ಮುಂಬಯಿ, ಎ. 10: ಶ್ರೀ ರಾಮಾಭಿವಂದ್ಯ ಯಕ್ಷಸೇವಾ ಬಳಗ ಮುಂಬಯಿ ವತಿಯಿಂದ ಹಾಗೂ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಂಯುಕ್ತ ಆಯೋಜನೆಯಲ್ಲಿ, ಪ್ರಭು ಶ್ರೀ ರಾಮಚಂದ್ರದೇವರ ಅವತಾರದ ಆರಂಭದಿಂದ ಶ್ರೀ ದೇವರ ನಿರ್ಯಾಣದವರೆಗಿನ ಸಂಪೂರ್ಣ ಶ್ರೀ ರಾಮ ಚರಿತ್ರೆ – ‘ಶ್ರೀ ರಾಮ ಕಥಾ ಹೃದಯಂ’ ಪುಣ್ಯಪ್ರದ ಇಪ್ಪತ್ನಾಲ್ಕು ಕಂತುಗಳ ಸರಣಿ ತಾಳಮದ್ದಳೆ ಕಾರ್ಯಕ್ರಮದ ಐದನೆಯ ಪ್ರಸ್ತುತಿ ‘ಪಾದುಕಾ ಪ್ರದಾನ – ಪಂಚವಟಿ’ ತಾಳಮದ್ದಳೆ ಮತ್ತು ಸಮ್ಮಾನ ಕಾರ್ಯಕ್ರಮವು ಎ. 12ರಂದು ಅಪರಾಹ್ನ 2.15ರಿಂದ ವಿದ್ಯಾವಿಹಾರ್ ಪಶ್ಚಿಮದ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ.
ಮಂದಿರದ ಪ್ರಧಾನ ಅರ್ಚಕ ಹರಿದಾಸ ಭಟ್ ಪೆರ್ಣಂಕಿಲ ಅವರ ಶುಭಾಶೀರ್ವಾದಗಳೊಂದಿಗೆ ಹಾಗೂ ಶ್ರೀ ಅಂಬಿಕಾ ಆದಿನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಹರಿದಾಸ ಗೋಪಾಲ ಶೆಟ್ಟಿ ಅವರ ಸಹಕಾರದೊಂದಿಗೆ ನಡೆಯಲಿರುವ ಕಾರ್ಯಕ್ರಮದಲ್ಲಿ, ನವೋದಯ ಕನ್ನಡ ಸೇವಾ ಸಂಘ ಥಾಣೆ ಇವರಿಂದ ಶ್ರೀ ರಾಮ ಸಂಕೀರ್ತನೆ ನಡೆಯಲಿದೆ. ಇದೇ ಸಂದರ್ಭದಲ್ಲಿ ದಶಕಗಳ ಕಾಲದಿಂದ ಯಕ್ಷಮಾತೆಯ ಸೇವೆಗೈಯುತ್ತಿರುವ ನಾರಾಯಣ ಕಿಂಞಣ್ಣ ಶೆಟ್ಟಿ ಕುಂಬಳೆ ದಂಪತಿಯನ್ನು ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಗುವುದು.
ಮುಖ್ಯ ಅತಿಥಿಗಳಾಗಿ ಶ್ರೀ ಧರ್ಮಶಾಸ್ತ ಭಕ್ತ ವೃಂದದ ಅಧ್ಯಕ್ಷ ರಾಮಣ್ಣ ದೇವಾಡಿಗ ಹಾಗೂ ತಾಳಮದ್ದಳೆ ಅರ್ಥದಾರಿ, ಕಲಾ ಪೋಷಕ ಕೆ. ಕೆ. ಶೆಟ್ಟಿ ಅವರು ಆಗಮಿಸಲಿದ್ದಾರೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಯೋಜಕರಾದ ಯಕ್ಷಗಾನ ಕಲಾವಿದ, ಅರ್ಥದಾರಿಗಳಾದ ವಾಸು ಮಾರ್ನಾಡ್ ಮತ್ತು ಸುರೇಶ್ ನಂದೊಳ್ಳಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.




