ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ (ನ.16) ಸಂಜೆ ಸಂಭವಿಸಬಹುದಾಗಿದ್ದ ಭಾರೀ ವಿಮಾನ ದುರಂತವೊಂದು ಪೈಲಟ್ನ ಸಮಯಪ್ರಜ್ಞೆಯಿಂದ ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಬೆಂಗಳೂರಿಗೆ ತೆರಳಲು ಸಿದ್ಧವಾಗಿದ್ದ ಇಂಡಿಗೋ ವಿಮಾನವು ಟೇಕ್ಆಫ್ ಆಗುವ ಕೊನೆಯ ಹಂತದಲ್ಲಿ ತಾಂತ್ರಿಕ ಸಮಸ್ಯೆ ಎದುರಿಸಿದ ಹಿನ್ನೆಲೆಯಲ್ಲಿ ಪೈಲಟ್ ತಕ್ಷಣ ತುರ್ತು ಬ್ರೇಕ್ ಹಾಕಿ ವಿಮಾನವನ್ನು ರನ್ವೇಯಲ್ಲೇ ನಿಲ್ಲಿಸಿದ್ದಾರೆ. ಇದರಿಂದ ವಿಮಾನದಲ್ಲಿದ್ದ 229 ಪ್ರಯಾಣಿಕರು ಹಾಗೂ ಏಳು ಮಂದಿ ಸಿಬ್ಬಂದಿ ಸೇರಿದಂತೆ ಒಟ್ಟು 236 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸೋಮವಾರ ಸಂಜೆ ಸುಮಾರು 6 ಗಂಟೆಯ ವೇಳೆಗೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳಬೇಕಿದ್ದ ಇಂಡಿಗೋ ವಿಮಾನವು ಪ್ರಯಾಣಿಕರನ್ನು ಹೊತ್ತೊಯ್ದು ಟೇಕ್ಆಫ್ಗೆ ಸಿದ್ಧವಾಗಿತ್ತು. ವಿಮಾನ ರನ್ವೇಯಲ್ಲಿ ವೇಗವಾಗಿ ಚಲಿಸುತ್ತಿದ್ದ ಸಂದರ್ಭದಲ್ಲಿ ಅದರ ತಳಭಾಗದಲ್ಲಿ ಕಿಡಿಗಳು ಕಾಣಿಸಿಕೊಂಡಿದ್ದು, ತಾಂತ್ರಿಕ ದೋಷ ಉಂಟಾಗಿರುವುದನ್ನು ಗಮನಿಸಿದ ಪೈಲಟ್ ತಕ್ಷಣವೇ ತುರ್ತು ಬ್ರೇಕ್ ಹಾಕಿದ್ದಾರೆ. ವಿಮಾನದ ವೇಗವನ್ನು ನಿಯಂತ್ರಿಸಿ ರನ್ವೇಯಲ್ಲೇ ಸುರಕ್ಷಿತವಾಗಿ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಮಾನದ ಒಂದು ಚಕ್ರ ಸ್ಫೋಟಗೊಂಡಿರುವ ಸಾಧ್ಯತೆಯ ಬಗ್ಗೆಯೂ ವರದಿಯಾಗಿದೆ.
ಘಟನೆಯ ಬಳಿಕ ವಿಮಾನವನ್ನು ಸುರಕ್ಷಿತವಾಗಿ ಬೇಗೆ (Bay) ವಾಪಸ್ ಕರೆತರಲಾಗಿದ್ದು, ಅದರಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು. ವಿಮಾನಯಾನ ಸಂಸ್ಥೆಯ ತಾಂತ್ರಿಕ ವಿಭಾಗದ ಸಿಬ್ಬಂದಿ ವಿಮಾನವನ್ನು ಪರಿಶೀಲಿಸಿದ್ದು, ಹೆಚ್ಚಿನ ತಪಾಸಣೆ ಮತ್ತು ದುರಸ್ತಿಗಾಗಿ ವಿಮಾನವನ್ನು ಹಾರಾಟಕ್ಕೆ ಯೋಗ್ಯವಲ್ಲವೆಂದು ಘೋಷಿಸಲಾಗಿದೆ.
ಪ್ರಯಾಣಿಕರ ಮುಂದಿನ ಪ್ರಯಾಣಕ್ಕೆ ಅನುಕೂಲವಾಗುವಂತೆ ಇಂಡಿಗೋ ಸಂಸ್ಥೆ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಿದೆ. ಬೆಂಗಳೂರಿನಿಂದ ಬದಲಿ ವಿಮಾನವನ್ನು ತರಿಸಿ, ಮಂಗಳೂರಿನಿಂದ ಬೆಂಗಳೂರಿಗೆ ತೆರಳಲು ವ್ಯವಸ್ಥೆ ಕಲ್ಪಿಸಲಾಯಿತು. ವರದಿಗಳ ಪ್ರಕಾರ, 229 ಪ್ರಯಾಣಿಕರ ಪೈಕಿ 34 ಮಂದಿ ಮಾತ್ರ ಮಧ್ಯರಾತ್ರಿ ಹೊರಟ ಬದಲಿ ವಿಮಾನದಲ್ಲಿ ಪ್ರಯಾಣಿಸಿದ್ದು, ಉಳಿದವರಿಗೆ ಪರ್ಯಾಯ ವ್ಯವಸ್ಥೆ ಹಾಗೂ ವಸತಿ ಸೌಲಭ್ಯ ಕಲ್ಪಿಸಲಾಗಿದೆ.
ಈ ವಿಮಾನದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ಮಂಜುಳಾ ಎಸ್. ಮತ್ತು ಅರವಿಂದ ಲಿಂಬಾವಳಿ ಸೇರಿದಂತೆ ಹೈಕೋರ್ಟ್ ನ್ಯಾಯಾಧೀಶರೊಬ್ಬರು ಹಾಗೂ ಇತರ ಗಣ್ಯರು ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದೆ.
ಮಂಗಳೂರು ವಿಮಾನ ನಿಲ್ದಾಣದ ಟೇಬಲ್ಟಾಪ್ ರನ್ವೇಯಲ್ಲಿ ನಡೆದ ಈ ಘಟನೆ ಆತಂಕಕ್ಕೆ ಕಾರಣವಾಗಿದ್ದು, ಕೊನೆಯ ಕ್ಷಣದಲ್ಲಿ ಪೈಲಟ್ ತೋರಿದ ಎಚ್ಚರಿಕೆ ಮತ್ತು ಸಮಯಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ವಿಮಾನದಲ್ಲಿ ಉಂಟಾದ ತಾಂತ್ರಿಕ ದೋಷದ ನಿಖರ ಕಾರಣ ತಿಳಿಯಲು ಪರಿಶೀಲನೆ ಮುಂದುವರಿದಿದೆ.








































































