October 23, 2026
Mumbai News Kannada
ಮುಂಬಯಿ

ವಸಾಯಿ ಕರ್ನಾಟಕ ಸಂಘದಿಂದ ನವರಾತ್ರಿ ಉತ್ಸವ: ವೈದ್ಯಕೀಯ ಕ್ಷೇತ್ರದ ನಾಲ್ವರು ಸಾಧಕಿಯರಿಗೆ ಸನ್ಮಾನ



ವಸಾಯಿ: ನವರಾತ್ರಿಯು ಕೇವಲ ಹಬ್ಬವಲ್ಲ; ದುಷ್ಟಶಕ್ತಿಯ ವಿರುದ್ಧ ಸತ್ಯ, ಧರ್ಮಗಳ ವಿಜಯ ಹಾಗೂ ಮಹಿಳಾ ಶಕ್ತಿಯ ಆರಾಧನೆಯ ಪ್ರತೀಕ ಎಂದು ವಸಾಯಿ ಕರ್ನಾಟಕ ಸಂಘದ ಅಧ್ಯಕ್ಷ ಕರ್ನೂರು ಶಂಕರ ಆಳ್ವ ಹಾಗೂ ಗೌರವಾಧ್ಯಕ್ಷ ವಿಶ್ವನಾಥ ಪಿ. ಶೆಟ್ಟಿ ಅಭಿಪ್ರಾಯಪಟ್ಟರು.

ಇಲ್ಲಿನ ವಸಾಯಿ ಪಶ್ಚಿಮದ ದತ್ತಾನಿ ಮಾಲ್‌ನಲ್ಲಿರುವ ಸಿಲ್ವರ್ ಲೀಫ್ ಬ್ಯಾಂಕ್ವೆಟ್ ಸಭಾಂಗಣದಲ್ಲಿ ವಸಾಯಿ ಕರ್ನಾಟಕ ಸಂಘದ ಮಹಿಳಾ ವಿಭಾಗದ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ನವರಾತ್ರಿ ಉತ್ಸವ, ಗಾಯತ್ರಿ ದೀಪಯಜ್ಞ ಹಾಗೂ ಸಾಧಕಿಯರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನೂರು ಶಂಕರ ಆಳ್ವ, “ನವದುರ್ಗೆಯರ ಒಂಬತ್ತು ಸ್ವರೂಪಗಳನ್ನು ಪೂಜಿಸುವ ಮೂಲಕ ಶಕ್ತಿ, ಭಕ್ತಿ ಹಾಗೂ ಧರ್ಮದ ಮಹತ್ವವನ್ನು ಸ್ಮರಿಸಲಾಗುತ್ತದೆ. ಸ್ತ್ರೀಶಕ್ತಿಗೆ ಗೌರವ ಸಲ್ಲಿಸುವುದೇ ಈ ಹಬ್ಬದ ಮುಖ್ಯ ಆಶಯವಾಗಿದ್ದು, ಇಂತಹ ಉತ್ಸವಗಳು ನಮ್ಮ ಸಾಂಸ್ಕೃತಿಕ ಪರಂಪರೆ ಮತ್ತು ಸಾಮಾಜಿಕ ಬಾಂಧವ್ಯವನ್ನು ಬಲಪಡಿಸುತ್ತವೆ” ಎಂದರು.

ಗೌರವಾಧ್ಯಕ್ಷ ವಿಶ್ವನಾಥ ಪಿ. ಶೆಟ್ಟಿ ಮಾತನಾಡಿ, “ಮಹಾಭಾರತದ ವಿರಾಟ ಪರ್ವದಲ್ಲಿ ಪಾಂಡವರು ಅಜ್ಞಾತವಾಸದ ವೇಳೆ ಶಮೀ ವೃಕ್ಷದಲ್ಲಿ ಆಯುಧಗಳನ್ನು ಬಚ್ಚಿಟ್ಟು, ನಂತರ ವಿಜಯಶಾಲಿಯಾಗಿ ಮರಳಿ ಪಡೆದ ಪ್ರಸಂಗವು ನವರಾತ್ರಿಯ ವಿಜಯದ ಮಹತ್ವವನ್ನು ಸಾರುತ್ತದೆ. ನಮ್ಮ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ” ಎಂದು ನುಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಷಾ ಶ್ರೀಧರ ಶೆಟ್ಟಿ ಕರ್ನಿರೆ, “ನವರಾತ್ರಿಯ ಪುಣ್ಯ ಸಂದರ್ಭದಲ್ಲಿ ಸಮಾಜಮುಖಿ ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ಕ್ಷೇತ್ರದ ಮಹಿಳೆಯರನ್ನು ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿ. ಇದು ಇತರರಿಗೂ ಪ್ರೇರಣೆಯಾಗಲಿದೆ” ಎಂದರು.

ನಾಲ್ವರು ವೈದ್ಯಕೀಯ ಸಾಧಕಿಯರಿಗೆ ಸನ್ಮಾನ: ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಡಾ. ಚೇತನಾ ಮಹೇಶ್ ಕೋಟ್ಯಾನ್, ಡಾ. ಶೃತಿ ಅಕ್ಷಯ್ ಶೆಟ್ಟಿ, ಡಾ. ಚೈತ್ರ ಶೆಟ್ಟಿ ಹಾಗೂ ಡಾ. ಶೋಭಾ ಮನೋಜ್ ಕೋಟ್ಯಾನ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಭವ: ಕಾರ್ಯಕ್ರಮದ ಅಂಗವಾಗಿ ಸಂಘದ ಮಹಿಳಾ ವಿಭಾಗ ಮತ್ತು ಶ್ರೀ ಗುರುರಾಜ ಮಾನವ ಜಾಗೃತಿ ಕೇಂದ್ರದ ವತಿಯಿಂದ ಭಜನೆ ಹಾಗೂ ಶ್ರೀ ಕಟೀಲು ಯಕ್ಷಕಲಾ ವೇದಿಕೆ ಮತ್ತು ಚಿಣ್ಣರ ಬಿಂಬ ವಸಾಯಿ ಶಿಬಿರದ ಮಕ್ಕಳಿಂದ ಆಕರ್ಷಕ ಕುಣಿತ ಭಜನೆ ಜರುಗಿತು. ಸಭಾ ಕಾರ್ಯಕ್ರಮದ ಬಳಿಕ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಗಾಯತ್ರಿ ಪರಿವಾರದ ದಹಿಸರ್ ವಿಭಾಗದ ಆಶಾ ಕರುಣಾಕರ ಸಮಾನಿ ಅವರ ನೇತೃತ್ವದಲ್ಲಿ ಗಾಯತ್ರಿ ದೀಪಯಜ್ಞ, ಮಹಾಮಂಗಳಾರತಿ ಹಾಗೂ ಮಹಿಳೆಯರಿಗಾಗಿ ಅರಿಶಿನ-ಕುಂಕುಮ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿದವು.

ವೇದಿಕೆಯಲ್ಲಿ ಸಂಘದ ಉಪಕಾರ್ಯಾಧ್ಯಕ್ಷ ರವೀಂದ್ರ ಕೆ. ಶೆಟ್ಟಿ, ಸಲಹೆಗಾರ ಪಾಂಡು ಎಲ್. ಶೆಟ್ಟಿ, ಸಹ ಸಲಹೆಗಾರ ಓ.ಪಿ. ಪೂಜಾರಿ, ಕಾರ್ಯದರ್ಶಿ ಹರಿಪ್ರಸಾದ್ ಎಸ್. ಶೆಟ್ಟಿ, ಕೋಶಾಧಿಕಾರಿ ವಿಜಯ ಎಂ. ಶೆಟ್ಟಿ, ಕಾರ್ಯಕ್ರಮ ಸಮಿತಿಯ ಅಧ್ಯಕ್ಷ ಯಶೋಧರ ಕೋಟ್ಯಾನ್, ಮಹಿಳಾ ವಿಭಾಗದ ಕಾರ್ಯದರ್ಶಿ ಪೂರ್ಣಿಮಾ ಅನೂಪ್ ಶೆಟ್ಟಿ, ಕೋಶಾಧಿಕಾರಿ ಭಾರತಿ ಹರೀಶ್ ಶೆಟ್ಟಿ ಹಾಗೂ ಯುವ ವಿಭಾಗದ ಕಾರ್ಯದರ್ಶಿ ರಿತಿನ್ ಎ. ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜೊತೆ ಕಾರ್ಯದರ್ಶಿ ಸಿಎ ವಿಜಯ ಕುಂದರ್, ಜೊತೆ ಕೋಶಾಧಿಕಾರಿ ಗಂಗಾಧರ ಶೆಟ್ಟಿ, ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಮಂಜುನಾಥ ಶೆಟ್ಟಿ ಕೊಡ್ಲಾಡಿ, ಸದಸ್ಯತ್ವ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್ ಎನ್. ಶೆಟ್ಟಿ, ಯುವ ವಿಭಾಗದ ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ತುಳು-ಕನ್ನಡಿಗರು ಪಾಲ್ಗೊಂಡಿದ್ದರು.

ಲೀಲಾ ಶೆಟ್ಟಿ ಪ್ರಾರ್ಥಿಸಿದರು. ಸುರೇಖಾ ಹರಿಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಪೂರ್ಣಿಮಾ ಅನೂಪ್ ಶೆಟ್ಟಿ ವಂದಿಸಿದರು.



Related posts

ಜಾಗತಿಕ ಬಂಟರ ಸಂಘಗಳ ಒಕ್ಕೂಟ: ಡಾ. ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣ ಸಭಾಭವನದ ಕಾಮಗಾರಿಯ ಕುರಿತು ವಿಶೇಷ ಸಭೆ

Mumbai News Desk

ವಾಲ್ಕೇಶ್ವರ ಕವಳೆ ಮಠ ದಲ್ಲಿ  ಪ್ರತಿಷ್ಠಾ ವರ್ಧಂತಿ ಉತ್ಸವ. 

Mumbai News Desk

ರೇ ರೋಡ್ ಸ್ವಾಮಿ ಅಯ್ಯಪ್ಪ ಭಕ್ತ ವೃಂದ ಮಂದಿರದ ವರ್ಧಂತ್ಯೋತ್ಸವ.

Mumbai News Desk

ಕಲ್ವಾದಲ್ಲಿ ಬಿಲ್ಲವರ ಅಸೋಸಿಯೇಷನ್ ಮುಂಬೈ ವತಿಯಿಂದ ನಾರಾಯಣ ಗುರುಗಳ 172ನೇ ಜಯಂತ್ಯುತ್ಸವ ಸಂಪನ್ನ

Mumbai News Desk

ಇಲ್ಲಿ ಸ್ಥಳದ ಅಭಾವ ಇದೆ ಅದರೆ  ಶ್ರೀ ದುರ್ಗೆ ಯನ್ನು ಪೂಜಿಸಲು ಭಕ್ತರ  ಅಭಾವಿಲ್ಲ – ಪ್ರಭಾಕರ್ ಶೆಟ್ಟಿ

Mumbai News Desk

ಭಾರತ್ ಬ್ಯಾಂಕ್‌ನ ಬಾಂದ್ರ ಪೂರ್ವ ಶಾಖೆಯಲ್ಲಿ 47ನೇ ಸಂಸ್ಥಾಪನಾ ದಿನಾಚರಣೆ ಸಂಭ್ರಮದ ಆಚರಣೆ

Mumbai News Desk