30 C
Mumbai
September 27, 2026
Mumbai News Kannada
ಮುಂಬಯಿ

ಶ್ರೀ ಅಯ್ಯಪ್ಪ ಯಕ್ಷ ಕಲಾ ಪ್ರತಿಷ್ಠಾನ ಮುಂಬಯಿ: ಕಲಾಭಿಮಾನಿಗಳ ಮನರಂಜಿಸಿದ ‘ಕಾಶಿ ತೀರ್ಥ’ ಯಕ್ಷಗಾನ ಪ್ರದರ್ಶನ



ವರದಿ : ಲಕ್ಷ್ಮಣ ಪೂಜಾರಿ ಕೊಡೇರಿ

ಮುಂಬಯಿ ಮಹಾನಗರದಲ್ಲಿ ಯಕ್ಷಗಾನ ಆಯೋಜಿಸಲು ಕಲಾವಿದರೊಂದಿಗೆ ಪ್ರೇಕ್ಷಕರು ಮುಖ್ಯ ಹಾಗೇ ದೇಣಿಗೆದಾರರ ಸಹಕಾರ ಕೂಡ ಬೇಕಾಗುತ್ತದೆ ಅದರಲ್ಲೂ ಬಡಗುತಿಟ್ಟಿನ ಯಕ್ಷಗಾನವನ್ನು ಆಯೋಜಿಸಲು ಬಹಳ ಕಷ್ಟವಿದೆ. ನಮ್ಮ ಹವ್ಯಾಸಿ ಕಲಾವಿದರು ಇಷ್ಟೊಂದು ಸೊಗಸಾಗಿ ಯಕ್ಷಗಾನ ಪ್ರದರ್ಶನ ನೀಡಲು ಹಗಲಿರುಳು ಶ್ರಮಿಸಿದ್ದಾರೆ ಎಂದು ಶ್ರೀ ಅಯ್ಯಪ್ಪ ಯಕ್ಷ ಕಲಾ ಪ್ರತಿಷ್ಠಾನದ ಗೌರವಾಧ್ಯಕ್ಷ ರಾಜು ಮೆಂಡನ್ ವಂಡ್ಸೆ ಹೇಳಿದರು.


ಥಾಣೆ ಪಶ್ಚಿಮದಲ್ಲಿರುವ ನವೋದಯ ಕನ್ನಡ ಸಂಘದ ಸಭಾಗೃಹದಲ್ಲಿ ಜೂ. 21 ರಂದು ಜರಗಿದ ನಾರಾಯಣ ಶೆಟ್ಟಿ ನಂದ್ರೋಳ್ಳಿ ವಿರಚಿತ, ಸುರೇಶ ಶೆಟ್ಟಿ ನಂದ್ರೋಳ್ಳಿ ಪದ್ಯ ರಚಿಸಿರುವ ‘ಕಾಶಿ ತೀರ್ಥ’ ಎಂಬ ಯಕ್ಷಗಾನ ಪ್ರದರ್ಶನದ ಮಧ್ಯದಲ್ಲಿ ಜರಗಿದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಾ ಆಂಗ್ಲ ಮಾಧ್ಯಮದಲ್ಲಿ ಕಲಿಯುವ ಮಕ್ಕಳು ಕನ್ನಡದಲ್ಲಿ ನಿರರ್ಗಳವಾಗಿ ಸಂಭಾಷಣೆ ನೆಡೆಸಲು ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ ಇದು ಅವರ ಬಹು ದೊಡ್ಡ ಸಾಧನೆ ಎಂದು ಹೇಳಲು ಸಂತೋಷವಾಗುತ್ತದೆ. ನಮ್ಮ ಸಂಸ್ಥೆ ಈಗಾಗಲೇ 14ರ ಹರೆಯದಲ್ಲಿದೆ. ನಮ್ಮ ತಂಡದಲ್ಲಿ ಪ್ರತಿವರ್ಷ ಬದಲಾವಣೆ ಮಾಡುತ್ತಾ ಪ್ರತಿಯೊಬ್ಬರಿಗೂ 2 ವರ್ಷದ ಅಧ್ಯಕ್ಷ ಪದವಿ ನೀಡುತ್ತಾ ಬಂದಿದ್ದೇವೆ. ನಮ್ಮ ಸಂಸ್ಥೆಯಲ್ಲಿ ಯಾವುದೇ ಜಾತಿ ಮತದ ಭೇದವಿಲ್ಲದೆ ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಕಾರ್ಯ ನಿರ್ವಹಿಸುತ್ತಿದ್ದೇವೆ. ಇನ್ನು ಮುಂಬರುವ ದಿನಗಳಲ್ಲಿ ನಮ್ಮ 15ನೇ ವರ್ಷದ ಕಾರ್ಯಕ್ರಮವನ್ನು ಬಲು ವಿಜೃಂಭಣೆಯಿಂದ ಆಚರಿಸಲಿದ್ದೇವೆ. ಆ ಎಲ್ಲಾ ಕಾರ್ಯಕ್ರಮಗಳಿಗೂ ನಿಮ್ಮೆಲ್ಲರ ಸಹಕಾರ ನಿರಂತರವಾಗಿರಲಿ ಎಂದರು.
ಯಕ್ಷಗಾನ ಕಲಾವಿದನಾಗಿ ತಾಳಮದ್ದಳೆಯ ಅರ್ಥಗಾರಿಕೆ ಮತ್ತು ಕಾಶಿ ತೀರ್ಥ ಪ್ರಸಂಗ ಪದ್ಯ ರಚಿಸಿದ ಸುರೇಶ ಶೆಟ್ಟಿ ನಂದ್ರೋಳಿಯವರನ್ನು ವೇದಿಕೆಯ ಗಣ್ಯರು ಶಾಲು ಹೊದೆಸಿ ಫಲಪುಷ್ಪ ಮತ್ತು ಸ್ಮರಣಿಕೆ ನೀಡಿ ಸಮ್ಮಾನಿಸಿದರು.


ಸನ್ಮಾನ ಸ್ವೀಕರಿಸಿದ ಸುರೇಶ ಶೆಟ್ಟಿ ನಂದ್ರೋಳ್ಳಿ ಮಾತನಾಡುತ್ತಾ ನೀವೆಲ್ಲರೂ ಸೇರಿ ನನ್ನ ಹೆಗಲಿಗೆ ಹೊರಿಸುತ್ತಿರುವ ಹೊಣೆಗಾರಿಕೆ ಅಂತ ಭಾವಿಸುತ್ತೇನೆ ನಾನೇನೋ ಸಾಧನೆ ಮಾಡಿದ್ದೇನೆ ಅಂತ ನೀವು ಈ ಸನ್ಮಾನ ಮಾಡಿರುವುದಲ್ಲ ಮುಂದೆ ಹೆಚ್ಚಿನ ಸಾಧನೆ ಮಾಡಲಿದೆ ಎಂದು ಎಚ್ಚರಿಸುತ್ತಿದ್ದೀರಿ ಎಂದು ಭಾವಿಸುತ್ತೇನೆ. ಯಕ್ಷಗಾನವನ್ನು ನನ್ನ ಸಾಧನೆಯ ಕ್ಷೇತ್ರ ಅಂತ ಕಂಡಿಲ್ಲ ಅಥವಾ ಯಕ್ಷಗಾನ ಒಂದು ನನ್ನ ಸಂಪಾದನೆಯ ಕ್ಷೇತ್ರ ಅಂತಲೂ ಭಾವಿಸಿಲ್ಲ ಈ ಕ್ಷೇತ್ರದಲ್ಲಿ ಹೆಸರು ಮಾಡಬೇಕು ಎಂದು ಅನ್ನಿಸಿರಲಿಲ್ಲ. ನನಗೆ ಯಕ್ಷಗಾನ ಕ್ಷೇತ್ರವೆಂದರೆ ಅದು ಅಮ್ಮನ ಮಡಿಲು ಇದ್ದಂತೆ ನಾನು ಆರಾಧಿಸುವ ದೇವರ ಗರ್ಭಗುಡಿ ಇದ್ದಂತೆ. ಅಮ್ಮನ ಮಡಿಲಲ್ಲಿ ಮಲಗಿದಾಗ ಸಿಗುವ ನೆಮ್ಮದಿ ಹಾಗೂ ದೇವರ ಗರ್ಭಗುಡಿಯ ಮುಂದೆ ಕೈ ಮುಗಿದು ನಿಂತಾಗ ಸಿಗುವ ಆನಂದದಂತೆ ಈ ಯಕ್ಷಗಾನದಲ್ಲಿ ನಾನು ತೊಡಗಿಸಿಕೊಂಡಾಗ ನನಗೆ ಸಿಗುವ ಸಂತೋಷ ಆ ರೀತಿಯದ್ದು. ನಾನು ಯಾವುದೇ ನಿರೀಕ್ಷೆಯನ್ನು ಯಕ್ಷಗಾನದಲ್ಲಿ ಇರಿಸಿಕೊಂಡಿಲ್ಲ ಆದರೆ ನಮ್ಮ ಆಶಯವಾದ ಪರಂಪರೆಯಲ್ಲಿ ನಂಬಿಕೆ ಉಂಟು. ಯಾವುದೇ ಸ್ವಾರ್ಥವಿಲ್ಲದೆ ನನಗೇನು ಬೇಡ ಎಂಬ ನೆಲೆಯಲ್ಲಿ ದೇವರನ್ನು ಪೂಜಿಸಿದರೆ ದೇವರು ನಮಗೆ ಯಾವುದು ಬೇಕು ಎನ್ನುವುದನ್ನು ಅರಿತು ಅವರೇ ಬೇಕಾದಷ್ಟು ಅನುಗ್ರಹಿಸುತ್ತಾರೆ ಬಹು:ಶ ನಾನು ಯಕ್ಷಗಾನವನ್ನು ನಿರ್ಲಿಪ್ತ ಭಾವನೆಯಿಂದ ಕಂಡ ಕಾರಣಕ್ಕೆ ನೀವೆಲ್ಲರು ಸೇರಿ ಈ ಭವ್ಯವಾದ ವೇದಿಕೆಯಲ್ಲಿ ಸನ್ಮಾನಿಸಿದ್ದೀರಿ ಇದು ದೇವರ ಪ್ರಸಾದವೆಂದು ಸ್ವೀಕರಿಸಿ ನಿಮ್ಮ ಈ ಸನ್ಮಾನ ಮನಸ್ಸಿನಲ್ಲಿರಿಸಿಕೊಂಡು ಸನ್ಮಾನದ ಮೂಲಕ ನನ್ನನ್ನು ಎಚ್ಚರಿಸಿದ್ದೀರಿ ಎಂದು ಭಾವಿಸುತ್ತಾ ಇನ್ನು ಹೆಚ್ಚಿನ ಸಾಧನೆಯ ಪಥದಲ್ಲಿ ಮುಂದುವರೆಯುತ್ತೇನೆ. ನನ್ನ ಈ ಸಾಧನೆಯಲ್ಲಿ ಶ್ರೀ ಅಯ್ಯಪ್ಪ ಯಕ್ಷ ಕಲಾ ಪ್ರತಿಷ್ಠಾನದ ಸಹಕಾರ ಮರೆಯುವಂತಿಲ್ಲ. ಮೊದಲು ವೇಷ ಮಾಡಿಸಿದ್ದು ಮತ್ತು ಅರ್ಥಗಾರಿಕೆಗೆ ಅವಕಾಶ ಕಲ್ಪಿಸಿರುವುದು ಕೂಡ ಈ ಪ್ರತಿಷ್ಠಾನ ನಾನು ಇದರ ಖಾಯಂ ಸದಸ್ಯನಾಗಿದ್ದೇನೆ ಮುಂದೆಯೂ ಕೂಡ ಖಾಯಂ ಸದಸ್ಯನಾಗಿರುತ್ತೇನೆ. ಈ ಪ್ರತಿಷ್ಠಾನದ ಅಭಿವೃದ್ಧಿಗಾಗಿ ಸಾವಿರಾರು ಕನಸುಗಳಿವೆ ಅದೆಲ್ಲವನ್ನು ಈಡೇರಿಸಲು ನಿಮ್ಮೆಲ್ಲರ ಸಹಕಾರವಿರಲಿ ಸನ್ಮಾನಿಸಿದ ನಿಮಗೆಲ್ಲರಿಗೂ ನನ್ನ ಕೃತಜ್ಞತೆಗಳು ಎಂದರು.


ಮುಖ್ಯ ಅತಿಥಿ ಬಾಂಬೆ ಬಂಟ್ಸ್ ಅಸೋಷಿಯೇಷನ್ ಜೂಹಿನಗರ್ ಇದರ ಮಾಜಿ ಅಧ್ಯಕ್ಷ ಸಿ. ಎ. ಸುರೇಂದ್ರ ಶೆಟ್ಟಿ ಮಾತನಾಡುತ್ತಾ ನಮ್ಮ ತುಳುನಾಡಿನ ಭವ್ಯವಾದ ಪರಂಪರೆಯ ಶ್ರೀಮಂತ ಕಲೆ ಯಕ್ಷಗಾನ ಇದರಿಂದ ನಮ್ಮ ಮಕ್ಕಳಿಗೆ ಶ್ರೇಷ್ಠ ವ್ಯಕ್ತಿತ್ವ, ಆದರ್ಶ ಜೀವನ, ಧಾರ್ಮಿಕ ಶ್ರದ್ಧೆ ನೀಡುತ್ತದೆ ಎಂದು ಹೇಳಲು ಸಂತೋಷವಾಗುತ್ತದೆ. ಹವ್ಯಾಸಿ ಕಲಾವಿದರ ಈ ಯಕ್ಷಗಾನ ನಮ್ಮನ್ನು ಯಕ್ಷಲೋಕಕ್ಕೆ ಕರೆದುಕೊಂಡು ಹೋದಂತೆ ಭಾಸವಾಯಿತು ಸತ್ಯ ಧರ್ಮವನ್ನು ಸಾರುವ ಕಲೆಯೇ ಯಕ್ಷಗಾನ ಎಂದರು.


ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದ ಬಾಂಬೆ ಬಂಟ್ಸ್ ಅಸೋಷಿಯೇಷನ್ ಮಾಜಿ ಅಧ್ಯಕ್ಷ ಶ್ಯಾಮ ಎನ್. ಶೆಟ್ಟಿ, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬಯಿ ಇದರ ಮಾಜಿ ಅಧ್ಯಕ್ಷ ಮಹಾಬಲ ಕುಂದರ್, ಚಾರ್ಟೆಡ್ ಅಕೌಂಟೆಂಟ್ ಯಶ್ವಂತ್ ಕರ್ಕೇರ, ಥಾಣೆ ನವೋದಯ ಕನ್ನಡ ಸಂಘದ ಅಧ್ಯಕ್ಷ ದಯಾನಂದ ಶೆಟ್ಟಿ, ಉದ್ಯಮಿ ಹಾಗೂ ಕಲಾಪೋಷಕ ನಿತೀಶ್ ಶೆಟ್ಟಿ ಸಂದರ್ಭೋಚಿತವಾಗಿ ಮಾತನಾಡಿ ಪ್ರತಿಷ್ಠಾನದ ಕಾರ್ಯಕ್ರಮಗಳಿಗೆ ಶುಭ ಕೋರಿದರು. ವೇದಿಕೆಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಜಯರಾಮ್ ಶೆಟ್ಟಿ ಇಡೂರು ಉಪಸ್ಥಿತರಿದ್ದರು.
ವೇದಿಕೆಯಲ್ಲಿರುವ ಗಣ್ಯರಿಗೆ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ರಾಘವೇಂದ್ರ ಬಗ್ವಾಡಿ ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರು ಪುಷ್ಟಗುಚ್ಚ ನೀಡಿ ಸ್ವಾಗತಿಸಿದರೆ, ಹಿಮ್ಮೇಳದಲ್ಲಿ ಸಹಕರಿಸಿದ ಹಾಲಾಡಿ ಮೇಳದ ಪ್ರಧಾನ ಭಾಗವತ ಗಣೇಶ ಬಿಲ್ಲಾಡಿ, ಚಂಡೆ ವಾದಕ ಶ್ರೀನಿವಾಸ ಪ್ರಭು, ಮದ್ದಳೆಗಾರ ವಿಶ್ವಂಭರ ಅಲ್ಸೆ, ವೇಷ-ಭೂಷಣದ ಗಣೇಶ ಆಚಾರ್ಯ ಸಾಲಿಗ್ರಾಮ, ಕಲಾವಿದ ರಾಜೇಶ ಹೈಕಾಡಿ ಅವರನ್ನು ವೇದಿಕೆಯ ಗಣ್ಯರು ಗೌರವಿಸಿದರು.
ಅಮೃತಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮವನ್ನು ನಿರ್ವಹಿಸಿದರೆ ಶ್ರೀ ಅಯ್ಯಪ್ಪ ಯಕ್ಷ ಕಲಾ ಪ್ರತಿಷ್ಠಾನದ ಸಂಚಾಲಕ ಮಹೇಂದ್ರ ಶೆಟ್ಟಿ ನಂದ್ರೋಳ್ಳಿ ಆರಂಭದಲ್ಲಿ ಸರ್ವರನ್ನು ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು. ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲು ಶ್ರೀ ಅಯ್ಯಪ್ಪ ಯಕ್ಷ ಕಲಾ ಪ್ರತಿಷ್ಠಾನದ ಪದಾಧಿಕಾರಿಗಳು ಮತ್ತು ಸದಸ್ಯರು ಶ್ರಮಿಸಿದರು.



Related posts

ನೀರನ್ನು ಕುದಿಸಿ, ಪಿಲ್ಟರ್ ಮಾಡಿ ಬಳಸಿ ಬಿ ಎಂ ಸಿಯಿಂದ ಮುಂಬೈ ಜನತೆಗೆ ಸಲಹೆ

Mumbai News Desk

ಶ್ರೀ ನಾರಾಯಣ ಗುರು ಭಜನಾ ಮಂಡಳಿ ಸಾಂತಾಕ್ರೂಜ್ ಘಟಕದಿಂದ ಕಲಿನಾ ಭಗವತಿ ದೇವಸ್ಥಾನದಲ್ಲಿ ಭಜನೆ

Mumbai News Desk

ಬಂಟರ ಸಂಘ ಮುಂಬಯಿ – ವಸಯಿ ಡಹಣು ಪ್ರಾದೇಶಿಕ ಸಮಿತಿ, ಮಹಿಳಾ ವಿಭಾಗ ನವರಾತ್ರಿ ಉತ್ಸವ ಸಂಭ್ರಮ. ದಾಂಡಿಯಾ .

Mumbai News Desk

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ : ಗುರುಪೂರ್ಣಿಮೆ ಆಚರಣೆ

Mumbai News Desk

ಮಲಾಡ್ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯಿಂದ 15 ನೇ ವಾರ್ಷಿಕ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ, ಸಾಂಸ್ಕೃತಿಕ ವೈಭವ, ಯಕ್ಷಗಾನ, ಸನ್ಮಾನ, ಸಮಾರೋಪ ಸಮಾರಂಭ .

Mumbai News Desk

ಗೋರೆಗಾಂವ್ ಕರ್ನಾಟಕ ಸಂಘದ 66ನೇ ಸಂಸ್ಥಾಪನಾ ದಿನಾಚರಣೆ.

Mumbai News Desk