
ಐದು ಸಾವಿರಕ್ಕೂ ಮಿಕ್ಕಿ ಸಮಾಜ ಬಾಂಧವರು ಒಗ್ಗೂಡಲಿದ್ದಾರೆ: ಗಿರೀಶ್ ಬಿ ಸಾಲಿಯಾನ್ ಬಂಟ್ವಾಳ
ಕುಲಾಲ ಸಂಘ ಮುಂಬಯಿಯ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಮಂಗಳಾದೇವಿ ಬಳಿಯ ಕುಲಾಲ ಭವನದ ಉದ್ಘಾಟನಾ ಸಮಾರಂಭವು ನವೆಂಬರ್ 23, 2025 ರಂದು ನಡೆಯಲಿದೆ. ಆ ಪ್ರಯುಕ್ತ, ಅಕ್ಟೋಬರ್ 26 ರಂದು ಸಯಾನ್ ಮುಂಬಯಿಯ ಆಜಾದ್ ಮಹಿಳಾ ಸಂಘ ಜೈನ್ ಸೊಸೈಟಿ ರೋಡ್ನಲ್ಲಿ, ಕುಲಾಲ ಸಂಘ ಮುಂಬಯಿಯ ಸಿಎಸ್ಟಿ-ಮುಲುಂಡ್-ಮಾನ್ಖುರ್ದ್ ಸ್ಥಳೀಯ ಸಮಿತಿಯವರಿಂದ ಮಂಗಳೂರು ಕುಲಾಲ ಭವನದ ಉದ್ಘಾಟನಾ ಆಮಂತ್ರಣ ಪತ್ರಿಕೆ ವಿತರಣಾ ಕಾರ್ಯಕ್ರಮ ನಡೆಯಿತು.
ಸಂಘದ ಅಧ್ಯಕ್ಷರಾದ ರಘು ಮೂಲ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭಾ ಕಾರ್ಯಕ್ರಮದಲ್ಲಿ ಗೌರವ ಅಧ್ಯಕ್ಷರಾದ ದೇವದಾಸ್ ಕುಲಾಲ್, ಉಪಾಧ್ಯಕ್ಷರಾದ ಡಿ.ಐ. ಮೂಲ್ಯ, ಕೋಶಾಧಿಕಾರಿ ಜಯ ಅಂಚನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತಾ ಬಂಜನ್, ಕಟ್ಟಡ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷರು ಗಿರೀಶ್ ಬಿ ಸಾಲಿಯಾನ್ ಬಂಟ್ವಾಳ, ಉಪಕಾರ್ಯಾಧ್ಯಕ್ಷ ಸುನಿಲ್ ಆರ್ ಸಾಲಿಯಾನ್, ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಉದಯ ಅತ್ತಾವರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಇಂದಿರಾ ಬಂಜನ್ ಮತ್ತು ಕಾರ್ಯದರ್ಶಿ ಸೂರಜ್ ಹಂಡೇಲ್ ಅವರು ದೀಪ ಪ್ರಜ್ವಲಿಸಿ ಸಭೆಗೆ ಚಾಲನೆ ನೀಡಿದರು.
ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರಾದ ಉದಯ ಅತ್ತಾವರ ಮತ್ತು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಇಂದಿರಾ ಆರ್ ಬಂಜನ್ ಅವರಿಗೆ ಆಮಂತ್ರಣ ಪತ್ರಿಕೆ ನೀಡಿ, ಸಭಿಕರಿಗೆ ವಿತರಿಸಲಾಯಿತು.
ಬಳಿಕ ಮಾತನಾಡಿದ ರಘು ಮೂಲ್ಯರವರು, ಸಂಘದ ಸರ್ವ ಸದಸ್ಯರು ಜವಾಬ್ದಾರಿ ಮತ್ತು ಶಿಸ್ತಿನಿಂದ ಭವನ ನಿರ್ಮಾಣ ಮಾಡುವಲ್ಲಿ ಅಪಾರವಾಗಿ ಶ್ರಮಿಸಿದ್ದಾರೆ. ಸಮಾಜಕ್ಕಾಗಿ ಮಾಡಿದ ನಿಮ್ಮ ಶ್ರಮ ಎಲ್ಲಿಯೂ ವ್ಯರ್ಥವಾಗುವುದಿಲ್ಲ. ನೀವು ಸಂಘದ ಮೇಲೆ ಭರವಸೆ ಇಟ್ಟು ನೀಡಿದ ಠೇವಣಿ ಹಣವು ನಿಮಗೆ ಬೇಕಾದಾಗ ವಾಪಸ್ ಸಿಗುತ್ತದೆ. ಸಾಧ್ಯವಾದರೆ, ಆ ಠೇವಣಿ ಹಣವನ್ನು ದಾನ ರೂಪದಲ್ಲಿ ಸಂಘಕ್ಕೆ ನೀಡಿದರೆ ಒಳ್ಳೆಯದು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉದ್ಘಾಟನಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಭೆಗೆ ವಿನಂತಿಸಿದರು.
ಗೌರವ ಅಧ್ಯಕ್ಷರಾದ ದೇವದಾಸ್ ಕುಲಾಲ್ ಅವರು ಸಂಘದ ಪ್ರಸ್ತಾವಿಕ ಭಾಷಣದಲ್ಲಿ, “ನಮ್ಮ ದುಡಿಮೆಯ ಸ್ವಲ್ಪ ಮೊತ್ತವನ್ನಾದರೂ ಸಮಾಜ ಸೇವೆಗೆ ಸಹಕಾರಿಯಾಗಿದ್ದಲ್ಲಿ, ಅದು ನಾಳಿನ ಮಕ್ಕಳ ಭವಿಷ್ಯತ್ತಿಗೆ ಸಹಾಯಕವಾಗುತ್ತದೆ. ಅದರಿಂದ ನಮ್ಮ ಮಕ್ಕಳಿಗೆ ಸಮಾಜದ ಬಗ್ಗೆ ತಿಳಿಸಿದರೆ, ಹೆಸರು ಹಾಗೂ ಸಾರ್ಥಕತೆಯ ಜೀವನದ ಪರಿಪಾಠವಾಗುತ್ತದೆ. ಇದರಿಂದ ನಮ್ಮ ಸಮಾಜದ ಏಳಿಗೆಯಾಗಿ, ಸಮಾಜದ ಹೆಸರು ಉನ್ನತವಾಗುತ್ತದೆ. ನಮಗೆ ಹೆಸರು ಬೇಡ, ಸಮಾಜದ ಹೆಸರು ಬರಬೇಕು. ಬನ್ನಿ ಎಲ್ಲರೂ, ಬಂದು ಕಾರ್ಯಕ್ರಮಕ್ಕೆ ಸಹಕರಿಸೋಣ” ಎಂದರು.
ಕಟ್ಟಡ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಗಿರೀಶ್ ಬಿ ಸಾಲಿಯಾನ್ ಬಂಟ್ವಾಳ ಅವರು ಮಾತನಾಡಿ, “ನಮ್ಮೆಲ್ಲರ ಸಹಕಾರದಿಂದ ಇಂದು ಮಂಗಳೂರಿನಲ್ಲಿ ಕುಲಾಲ ಭವನ ತಲೆ ಎತ್ತಿ ನಿಂತಿದೆ. ಇದು ನಮ್ಮ ಜಾತಿ ಬಾಂಧವರ ಗೌರವವನ್ನು ಎತ್ತಿ ತೋರಿಸುತ್ತಿದೆ. ಹಿರಿಯರ ಅಪೇಕ್ಷೆಯಂತೆ ಇದು ನಮಗೆ ಸಿಕ್ಕ ದೊಡ್ಡ ಗೌರವ. ಮಾನವ ಸಹಜವಾದ ಬಾಂಧವ್ಯ ನಮ್ಮಲ್ಲಿ ತೋರಿಬರಲಿ. ಮನಸ್ಸಿನಲ್ಲಿರುವ ಅಸಮಾಧಾನ, ಕಿರಿಕಿರಿ ಮುಂತಾದವುಗಳನ್ನು ಹೋಗಲಾಡಿಸಿ, ಎಲ್ಲರೊಡನೆ ಹೊಂದಿಕೊಂಡು ಪ್ರೀತಿಯಿಂದ ನಮ್ಮ ಕಾರ್ಯಕ್ರಮಕ್ಕೆ ಬೆನ್ನೆಲುಬಾಗಿ ನಿಲ್ಲೋಣ. ನಮಗೆ ಎಲ್ಲರೂ ಒಂದೇ. ಬನ್ನಿ ಎಲ್ಲರೂ ಈ ಸಂಭ್ರಮದಲ್ಲಿ ಪ್ರೀತಿಯಿಂದ ಇರಬೇಕಾಗಿದೆ. ಕಾರ್ಯಕ್ರಮದಲ್ಲಿ ಸುಮಾರು 5,000ಕ್ಕೂ ಮಿಕ್ಕಿ ಸಮಾಜ ಬಾಂಧವರು ಸೇರುವ ನಿರೀಕ್ಷೆ ಇದೆ” ಎಂದು ಸಭೆಗೆ ವಿನಂತಿಸಿದರು.
ಕಟ್ಟಡ ನಿರ್ಮಾಣ ಸಮಿತಿಯ ಉಪಕಾರ್ಯಾಧ್ಯಕ್ಷ ಸುನಿಲ್ ಆರ್ ಸಾಲಿಯಾನ್ ಅವರು ಮಾತನಾಡಿ, “ಇದು ನಾನು, ನನ್ನಿಂದ ಆದದ್ದಲ್ಲ. ಯಾವ ಸಮಯದಲ್ಲಿ ಆಗಲಿಕ್ಕೆ ಇತ್ತೋ ಅದೇ ಸಮಯದಲ್ಲಿ ಆಗುತ್ತಿದೆ, ನಮ್ಮ ಹೆಮ್ಮೆಯ ಮಂಗಳೂರಿನ ಕುಲಾಲ ಭವನ. ಇದು ನಮ್ಮಿಂದ, ನಮ್ಮವರ ಸಹಾಯದಿಂದ, ನಮ್ಮವರಿಗಾಗಿ ತಯಾರಾಗುತ್ತಿದೆ. ಇದರಿಂದ ಅವಶ್ಯಕತೆ ಇದ್ದ ನಮ್ಮವರಿಗೆ ಶೈಕ್ಷಣಿಕ ಮತ್ತು ಆರೋಗ್ಯ ರಂಗಕ್ಕೆ ಪ್ರಯೋಜನವಾಗಬೇಕು ಎಂಬ ಉದ್ದೇಶವಿದೆ. ಇನ್ನೂ ಸಹ ಇದಕ್ಕೆ ಎಲ್ಲರ ಸಹಕಾರ, ನಮ್ಮ ಮುಂಬಯಿ, ಮಂಗಳೂರು, ಉಡುಪಿ ಜಿಲ್ಲೆ, ಬೆಂಗಳೂರು, ಪುಣೆ, ನಾಸಿಕ್ನಿಂದ ಬೆಂಬಲ ಬರುತ್ತಿದೆ. ಅಂದು ನಮ್ಮ ಎಲ್ಲ ಜನತೆ ಬಂದು ಸೇರಬೇಕು” ಎಂದು ನುಡಿದರು.

ಕಾರ್ಯಕ್ರಮದ ಸಮಗ್ರ ಮಾಹಿತಿಯನ್ನು ಲೋಕಾರ್ಪಣೆ ಕಾರ್ಯಾಧ್ಯಕ್ಷರಾದ ದಿನೇಶ್ ಕುಲಾಲ್ ಅವರು ತಿಳಿಸಿದರು.

ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರಾದ ಉದಯ್ ಅತ್ತಾವರ ಅವರು ಮಾತನಾಡಿ, “ಕೆಲವು ವರ್ಷಗಳಿಂದ ಸಾಗುತ್ತಿದ್ದ ಕೆಲಸ ವೇಗವಾಗಿ ಸಾಗಲು ನಮ್ಮ ಸಮಿತಿ ಸದಸ್ಯರ ಕಷ್ಟವನ್ನು ನಾವು ನೋಡಿದ್ದೇವೆ. ಈಗ ವಿಜೃಂಭಣೆಯಿಂದ ನಡೆಯುವ ಲೋಕಾರ್ಪಣೆ ಕಾರ್ಯಕ್ರಮಕ್ಕೆ ನಾವೆಲ್ಲ ಅಲ್ಲಿ ಉಪಸ್ಥಿತರಿರಬೇಕೆಂದು” ಸಭೆಗೆ ವಿನಂತಿಸಿದರು.

ಮಹಿಳಾ ಕಾರ್ಯಾಧ್ಯಕ್ಷೆ ಸುಚಿತಾ ಬಂಜನ್ ಅವರು, ಮಹಿಳಾ ವಿಭಾಗದವರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಹಕರಿಸಬೇಕೆಂದು ವಿನಂತಿಸಿದರು.
ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷೆ ಇಂದಿರಾ ಬಂಜನ್ ಅವರು ಮಾತನಾಡಿ, “ನಮ್ಮ ಸಮಿತಿ ಸದಸ್ಯರು ಮತ್ತು ಯುವ ವಿಭಾಗದವರು ಯಾವಾಗಲೂ ಸಹಕಾರ ಕೊಡುತ್ತಿದ್ದೇವೆ. ನಮ್ಮ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ನಾವೆಲ್ಲರೂ ಬಂದು ಅಲ್ಲಿ ನಮ್ಮ ಸಹಕಾರ ಕೊಡುತ್ತೇವೆ” ಎಂದು ಭರವಸೆ ಇತ್ತರು.
ಈ ಸಂದರ್ಭದಲ್ಲಿ ಕೋಶಾಧಿಕಾರಿ ಜಯ ಅಂಚನ್, ಉಪಾಧ್ಯಕ್ಷರಾದ ನಟೇಶ್ ಬಂಗೇರ, ಗುರುವಂದನಾ ಭಜನಾ ಮಂಡಳಿಯ ಕಾರ್ಯಾಧ್ಯಕ್ಷರಾದ ಸುಂದರ್ ಮೂಲ್ಯ, ಸಂಜೀವ ಎನ್ ಮೂಲ್ಯ, ನಯನ ಬಂಗೇರ, ಲತಾ ಮೂಲ್ಯ ಇವರು ಸಹಕರಿಸಿದರು.
ಭವನಕ್ಕೆ ಸಹಕರಿಸಿದ ದಾನಿಗಳನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಸೂರಜ್ ಹಂಡೇಲ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ವೇದಿಕೆಯ ಗಣ್ಯರ ಗೌರವಾರ್ಪಣೆಯನ್ನು ಜ್ಯೋತಿ ಹಂಡೇಲ್ ಅವರು ಮಾಡಿದರು.
ಸ್ಥಳೀಯ ಸಮಿತಿಯ ಉಪಕಾರ್ಯಾಧ್ಯಕ್ಷೆ ಹರಿಣಾಕ್ಷಿ ಬಂಗೇರ ಅವರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ವಂದನಾರ್ಪಣೆಯನ್ನು ಮಾಡಿದರು.




