
ಮುಂಬಯಿ, ಜ. 30: ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗ ಮುಂಬಯಿ ಮತ್ತು ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಪ್ರಭು ಶ್ರೀರಾಮಚಂದ್ರ ದೇವರ ಅವತಾರದ ಆರಂಭದಿಂದ ಶ್ರೀ ದೇವರ ನಿರ್ಯಾಣದವರೆಗಿನ ಸಂಪೂರ್ಣ ಶ್ರೀರಾಮ ಚರಿತೆ ಶ್ರೀರಾಮ ಕಥಾ ಹೃದಯಂ ಪುಣ್ಯಪ್ರದ ಇಪ್ಪತ್ನಾಲ್ಕು ಕಂತುಗಳ ಸರಣಿ ತಾಳಮದ್ದಳೆ ಕಾರ್ಯಕ್ರಮದ ಪುತ್ರ ಕಾಮೇಷ್ಟಿ – ಶ್ರೀರಾಮ ಜನನ ಮೊದಲ ಪ್ರಸ್ತುತಿ ಫೆ. 1ರಂದು ಅಪರಾಹ್ನ 3ರಿಂದ ವಿದ್ಯಾವಿಹಾರ್ ಗಾಂವೇವಿಯ ಶ್ರೀ ಅಂಬಿಕಾ ಆದಿನಾಥೇಶ್ವರ ಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ
ಪರಮಪೂಜ್ಯ ಶ್ರೀ ಪೇಜಾವರ ಮಠಾಧೀಶ ರಾದ ಶ್ರೀಕೃಷ್ಣಕ್ಯ ವಿಶ್ವೇಶತೀರ್ಥ ಸ್ವಾಮೀಜಿಯ
ವರ ಶಿಷ್ಯ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಗಳ ದಿವ್ಯ ಉಪಸ್ಥಿತಿ ಹಾಗೂ ಅವರ ಅಮೃತ ಹಸ್ತದಿಂದ ಉದ್ಘಾಟನೆಗೊಳ್ಳಲಿರುವ ಸರಣಿ ಈ ತಾಳಮದ್ದಳೆಯು ಗಾಂವೈವಿ ಆದಿನಾಥೇಶ್ವರ ಗಣಪತಿ ಶ್ರೀ ಅಂಬಿಕಾ ದೇವಸ್ಥಾನದ. ಹರಿದಾಸಭಟ್ ಪೆರ್ಣಂಕಿಲ ಅವರ ಶುಭಾಶೀರ್ವಾದ ಮತ್ತು ವಿದ್ಯಾವಿಹಾರ್ ಶ್ರೀ ಅಂಬಿಕಾ ಆದಿನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತಸರ ಹರಿದಾಸ್ ಗೋಪಾಲ್ ಶೆಟ್ಟಿಯವರ ಸಹಕಾರ ದೊಂದಿಗೆ ಜರಗಲಿದೆ.

ಕಲಾಭಿಮಾನಿಗಳು, ತುಳು -ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾಠ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಕಲಾವಿದರು ಮತ್ತು ಅರ್ಥದಾರಿಗಳಾದ
ವಾಸು ಮಾರ್ನಾಡ್, ಸುರೇಶ್ ನಂದೊಳ್ಳಿಪ್ರಕಟನೆಯಲ್ಲಿ ತಿಳಿಸಿದ್ದಾರೆ
“ರಾಮ” ಈ ನೆಲದ ಅಸ್ಮಿತೆ.ಈ ಭೂಮಿಯ ಸರ್ವ ಮಾನವೀಯ ಮೌಲ್ಯಗಳ ಮೂರ್ತ ರೂಪವೇ ರಾಮ.ದೇವ ನಿರ್ಮಿತವಾದ ಪಾಯಸದ ಮಾಧುರ್ಯವೇ ಮಗುವಾಗಿ ಸಂಜನಿಸಿದ ಹಾಗೆ ಮಾಧವನೇ ಮಾನವನಾಗಿ ಭೂಮಿಗೆ ಬಂದು ಮಾನವನೊಬ್ಬ ತನ್ನ ಶುದ್ಧ ಬದುಕಿನ ನಡೆಯಿಂದ ಮಾಧವನ ಎತ್ತರಕ್ಕೆ ಏರುವ ದಾರಿ ಯಾವುದು ಎನ್ನುವುದನ್ನು ತನ್ನ ಬದುಕಿನ ಮೂಲಕ ತೋರಿಸಿಕೊಟ್ಟ ದೈವಿಕ ಪುರುಷ.
ಹೌದು..ರಾಮನಿಲ್ಲದೆ ಭಾರತೀಯತೆ ಇಲ್ಲ..ಅಂತರಂಗದ ನಿರ್ಮಲತೆ,ಪರಾನುಕಂಪೆಯ ಪಾರಿಶುದ್ಧಿ, ಚಿತ್ತದ ಸ್ಥೈರ್ಯ, ಮನುಕುಲಕ್ಕೆ ಮಾದರಿಯಾಗಬಹುದಾದ ಆತನ ಜೀವ ಕಾರುಣ್ಯ ಹೀಗೆ ಹತ್ತು ಹಲವಾರು ಆತನ ಗುಣ ವಿಶೇಷಗಳು ನಾವು ಸದಾ ಸ್ಮರಿಸಬೇಕಾದ , ಅನುಸರಿಸಬೇಕಾದ ಜೀವನಾದರ್ಶ.
ಆದರೆ ಈಗೀಗ ನಮಗನ್ನಿಸುವುದು. ಆ ರಾಮ ನಮ್ಮಿಂದ ಮರೆಯಾಗುತ್ತಿದ್ದಾನೆ ಎಂದು. ಪಾಶ್ಚಿಮಾತ್ಯ ಸಂಸ್ಕೃತಿಯ ವೈಭವೀಕರಣಕ್ಕೆ ಭ್ರಮಾಧೀನರಾಗಿ ಮೋಹಿತರಾಗುತ್ತಿರುವ ನಾವು ನಮ್ಮ ಸಂಸ್ಕ್ರತಿ , ನಮ್ಮ ಆಚಾರ – ವಿಚಾರಗಳಿಂದ ಬಹು ದೂರ ಸಾಗುತ್ತಿರುವ ಅನುಭವ ಪ್ರಸ್ತುತ ಸಮಾಜದ ಅನೇಕ ವಿದ್ಯಮಾನಗಳಿಂದ ನಮಗೆ ಗಟ್ಟಿಯಾಗುತ್ತಿದೆ.
ರಾಮಾಯಣವನ್ನು ಕೇವಲ ಸೀತಾಪ್ರಾಪ್ತಿಯ ಸಂಕಥನವಾಗಿ ಕಾಣುವ ಕಾಲವು ಬರಬಹುದು.ರಾಮನೆಂದರೆ ಹೆಂಡತಿಯ ಬಂಧ ವಿಮೋಚನೆಗಾಗಿ ಹೋರಾಡಿದ ಒಬ್ಬ ಸೂಪರ್ ಮ್ಯಾನ್ ಎಂಬ ಆಧುನಿಕ ಅಪಭ್ರಂಶವು ನಮ್ಮ ಮಕ್ಕಳ ಬಾಯಿಯಿಂದ ನಾವು ಕೇಳಬಹುದು.
ನಮ್ಮ ದೇಶ , ನಮ್ಮ ಭಾಷೆ , ನಮ್ಮ ದೇವರು, ನಮ್ಮ ಧರ್ಮ ಎಂಬ ಆಭಿಮಾನ ಮರೆಯಾಗಿ ಸಂಸ್ಕ್ರತಿ – ಸಂಸ್ಕಾರದಲ್ಲಿ ಒಂದು ವಿಭಿನ್ನವಾದ ವಿಶೇಷವಾದ ಅಸ್ತಿತ್ವ ಹೊಂದಿದ ನಮ್ಮ ಹೆಮ್ಮೆಯ ಭಾರತ ಮತ್ತೊಂದು ಯುರೋಪಿಯನ್ ರಾಷ್ಟವಾಗಿ ಬದಲಾಗುವ ಕಾಲವು ಹತ್ತಿರ ಇರಬಹುದು.
ಹೌದು..ಹಾಗಾಗಕೂಡದು. ನಮ್ಮ ಸಂಸ್ಕೃತಿ – ಸಂಸ್ಕಾರ ಸದಾ ಶ್ರೀಮಂತವಾಗಿಯೇ ಉಳಿಯಬೇಕು. ನಾವು ಹೆತ್ತ ಮಕ್ಕಳು ಭಾರತೀಯರಾಗಿಯೇ ಬೆಳೆಯಬೇಕು.ಅವರಿಗೂ ನಮ್ಮ ದೇಶ , ನಮ್ಮ ಭಾಷೆ , ನಮ್ಮ ದೇವರ ಅರಿವು ಮೂಡಬೇಕು.
ಆ ನೆಲೆಯಲ್ಲಿ ಮುಂಬಯಿ ಮಹಾನಗರದಲ್ಲಿ ಒಂದು ವಿಭಿನ್ನವಾದ , ಒಂದು ಆರಾಧನಾ ರೂಪದ , ಒಂದು ಮಹತ್ತರ ಕಾರ್ಯಕ್ರಮ ಸಂಯೋಜಿಸಲು ಮುಂದಾಗಿದ್ದಾರೆ. ಅದುವೇ * ಶ್ರೀ ರಾಮ ಕಥಾ ಹೃದಯಂ* ಎಂಬ ಸರಣಿ ತಾಳಮದ್ದಳೆ ಕಾರ್ಯಕ್ರಮ.
ಹೌದು.ಇದು ರಾಮ ದೇವರ ಆರಾಧನೆ.ಪೂಜ್ಯರಾದ ಶ್ರೀ ಹರಿದಾಸ ಭಟ್ ಪೆರ್ಣಂಕಿಲ ಇವರ ಸಮರ್ಥ
ಮಾರ್ಗನಿರ್ದೇಶನದಲ್ಲಿ ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗ ಹಾಗೂ ಮುಂಬಯಿ ಯುನಿವರ್ಸಿಟಿ ಕನ್ನಡ ವಿಭಾಗದ ಸಂಯುಕ್ತ ಆಯೊಜನೆಯಲ್ಲಿ ಈ ಜ್ಙಾನ ಯಜ್ಞ ಇದೇ ಫೆಬ್ರವರಿ ಒಂದು , ಆದಿತ್ಯವಾರ ಮಧ್ಯಾಹ್ನ ಮೂರು ಗಂಟೆಗೆ ಶುಭಾರಂಭಗೊಳ್ಳಲಿದೆ.
ಧರ್ಮ ಸಂಸ್ಥಾಪನೆಯ ಸಂಕಲ್ಪದಿಂದ ಮಹಾವಿಷ್ಣು ಶ್ರೀ ರಾಮಚಂದ್ರ ನಾಮಕನಾಗಿ ಕೌಸಲ್ಯಾ ದೇವಿಯ ಗರ್ಭ ವೈಕುಂಠದಿಂದ ಈ ಭೂಮಿಗೆ ಅವತರಿಸುವ * ಪುತ್ರ ಕಾಮೇಷ್ಟಿ* ಪ್ರಸಂಗದಿಂದ ತೊಡಗಿ
ಸರಯೂ ತೀರದಲ್ಲಿ ಆ ಮಹಾಪ್ರಭು ಪರಂಧಾಮ ಸೇರುವ ಶ್ರೀ ರಾಮ ನಿರ್ಯಾಣ ಪ್ರಸಂಗದ ತನಕ ರಾಮ ಜೀವನ ಚರಿತ್ರೆಯ ಪ್ರತಿ ಘಟನೆಗಳನ್ನು ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಪ್ರಸ್ತುತಗೊಳ್ಳಲಿರುವ ಈ ಸರಣಿ ಕಾರ್ಯಕ್ರಮ ಒಟ್ಟು ಇಪ್ಪತ್ನಾಲ್ಕು ರಾಮ ಕೇಂದ್ರಿತ ಪ್ರಸಂಗಗಳ ಗುಚ್ಛ.
ಮುಂಬಯಿ ಕಲಾವಿದರು ಹಾಗೂ ಊರಿನ ಪ್ರಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮ ಮುಂಬಯಿ ಸಾಂಸ್ಕೃತಿಕ ಲೋಕದಲ್ಲಿ ಒಂದು ಧಾರ್ಮಿಕ ಸಂಚಲನ ಮೂಡಿಸುವ ಬಗ್ಗೆ ಆಯೋಜಕರು ವಿಶ್ವಾಸ ಹೊಂದಿದ್ದಾರೆ.
ಶ್ರೀ ಶ್ರೀ ಶ್ರೀ ಪೇಜಾವರ ಮಠಾಧೀಶರಾದ ವಿಶ್ವೇಶ ತೀರ್ಥ ಸ್ವಾಮೀಜಿಯವರ ಶಿಷ್ಯ ಶ್ರೀ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಅವರ ಅಮೃತ ಹಸ್ತದಿಂದ ಈ ಪುಣ್ಯಪ್ರದ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ.
ಅಯೋಧ್ಯೆಯ ಪುಣ್ಯಮಣ್ಣಿನಲ್ಲಿ ರಾಮ ದೇವರ ದಿವ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಿದ ಆ ದಿವ್ಯ ಕರಗಳೇ ಈ ಕಾರ್ಯಕ್ರಮದ ದೀಪ ಬೆಳಗಿಸಿ ಆಶೀರ್ವಚನ ನೀಡುತ್ತಿರುವುದು ನಿಜಕ್ಕೂ ಒಂದು ದಿವ್ಯವಾದ ಆನಂದಾನುಭೂತಿ.
ಪೂಜ್ಯರಾದ ಪೆರ್ಣಂಕಿಲ ಹರಿದಾಸ ಭಟ್ಟರೆಂದರೆ ಧಾರ್ಮಿಕ ವಲಯದ ಬಹುದೊಡ್ಡ ಹೆಸರು.ಅಯೋಧ್ಯೆಯ ಪುಣ್ಯಭೂಮಿಯಲ್ಲಿ ರಾಮದೇವರ ಪ್ರತಿಷ್ಠಾಪನೆಯಾಗುವ ಸುಂದರ ಸುಘಳಿಗೆಗೆ ನೇರ ಸಾಕ್ಷಿಯಾದ ಈ ಮಹನೀಯರು ಕಳೆದ ಬಾರಿಯಷ್ಟೆ ತಮ್ಮ ಊರು ಪೆರ್ಣಂಕಿಲದಲ್ಲಿ ನಡೆದ ಶ್ರೀ ರಾಮೋತ್ಸವ ಎಂಬ ಚಾರಿತ್ರಿಕ ಕಾರ್ಯಕ್ರಮದ ರೂವಾರಿಗಳಾಗಿ ರಾಮ ಸೇವೆಯ ಸಾರ್ಥಕತೆ ಅನುಭವಿಸಿದ ಪುಣ್ಯಾತ್ಮರು.ಆ ಮಹನೀಯರೇ ಈ ಕಾರ್ಯಕ್ರಮದ ಯಾಜಮಾನ್ಯ ವಹಿಸಿರುವುದರಿಂದ ಈ ಕಾರ್ಯಕ್ರಮಕ್ಕೊಂದು ಯಜ್ಞ ತುಲ್ಯವಾದ ಮಾನ್ಯತೆ ಪ್ರಾಪ್ತಿಸಿದೆ.
ವಿದ್ಯಾವಿಹಾರದ ಶ್ರೀ ಅಂಬಿಕಾ ಆದಿನಾಥೇಶ್ವರ ಗಣಪತಿ ಮಂದಿರ ಮುಂಬಯಿ ಯಕ್ಷಗಾನ ವಲಯದ ಕೇಂದ್ರ ಸ್ಥಾನ.ದೇವಸ್ಥಾನಗಳು ಕೇವಲ ಧಾರ್ಮಿಕ ಶೃದ್ಧಾ ಕೇಂದ್ರಗಳು ಮಾತ್ರ ಅಲ್ಲ ನಮ್ಮ ಕಲೆ – ಸಂಸ್ಕ್ರತಿ – ಆಚಾರ – ವಿಚಾರಗಳ ಕುರಿತಾಗಿ ಅರಿವು ಮೂಡಿಸುವ ಕೈಂಕರ್ಯದಲ್ಲಿಯು ಕೈಗೂಡಿಸಬೇಕು ಎಂಬ ಹಿರಿದಾದ ಆದರ್ಶವನ್ನು ಬಹಳ ಹಿಂದಿನಿಂದಲು ಆಚರಿಸಿಕೊಂಡು ಬಂದ ಹಿರಿಮೆ ಈ ದೇವಸ್ಥಾನದ ಅಡಳಿತ ಮಂಡಳಿಯದ್ದು.ಸಾವಿರಾರು ಯಕ್ಷಗಾನ ಸಂಬಂಧಿ ಕಲಾ ಕಲಾಪಗಳಿಗೆ ಆಶ್ರಯ ನೀಡಿದ ಅಂಬಿಕಾ ಆದಿನಾಥೇಶ್ವರ ದೇವಸ್ಥಾನವು ಈ ರಾಮಾಯಣದ ಸರಣಿ ಕಾರ್ಯಕ್ರಮಕ್ಕೂ ಆಶ್ರಯ ನೀಡಿರುವುದು ಸ್ತುತ್ತ್ಯಾರ್ಹ ಸಂಗತಿ.ಈ ನೆಲೆಯಲ್ಲಿ ದೇವಸ್ಥಾನದ ಆಡಳಿತ ಮುಕ್ತೇಸರರಾದ ಶ್ರೀ ಹರಿದಾಸ ಗೋಪಾಲ ಶೆಟ್ಟಿಯವರ ಕಲೆ ಹಾಗೂ ಸಂಸ್ಕ್ರತಿಯ ಕುರಿತಾದ ಕಾಳಜಿ ಅಭಿನಂದನೀಯ.
ಕಲಾ ಕಲಾಪದ ಮೂಲಕ ದೇವರ ಆರಾಧನೆ ಜೊತೆಗೆ ನಮ್ಮ ಆರ್ಷೇಯವಾದ ಭಾರತೀಯ ಸಂಸ್ಕೃತಿಯ ಪುನರುತ್ಥಾನದ ಸಂಕಲ್ಪದಿಂದ ತೊಡಗಿದ ಈ ಕಾರ್ಯಕ್ರಮದ ಯಶಸ್ಸು ಎಲ್ಲ ಮುಂಬಯಿ ತುಳು – ಕನ್ನಡಿಗರ ಹೊಣೆಗಾರಿಕೆಯಾಗಬೇಕು.ಯಾವುದೇ ಸ್ವಾರ್ಥ ಭಾವ ಇಲ್ಲದೆ ನಿರಪೇಕ್ಷ ಭಾವದಿಂದ ಆಯೋಜಿಸಿದ ಈ ಕಾರ್ಯಕ್ರಮದ ಉದ್ದೇಶ ಸಾರ್ಥಕ ವಾಗಬೇಕು ಅಂತಾದರೆ ನಾವೆಲ್ಲರು ಈ ಕಾರ್ಯಕ್ರಮದ ಭಾಗವಾಗಬೇಕು.ಜೊತೆಗೆ ನಮ್ಮ ನಾಳೆ ಅಂತಂದರೆ ನಮ್ಮ ಮಕ್ಕಳು ಈ ರಘುನಾಥ ಸಂಕೀರ್ತನೆಯ ಸತ್ಕಾರ್ಯದ ಸದ್ವಿನಿಯೋಗ ಪಡೆಯಬೇಕು.ಯಾವ ಜಾತಿ ಯಾವ ಪ್ರದೇಶ ಯಾವ ಧರ್ಮ ಎಂಬ ಭೇದ ಇಲ್ಲದೆ ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರ ಮೂಲಕ ರಾಮ ದೇವರ ಕೃಪೆ ಹೊಂದುವ ಮನಸ್ಸು ಮಾಡಬೇಕು.




