—–
ಮಂಗಳೂರು, ಎ. 17: ಕೋಣಗಳಿಗೆ ಕಟ್ಟಿದ್ದ ನೇಗಿಲು ಕಳಚಿ ಬಿದ್ದು ಓಟಗಾರ ಬಾಕಿಯಾದರೂ ಕೋಣಗಳು ಶಿಸ್ತಿನಿಂದ ಓಡಿ ಪ್ರಥಮ ಬಹುಮಾನ ಪಡೆದ ಅಪರೂಪದ ಸನ್ನಿವೇಶಕ್ಕೆ ಗುರುಪುರದ ‘ಮೂಳೂರು-ಅಡ್ಡರು’ ಜೋಡುಕರೆ ಕಂಬಳ ಸಾಕ್ಷಿಯಾಯಿತು.
ಆಗಿದ್ದೇನು?
ನೇಗಿಲು ಹಿರಿಯ ವಿಭಾಗದ ಪ್ರಿಕ್ವಾರ್ಟರ್ ಫೈನಲ್ ಪಂದ್ಯದ ‘ಚಾನ್ಸ್’ ವಿಭಾಗ ಆರಂಭವಾಯಿತು. ಹೊಸ್ಮಾರು ಸೂರ್ಯಶ್ರೀ ರತ್ನಾ ಸದಾಶಿವ ಶೆಟ್ಟರ ‘ಬಿ’ ಕೋಣಗಳು (‘ಬಾರ್ಗಿ’ ಹಾಗೂ ‘ಬೊಳ್ಳೆ’ ಕೋಣಗಳು) ‘ಅದ್ದೂರು’ ಕರೆಯಲ್ಲಿತ್ತು. ಬಂಬ್ರಾಣಬೈಲು ವಂದಿತ್ ಶೆಟ್ಟಿ ಕೋಣ ಓಡಿಸಲು ತಯಾರಾಗಿದ್ದರು. ಮಾಣಿ ಸಾಗು ತನ್ವಿ ಶೆಟ್ಟಿ (ಮಿನ್ನು ಹಾಗೂ ಸಂತು ಕೋಣಗಳು) ಅವರ ಕೋಣಗಳು ‘ಮೂಳೂರು’ ಕರೆಯಲ್ಲಿತ್ತು. ಎರಡೂ ಕರೆಯ ಕೋಣಗಳು ಓಟಕ್ಕೆ ಅಣಿಯಾಗಿದ್ದವು
ಆಗ ‘ಫ್ಲ್ಯಾಗ್’ ಎತ್ತಿ ಕೋಣಗಳ ಓಟಕ್ಕೆ ಸೂಚನೆಯೂ ಬಂತು. ಆದರೆ ಸೂರ್ಯಶ್ರೀ ರತ್ನಾ ಸದಾಶಿವ ಶೆಟ್ಟಿ ಅವರ ಕೋಣಗಳ ನೇಗಿಲು ತುಂಡಾಯಿತು. ಓಟಗಾರ ಬಂಬ್ರಾಣ ವಂದಿತ್ ಶೆಟ್ಟಿ ಅವರ ಕೈಯಲ್ಲೇ ನೇಗಿಲು ಉಳಿಯಿತು. ಓಟಗಾರನಿಗೂ ಏನೂ ಮಾಡಲು ಆಗಲಿಲ್ಲ. ಆದರೆ ಜೋಡಿ ಕೋಣಗಳು ಮಾತ್ರ (‘ಬಾರ್ಗಿ’ ಹಾಗೂ ‘ಬೊಳ್ಳೆ)
ಸ್ವಲವೂ ಗೊಂದಲವಿಲ್ಲದೆ ಓಟ ಮುಂದುವರಿಸಿತು. ವೇಗದ ಓಟದಲ್ಲೇ ಸಾಗಿದ ಕೋಣಗಳು ಪ್ರತಿಸ್ಪರ್ಧಿ ಕೋಣಗಳ ಎದುರಲ್ಲಿ ಗೆಲುವಿನ ದಾಖಲೆ ಬರೆದವು.
ವಿಶೇಷವೆಂದರೆ, ಇದೇ ಕೋಣಗಳು ನೇಗಿಲು ಹಿರಿಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯಿತು.
ಹಿಂದೆಯೂ ನಡೆದಿತ್ತು
ಈ ಹಿಂದೆ 1981ರಲ್ಲಿ ಕೊಂಬ್ರಬೈಲು ಅಮ್ಮು ಪೂಜಾರಿ ಅವರ ಜೋಡಿ ಕೋಣಗಳು ನೇಗಿಲು ಹಿರಿಯ ವಿಭಾಗದ ಫೈನಲ್ ಪಂದ್ಯದಲ್ಲಿ ನೇಗಿಲು ಓಟಗಾರನ ಕೈತಪ್ಪಿದರೂ ಕೇವಲ ಕೋಣಗಳೇ ಓಡುವ ಮೂಲಕ ಅಂದು ಪ್ರಥಮ ಸ್ಥಾನ ಬಂದಿರುವುದನ್ನು ಕಂಬಳಾಭಿಮಾನಿಗಳು ನೆನಪು ಮಾಡುತ್ತಾರೆ.