
ಮಸ್ಕತ್, ಅಕ್ಟೋಬರ್ 1, 2026: ಕರ್ನಾಟಕದ ರಕ್ತದಾನ ಕ್ಷೇತ್ರದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ ಸಮಾಜಸೇವಕ ಹಾಗೂ ರಕ್ತದಾನ ಪ್ರೇರಕ ಶ್ರೀ ಸತೀಶ್ ಸಾಲ್ಯಾನ್, ಉಡುಪಿ ಅವರು ಮಸ್ಕತ್‌ಗೆ ಆಗಮಿಸಿದ ಸಂದರ್ಭದಲ್ಲಿ ಮಸ್ಕತ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯಿತು.
ಕರ್ನಾಟಕ ಜಾನಪದ ಪರಿಷತ್ತು – ಮಸ್ಕತ್, ಓಮಾನ್ ಘಟಕದ ಅಧ್ಯಕ್ಷರಾದ ಶ್ರೀ ಶಿವಾನಂದ ಕೋಟ್ಯನ್ ಸದಸ್ಯರುಗಳಾದ ಶತೀಶ್ ಬಾರ್ಕರು, ಇಮ್ಯನುವಲ್ ದಿವಾಕರ್, ಮತ್ತು ಮಸ್ಕತ್ ಮೂಗವೀರಸ್ ನ ಅಧ್ಯಕ್ಷರಾದ ಶ್ರೀ ಪದ್ಮಾಕರ ಮೆಂಡನ್ ಹಾಗೂ ಸದಸ್ಯರಾದ ಶ್ರೀ ಶೇಷಾ ಕಾಂಚನ್, ಶ್ರೀ ದಿನಕರ್ ಸುವರ್ಣ ಕೋಟೆ ಇವರುಗಳು ಅತ್ಮೀಯವಾಗಿ ಬರಮಾಡಿಕೊಂಡರು.
ಅಕ್ಟೋಬರ್ 2ರಂದು ಮಸ್ಕತ್‌ನ ಘಾಲಾ ಹೆಲ್ತ್ ಸೆಂಟರ್‌ನಲ್ಲಿ ಆಯೋಜಿಸಲಾಗಿರುವ 10ನೇ ವರ್ಷದ ಬೃಹತ್ ಸ್ವಯಂಪ್ರೇರಿತ ರಕ್ತದಾನ ಶಿಬಿರ ‘ಜೀವಧಾರೆ’ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸುವ ಸಲುವಾಗಿ ಶ್ರೀ ಸತೀಶ್ ಸಾಲ್ಯಾನ್ ಅವರು ಮಸ್ಕತ್‌ಗೆ ಆಗಮಿಸಿದ್ದಾರೆ.
ಸ್ವತಃ 53 ಬಾರಿ ರಕ್ತದಾನ ಮಾಡುವ ಮೂಲಕ ಮಾದರಿಯಾಗಿರುವ ಶ್ರೀ ಸತೀಶ್ ಸಾಲ್ಯಾನ್ ಅವರು ಉಡುಪಿ ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ತುರ್ತು ಸಂದರ್ಭಗಳಲ್ಲಿ ರಕ್ತದ ವ್ಯವಸ್ಥೆ, ಸ್ವಯಂಪ್ರೇರಿತ ರಕ್ತದಾನ ಶಿಬಿರಗಳ ಆಯೋಜನೆ, ರಕ್ತದಾನಿಗಳ ಸಂಪರ್ಕ ಹಾಗೂ ಜನಜಾಗೃತಿ ಕಾರ್ಯಗಳಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅಗತ್ಯವಿರುವ ರೋಗಿಗಳಿಗೆ ಸಕಾಲದಲ್ಲಿ ರಕ್ತ ದೊರಕಿಸಿಕೊಡುವುದರ ಜೊತೆಗೆ, ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ನೆರವು ಒದಗಿಸುವ ಮಾನವೀಯ ಕಾರ್ಯಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಕಡಲಾಚೆಯ ಕನ್ನಡಿಗರು ಹಮ್ಮಿಕೊಂಡಿರುವ ರಕ್ತದಾನ ಸೇವಾ ಕಾರ್ಯದಲ್ಲಿ ಪಾಲ್ಗೊಳ್ಳಲು ಕರ್ನಾಟಕದಿಂದ ಆಗಮಿಸಿರುವ ಅವರ ಉಪಸ್ಥಿತಿ, ಓಮಾನ್‌ನಲ್ಲಿನ ಸ್ವಯಂಪ್ರೇರಿತ ರಕ್ತದಾನ ಚಳವಳಿಗೆ ಮತ್ತಷ್ಟು ಪ್ರೇರಣೆ ನೀಡಲಿದೆ ಎಂದು ಆಯೋಜಕರಾದ ಕಟಪಾಡಿ ಶಿವಾನಂದ ಕೋಟ್ಯನ್ ಅಭಿಪ್ರಾಯಪಟ್ಟರು. ರಾಷ್ಟ್ರೀಯ ರಕ್ತದಾನ್ ದಿವಸ್ ಮತ್ತು
ಗಾಂಧಿ ಜಯಂತಿಯ ದಿನವಾದ ಅಕ್ಟೋಬರ್ 2ರಂದು ಬೆಳಿಗ್ಗೆ 8ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿರುವ ‘ಜೀವಧಾರೆ’ ಶಿಬಿರದಲ್ಲಿ ಓಮಾನ್‌ನ ವಿವಿಧ ಭಾಗಗಳಿಂದ ರಕ್ತದಾನಿಗಳು, ವೈದ್ಯರು, ಸಮಾಜಸೇವಕರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಕಳೆದ ಒಂದು ದಶಕದ ರಕ್ತದಾನ ಸೇವಾ ಪಯಣ ಹಾಗೂ ರಕ್ತದಾನದ ಮಹತ್ವವನ್ನು ದಾಖಲಿಸುವ ವಿಶೇಷ ‘ಜೀವಧಾರೆ – The Ray of Life’ ಮಾಹಿತಿ ಪುಸ್ತಕವೂ ಅನಾವರಣಗೊಳ್ಳಲಿದೆ.
“ರಕ್ತದಾನದಿಂದ ಜೀವದಾನ, ಸೇವೆಯಿಂದ ಮಾನವೀಯತೆಯ ಸಂದೇಶ” ಎಂಬ ಆಶಯದೊಂದಿಗೆ ನಡೆಯುತ್ತಿರುವ ಈ ಮಹತ್ವದ ಕಾರ್ಯಕ್ರಮಕ್ಕೆ ಆಗಮಿಸಿದ ಶ್ರೀ ಸತೀಶ್ ಸಾಲ್ಯಾನ್ ಅವರನ್ನು ಮಸ್ಕತ್‌ನಲ್ಲಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.



