
ತುಳುನಾಡ ಸಂಸ್ಕೃತಿ, ಸಂಸ್ಕಾರಗಳನ್ನು ಉಳಿಸುವ ಕಾರ್ಯ ಅಗತ್ಯ: ಗುತ್ತಿನಾರ್ ವಿಶುಕುಮಾರ್
ಮುಲ್ಕಿ, ನ. 27: “ಮಕ್ಕಳ ಕೈಗೆ ಮೊಬೈಲ್ ಕೊಡುವ ಬದಲು ನಮ್ಮ ಧಾರ್ಮಿಕ ಕಾರ್ಯಗಳ ಬಗ್ಗೆ ಅರಿವು ಮೂಡಿಸುವುದು ಅಗತ್ಯ. ತುಳುನಾಡ ದೈವಾರಾಧನೆಯ ಮೂಲಕ ಸಂಸ್ಕೃತಿ, ಸಂಸ್ಕಾರಗಳನ್ನು ಉಳಿಸಲು ಎಲ್ಲರೂ ಒಟ್ಟಾಗಬೇಕು. ದಶಮಾನೋತ್ಸವ ಸಮಾರಂಭ ಆಚರಿಸಿದ ಪತ್ರಿಕೆಯು ನೂರ್ಕಾಲ ಬಾಳಲಿ” ಎಂದು ಪಡುಬಿದ್ರಿ ಕಲ್ಲಟ್ಟೆ ಜಾರಂದಾಯ ದೈವಸ್ಥಾನದ ಗುತ್ತಿನಾರ್ ವಿಶುಕುಮಾರ್ ಶೆಟ್ಟಿ ಬಾಳ ಹೇಳಿದರು.
ಅವರು ನ. 27ರಂದು ಮುಲ್ಕಿ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ‘ಹೊಸ ಅಂಗಣ’ ಪತ್ರಿಕೆಯ ನವೆಂಬರ್ ತಿಂಗಳ ಮಾಸಿಕ ಬಿಡುಗಡೆ ಹಾಗೂ ‘ತಿಂಗಳ ಬೆಳಕು’ ಕಾರ್ಯಕ್ರಮದಲ್ಲಿ ಸಾಧಕರಿಗೆ ಗೌರವಾರ್ಪಣೆ ಗೈದು ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಸಾಪ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು, ಇಂತಹ ಕಾರ್ಯಕ್ರಮ ಸದಾ ನಡೆಯುತ್ತಿರಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಅತಿಥಿಗಳಾದ ಚಿತ್ರಾಪು ಕೆ.ಎಂ. ಕೋಟ್ಯಾನ್ ಮುಂಬಯಿ, ಬಂಕಿ ನಾಯಕರು ಹಳೆಯಂಗಡಿ, ಉದ್ಯಮಿ ರವಿರಾಜ್ ಶೆಟ್ಟಿ ಜತ್ತಬೆಟ್ಟು, ಜಾನ್ ಕ್ವಾಡ್ರಸ್ ಎಳತ್ತೂರು, ಸಮಾಜಸೇವಕ ಪ್ರಸಾದ್ ಪೂಜಾರಿ, ಸುರೇಂದ್ರ ಶೆಣೈ, ಸರೋಜಿನಿ ಸುವರ್ಣ, ಬಿ.ಎಸ್. ಜಯರಾಮ್, ಗೀತಾ ಗಣೇಶ್, ಸಾಧು ಅಂಚನ್, ವಿಜಯಾ ಹರಿಶ್ಚಂದ್ರ ಸಾಲ್ಯಾನ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಾಧಕರ ನೆಲೆಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ದೈವಾರಾಧಕ ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
‘ಹೊಸ ಅಂಗಣ’ ಪತ್ರಿಕೆಯ ಸಂಪಾದಕ ಹರಿಶ್ಚಂದ್ರ ಪಿ. ಸಾಲ್ಯಾನ್ ಸ್ವಾಗತಿಸಿದರು. ದಿನೇಶ್ ಕೋಲ್ನಾಡು ಕಾರ್ಯಕ್ರಮ ನಿರೂಪಿಸಿದರು.












