ಐರೋಲಿ, ನವಿ ಮುಂಬೈ – ಐರೋಲಿಯ ಮೆಹತಾ ಮಹಾವಿದ್ಯಾಲಯದಲ್ಲಿ ೭೯ನೇ ಸ್ವಾತಂತ್ರ್ಯ ದಿನಾಚರಣೆ ಉತ್ಸಾಹದಿಂದ ಆಚರಿಸಲಾಯಿತು. ಜೆ.ವಿ.ಎಂ. ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷರಾದ ಶ್ರೀ ಕೆ.ಎಚ್. ದೇಶಪಾಂಡೆ ಅವರಿಂದ ಧ್ವಜಾರೋಹಣ ನಡೆಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಶ್ರೀ ವಿ. ಎನ್ ಹೆಗ್ಡೆ, ಉಪಾಧ್ಯಕ್ಷ ಅಡ್ವೊ. ಎಸ್.ಪಿ. ಕುಲಕರ್ಣಿ, ಕೋಶಾಧಿಕಾರಿ ಶ್ರೀ ಅವಿನಾಶ ಖಿಲಾರಿ, ಕಾರ್ಯನಿರ್ವಾಹಕ ಸಮಿತಿಯ ಸದಸ್ಯರಾದ ಶ್ರೀ ರಾಹುಲ್ ಮಾಂಗಲೆ, ಶ್ರೀ ಅವಧೂತ ಅಖ್ಲೇಕರ್, ಶ್ರೀ ಸತೀಶ ಖಿಲಾರಿ, ಶ್ರೀ ಸಮರ್ ಟಂಕಸಾಲಿ, ಶ್ರೀ ರಮೇಶ್ ಪಾಟೀಲ್, ಶ್ರೀ ಆರ್.ಜೆ. ಪಾಟೀಲ್, ಶ್ರೀಪಾಂಡುರಂಗ ಮಿರ್ಜಿ, ಜ್ಞಾನ ವಿಕಾಸ ಮಂಡಲದ ಹಲವಾರು ಹಿರಿಯ ಸದಸ್ಯರು ಮತ್ತು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಬಿ.ಆರ್. ದೇಶಪಾಂಡೆ ಉಪಸ್ಥಿತರಿದ್ದರು.
‘ಹರ್ ಘರ್ ತಿರಂಗಾ’ ಅಭಿಯಾನದ ಅಂಗವಾಗಿ, ಸ್ವಾತಂತ್ರ್ಯ ದಿನದಂದು ಕಿರಿಯ ಮಹಾವಿದ್ಯಾಲಯ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ‘ಭಾರತ್ ಮಾತಾ ಕಿ ಜೈ’, ‘ಹರ್ ಘರ್ ತಿರಂಗಾ’, ‘ವಂದೇ ಮಾಟರಂ’, ‘ಜೈ ಜವಾನ್ ಜೈ ಕಿಸಾನ್’ ಎಂಬ ಘೋಷಣೆಗಳೊಂದಿಗೆ ಪ್ರಭಾತಫೇರಿ ನಡೆಸಿದರು. ಧ್ವಜಾರೋಹಣದ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಪಥಸಂಚಲನ ನಡೆಸಿ ಧ್ವಜಕ್ಕೆ ಗೌರವ ಸಲ್ಲಿಸಿದರು.

ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷ ಶ್ರೀ ಕೆ.ಎಚ್. ದೇಶಪಾಂಡೆ ಅವರು ತಮ್ಮ ಭಾಷಣದಲ್ಲಿ ಯುವಕರಿಗೆ ಮಾರ್ಗದರ್ಶನ ನೀಡಿದರು. ಯುವಕರು ಮೊಬೈಲ್, ಸಾಮಾಜಿಕ ಮಾಧ್ಯಮಗಳಂತಹ ವ್ಯಸನಗಳಿಂದ ದೂರವಿದ್ದು ಆರೋಗ್ಯವಂತ ಹಾಗೂ ದೀರ್ಘಾಯುಷಿ ಜೀವನವನ್ನು ಸಾಗಿಸಬೇಕು. ಇದನ್ನು ಅವರು ದೀರ್ಘಾಯುಷ್ಯ ಪಡೆದ ಜಪಾನಿನ ಗ್ರಾಮದ ಉದಾಹರಣೆ ಮೂಲಕ ವಿವರಿಸಿದರು.
ಸಂಸ್ಥೆಯ ಅಧ್ಯಕ್ಷ ಶ್ರೀ ವಿಎನ್ ಹೆಗ್ಡೆ ಅವರು ಸಹ ತಮ್ಮ ಭಾಷಣದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಗಳು ತಮ್ಮ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬೇಕು. ಅವರು ವಿದ್ಯಾರ್ಥಿಗಳಿಗೆ ಜಂಕ್ ಫುಡ್‌ನಿಂದ ದೂರವಿರುವಂತೆ ಮತ್ತು ತಂಬಾಕು, ಡ್ರಗ್ಸ್ ಮುಂತಾದ ವ್ಯಸನಗಳಿಂದ ದೂರವಿರುವ ಪ್ರತಿಜ್ಞೆ ತೆಗೆದುಕೊಳ್ಳುವ ಸಲಹೆ ನೀಡಿದರು.
ಮಹಾವಿದ್ಯಾಲಯದ ಸಭಾಂಗಣದಲ್ಲಿ, ಕಿರಿಯ ಮತ್ತು ಪದವಿ ತರಗತಿಯ ವಿದ್ಯಾರ್ಥಿಗಳು ದೇಶಭಕ್ತಿಯಿಂದ ಪ್ರೇರಿತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವುದರ ಮೂಲಕ ತಮ್ಮ ದೇಶಪ್ರೇಮವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕಿರಿಯ ಮತ್ತು ಪದವಿ ಮಹಾವಿದ್ಯಾಲಯದ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಬಹುತೇಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಧ್ವಜಾರೋಹಣ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು.




