
ಮುಂಬಯಿ ಕನ್ನಡಿಗರ ಹೆಮ್ಮೆಯ ಸಂಸ್ಥೆಯಾದ ಗೋರೆಗಾಂವ್ ಕರ್ನಾಟಕ ಸಂಘದ 67ನೇ ನಾಡಹಬ್ಬ ಹಾಗೂ ವಿಶೇಷ ವಿಚಾರಗೋಷ್ಠಿಯು 2026ರ ಮಾರ್ಚ್ 1ರ ಭಾನುವಾರದಂದು ಮಲಾಡ್ ಪಶ್ಚಿಮದ ಸುಂದರ ನಗರದ ಹಿಂದಿರುವ ಡಿ. ಜಿ. ಕೇತನ್ ಇಂಟರ್ ನ್ಯಾಷನಲ್ ಸ್ಕೂಲ್‌ನ 9ನೇ ಮಹಡಿಯ ಸಭಾಂಗಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.
ಅಂದು ಬೆಳಿಗ್ಗೆ 10.50ಕ್ಕೆ ಖ್ಯಾತ ಉದ್ಯಮಿ ಹಾಗೂ ಸಮಾಜಸೇವಕ ಸತೀಶ್ ಶೆಟ್ಟಿ ಕೊಟ್ರಪಾಡಿ ಗುತ್ತು ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷ ಡಾ. ದಿವಾಕರ್ ಶೆಟ್ಟಿ ಇಂದ್ರಾಳಿ ಮುಖ್ಯ ಅತಿಥಿಯಾಗಿ ಹಾಗೂ ಥಾಣೆ ಬಂಟ್ಸ್ ಎಸೋಸಿಯೇಷನ್‌ನ ಉಪಾಧ್ಯಕ್ಷ ಚಂದ್ರಶೇಖರ್ ಎಸ್ ಶೆಟ್ಟಿ ಗೌರವ ಅತಿಥಿಯಾಗಿ ಉಪಸ್ಥಿತರಿರಲಿದ್ದಾರೆ. ಉದ್ಘಾಟನೆಯ ನಂತರ ರಿಲಯನ್ಸ್ ಕಾರ್ಪೊರೇಟ್ ಮೀಡಿಯಾ ಅಂಡ್ ಕಂಟೆಂಟ್ ವಿಭಾಗದ ಮುಖ್ಯಸ್ಥ ದಯಾಸಾಗರ ಚೌಟ ಅವರ ಅಧ್ಯಕ್ಷತೆಯಲ್ಲಿ “ಕರಾವಳಿ ಕನ್ನಡಿಗರ ಮುಂಬೈ ವಲಸೆ” ಎಂಬ ವಿಷಯದ ಕುರಿತು ಮಹತ್ವದ ವಿಚಾರಗೋಷ್ಠಿ ನಡೆಯಲಿದೆ.
ಈ ಗೋಷ್ಠಿಯಲ್ಲಿ ಅಮೃತ ಎ. ಶೆಟ್ಟಿ ಅವರು ‘ಸಾಮಾಜಿಕ ಹಾಗೂ ಶೈಕ್ಷಣಿಕ ನೆಲೆಯಲ್ಲಿ ಕನ್ನಡಿಗರ ಕೊಡುಗೆ’ಯ ಬಗ್ಗೆ ಮತ್ತು ಜಿ. ಟಿ. ಆಚಾರ್ಯ ಅವರು ‘ಧಾರ್ಮಿಕ ಹಾಗೂ ಸಾಂಸ್ಕೃತಿಕ ನೆಲೆಯಲ್ಲಿ ಕನ್ನಡಿಗರ ಕೊಡುಗೆ’ಯ ಕುರಿತು ಪ್ರಬಂಧ ಮಂಡಿಸಲಿದ್ದಾರೆ.
ಸಂಜೆ 4 ಗಂಟೆಗೆ ಬಂಟರ ಸಂಘದ ಬೊರಿವಲಿ ಎಜುಕೇಶನ್ ಕಮಿಟಿಯ ಉಪಕಾರ್ಯಧ್ಯಕ್ಷ ಎಸ್. ನಿತ್ಯಾನಂದ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ 67ನೇ ನಾಡಹಬ್ಬದ ಮುಖ್ಯ ಸಮಾರಂಭ ನಡೆಯಲಿದೆ. ಈ ಸಮಾರಂಭಕ್ಕೆ ಬಾಂಬೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಅಡ್ವೋಕೇಟ್ ಡಿ. ಕೆ. ಶೆಟ್ಟಿ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು, ಗೌರವ ಅತಿಥಿಗಳಾಗಿ ಬಂಟರ ಸಂಘದ ಮಾಜಿ ಜೊತೆ ಕಾರ್ಯದರ್ಶಿ ಮನೋರಮ್ಮ ಎನ್. ಬಿ. ಶೆಟ್ಟಿ, ಮುಂಬಯಿ ರಜಕ ಸಂಘದ ಅಧ್ಯಕ್ಷ ಸಿಎ ವಿಜಯ ಕುಂದರ್ ಹಾಗೂ ಖ್ಯಾತ ಚಲನಚಿತ್ರ ನಟ ಸಾಯಿ ಬಳ್ಳಾಲ್ ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ಹಬ್ಬದ ಅಂಗವಾಗಿ ಬೆಳಿಗ್ಗೆ 9.30 ರಿಂದ 10.45ರವರೆಗೆ, ಮಧ್ಯಾಹ್ನ 2.30 ರಿಂದ 3.45ರವರೆಗೆ ಮತ್ತು ಸಂಜೆ 6 ರಿಂದ 7 ಗಂಟೆಯವರೆಗೆ ಸಂಘದ ವಿವಿಧ ಉಪ ವಿಭಾಗಗಳು ಹಾಗೂ ಮುಂಬಯಿಯ ಸಂಘ-ಸಂಸ್ಥೆಗಳಿಂದ ವೈವಿಧ್ಯಮಯ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ.
ಸಂಘದ ಅಧ್ಯಕ್ಷ ವಿಶ್ವನಾಥ್ ಕೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಶಾಂತಾ ಎನ್. ಶೆಟ್ಟಿ, ಗೌರವ ಕೋಶಾಧಿಕಾರಿ ಕರುಣಾಕರ ಕೆ. ಶೆಟ್ಟಿ ಹಾಗೂ ಪಾರುಪತ್ಯಗಾರರಾದ ದೇವಲ್ಕುಂದ ಭಾಸ್ಕರ್ ಶೆಟ್ಟಿ, ನಾರಾಯಣ ಆರ್. ಮೆಂಡನ್ ಮತ್ತು ನಿತ್ಯಾನಂದ ಡಿ. ಕೋಟ್ಯಾನ್ ಅವರು ಸಮಸ್ತ ಕನ್ನಡಿಗರನ್ನು ಈ ಕಾರ್ಯಕ್ರಮಕ್ಕೆ ಆದರದಿಂದ ಸ್ವಾಗತಿಸಿದ್ದಾರೆ.




