ನವಿ ಮುಂಬಯಿಯ ಪ್ರಸಿದ್ಧ ಕಲಾ ಸಂಸ್ಥೆಯಾದ ರಂಗಭೂಮಿ ಫೈನ್ ಆರ್ಟ್ಸ್ ಇದರ ನೂತನ ಅಧ್ಯಕ್ಷರಾಗಿ ರಂಗಕಲಾವಿದ, ಸಂಘಟಕ ಅದ್ಯಪಾಡಿ ಬಾಲಕೃಷ್ಣ ಜೆ. ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ.
ಸೆ. 7ರಂದು ನವಿ ಮುಂಬಯಿಯ ನೆರುಲ್ ಶ್ರೀ ಶನೀಶ್ವರ ಮಂದಿರದ ಸಭಾಂಗಣದಲ್ಲಿ ರಂಗಭೂಮಿಯ ಅಧ್ಯಕ್ಷ ಅನಿಲ್ ಹೆಗ್ಡೆ ಪೆರಡೂರು ಅವರ ಅಧ್ಯಕ್ಷತೆಯಲ್ಲಿ ಜರುಗಿದ 34ನೇ ವಾರ್ಷಿಕ ಮಹಾಸಭೆಯಲ್ಲಿ ಅದ್ಯಪಾಡಿ ಬಾಲಕೃಷ್ಣ ಶೆಟ್ಟಿ ಅವರನ್ನು ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಮೂಲತಃ ಮಂಗಳೂರಿನ ಅದ್ಯಪಾಡಿಯವರಾದ ಬಾಲಕೃಷ್ಣ ಜೆ. ಶೆಟ್ಟಿ ಅವರು ಎಕ್ಕಾರು ಬೆಳ್ಳಿಮಾರುಗುತ್ತು ಜಯರಾಮ್ ಟಿ. ಶೆಟ್ಟಿ ಹಾಗೂ ಕೌಡೂರು ಪುಣ್ಯೆದಡಿ ಲೀಲಾ ಜೆ. ಶೆಟ್ಟಿ ದಂಪತಿಯ ಸುಪುತ್ರ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹುಟ್ಟೂರಿನಲ್ಲಿ ಮುಗಿಸಿದ ಇವರು, ಕಾಲೇಜು ವಿದ್ಯಾಭ್ಯಾಸವನ್ನು ನವಿ ಮುಂಬಯಿ ವಾಶಿಯ ಮಾಡರ್ನ್ ಕಾಲೇಜಿನಲ್ಲಿ ಪೂರೈಸಿದರು.
ಬಾಲ್ಯದಲ್ಲೇ ನಾಟಕರಂಗದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಇವರು, ಮುಂಬಯಿಯಲ್ಲಿ ಅನೇಕ ಸಂಘ-ಸಂಸ್ಥೆಗಳ ಮೂಲಕ ವಿವಿಧ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಮುಂಬಯಿಯ ಪ್ರಸಿದ್ಧ ರಂಗ ನಿರ್ದೇಶಕರುಗಳಾದ ವೆಂಕಟೇಶ್ ಉಡುಪ ಕಟೀಲು, ಜಯರಾಜ ಕೆ. ಸುವರ್ಣ, ವಿ.ಕೆ. ಸುವರ್ಣ, ಅನಿಲ್ ಕೆ. ಹೆಗ್ಡೆ, ಜಗದೀಶ್ ಶೆಟ್ಟಿ ಕಂಚನಕೆರೆ, ನಾಗರಾಜ್ ಗುರುಪುರ, ಕರುಣಾಕರ್ ಕೆ. ಕಾಪು, ಮನೋಹರ್ ಶೆಟ್ಟಿ ನಂದಳಿಕೆ ಮುಂತಾದವರ ನಿರ್ದೇಶನದಲ್ಲಿ ಹಲವು ನಾಟಕಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ.
ಸದಾ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ವಿವಿಧ ಸಂಘ-ಸಂಸ್ಥೆಗಳಲ್ಲಿ ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಇವರ ನೇತೃತ್ವದಲ್ಲಿ ರಂಗಭೂಮಿ ಫೈನ್ ಆರ್ಟ್ಸ್ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಅಭಿಮಾನಿಗಳು ಹಾಗೂ ಹಿತೈಷಿಗಳು ಶುಭ ಹಾರೈಸಿದ್ದಾರೆ.



