ವೇದಪರಂಪರೆಯ ಸಂರಕ್ಷಣೆ, ಪ್ರಸಾರಕ್ಕೆ ಕೊಡುಗೆ | ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ
ಮಂಗಳೂರು, ಆ. 15: ವೇದಾಧ್ಯಯನ, ವೈದಿಕ ಪರಂಪರೆಯ ಸಂರಕ್ಷಣೆ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ವಾಮಂಜೂರಿನ ಶ್ರೀ ಹರಿ ಉಪಾಧ್ಯಾಯ, ಅದ್ಯಪಾಡಿಯ ಶ್ರೀ ಉಮೇಶ್ ಭಟ್, ಪಾದೆಬೆಟ್ಟುವಿನ ಶ್ರೀ ರಾಘವೇಂದ್ರ ಆಚಾರ್ಯ ಹಾಗೂ ಕಲ್ಯದ ಶ್ರೀ ನಾಗರಾಜ ಭಟ್ ಅವರಿಗೆ ‘ವೇದರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇಲ್ಲಿನ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವಚನ ನೀಡಿದ ಪರಮಪೂಜ್ಯ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ, “ವೇದಗಳು ಭಾರತೀಯ ಸಂಸ್ಕೃತಿ ಮತ್ತು ಸನಾತನ ಧರ್ಮದ ಮೂಲಾಧಾರ. ವೇದ ಕೇವಲ ಮಂತ್ರಗಳ ಸಮೂಹವಲ್ಲ; ಬದುಕನ್ನು ಸಾರ್ಥಕಗೊಳಿಸುವ ಜ್ಞಾನಧಾರೆ. ಗುರುಮುಖೇನ ವೇದವನ್ನು ಕಲಿತು, ನಿಷ್ಠೆಯಿಂದ ಆಚರಿಸಿ ಮುಂದಿನ ಪೀಳಿಗೆಗೆ ತಲುಪಿಸುವ ವಿದ್ವಾಂಸರ ಸೇವೆ ಶ್ರೇಷ್ಠವಾದುದು. ವೇದವಿದ್ವಾಂಸರನ್ನು ಗೌರವಿಸುವುದು ಇಡೀ ವೇದಪರಂಪರೆಗೆ ಸಲ್ಲಿಸುವ ಗೌರವ” ಎಂದರು.
“ವೈದಿಕ ಪರಂಪರೆಯ ಸೇವೆ ಒಂದು ಪ್ರದೇಶಕ್ಕೆ ಸೀಮಿತವಾಗದೆ ದೇಶದ ವಿವಿಧ ಪುಣ್ಯಕ್ಷೇತ್ರಗಳಿಗೂ ವಿಸ್ತರಿಸಿರುವುದು ಶ್ಲಾಘನೀಯ. ಅಯೋಧ್ಯೆಯಲ್ಲಿ ನಡೆದ ಪ್ರಮುಖ ವೈದಿಕ ಕಾರ್ಯಕ್ರಮದಲ್ಲಿ ವೇದಘೋಷ ಮಾಡಿದ ತಂಡದಲ್ಲಿ ಇವರು ಭಾಗವಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿ, ರಾಜವಂಶಸ್ಥೆ ಹಾಗೂ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಸೇರಿದಂತೆ ಗಣ್ಯರ ಧಾರ್ಮಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಯಾಗ–ಪೂಜೆ ಹಾಗೂ ವೈದಿಕ ಕೈಂಕರ್ಯಗಳಲ್ಲಿಯೂ ಸೇವೆ ಸಲ್ಲಿಸಿದ್ದಾರೆ” ಎಂದು ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ಗುರುಕುಲ ಪರಂಪರೆ ಉಳಿಯಲಿ
“ಜ್ಞಾನ ಮತ್ತು ಸಂಸ್ಕಾರವನ್ನು ಒಟ್ಟಿಗೆ ನೀಡುವುದು ಗುರುಕುಲ ಪರಂಪರೆಯ ವಿಶೇಷತೆ. ವೇದ ಕಲಿಕೆಯೊಂದಿಗೆ ವಿನಯ, ಶಿಸ್ತು, ಧರ್ಮನಿಷ್ಠೆ ಹಾಗೂ ಸಮಾಜದ ಬಗೆಗಿನ ಹೊಣೆಗಾರಿಕೆಯನ್ನೂ ಬೆಳೆಸಲಾಗುತ್ತದೆ. ನಿರಂತರ ಅಧ್ಯಯನ, ಸಾಧನೆ ಹಾಗೂ ಗುರುಗಳ ಅನುಗ್ರಹದಿಂದ ವೇದಪಾಂಡಿತ್ಯ ಸಾಧ್ಯ. ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ವೇದಜ್ಞಾನ ಹರಿದಾಗ ಮಾತ್ರ ಪರಂಪರೆ ಜೀವಂತವಾಗಿರುತ್ತದೆ. ಆದ್ದರಿಂದ ವೇದಪಾಠಶಾಲೆಗಳು ಹಾಗೂ ವಿದ್ಯಾರ್ಥಿಗಳಿಗೆ ಸಮಾಜ ಪ್ರೋತ್ಸಾಹ ನೀಡಬೇಕು” ಎಂದು ಅವರು ಹೇಳಿದರು.
ಶ್ರೀ ಹರಿ ಉಪಾಧ್ಯಾಯರು ಪೇಜಾವರ ಮಠದಲ್ಲಿ ಸುಧಾಮಂಗಲ ಪೂರ್ಣಗೊಳಿಸಿ ವೈದಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಶ್ರೀ ಉಮೇಶ್ ಭಟ್ ಪಾಜಕ ಗುರುಕುಲದಲ್ಲಿ ವೇದಾಧ್ಯಯನ ನಡೆಸಿದ್ದಾರೆ. ಶ್ರೀ ರಾಘವೇಂದ್ರ ಆಚಾರ್ಯ ಪಲಿಮಾರು ಗುರುಕುಲದಲ್ಲಿ ಶಿಕ್ಷಣ ಪಡೆದು ವೈದಿಕ ಪರಂಪರೆಯ ಸೇವೆ ಮಾಡುತ್ತಿದ್ದಾರೆ. ಶ್ರೀ ನಾಗರಾಜ ಭಟ್ ಅವರು ವೇದಪಾಂಡಿತ್ಯದೊಂದಿಗೆ ವಿವಿಧ ಧಾರ್ಮಿಕ ಆಚರಣೆ ಹಾಗೂ ಕೈಂಕರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಪ್ರಶಸ್ತಿ ಸ್ವೀಕರಿಸಿದ ವಿದ್ವಾಂಸರು, ಗುರುಪರಂಪರೆಯಿಂದ ದೊರೆತ ಜ್ಞಾನವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಸಂಕಲ್ಪದೊಂದಿಗೆ ವೇದಾಧ್ಯಯನ ಮತ್ತು ಧರ್ಮಸೇವೆಯನ್ನು ಮುಂದುವರಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ದೆಹಲಿಯ ಉದ್ಯಮಿ ದೇವೇಶ್ ತ್ರಿಪಾಠಿ, ಸೇವಾಶ್ರಮದ ನಿರ್ದೇಶಕಿ ರಜನಿ ಚಂದ್ರಶೇಖರ್, ಯುವ ಉದ್ಯಮಿ ರಾಹುಲ್ ಚಂದ್ರಶೇಖರ್, ನಿರ್ದೇಶಕ ರಾಘವ ಸೂರ್ಯ, ಕಾನೂನು ಸಲಹೆಗಾರ್ತಿ ರೋಶಿಣಿ ರಾಘವ್ ಸೂರ್ಯ, ಆಶ್ರಮದ ಧಾರ್ಮಿಕ ಪೂಜಾ ಸಮನ್ವಯಕಾರ ವೇದಮೂರ್ತಿ ಹರಿ ಭಟ್ ಮುಂಡ್ಕೂರು, ಆಶ್ರಮದ ಭದ್ರತೆಯ ಉಸ್ತುವಾರಿ ನಿವೃತ್ತ ಪೊಲೀಸ್ ಅಧಿಕಾರಿ ಜಿ. ಎ. ಭಾವ ಹಾಗೂ ಆಶ್ರಮದ ಸಂಚಾಲಕರಾದ ಪುನೀತ್ ಕೃಷ್ಣ ಉಪಸ್ಥಿತರಿದ್ದರು.

ಚಿತ್ರ: ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಅವರಿಂದ ಶ್ರೀ ಹರಿ ಉಪಾಧ್ಯಾಯ, ಶ್ರೀ ಉಮೇಶ್ ಭಟ್, ಶ್ರೀ ರಾಘವೇಂದ್ರ ಆಚಾರ್ಯ ಹಾಗೂ ಶ್ರೀ ನಾಗರಾಜ ಭಟ್ ಅವರಿಗೆ ‘ವೇದರತ್ನ’ ಪ್ರಶಸ್ತಿ ಪ್ರದಾನ.




