
ಮಂಗಳೂರು: ಇಲ್ಲಿನ ಸ್ವರ್ಣ ಕುಂಭ ಸಹಕಾರಿ ಸಂಘ (ನಿ.) ಇದರ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ನಾಗೇಶ ಎಲ್. ಕುಲಾಲ್ ಕುಳಾಯಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇದು ನಾಗೇಶ ಕುಲಾಲ್ ಅವರ ಸತತ ಮೂರನೇ ಅವಧಿಯ ಆಯ್ಕೆಯಾಗಿದ್ದು, ಸಂಘದ ಮೇಲೆ ಅವರು ಹೊಂದಿರುವ ನಾಯಕತ್ವಕ್ಕೆ ಸಾಕ್ಷಿಯಾಗಿದೆ. ಇವರು ಮುಂಬೈ ಕುಲಾಲ ಸಂಘದ ಗೌರವಾಧ್ಯಕ್ಷರಾದ ದೇವದಾಸ್ ಎಲ್. ಕುಲಾಲ್ ಅವರ ಕಿರಿಯ ಸಹೋದರರಾಗಿದ್ದಾರೆ.
ನಾಗೇಶ ಕುಲಾಲ್ ಅವರ ಮಾರ್ಗದರ್ಶನದಲ್ಲಿ ಸ್ಥಾಪನೆಯಾದ ‘ಕಲಾಕುಂಭ ಕೂಟ ಕುಳಾಯಿ, ಮಂಗಳೂರು’ ಸಂಸ್ಥೆಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಈ ಸಂಸ್ಥೆಯ ಮೂಲಕ ಜಿಲ್ಲೆಯ ಹಲವಾರು ನೃತ್ಯ ಸ್ಪರ್ಧೆಗಳಲ್ಲಿ ತಂಡವು ಬಹುಮಾನಗಳನ್ನು ಗೆದ್ದುಕೊಂಡಿದೆ. ಮಾತ್ರವಲ್ಲದೆ, ಪ್ರಸ್ತುತ ತುಳುನಾಡಿನಲ್ಲಿ ಭಾರಿ ಜನಪ್ರಿಯತೆ ಗಳಿಸಿರುವ “ಪರಮಾತ್ಮೆ ಪಂಜುರ್ಲಿ” ತುಳು ನಾಟಕದ ಸಮಗ್ರ ನಿರ್ವಹಣೆಯ ಜವಾಬ್ದಾರಿಯನ್ನೂ ನಾಗೇಶ್ ಕುಲಾಲ್ ಅವರು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ.




