
19ನೇ ಶತಮಾನದ ಆರಂಭದಲ್ಲಿ ಉದ್ಯೋಗ ನಿಮಿತ್ತ ಮುಂಬೈಗೆ ತೆರಳಿದ ಹೆಜಮಾಡಿ ಸಮಾಜದ ಬಾಂದವರು, 1940ರಲ್ಲಿ ಊರಿನ ಜನರ ಒಗ್ಗಟ್ಟು ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಹೆಜಮಾಡಿ ಬಿಲ್ಲವರ ಸಂಘವನ್ನು ಸ್ಥಾಪಿಸಿದರು. ಆ ಕಾಲದ ಹಿರಿಯರಾದ ಶಿವ ಕೆ. ಸುವರ್ಣ, ಎನ್.ಟಿ. ಕುಕ್ಯನ್, ಎಚ್.ಆರ್. ಪೂಜಾರಿ, ಅಪ್ಪಣ್ಣ ಕೋಡಿ, ಎಲ್.ಡಿ. ಕೋಟಿಯನ್, ತಿಮ್ಮಪ್ಪ ಸನೀಲ್, ಈಶ್ವರ್ ಕೆ. ಹೆಜ್ಮಾಡಿ, ಜನಾರ್ಧನ್ ಹೆಜ್ಮಾಡಿ ಮೊದಲಾದ ಗಣ್ಯ ಬಂಧುಗಳ ನಿಸ್ವಾರ್ಥ ಸೇವೆಯೇ ಸಂಘದ ಭದ್ರ ಅಡಿಪಾಯವಾಗಿದೆ ಎಂದು ಸಂಘದ ಅಧ್ಯಕ್ಷರಾದ ಮೋಹನ್ ದಾಸ್ ಹೆಜ್ಮಾಡಿ ಅವರು 85ನೇ ವಾರ್ಷಿಕ ಮಹಾಸಭೆಯಲ್ಲಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು.

ಪ್ರಸ್ತುತ ಸಂಘವು ತನ್ನ ಅಭಿವೃದ್ದಿಯ ಪಥದಲ್ಲಿ ಸಾಗುತ್ತಿರುವುದು ಸಂಘದ ದೃಷ್ಟಿದಾನಿಯಾಗಿದ್ದ ದಿ. ವಾಸುದೇವ ಆರ್. ಕೋಟಿಯನ್ ಅವರ ಮಾರ್ಗದರ್ಶನದ ಫಲವೆಂದು ಅವರು ನೆನಪಿಸಿದರು. ಅವರ ಕನಸುಗಳನ್ನು ನನಸಾಗಿಸುವ ನಿಟ್ಟಿನಲ್ಲಿ ಸಂಘವು ಶ್ರಮಿಸುತ್ತಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ, ವಾಸುದೇವ ಆರ್. ಕೋಟಿಯನ್ ಅವರ ಸವಿ ಸ್ಮರಣಾರ್ಥವಾಗಿ ಪ್ರತಿವರ್ಷ ಗುರು ಜಯಂತಿಯಂದು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ “ವಾಸುದೇವ ಆರ್. ಕೋಟಿಯನ್ ಪ್ರಶಸ್ತಿ” ಪ್ರದಾನ ಮಾಡುವುದಾಗಿ ಘೋಷಿಸಲಾಯಿತು. ಸಂಘದ ಬೆಳವಣಿಗೆಗಾಗಿ ಹಗಲು-ರಾತ್ರಿ ಶ್ರಮಿಸಿದ ಕಾರ್ಯಕಾರಿ ಸಮಿತಿ ಸದಸ್ಯರನ್ನು ಅವರು ಅಭಿನಂದಿಸಿದರು.
ಹೆಜಮಾಡಿ ಬಿಲ್ಲವರ ಸಂಘದ 2024–25ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಆಗಸ್ಟ್ 17ರಂದು, ಸಂಘದ ಜಯ ಸಿ. ಸುವರ್ಣ ಸಭಾಗೃಹದಲ್ಲಿ ಸಂಘದ ಅಧ್ಯಕ್ಷರಾದ ಮೋಹನ್ ದಾಸ್ ಹೆಜ್ಮಾಡಿ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು. ಕಾರ್ಯದರ್ಶಿ ಪ್ರಭೋದ್ ಚಂದ್ರ ಹೆಜ್ಮಾಡಿ ಸ್ವಾಗತಿಸಿ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಲೀಲೇಶ್ ಸುವರ್ಣ ವಾರ್ಷಿಕ ಲೆಕ್ಕಪತ್ರವನ್ನು ಪ್ರಸ್ತುತಪಡಿಸಿದರು. 2025–26ನೇ ಸಾಲಿನ ಲೆಕ್ಕಪರಿಶೋಧಕರಾಗಿ ಸಿ.ಎ. ರಾಘವೇಂದ್ರ ಮೊಗೇರಯ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಇದೇ ವೇಳೆ, ಸುಮಾರು 45 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ವೇದಿಕೆಯನ್ನು ಅಲಂಕರಿಸಿದ್ದವರು – ಉಪಾಧ್ಯಕ್ಷರು ದಯಾನಂದ ಹೆಜ್ಮಾಡಿ, ಸುಧೀರ್ ಕರ್ಕೇರ, ಕಾರ್ಯದರ್ಶಿ ಪ್ರಭೋದ್ ಚಂದ್ರ ಹೆಜ್ಮಾಡಿ, ಕೋಶಾಧಿಕಾರಿ ಲೀಲೇಶ್ ಸುವರ್ಣ, ನಡುಕರೆ ಅಧ್ಯಕ್ಷ ವಿಶ್ವನಾಥ್ ಕೊಪ್ಪಳ, ಮೂಡುಕರೆ ಅಧ್ಯಕ್ಷ ಶ್ರೀನಿವಾಸ್ ಕೋಟಿಯನ್, ಕೋಡಿಕರೆ ಮಾಜಿ ಅಧ್ಯಕ್ಷ ದೇವರಾಜ್ ಅಂಚನ್, ಮಹಿಳಾ ಮಂಡಳಿ ಅಧ್ಯಕ್ಷೆ ಲಾವಣ್ಯ ಪ್ರಭೋದ್, ಯುವವಾಹಿನಿ ಅಧ್ಯಕ್ಷ ನಿಶಾಂಕ್ ಎಸ್. ಕೋಟಿಯನ್, ಬಿರ್ವೆರ್ ಬ್ರದರ್ಸ್ ಅಧ್ಯಕ್ಷ ಮನೋಜ್ ಕುಮಾರ್ ಹಾಗೂ ಗುರುಮಂದಿರದ ಅರ್ಚಕ ರಾಜೇಶ್ ಶಾಂತಿ.
ಅದೇ ರೀತಿ, ಸಂಘದ ಮಾಜಿ ಅಧ್ಯಕ್ಷರಾದ ಜಿನರಾಜ್ ಬಂಗೇರ, ಸುಭಾಸ್ ಜಿ. ಸಾಲಿಯಾನ್, ದಯಾನಂದ್ ಪೂಜಾರಿ, ತಾರಾನಾಥ್ ಎಚ್.ಬಿ., ಲೀಲಾವತಿ ನಾರಾಯಣ ಪೂಜಾರಿ, ಕೋಡಿಕರೆ ಮಹಿಳಾ ಮಂಡಳಿ ಅಧ್ಯಕ್ಷೆ ಶಶಿಕಲಾ ಮೂಲ್ಕಿ, ಬಿಲ್ಲವರ ಸಂಘದ ಅಧ್ಯಕ್ಷ ವಾಮನ್ ಕೋಟಿಯನ್ ಹಾಗೂ ವಾಸು ಪೂಜಾರಿ ಚಿತ್ರಾಪು ಮುಂತಾದ ಗಣ್ಯರು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷ ದೊಂಬ ಕೆ. ಪೂಜಾರಿ ಹಾಗೂ ವಿದ್ಯಾನಿಧಿಗೆ ಸಹಕರಿಸಿದ ದಾನಿಗಳನ್ನು ಸನ್ಮಾನಿಸಲಾಯಿತು. ಕೊನೆಯಲ್ಲಿ ಕೋಶಾಧಿಕಾರಿ ಲೀಲೇಶ್ ಸುವರ್ಣ ವಂದಿಸಿದರು. ಶಿವರಾಮ್ ಜಿ. ಆಮೀನ್ ಸಮಾರಂಭವನ್ನು ಮನೋಜ್ಞವಾಗಿ ನಿರೂಪಿಸಿದರು.




