35.1 C
Karnataka
April 1, 2025
ಸುದ್ದಿ

ಫರಂಗಿಪೇಟೆ : ನಾಪತ್ತೆಯಾದ ದಿಗಂತ್ 10 ದಿನಗಳ ಬಳಿಕ ಇಂದು (ಮಾ. 8) ಉಡುಪಿಯಲ್ಲಿ ಪತ್ತೆ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕಾಲೇಜು ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣ ಬೇಧಿಸುವಲ್ಲಿ ಕೊನೆಗೂ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ವಿದ್ಯಾರ್ಥಿ ದಿಗಂತ್ ಫೆಬ್ರವರಿ 25 ರಂದು ನಾಪತ್ತೆಯಾಗಿದ್ದ. ಪೊಲೀಸರು ಹುಡುಕಾಟ, ತನಿಖೆ ತೀವ್ರಗೊಳಿಸಿದ್ದರೂ ಆತನ ಸುಳಿವೇ ದೊರೆತಿರಲಿಲ್ಲ. ಇದೀಗ ದಿಢೀರಾಗಿ ಬಾಲಕ ಉಡುಪಿಯಲ್ಲಿ ಪತ್ತೆಯಾಗಿದ್ದಾನೆ. ಉಡುಪಿಯ ಡಿ ಮಾರ್ಟ್​ನಲ್ಲಿ ದಿಗಂತ್ ಪತ್ತೆಯಾಗಿದ್ದಾನೆ.

ಡಿ ಮಾರ್ಟ್ ಒಳಗೆ ಬಟ್ಟೆಗಳನ್ನು ಬ್ಯಾಗ್​ಗೆ ತುಂಬಿಸಿಕೊಳ್ಳುತ್ತಿದ್ದಾಗ ದಿಗಂತ್ ಸಿಕ್ಕಿಬಿದ್ದಿದ್ದಾನೆ. ದಿಗಂತ್ ಚಲನವಲನ ಕಂಡು ಸಂಶಯಗೊಂಡ ಸಿಬ್ಬಂದಿ, ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಆತ, ತಾನು ದಿಗಂತ್ ಎಂದು ಹೇಳಿಕೊಂಡಿದ್ದಾನೆ. ನಂತರ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಆತನನ್ನು ಮಂಗಳೂರಿಗೆ ಕರೆದುಕೊಂಡು ಹೋಗಲಾಗಿದೆ.

ತನ್ನ ತಾಯಿಗೆ ಕರೆ ಮಾಡಿ ಮಾತನಾಡಿರುವ ವಿದ್ಯಾರ್ಥಿ ದಿಗಂತ್, ಉಡುಪಿಯಲ್ಲಿ ಸುರಕ್ಷಿತವಾಗಿ ಇದ್ದೇನೆಂದು ಹೇಳಿದ್ದಾನೆ. ನಾನಾಗಿ ಹೋಗಿಲ್ಲ, ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋದರು ಎಂದಿದ್ದಾನೆ ಎನ್ನಲಾಗಿದೆ. ಆದರೆ, ಈ ವಿಚಾರವಾಗಿ ಪೊಲೀಸರಿಂದ ಇನ್ನಷ್ಟೆ ಅಧಿಕೃತ ಮಾಹಿತಿ ದೊರೆಯಬೇಕಿದೆ.

ದಿಗಂತ್ ನಾಪತ್ತೆಯಾಗಿರುವ ಬಗ್ಗೆ ಆತನ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ನಡೆಸಿದ್ದರೂ ದಿಗಂತ್ ಪತ್ತೆಯಾಗಿರಲಿಲ್ಲ. ಹಲವು ದಿನಗಳ ಹುಡುಕಾಟದ ನಂತರವೂ ಸುಳಿವು ಸಿಗದ ಕಾರಣ, ದಿಗಂತ್ ಪೋಷಕರು ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ ಮಗನನ್ನು ಪತ್ತೆ ಮಾಡಿಕೊಡಲು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿದ್ದರು. ಅದರಂತೆ, ಮಾರ್ಚ್ 12 ರ ಒಳಗೆ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಪೊಲೀಸರಿಗೆ ಆದೇಶಿಸಲಾಗಿತ್ತು. ಇದೀಗ ವಿದ್ಯಾರ್ಥಿ ಪತ್ತೆಯಾಗಿದ್ದಾನೆ.

ದಿಗಂತ್ ನಾಪತ್ತೆ ಪ್ರಕರಣದ ಬಗ್ಗೆ ಹಲವು ಊಹಾಪೋಹಗಳು ಹರಡಿದ್ದವು. ಮಂಗಳಮುಖಿ ಜಾಲ ಅಪಹರಿಸಿರುವ ಸಾಧ್ಯತೆ ಬಗ್ಗೆಯೂ ಅನುಮಾನ ಸೃಷ್ಟಿಯಾಗಿತ್ತು. ಅಲ್ಲದೇ ಮೊಬೈಲ್ ಗೇಮಿಂಗ್ ಆ್ಯಪ್ ಸೇರಿ ಹಲವು ಆಯಾಮಗಳಲ್ಲಿ ತನಿಖೆ ನಡೆದಿತ್ತು.

ಹೈಕೋರ್ಟ್ ಆದೇಶದ ಬೆನ್ನಲ್ಲೇ ದಿಗಂತ್ ಗಾಗಿ ಶೋಧ ಕಾರ್ಯ ಚುರುಕುಗೊಂಡಿತ್ತು. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಯತೀಶ್ ‌ಎನ್.ನೇತೃತ್ವದ ಜಿಲ್ಲಾ ಪೋಲೀಸ್ ತಂಡ ನಾಪತ್ತೆ ಘಟನೆ ನಡೆದ ಸ್ಥಳದ ಸುತ್ತಲಿನ ಸ್ಥಳಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ಕೂಂಬಿಂಗ್ ಕಾರ್ಯ ನಡೆಸಿತ್ತು.ಕಳೆದ 12 ದಿನಗಳಿಂದ ದಿಗಂತ್ ಪತ್ತೆಗಾಗಿ ವಿವಿಧ ರೀತಿಯ ಕಾರ್ಯಚರಣೆಗಳನ್ನು ಪೋಲೀಸ್ ತಂಡ ನಡೆಸಿತ್ತು. ಆದರೆ ಫಲಪ್ರದವಾಗಿರಲಿಲ್ಲ.

ಬಂಟ್ವಾಳ ಸಬ್ ಡಿವಿಜನ್ ನ ಸುಮಾರು 9 ಪೋಲೀಸ್ ಠಾಣೆಯ ಇನ್ಸ್ ಪೆಕ್ಟರ್​​ಗಳು, ಎಸ್.ಐ.ಗಳು ಹಾಗೂ ಸುಮಾರು 100 ಕ್ಕೂ ಅಧಿಕ ಪೋಲೀಸರ ತಂಡ ಶನಿವಾರ ಬೆಳಿಗ್ಗೆಯಿಂದಲೇ ಕೂಂಬಿಂಗ್ ಕಾರ್ಯದಲ್ಲಿ ತೊಡಗಿಕೊಂಡಿತ್ತು. ಡಿ‌ಎಆರ್ ತಂಡದ 30 ಪೋಲೀಸರು, ರೈಲ್ವೆ ಪೋಲೀಸ್, ಅಗ್ನಿಶಾಮಕ ದಳ, ಎಫ್.ಎಸ್ .ಎಲ್. ತಂಡ, ಡಾಗ್ ಸ್ಕ್ವಾಡ್, ಡ್ರೋನ್ ಕ್ಯಾಮರಾಗಳನ್ನು ದಿಗಂತ್ ನಾಪತ್ತೆಯಾಗಿದ್ದ ಘಟನಾ ಸ್ಥಳದ ಸುತ್ತಮುತ್ತಲಿನ ಸುಮಾರು 5 ಕಿ.ಮೀ.ನ ಭಾಗದಲ್ಲಿ ಸರ್ಚ್ ಮಾಡಲು ಯೋಜನೆ ತಯಾರಿಸಿ ಕಾರ್ಯಾಚರಣೆ ನಡೆಸಲಾಗಿತ್ತು. ನೇತ್ರಾವತಿ ನದಿ ಭಾಗದ ಸುತ್ತಲಿನ ಭಾಗದಲ್ಲಿ ದೋಣಿ ಬಳಸಿಕೊಂಡು ‌ನದಿಯಲ್ಲಿ ಕೂಡ ಸರ್ಚ್ ಮಾಡಲಾಗಿತ್ತು. ಒಂದೆಡೆ ಇಷ್ಟೆಲ್ಲ ನಡೆಯುತ್ತಿರುವಾಗ ಬಾಲಕ ಉಡುಪಿಯಲ್ಲಿ ಪತ್ತೆಯಾಗಿದ್ದಾನೆ.

Related posts

ಆಯುಷ್ಮಾನ್ ಭಾರತ್ ಆರೋಗ್ಯ ವಿಮೆ – ಹಿರಿಯ ನಾಗರಿಕರ ಆರೋಗ್ಯ ರಕ್ಷಣೆಗೆ ಅರ್ಜಿ ಸಲ್ಲಿಸುವುದು ಹೇಗೆ?

Mumbai News Desk

ಭಾಯಂದರ್ (ಪೂ) ಕ್ರೌನ್ ಬಿಸಿನೆಸ್ ಹೋಟೆಲ್ ಉದ್ಘಾಟನೆ.

Mumbai News Desk

ಮುಂಬಯಿಯ ಶ್ರೀ ಉಮಾ ಮಹೇಶ್ವರಿ ಭಜನಾ ಮಂಡಳಿ ಯಿಂದ ತುಳುನಾಡಿನ ವಿವಿಧ ಪುಣ್ಯ ಕ್ಷೇತ್ರ ಗಳಲ್ಲಿ ಭಜನಾ ಕಾರ್ಯಕ್ರಮ.

Mumbai News Desk

ಮುಂಬಯಿ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿಯವರಿಗೆ ಮಾತೃ ವಿಯೋಗ

Mumbai News Desk

ಆನಂದ ಶೆಟ್ಟಿ ಎಕ್ಕಾರ್ ಬಂಟರ ಸಂಘ ಮುಂಬಯಿ ಇದರ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾಗಿ ಅಯ್ಕೆ

Mumbai News Desk

ಮೀರಾರೋಡ್ ಗೌರವ್ ಕರ್ಕೇರ ಸಿ.ಎ ಉತ್ತೀರ್ಣ.

Mumbai News Desk