ್ ಪ್ರತಿಷ್ಠಾನ ಮುಂಬಯಿ), ಬಿಲ್ಲವರ ಎಸೋಸಿಯೋಶನ್‍ನ ಮಾಜಿ ಅಧ್ಯಕ್ಷರಾದ ನಿತ್ಯಾನಂದ ಡಿ. ಕೋಟ್ಯಾನ್, ಭಾರತ್ ಬ್ಯಾಂಕ್ ಆಡಳಿತ ನಿರ್ದೇಶಕರಾದ ಶ್ರೀ ವಿದ್ಯಾನಂದ್ ಎಸ್ ಕರ್ಕೇರ, ಶ್ರೀ ಸುರೇಂದ್ರ ಎ. ಪೂಜಾರಿ, (ಸಾಯಿಕೇರ್ ಲಾಜಿಸ್ಟಿಕ್) ಬಿಲ್ಲವರ ಎಸೋಸಿಯೇಶನ್‍ನ ಮಾಜಿ ಜೊತೆ ಕಾರ್ಯದರ್ಶಿ ಅಶೋಕ್ ಸಸಿಹಿತ್ಲು, ಭಾರತ್ ಬ್ಯಾಂಕ್‍ನ ನಿರ್ದೇಶಕರುಗಳಾದ ನಾರಾಯಣ ಸುವರ್ಣ, ಸಂತೋಷ್ ಕೆ. ಪೂಜಾರಿ, ಸುರೇಶ್ ಸುವರ್ಣ, ದಯಾನಂದ ಆರ್. ಪೂಜಾರಿ, ಮೋಹನ್ ಜಿ. ಪೂಜಾರಿ, ಛಾಯಾಕಿರಣ ಮಾಸ ಪತ್ರಿಕೆಯ ಸಂಪಾದಕರಾದ ಪ್ರಕಾಶ್ ಕುಂಠಿನಿ ಜ್ಯೋತಿ ಕುಂಠಿನಿ ಇತರ ಸಾಹಿತ್ಯಾಸಕ್ತರು, ಬಿಲ್ಲವ ಬಾಂಧವರು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಪೂರ್ಣಿಮಾ ಎಸ್. ಶೆಟ್ಟಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.