30 C
Mumbai
September 21, 2026
Mumbai News Kannada
ತುಳುನಾಡು

ತುಳುವಿನ ಐತಿಹಾಸಿಕ ದಿನಕ್ಕೆ ‘ಟಾಸ್’ ಚಿತ್ರದ ಕಲರವ



ಕರ್ನಾಟಕದ ಕರಾವಳಿ ಭಾಗದ ತುಳು ಭಾಷಿಕರ ಹಲವು ವರ್ಷಗಳ ಬೇಡಿಕೆಗೆ ಮಹತ್ವದ ಮಾನ್ಯತೆ ದೊರೆತಿದೆ. ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ನಡೆದ ಕರ್ನಾಟಕ ಸಚಿವ ಸಂಪುಟದ ವಿಶೇಷ ಸಭೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ತುಳು ಭಾಷೆಗೆ ಕರ್ನಾಟಕ ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಆಡಳಿತ ಭಾಷೆಯ ಸ್ಥಾನಮಾನ ನೀಡಲು ನಿರ್ಧರಿಸಲಾಯಿತು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದರು.
ತುಳು ಭಾಷಿಕರ ಹಲವು ವರ್ಷಗಳ ಹೋರಾಟ ಮತ್ತು ನಿರಂತರ ಬೇಡಿಕೆಗೆ ದೊರೆತಿರುವ ಈ ಆಡಳಿತಾತ್ಮಕ ಮಾನ್ಯತೆ ತುಳು ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಹೊಸ ಉತ್ತೇಜನ ನೀಡುವ ನಿರೀಕ್ಷೆ ಮೂಡಿಸಿದೆ. ತುಳು ಭಾಷೆಯ ಬಳಕೆ, ಬೆಳವಣಿಗೆ ಮತ್ತು ಅದರ ಸಾಂಸ್ಕೃತಿಕ ಮಹತ್ವಕ್ಕೆ ಈ ನಿರ್ಧಾರ ಮತ್ತಷ್ಟು ಬಲ ನೀಡುವಂತಾಗಿದೆ.
ಇದೇ ಸೆಪ್ಟೆಂಬರ್ 18ರಂದು ತುಳು ಚಿತ್ರರಂಗಕ್ಕೂ ವಿಶೇಷ ದಿನವಾಗಿತ್ತು. ರಾಜ್ಯ ಪ್ರಶಸ್ತಿ ಪುರಸ್ಕೃತ ‘ತೆಲಿಕೆದ ಬೊಳ್ಳಿ’ ಡಾ. ದೇವದಾಸ್ ಕಾಪಿಕಾಡ್ ಅವರ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯೊಂದಿಗೆ, ಅರ್ಜುನ್ ದೇವ್ ನಿರ್ದೇಶಿಸಿ, ಅಭಿನಯಿಸಿರುವ ‘ಟಾಸ್’ ತುಳು ಸಿನೆಮಾ ಅದೇ ದಿನ ತೆರೆಗೆ ಬಂದಿದೆ. ಚಿತ್ರವು ಕನ್ನಡ ಮತ್ತು ತುಳು ಭಾಷೆಗಳಲ್ಲಿ ಬಿಡುಗಡೆಯಾಗಿದೆ.
‘ಟಾಸ್’ ಎಂದರೆ ಸಾಮಾನ್ಯವಾಗಿ ಕ್ರೀಡಾ ಕ್ಷೇತ್ರದಲ್ಲಿ ಪಂದ್ಯ ಆರಂಭಕ್ಕೂ ಮುನ್ನ ಯಾರು ಮೊದಲು ಬ್ಯಾಟಿಂಗ್ ಮಾಡಬೇಕು ಅಥವಾ ಫೀಲ್ಡಿಂಗ್ ಮಾಡಬೇಕು ಎಂಬುದನ್ನು ನಿರ್ಧರಿಸುವ ಪ್ರಕ್ರಿಯೆ. ನಾಣ್ಯವನ್ನು ಗಾಳಿಗೆ ಚಿಮ್ಮಿ ಅದರ ಮುಖದ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಆದರೆ ‘ಟಾಸ್’ ಸಿನೆಮಾದಲ್ಲಿ ಈ ಪದಕ್ಕೆ ವಿಭಿನ್ನವಾದ ಅರ್ಥವನ್ನು ನೀಡಲಾಗಿದೆ.


ಜೀವನದಲ್ಲಿ ಎದುರಾಗುವ ಗೊಂದಲ, ಸಂಕಷ್ಟ ಮತ್ತು ನಿರ್ಣಾಯಕ ಸಂದರ್ಭಗಳಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ಚಿತ್ರವು ತೋರಿಸುತ್ತದೆ. ತಾಯಿಯೊಬ್ಬಳು ತನ್ನ ಮಗನಿಗೆ ಜೀವನದ ಸವಾಲುಗಳನ್ನು ಎದುರಿಸುವ ಸಂದರ್ಭದಲ್ಲಿ ಧೈರ್ಯದಿಂದ ನಿರ್ಧಾರ ತೆಗೆದುಕೊಳ್ಳುವ ಗುಣವನ್ನು ಕಲಿಸುವ ಅಂಶವೂ ಚಿತ್ರದಲ್ಲಿದೆ. ಒಟ್ಟಿನಲ್ಲಿ ಗೆಲುವು-ಸೋಲು, ನಿರ್ಧಾರ, ಕುಟುಂಬ ಸಂಬಂಧ ಮತ್ತು ಭಾವನೆಗಳನ್ನು ಮನರಂಜನೆಯೊಂದಿಗೆ ಕಟ್ಟಿಕೊಡುವ ಪ್ರಯತ್ನವನ್ನು ‘ಟಾಸ್’ ಚಿತ್ರದಲ್ಲಿ ಮಾಡಲಾಗಿದೆ.
‘ಟಾಸ್’ ಚಿತ್ರದಲ್ಲಿ ಡಾ. ದೇವದಾಸ್ ಕಾಪಿಕಾಡ್, ಅರ್ಜುನ್ ದೇವ್, ‘ಕಾಂತಾರ’ ಚಿತ್ರದಲ್ಲಿ ವಕೀಲನ ಪಾತ್ರದ ಮೂಲಕ ಗಮನ ಸೆಳೆದ ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ್ ಬೋಳಾರ್, ಪ್ರಕಾಶ್ ತೂಮಿನಾಡು, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೋಳಾರ್, ಸುತೇಜ್ ಶೆಟ್ಟಿ, ಸಂಗೀತ ಶೆಟ್ಟಿ, ಶೋಭರಾಜ್ ಪಾವೂರು, ಚೈತ್ರ ಶೆಟ್ಟಿ ಹಾಗೂ ಕೃತಿ ಶೆಟ್ಟಿ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.
ಚಿತ್ರದ ಚಿತ್ರೀಕರಣವನ್ನು ಎರಡು ಹಂತಗಳಲ್ಲಿ ನಡೆಸಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಚಿತ್ರೀಕರಣ ನಡೆದಿದೆ.
‘ಟಾಸ್’ ಒಂದು ಪಕ್ಕಾ ಕಾಮಿಡಿ ಸಿನೆಮಾ ಆಗಿದ್ದು, ಸೆಂಟಿಮೆಂಟ್, ಆ್ಯಕ್ಷನ್, ಥ್ರಿಲ್ಲರ್ ಸೇರಿದಂತೆ ವಿವಿಧ ಅಂಶಗಳನ್ನು ಒಳಗೊಂಡಿರುವ ಸಂಪೂರ್ಣ ಕುಟುಂಬ ಮನರಂಜನೆಯ ಚಿತ್ರವಾಗಿದೆ. ಪ್ರೇಕ್ಷಕರು ತಮ್ಮ ದೈನಂದಿನ ಚಿಂತೆಗಳನ್ನು ಮರೆತು ಚಿತ್ರವನ್ನು ಮನಸಾರೆ ಆನಂದಿಸುವ ರೀತಿಯಲ್ಲಿ ಸಿನೆಮಾವನ್ನು ರೂಪಿಸಲಾಗಿದೆ ಎಂದು ನಿರ್ದೇಶಕ ಅರ್ಜುನ್ ದೇವ್ ತಿಳಿಸಿದ್ದಾರೆ. ಹಣ ಕೊಟ್ಟು ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರಿಗೆ ಬೇಕಾಗಿರುವ ಎಲ್ಲಾ ಅಂಶಗಳು ‘ಟಾಸ್’ ಸಿನೆಮಾದಲ್ಲಿವೆ ಎಂದು ಅವರು ಹೇಳಿದ್ದಾರೆ.
ಚಿತ್ರದ ನಿರ್ಮಾಪಕರು ಸಿ ಅಂಡ್ ವೈ ವರ್ಲ್ಡ್ ಟೂರ್ಸ್ ಎಲ್‌ಎಲ್‌ಪಿ – ಸಾಗರ್ ಪೂಜಾರಿ. ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಗೀತೆಗಳನ್ನು ಡಾ. ದೇವದಾಸ್ ಕಾಪಿಕಾಡ್ ರಚಿಸಿದ್ದಾರೆ.
ಸಹ ನಿರ್ದೇಶಕರಾಗಿ ಯಶವಂತ್ ಕಲ್ಲಡ್ಕ, ರಾಕೇಶ್ ಬಿ.ಜೆ. ಹಾಗೂ ವಿಕ್ರಮ್ ದೇವಾಡಿಗ, ಸಹಾಯಕ ನಿರ್ದೇಶಕರಾಗಿ ಸೌರವ್ ರಾಮ್, ಸುಜಿತ್ ವಿನೋದ್ ಹಾಗೂ ಆಶೀಶ್ ರಾವ್ ಕಾರ್ಯನಿರ್ವಹಿಸಿದ್ದಾರೆ. ಛಾಯಾಗ್ರಹಣವನ್ನು ಜೊಯೆಲ್ ಶಮನ್ ಡಿಸೋಜ ನಿರ್ವಹಿಸಿದ್ದು, ಸಹಾಯಕ ಛಾಯಾಗ್ರಾಹಕರಾಗಿ ಅನುನ್ ಪ್ರಖ್ಯಾತ ಕಾರ್ಯನಿರ್ವಹಿಸಿದ್ದಾರೆ. ಸಂಕಲನವನ್ನು ಯಶ್ವಿನ್ ಕೆ. ಶೆಟ್ಟಿಗಾರ್, ಸಂಗೀತವನ್ನು ಮನೀಕಾಂತ್ ಕದ್ರಿ, ಕಾರ್ಯಕಾರಿ ನಿರ್ಮಾಣವನ್ನು ಸಂದೀಪ್ ಶೆಟ್ಟಿ, ವಸ್ತ್ರ ವಿನ್ಯಾಸವನ್ನು ಅನೂಪ್ ಸಾಗರ್ ನಿರ್ವಹಿಸಿದ್ದಾರೆ. ವಿತರಕರಾಗಿ ಸಚಿನ್ ಎ.ಎಸ್. ಉಪ್ಪಿನಂಗಡಿ ಕಾರ್ಯನಿರ್ವಹಿಸಿದ್ದಾರೆ.
‘ಟಾಸ್’ ಸಿನೆಮಾ ಮಂಗಳೂರು, ಸುರತ್ಕಲ್, ಪಡುಬಿದ್ರಿ, ಉಡುಪಿ, ಮಣಿಪಾಲ, ಕುಂದಾಪುರ, ಕಾರ್ಕಳ, ದೇರಳಕಟ್ಟೆ, ಸುಳ್ಯ, ಬೆಳ್ತಂಗಡಿ, ಪುತ್ತೂರು ಸೇರಿದಂತೆ ಕರಾವಳಿಯ ಹಲವು ಪ್ರದೇಶಗಳಲ್ಲಿ ಬಿಡುಗಡೆಯಾಗಿದೆ. ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಇತರ ಭಾಗಗಳಲ್ಲಿಯೂ ಚಿತ್ರ ತೆರೆ ಕಂಡಿದೆ.
ಚಿತ್ರದ ಪ್ರೀಮಿಯರ್ ಶೋ ಸಂದರ್ಭದಲ್ಲಿ ಹಲವಾರು ತುಳು ಸಿನೆಮಾ ನಿರ್ದೇಶಕರು, ಮಾಜಿ ಶಾಸಕರು ಹಾಗೂ ಗಣ್ಯರು ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒಂದೆಡೆ ತುಳು ಭಾಷೆಗೆ ಅಧಿಕೃತ ಆಡಳಿತ ಭಾಷೆಯ ಸ್ಥಾನಮಾನ ದೊರೆತಿರುವ ಐತಿಹಾಸಿಕ ದಿನವಾಗಿದ್ದರೆ, ಮತ್ತೊಂದೆಡೆ ಅದೇ ದಿನ ‘ಟಾಸ್’ ಎಂಬ ಹೊಸ ತುಳು ಸಿನೆಮಾ ಬಿಡುಗಡೆಯಾಗಿರುವುದು ತುಳು ಭಾಷೆ ಮತ್ತು ತುಳು ಚಿತ್ರರಂಗದ ಪಾಲಿಗೆ ವಿಶೇಷ ಸಂಭ್ರಮದ ಸಂದರ್ಭವಾಗಿದೆ. ತುಳು ಭಾಷೆಗೆ ಆಡಳಿತಾತ್ಮಕ ಮಾನ್ಯತೆ ದೊರೆತ ದಿನವೇ ತುಳು ಚಿತ್ರವೊಂದು ಪ್ರೇಕ್ಷಕರ ಮುಂದೆ ಬಂದಿರುವುದು ಈ ದಿನದ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ.
ತುಳು ಭಾಷೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ತುಳು ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಗೆ ಮತ್ತಷ್ಟು ಪ್ರೋತ್ಸಾಹ ದೊರೆಯಲಿ, ತುಳು ಚಿತ್ರಗಳು ಕರ್ನಾಟಕ ಮಾತ್ರವಲ್ಲದೆ ದೇಶದ ಇತರ ರಾಜ್ಯಗಳಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರದರ್ಶನಗೊಳ್ಳಲಿ ಹಾಗೂ ತುಳು ಕಲಾವಿದರು, ಸಾಹಿತಿಗಳು ಮತ್ತು ಚಿತ್ರರಂಗದ ಪ್ರತಿಭೆಗಳಿಗೆ ಇನ್ನಷ್ಟು ಅವಕಾಶಗಳು ದೊರೆಯಲಿ ಎಂಬುದು ನನ್ನ ಹಾರೈಕೆ.

ಜಯ ಸಿ. ಪೂಜಾರಿ
ಕೆಳಾರ್ಕಳ ಬೆಟ್ಟ



Related posts

ಸಸಿಹಿತ್ಲು: ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಭವಿಷ್ಯದಲ್ಲಿ ಸಾಧಕರಾಗಿ – ವೇದಪ್ರಕಾಶ್ ಎಂ. ಶ್ರೀಯಾನ್

Mumbai News Desk

ಅದ್ಧೂರಿಯಾಗಿ ನಡೆದ ಮಂಗಳೂರು ದಸರಾ; ದೇಶ-ವಿದೇಶಗಳಿಂದ ಲಕ್ಷಾಂತರ ಮಂದಿ

Mumbai News Desk

ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಕ್ತರ ಸಮಾಲೋಚನಾ ಸಭೆ, ಆ. 31ರಂದು ಮುಷ್ಟಿ ಕಾಣಿಕೆ ಅರ್ಪಿಸಲು ನಿರ್ಣಯ

Mumbai News Desk

ಮೂಲ್ಕಿ : ಹರಿಶ್ಚಂದ್ರ ಸಾಲ್ಯಾನ್ ಅವರ 23ನೇ ಕೃತಿ ‘ನುಡಿಮುತ್ತು’ ಬಿಡುಗಡೆ ಕಾರ್ಯಕ್ರಮ

Mumbai News Desk

ಮೂಲ್ಕಿ ಹೊಸ ಅಂಗಣ ಮಾಸಪತ್ರಿಕೆಯ ತಿಂಗಳ ಬೆಳಕು ಕಾರ್ಯಕ್ರಮ : ಕುಬೇವೂರು ಶ್ರೀ ಜಾರಂದಾಯ ದೇವಸ್ಥಾನದ ಅರ್ಚಕ ಶೇಖರ್ ಪೂಜಾರಿ ಅವರಿಗೆ ಗೌರವ

Mumbai News Desk

  ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ  ಹೊರೆ ಕಾಣಿಕೆ   ಸಮರ್ಪಣೆ.

Mumbai News Desk