ಬದ್ಲಾಪುರ: ಡೊಂಬಿವಲಿ ಪ್ರದೇಶದ ‘ಕನ್ನಡಿಗರ ಸ್ನೇಹ ಬಳಗ ಟ್ರಸ್ಟ್ (ರಿ)’ ಹಾಗೂ ‘ವೆಂಕಟರಮಣ ಭಜನಾ ಮಂಡಳಿ’ಯ ಸಂಯುಕ್ತ ಆಶ್ರಯದಲ್ಲಿ ಪ್ರಥಮ ವರ್ಷದ ವಿಹಾರಕೂಟವು ಇಲ್ಲಿನ ರಿವರ್ ರೆಸಾರ್ಟ್ನಲ್ಲಿ ನವೆಂಬರ್ 22ರಂದು ಸಡಗರ ಹಾಗೂ ಉತ್ಸಾಹದಿಂದ ನೆರವೇರಿತು.
ಕನ್ನಡಿಗರ ಸ್ನೇಹ ಬಳಗ ಟ್ರಸ್ಟ್ನ ಅಧ್ಯಕ್ಷ ಪ್ರಕಾಶ್ ಆರ್. ಶೆಟ್ಟಿ ಹಾಗೂ ವೆಂಕಟರಮಣ ಭಜನಾ ಮಂಡಳಿಯ ಮುಖ್ಯಸ್ಥೆ ಸವಿತಾ ಪ್ರಭು ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಈ ಕೂಟದಲ್ಲಿ, ತುಳು-ಕನ್ನಡಿಗ ಬಾಂಧವರು, ಮಹಿಳೆಯರು ಹಾಗೂ ಕುಟುಂಬದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಅಂಗವಾಗಿ ಹವ್ಯಕ ಸಮಾಜದ ಪ್ರಮುಖರಾದ ಶಿವಾನಂದ ಭಟ್ ಅವರು ಮಹಿಳೆಯರಿಗಾಗಿ ವಿವಿಧ ಮನರಂಜನಾ ಆಟಗಳು ಹಾಗೂ ಕ್ರೀಡಾ ಸ್ಪರ್ಧೆಗಳನ್ನು ನಡೆಸಿಕೊಟ್ಟರು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಆರ್. ಶೆಟ್ಟಿ ಅವರು ಪ್ರಥಮ ಹಾಗೂ ದ್ವಿತೀಯ ಬಹುಮಾನಗಳನ್ನು ವಿತರಿಸಿದರು. ಇದೇ ಸಂದರ್ಭದಲ್ಲಿ ವೆಂಕಟರಮಣ ಭಜನಾ ಮಂಡಳಿಯ ಮುಖ್ಯಸ್ಥೆ ಸವಿತಾ ಪ್ರಭು ಅವರನ್ನು ಸಂಸ್ಥೆಯ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಕಾಶ್ ಆರ್. ಶೆಟ್ಟಿ, ‘ಆಹ್ವಾನಕ್ಕೆ ಸ್ಪಂದಿಸಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಸಮಸ್ತ ತುಳು-ಕನ್ನಡಿಗರಿಗೆ ಕೃತಜ್ಞತೆಗಳು. ಮುಂದಿನ ದಿನಗಳಲ್ಲಿಯೂ ಪ್ರತಿವರ್ಷ ಇದೇ ಮಾದರಿಯಲ್ಲಿ ವಿಹಾರಕೂಟವನ್ನು ಆಯೋಜಿಸಲಾಗುವುದು. ಮುಂಬರುವ ವರ್ಷಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಳ್ಳುವ ಮೂಲಕ ಒಗ್ಗಟ್ಟು ಮತ್ತು ಸಂತೋಷವನ್ನು ಹಂಚಿಕೊಳ್ಳಬೇಕು’ ಎಂದು ಮನವಿ ಮಾಡಿದರು.
ಬೆಳಿಗ್ಗೆ 10.30ರಿಂದ ಸಂಜೆ 5.30ರವರೆಗೆ ನಡೆದ ವಿಹಾರಕೂಟದಲ್ಲಿ ಬೆಳಗಿನ ಉಪಹಾರ, ಮಧ್ಯಾಹ್ನದ ಭೋಜನ ಹಾಗೂ ಸಂಜೆಯ ಉಪಹಾರ ಮತ್ತು ಚಹಾ-ಕಾಫಿಯ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಮಹಿಳಾ ವಿಭಾಗ, ಕುಟುಂಬದ ಸದಸ್ಯರು ಹಾಗೂ ವಿಶೇಷ ಸಹಕಾರ ನೀಡಿದ ಶಿವಾನಂದ ಭಟ್ ಮತ್ತು ಸವಿತಾ ಪ್ರಭು ಅವರಿಗೆ ಪ್ರಕಾಶ್ ಆರ್. ಶೆಟ್ಟಿ ಅವರು ವಂದನೆ ಸಲ್ಲಿಸಿದರು.












