ಪಹಲ್ಗಾಮ್(ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕ್ ಮೂಲದ ಭಯೋತ್ಪಾದಕರು ದುಷ್ಕೃತ್ಯ ಎಸಗಿದ್ದಾರೆ. ಯಾವ ಧರ್ಮ ಅಂತ ಕೇಳಿ ಹಿಂದೂ ಪ್ರವಾಸಿಗರ ಮೇಲೆ ಗುಂಡಿನ ದಾಳಿಯ ಮೂಲಕ ಕುಕೃತ್ಯ ಎಸಗಿದ್ದಾರೆ. ಮಿನಿ ಸ್ವಿಟ್ಜರ್ಲ್ಯಾಂಡ್ ಎಂದೇ ಹೆಸರಾಗಿರುವ ಪಹಲ್ಗಾಮ್ ನ ಬೈಸರನ್ ಕಣಿವೆಯಲ್ಲಿ ಟ್ರಕಿಂಗ್ ಗೆ ಹೋಗಿದ್ದ ಪ್ರವಾಸಿಗರ ಮೇಲೆ ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ.
ಈ ಪ್ರವಾಸಿ ತಾಣದಲ್ಲಿಯೇ ಉಗ್ರರಿಂದ ಗುಂಡಿನ ದಾಳಿ ನಡೆದಿದ್ದು, ಭಯೋತ್ಪಾದಕರ ದಾಳಿಯಲ್ಲಿ ಶಿವಮೊಗ್ಗ ನಿವಾಸಿ ಸಾವನ್ನಪ್ಪಿದ್ದಾರೆ. ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರಿಂದ ಕೃತ್ಯ ನಡೆದಿದೆ. ಉಗ್ರರ ದಾಳಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥ್ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರು. ಅವರ ಪತ್ನಿ ಪಲ್ಲವಿ ಮತ್ತು ಮಗ ಸುರಕ್ಷಿತವಾಗಿದ್ದಾರೆ.
ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉನ್ನತ ಮಟ್ಟದ ಭದ್ರತಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅಲ್ಲಿ ಅವರು ಜಮ್ಮು ವಿಭಾಗದ ಮೇಲೆ ವಿಶೇಷ ಗಮನ ಹರಿಸಿ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಆದೇಶಗಳನ್ನು ನೀಡಿದ್ದರು ಎಂಬುದು ಗಮನಾರ್ಹ ಸಂಗತಿ.