
ಡೊಂಬಿವಲಿ: ಇಲ್ಲಿನ ಶ್ರೀ ಮಹಾವಿಷ್ಣು ಮಂದಿರದ ಸುವರ್ಣ ಮಹೋತ್ಸವ ಸಂಭ್ರಮದ ಅಂಗವಾಗಿ ಹಮ್ಮಿಕೊಳ್ಳಲಾದ ಸರಣಿ ಕಾರ್ಯಕ್ರಮ–8ರ ಭಾಗವಾಗಿ, ಮುಂಬ್ರಾ ಮಿತ್ರ ಭಜನಾ ಮಂಡಳಿ (ರಿ.), ಡೊಂಬಿವಲಿ ಇವರ ನಿರ್ವಹಣೆಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯು ಅಕ್ಟೋಬರ್ 11ರಂದು ಮಂದಿರದ ಸನ್ನಿಧಿಯಲ್ಲಿ ಅತ್ಯಂತ ಭಕ್ತಿಭಾವ ಹಾಗೂ ಸಡಗರದಿಂದ ನೆರವೇರಿತು.

ಬೆಳಿಗ್ಗೆ 10:00ರಿಂದ ಮಧ್ಯಾಹ್ನ 12:30ರವರೆಗೆ ನಡೆದ ಈ ಧಾರ್ಮಿಕ ವಿಧಿವಿಧಾನಗಳನ್ನು ತಂತ್ರಿಗಳಾದ ಶ್ರೀ ರಾಮಚಂದ್ರ ಬಾಯರ್ ಅವರು ಶಾಸ್ತ್ರೋಕ್ತವಾಗಿ ನೆರವೇರಿಸಿಕೊಟ್ಟರು. ಮಂದಿರದ ಗೌರವಾಧ್ಯಕ್ಷರಾದ ಶ್ರೀ ನಿತಿನ್ ಪ್ರಕಾಶ್ ಪುತ್ರನ್ ಹಾಗೂ ಅವರ ಧರ್ಮಪತ್ನಿಯವರು ಪೂಜಾ ಕಾರ್ಯದಲ್ಲಿ ಉಪಸ್ಥಿತರಿದ್ದು ಸಹಕರಿಸಿದರು. ಪೂಜೆಯ ಬಳಿಕ ಸುಶ್ರಾವ್ಯ ಭಜನಾ ಸಂಕೀರ್ತನೆ ಹಾಗೂ ಮಹಾಮಂಗಳಾರತಿ ಜರುಗಿತು. ನಂತರ ಭಕ್ತಾದಿಗಳಿಗೆ ಅನ್ನದಾನ ಸೇವೆಯನ್ನು ಏರ್ಪಡಿಸಲಾಗಿತ್ತು.

ಇದೇ ಸಂದರ್ಭದಲ್ಲಿ ಅನ್ನಸಂತರ್ಪಣೆಯ ಸೇವಾದಾರರಾದ ಶ್ರೀಮತಿ ಕವಿತಾ ಇಂದುಶೇಖರ್ ಸುವರ್ಣ ಅವರಿಗೆ ಮಂದಿರದ ವತಿಯಿಂದ ಪ್ರಸಾದ ನೀಡಿ ಗೌರವ ಸಲ್ಲಿಸಲಾಯಿತು.
ಈ ಪುಣ್ಯ ಕಾರ್ಯಕ್ರಮದಲ್ಲಿ ಸುಮಾರು 250ಕ್ಕೂ ಅಧಿಕ ಭಕ್ತಾದಿಗಳು ಪಾಲ್ಗೊಂಡು ಶ್ರೀ ಸತ್ಯನಾರಾಯಣ ಸ್ವಾಮಿಯ ಕೃಪೆಗೆ ಪಾತ್ರರಾದರು. ಮಂದಿರದ ಸುವರ್ಣ ಮಹೋತ್ಸವ ಉಪಸಮಿತಿಯ ಧನ ಸಂಗ್ರಹಣಾ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಆನಂದ್ ಶೆಟ್ಟಿ ಎಕ್ಕಾರ್, ಪ್ರಮುಖರಾದ ಶ್ರೀ ದೇವದಾಸ್ ಕುಲಾಲ್, ಶ್ರೀ ಪ್ರಭಾಕರ್ ಶೆಟ್ಟಿ, ಶ್ರೀ ತಾರಾನಾಥ್ ಅಮೀನ್, ಶ್ರೀ ಗೋಪಾಲ್ ಶೆಟ್ಟಿ, ಶ್ರೀ ಲಕ್ಷ್ಮಣ್ ಪೂಜಾರಿ, ಶ್ರೀ ರಮೇಶ್ ಶೆಟ್ಟಿ, ಶ್ರೀ ಮೋಹನ್ ಸಾಲಿಯಾನ್, ಶ್ರೀ ಕುಶಾಲ್ ಕೋಟಿಯನ್ ಸೇರಿದಂತೆ ಸ್ಥಳೀಯ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ತುಳು-ಕನ್ನಡಿಗ ಬಾಂಧವರ ಸಕ್ರಿಯ ಸಹಕಾರದೊಂದಿಗೆ ಸಮಾರಂಭವು ಯಶಸ್ವಿಯಾಗಿ ಸಂಪನ್ನಗೊಂಡಿತು.



