November 17, 2026
Mumbai News Kannada
ಮುಂಬಯಿ

ಶ್ರೀ ರಜಕ ಸಂಘ ಮುಂಬಯಿಯ ಮಧ್ಯವಲಯದ ಸಂಭ್ರಮದ ‘ತುಳುನಾಡ ತುಡರ್‌ದ ಪರ್ಬ’: ಮಣ್ಣಿನ ಸೊಗಡು, ಸಂಸ್ಕಾರದ ಅನಾವರಣ





















ಮುಂಬೈ (ವಿಖ್ರೋಲಿ): ಮಹಾನಗರದ ಜಂಜಾಟದ ನಡುವೆಯೂ ಹೊರನಾಡ ಕನ್ನಡಿಗರಿಗೆ ಹಾಗೂ ವಿಶೇಷವಾಗಿ ನೂತನ ಪೀಳಿಗೆಗೆ ತುಳುನಾಡಿನ ದೀಪಾವಳಿ (ತುಡರ್‌ದ ಪರ್ಬ) ಆಚರಣೆಯ ಮಹತ್ವ, ಹಿನ್ನೆಲೆ ಮತ್ತು ವೈಶಿಷ್ಟ್ಯಗಳನ್ನು ಕಣ್ಣಿಗೆ ಕಟ್ಟುವಂತೆ ಪರಿಚಯಿಸುವ ವಿಶಿಷ್ಟ ಪ್ರಯತ್ನವೊಂದು ನಗರದ ವಿಖ್ರೋಲಿಯಲ್ಲಿ ಯಶಸ್ವಿಯಾಗಿ ನೆರವೇರಿತು.

ಶ್ರೀ ರಜಕ ಸಂಘ ಮುಂಬಯಿಯ ಮಧ್ಯವಲಯದ ವತಿಯಿಂದ ನ. 14ರ ಶನಿವಾರ ಸಂಜೆ ವಿಖ್ರೋಲಿಯ ವಿಕೇಸ್ ಇಂಗ್ಲಿಷ್ ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ತುಳುನಾಡ-ತುಡರ್‌ದ ಪರ್ಬ’ ಕಾರ್ಯಕ್ರಮವು ನೆರೆದಿದ್ದವರನ್ನು ತವರೂರಿನ ದೀಪಾವಳಿಯ ಸಂಭ್ರಮಕ್ಕೆ ಕೊಂಡೊಯ್ದಿತು.

ಹಳ್ಳಿಯ ಮನೆಯ ಸೊಗಡು, ನಾಟಕ ರೂಪದ ಪ್ರಾತ್ಯಕ್ಷಿಕೆ: ಸಭಾಂಗಣದ ವೇದಿಕೆಯಲ್ಲಿ ಸಾಂಪ್ರದಾಯಿಕ ತುಳುನಾಡಿನ ಮನೆಯ ವಾತಾವರಣವನ್ನು ಸೃಷ್ಟಿಸಲಾಗಿತ್ತು. ಸಾಲು ದೀಪಗಳು, ತುಳಸೀ ಕಟ್ಟೆ, ಗೋವುಗಳು, ದೇವರ ಕೋಣೆ ಹಾಗೂ ಮನೆಯೆದುರು ಹಚ್ಚ ಹಸಿರಿನ ಆವರಣವು ಊರಿನ ಮನೆಯನ್ನೇ ನೆನಪಿಸಿತು. ಮಧ್ಯವಲಯದ ಅಧ್ಯಕ್ಷ ಶ್ರೀ ಶಂಕರ್ ಸಾಲಿಯಾನ್ ಹಾಗೂ ಅವರ ಪತ್ನಿ ಶ್ರೀಮತಿ ಸರೋಜಿನಿ ದಂಪತಿ ಮನೆಯ ಯಜಮಾನ-ಯಜಮಾನಿಯಾಗಿ, ತಮ್ಮ ಐವರು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಪರಿವಾರದೊಂದಿಗೆ ಐದು ದಿನಗಳ ಕಾಲ ನಡೆಯುವ ತುಳುನಾಡ ದೀಪಾವಳಿಯ ವಿಧಿವಿಧಾನಗಳನ್ನು ನಾಟಕ ರೂಪದ ಪ್ರಾತ್ಯಕ್ಷಿಕೆಯ ಮೂಲಕ ಅಚ್ಚುಕಟ್ಟಾಗಿ ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.



















  • ಮೀಪಿನ ಪರ್ಬ: ಮೊದಲ ಮಗನ ಪರಿವಾರವಾಗಿ ಶ್ರೀ ಕರುಣಾಕರ್ ಪುತ್ರನ್ ಅವರು ಹಬ್ಬದ ಮೊದಲ ದಿನವಾದ ‘ಮೀಪಿನ ಪರ್ಬ’ದ (ಎಣ್ಣೆ ಸ್ನಾನದ ಹಬ್ಬ) ಮಹತ್ವವನ್ನು ವಿವರಿಸಿ ಪ್ರಾತ್ಯಕ್ಷಿಕೆ ತೋರಿಸಿದರು.
  • ಲಕ್ಷ್ಮೀ ಪೂಜೆ: ಎರಡನೇ ಮಗಳಾಗಿ ಶ್ರೀಮತಿ ವನಿತಾ ಕುಂದರ್ ಅವರು ಲಕ್ಷ್ಮೀ ಪೂಜೆಯ ಹಿನ್ನೆಲೆ, ಪೂಜಾ ವಿಧಿ ಹಾಗೂ ಪ್ರಸಾದ ವಿತರಣೆಯೊಂದಿಗೆ, ಸಂಗಡಿಗರಾದ ಅಂಜಲಿ, ಉಷಾ ಹಾಗೂ ಜಯ ಅವರೊಂದಿಗೆ ಆಕರ್ಷಕ ನೃತ್ಯದ ಮೂಲಕ ಮನಗೆದ್ದರು.
  • ತುಳಸೀ ಪೂಜೆ: ಮೂರನೇ ಮಗಳಾಗಿ ಶ್ರೀಮತಿ ಉಷಾ ಕುಂದರ್ ಅವರು ತುಳಸಿಯ ಪಾವಿತ್ರ್ಯತೆ ಮತ್ತು ಪೂಜಾ ಪದ್ಧತಿಯನ್ನು ವಿವರಿಸಿದರೆ, ಬಾಲಕಿಯರಾದ ರಕ್ಷಿತಾ, ರಿಕಿತಾ ಹಾಗೂ ಅಶ್ಮಿತಾ ನೃತ್ಯದ ಮೂಲಕ ಸಭಿಕರ ಮನಸೂರೆಗೊಂಡರು.
  • ಬಲೀಂದ್ರ ಪೂಜೆ ಮತ್ತು ‘ಕೂ’: ನಾಲ್ಕನೇ ಮಗನಾಗಿ ಶ್ರೀ ವಸಂತ್ ಸಾಲಿಯಾನ್ ಅವರು ಮಿತ್ರವೃಂದದವರೊಂದಿಗೆ ಸೇರಿ ಬಲಿ ಚಕ್ರವರ್ತಿಯ ಕಥೆಯನ್ನು ವಿವರಿಸಿ, ಬಲೀಂದ್ರನನ್ನು ಆಹ್ವಾನಿಸುವ ಪದ್ಧತಿ ಹಾಗೂ ನೈವೇದ್ಯ ನೀಡುವ ಕ್ರಮವನ್ನು ತೋರಿಸಿದರು. ಬಲೀಂದ್ರನಿಗೆ ‘ಕೂ’ ಕೊಡುವ ಸಂದರ್ಭದಲ್ಲಿ ಇಡೀ ಸಭಾಂಗಣದಲ್ಲಿದ್ದ ಬಾಂಧವರು ಒಕ್ಕೊರಲಿನಿಂದ ಧ್ವನಿಗೂಡಿಸಿದ್ದು ವಿಶೇಷವಾಗಿತ್ತು.
  • ಗೋ ಪೂಜೆ: ಐದನೇ ಮಗನಾಗಿ ಶ್ರೀ ಸುರೇಶ್ ಮಡಿವಾಳ್ ಅವರು ಗೋಪೂಜೆಯ ಮಹತ್ವ ಮತ್ತು ವಿಧಿವಿಧಾನಗಳನ್ನು ತಿಳಿಹೇಳಿ, ಪರದೆಯ ಮೇಲಿದ್ದ ಗೋವುಗಳಿಗೆ ಹೂ-ಹಾರ ಹಾಕಿ ಪೂಜಿಸಿ, ತಿಂಡಿ ನೀಡುವ ದೃಶ್ಯವು ಭಕ್ತಿಭಾವ ಮೂಡಿಸಿತು.

ಕಾರ್ಯಕ್ರಮದ ಆರಂಭದಲ್ಲಿ ಶ್ರೀಮತಿ ಮಾಲತಿ ಪುತ್ರನ್, ಉಷಾ ಕುಂದರ್, ಅರುಷಿ ಕುಂದರ್, ಮಹೇಶ್ ಪುತ್ರನ್, ನಿಖಿಲ್ ಕುಂದರ್, ರಮೇಶ್ ಸಾಲಿಯಾನ್, ವನಿತಾ ಕುಂದರ್ ಹಾಗೂ ಪ್ರಮೀಳಾ ಸಾಲಿಯಾನ್ ಅವರಿಂದ ಇಂಪಾದ ಭಜನಾ ಕಾರ್ಯಕ್ರಮ ನೆರವೇರಿತು. ಬಳಿಕ ಅತಿಥಿಗಳಾದ ವಿಖ್ರೋಲಿ ಕನ್ನಡ ಸಂಘದ ಅಧ್ಯಕ್ಷ ಶ್ರೀ ಗಣೇಶ್ ಎಮ್. ಶೆಟ್ಟಿ, ಉಪಾಧ್ಯಕ್ಷ ಶ್ರೀ ಯುಗಾನಂದ್ ಶೆಟ್ಟಿ, ಶ್ರೀ ರಜಕ ಸಂಘ ಮುಂಬಯಿಯ ಅಧ್ಯಕ್ಷ ಶ್ರೀ ಹರೀಶ್ ವಿ. ಸಾಲಿಯಾನ್ ಮಾಜಿ ಅಧ್ಯಕ್ಷರಾದ ಶ್ರೀ ಸತೀಶ್ ಸಾಲಿಯಾನ್ ಹಾಗೂ ವಲಯದ ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮಧ್ಯವಲಯದ ಅಧ್ಯಕ್ಷ ಶ್ರೀ ಶಂಕರ್ ಸಾಲಿಯಾನ್ ಅವರ ನೇತೃತ್ವದಲ್ಲಿ, ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಪ್ರಮೀಳಾ ಸಾಲಿಯಾನ್, ಯುವ ವಿಭಾಗದ ಅಧ್ಯಕ್ಷ ಶ್ರೀ ಅಕ್ಷಿತ್ ಸಾಲಿಯಾನ್ ಹಾಗೂ ತಂಡದ ಸದಸ್ಯರ ಸಹಕಾರದೊಂದಿಗೆ, ಸಂಘದ ಹಿರಿಯ ಹಾಗೂ ಮಾಜಿ ಅಧ್ಯಕ್ಷರಾದ ಶ್ರೀ ಸತೀಶ್ ಸಾಲಿಯಾನ್ ಅವರ ನಿರಂತರ ಮಾರ್ಗದರ್ಶನ, ಆಯೋಜನೆ ಮತ್ತು ಸಂಯೋಜನೆಯಲ್ಲಿ ಈ ಕಾರ್ಯಕ್ರಮ ಮೂಡಿಬಂದಿತು. ಶ್ರೀ ಅಕ್ಷಿತ್, ಕಾರ್ತಿಕ್ ಮತ್ತು ಅಶ್ಮಿತಾ ತಾಂತ್ರಿಕ ಸಂಯೋಜನೆಯನ್ನು ನಿರ್ವಹಿಸಿದರು.







































































































ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು ಮತ್ತು ಸದಸ್ಯರು, ಮಧ್ಯವಲಯದ ಈ ವಿನೂತನ ಪ್ರಯತ್ನವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಶ್ರೀ ಸತೀಶ್ ಸಾಲಿಯಾನ್ (ಮಾಜಿ ಅಧ್ಯಕ್ಷರು, ಶ್ರೀ ರಜಕ ಸಂಘ ಮುಂಬಯಿ): “ನಮ್ಮ ತುಳುನಾಡಿನ ದೀಪಾವಳಿ ಕೇವಲ ಆಡಂಬರವಲ್ಲ, ಅದರ ಹಿಂದೆ ಕೃಷಿ ಬದುಕು ಹಾಗೂ ಪರಿಸರ ಕಾಳಜಿಯ ವೈಜ್ಞಾನಿಕ ಹಿನ್ನೆಲೆಯಿದೆ. ಹಿಂದಿನ ಕಾಲದಲ್ಲಿ ಗದ್ದೆ-ತೋಟಗಳಲ್ಲಿ ಬೆಳೆಗಳಿಗೆ ಹಾನಿ ಮಾಡುವ ಕ್ರಿಮಿಕೀಟಗಳು ಹಾಗೂ ಇಲಿ-ಹೆಗ್ಗಣಗಳ ನಿಯಂತ್ರಣಕ್ಕಾಗಿ ಪಣತೆಗಳಲ್ಲಿ ಹೊಂಗೆ (ಕೊರಣ್ಣೆ) ಎಣ್ಣೆಯ ದೀಪ ಬೆಳಗುವ ಮತ್ತು ಭೂತದೀಪ ಇಡುವ ಸಂಪ್ರದಾಯವಿತ್ತು. ಮಹಾರಾಷ್ಟ್ರದಂತಹ ಹೊರನಾಡಿನಲ್ಲಿ ನಮ್ಮ ಹಬ್ಬಗಳ ನಿಜವಾದ ಅರ್ಥ ಮರೆಯಾಗುತ್ತಿದ್ದು, ನೂತನ ಪೀಳಿಗೆಗೆ ತುಳಸೀ ಪೂಜೆಯವರೆಗಿನ ನಮ್ಮ ಮೂಲ ಸಂಸ್ಕಾರ, ಆಚರಣೆಗಳ ನೈಜ ಮಹತ್ವವನ್ನು ತಿಳಿಸಿಕೊಡುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ” ಎಂದು ಅವರು ದೀಪಾವಳಿಯ ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ವಿಶ್ಲೇಷಿಸಿದರು.

  • ಶ್ರೀ ಹರೀಶ್ ವಿ. ಸಾಲಿಯಾನ್ (ಅಧ್ಯಕ್ಷರು, ಶ್ರೀ ರಜಕ ಸಂಘ ಮುಂಬಯಿ): “ಮುಂಬೈನಂತಹ ಮಹಾನಗರದಲ್ಲಿ ಇಂದು ಹಬ್ಬಗಳು ಕೇವಲ ಸಿಹಿ ಹಂಚುವಿಕೆ ಮತ್ತು ಪಟಾಕಿಗೆ ಸೀಮಿತವಾಗುತ್ತಿರುವ ಹೊತ್ತಿನಲ್ಲಿ, ನಮ್ಮ ಮೂಲ ಸಂಸ್ಕೃತಿ ಮತ್ತು ಆಚರಣೆಯ ನೈಜ ಅರ್ಥವನ್ನು ಹೊಸ ಪೀಳಿಗೆಗೆ ಕಟ್ಟಿಕೊಟ್ಟಿರುವುದು ಶ್ಲಾಘನೀಯ. ಶ್ರೀ ಸತೀಶ್ ಸಾಲಿಯಾನ್ ಅವರ ಮಾರ್ಗದರ್ಶನ ಮತ್ತು ಶಂಕರ್ ಸಾಲಿಯಾನ್ ಅವರ ತಂಡದ ಶ್ರಮದಿಂದ ಇತಿಹಾಸ ನಿರ್ಮಿಸುವಂತಹ ಅತ್ಯುತ್ತಮ ಕಾರ್ಯಕ್ರಮ ಮೂಡಿಬಂದಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
  • ಶ್ರೀ ಪಿ. ಕೃಷ್ಣ ಹಾಗೂ ಶ್ರೀ ವಿಜಯ್ ಕುಂದರ್ (ಮಾಜಿ ಅಧ್ಯಕ್ಷರು): “ಊರಿನ ದೀಪಾವಳಿಯ ಹಿಂದಿರುವ ವೈಜ್ಞಾನಿಕ ಹಾಗೂ ಧಾರ್ಮಿಕ ಮಹತ್ವವನ್ನು, ವಿಶೇಷವಾಗಿ ದೀಪಗಳ ಸಾಲು ಮತ್ತು ಬಲೀಂದ್ರ ಆರಾಧನೆಯ ಹಿನ್ನೆಲೆಯನ್ನು ಇಂದಿನ ಯುವಜನತೆಗೆ ಅತ್ಯಂತ ಪರಿಣಾಮಕಾರಿಯಾಗಿ ತಲುಪಿಸಲಾಗಿದೆ. ಸಮಾಜದಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮುಂದಿನ ಪೀಳಿಗೆಗೂ ನಮ್ಮ ಸಂಸ್ಕಾರದ ಹಿನ್ನೆಲೆಯನ್ನು ತಿಳಿಸುತ್ತಿರಬೇಕು” ಎಂದರು.
  • ಶ್ರೀಮತಿ ಶುಭಾ ಗುಜರನ್ (ಮಹಿಳಾ ವಿಭಾಗದ ಅಧ್ಯಕ್ಷೆ): ಮಹಿಳೆಯರು, ಮಕ್ಕಳು ಹಾಗೂ ಯುವಕರು ಒಂದೇ ಸೂರಿನಡಿ ಸೇರಿ ಸಂಭ್ರಮದಿಂದ ನಮ್ಮ ಪರಂಪರೆಯನ್ನು ಪ್ರಸ್ತುತಪಡಿಸಿರುವುದು ಹೆಮ್ಮೆಯ ಸಂಗತಿ ಎಂದು ಸಂತಸ ಹಂಚಿಕೊಂಡರು. ಇದೇ ಸಂದರ್ಭದಲ್ಲಿ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತೆಯಾಗಿರುವ ಶ್ರೀಮತಿ ಶುಭಾ ಗುಜರನ್ ಅವರ ಜನ್ಮದಿನದ ಶುಭಾಶಯಗಳನ್ನೂ ಕೋರಲಾಯಿತು.
  • ಸದಸ್ಯರ ಮೆಚ್ಚುಗೆ: ಸದಸ್ಯರುಗಳಾದ ಶ್ರೀಮತಿ ಸುಮಿತ್ರಾ ಪಲಿಮಾರ್, ಶ್ರೀ ಅಶೋಕ್ ಕುಂದರ್, ಶ್ರೀ ರಾಜು ಸಾಲ್ಯಾನ್, ಜಯ ಕುಂದರ್, ಹಾಗೂ ಶ್ರೀ ಭುಜಂಗ ಸಾಲಿಯಾನ್ ಅವರು ಮಾತನಾಡಿ, “ಮಹಾನಗರದ ಜೀವನಶೈಲಿಯಲ್ಲಿ ಕಳೆದುಹೋಗುತ್ತಿರುವ ನಮ್ಮ ಹಳೆಯ ಪದ್ಧತಿಗಳನ್ನು, ತಾಮ್ರ-ಹಿತ್ತಾಳೆಯ ಪಾತ್ರೆಗಳ ಬಳಕೆಯಿಂದ ಹಿಡಿದು ಭಜನೆ, ಸಂಪ್ರದಾಯಗಳವರೆಗೆ ಮತ್ತೆ ನೆನಪಿಸಲಾಗಿದೆ. ಯುವ ರಜಕ ಸದಸ್ಯರ ಉತ್ಸಾಹ ಮತ್ತು ಭಾಗವಹಿಸುವಿಕೆ ಸಮಾಜಕ್ಕೆ ಭರವಸೆ ಮೂಡಿಸಿದೆ” ಎಂದು ಕಾರ್ಯಕ್ರಮದ ರೀತಿ-ನೀತಿಗಳನ್ನು ಪ್ರಶಂಸಿಸಿದರು.

ಮಧ್ಯವಲಯದ ಅಧ್ಯಕ್ಷ ಶ್ರೀ ಶಂಕರ್ ಸಾಲಿಯಾನ್ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರನ್ನೂ ಮನಪೂರ್ವಕವಾಗಿ ಅಭಿನಂದಿಸಿದರು. ಮಹಿಳಾ ವಿಭಾಗದ ಕಾರ್ಯದರ್ಶಿ ಶ್ರೀಮತಿ ವನಿತಾ ಕುಂದರ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು. ಒಟ್ಟಾರೆಯಾಗಿ, ವಿಖ್ರೋಲಿಯಲ್ಲಿ ನಡೆದ ಈ ತುಡರ್‌ದ ಪರ್ಬವು ನೆರೆದಿದ್ದ ಪ್ರತಿಯೊಬ್ಬರಿಗೂ ತಮ್ಮ ಊರಿನಲ್ಲೇ ಇದ್ದು ದೀಪಾವಳಿ ಆಚರಿಸಿದ ಮರೆಯಲಾಗದ ಅನುಭವ ನೀಡಿತು.

ಮಹಾನಗರದ ಯಾಂತ್ರಿಕ ಬದುಕಿನ ನಡುವೆ ತನ್ನ ಮೂಲ ಬೇರುಗಳನ್ನು ಹಾಗೂ ಹಿರಿಯರು ಹಾಕಿಕೊಟ್ಟ ಪರಂಪರೆಯನ್ನು ಮರೆಯುತ್ತಿರುವ ಇಂದಿನ ಪೀಳಿಗೆಗೆ, ಶ್ರೀ ರಜಕ ಸಂಘ ಮುಂಬಯಿಯ ಮಧ್ಯವಲಯದ ಈ ವಿನೂತನ ಪ್ರಯತ್ನವೊಂದು ಹೊಸ ದಿಕ್ಸೂಚಿಯಾಗಿದೆ.

ಕೇವಲ ಆಡಂಬರಕ್ಕೆ ಸೀಮಿತವಾಗದ ಈ ‘ತುಳುನಾಡ-ತುಡರ್‌ದ ಪರ್ಬ’, ನಮ್ಮ ಆಚರಣೆಗಳ ಹಿಂದಿರುವ ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಸತ್ಯವನ್ನು ಅತ್ಯಂತ ಮನೋಜ್ಞವಾಗಿ ಕಟ್ಟಿಕೊಟ್ಟಿತು. ವೇದಿಕೆಯ ಮೇಲೆ ಮೂಡಿಬಂದ ಹಳ್ಳಿಯ ಮನೆಯ ಚಿತ್ರಣ, ಬಲೀಂದ್ರನ ಆಹ್ವಾನ ಮತ್ತು ಗೋಪೂಜೆಯ ದೃಶ್ಯಗಳು ಮುಂಬೈ ಮಹಾನಗರದಲ್ಲೇ ತವರೂರಿನ ಮಣ್ಣಿನ ಕಂಪನ್ನು ಪಸರಿಸಿದವು. ಒಟ್ಟಾರೆಯಾಗಿ, ಹಿರಿಯರ ಮಾರ್ಗದರ್ಶನ ಮತ್ತು ಯುವಜನತೆಯ ಉತ್ಸಾಹದ ಸಂಗಮದೊಂದಿಗೆ ನಡೆದ ಈ ಕಾರ್ಯಕ್ರಮವು, ಹೊರನಾಡಿನಲ್ಲಿ ತುಳು-ಕನ್ನಡ ಸಂಸ್ಕೃತಿಯನ್ನು ಜೀವಂತವಾಗಿರಿಸುವ ನಿಟ್ಟಿನಲ್ಲಿ ಒಂದು ಅವಿಸ್ಮರಣೀಯ ಮೈಲಿಗಲ್ಲಾಗಿ ದಾಖಲಾಯಿತು.



Related posts

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಡೊಂಬಿವಲಿ ಸ್ಥಳೀಯ ಸಮಿತಿವತಿಯಿಂದ ಸಮಾಜದ ಮಹಿಳೆಯರಿಗಾಗಿ ಆಯೋಜಿಸಿದ ಅರಿಶಿಣ ಕುಂಕುಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ :-

Mumbai News Desk

ಕುಲಾಲ ಭವನದ ಆಹ್ವಾನ ಪತ್ರಿಕೆ ವಿತರಣೆ: ಕುಲಾಲ ಸಂಘ ಮುಂಬಯಿ-ಥಾಣೆ, ಕಾಸರ, ಖರ್ಜತ್, ಬಿವಂಡಿ ಸ್ಥಳೀಯ ಸಮಿತಿ

Mumbai News Desk

ಬಂಟರ ಸಂಘ ಮುಂಬಯಿ ವಸಾಯಿ ದಹಾಣ ಪ್ರಾದೇಶಿಕ ಸಮಿತಿ ಯಿಂದ.ಸಮಾಜದ ಅರ್ಥಿಕವಾಗಿ ಹಿಂದುಳಿದ ಪರಿವಾರ ಮತ್ತು ವಿದ್ಯಾರ್ಥಿಗಳೀಗೆ 2025-26 ಸಾಲಿನ ಆರ್ಥಿಕ ಸಹಾಯ ವಿತರಣೆ.

Mumbai News Desk

ಕರ್ನಾಟಕ ಸಂಘ ಮುಂಬಯಿ, ಡಾ.ಸುನೀತಾ ಶೆಟ್ಟಿ ಸಾಹಿತ್ಯ ಪ್ರಶಸ್ತಿ ಪ್ರಧಾನ ಮತ್ತು ಕೃತಿ ಬಿಡುಗಡೆ ಸಮಾರಂಭ

Mumbai News Desk

ಬಂಟ್ಸ್ ಫೋರಮ್ ಮೀರಾಭಾಯಂದರ್ ವತಿಯಿಂದ ಯಕ್ಷಗಾನ ತಾಳಮದ್ದಳೆ

Mumbai News Desk

‘ಧೀಮಂತ ಧರ್ಮಪಾಲ’ ಗೌರವ ಗ್ರಂಥ ಲೋಕಾರ್ಪಣೆ ಯಶಸ್ವಿ: ಸ್ನೇಹಕೂಟ

Mumbai News Desk